ಪದ್ಯ ೧೯: ಕುಂತಿಯು ಪಾಂಡುವಿನ ಸ್ಥಿತಿಯನ್ನು ಕಂಡು ಹೇಗೆ ಪ್ರತಿಕ್ರಯಿಸಿದಳು?

ಕಂಡಳವರಿಬ್ಬರನು ಧೊಪ್ಪನೆ
ದಿಂಡುಗೆಡೆದಳು ಮೂರ್ಛೆಯಲಿ ಮರೆ
ಗೊಂಡುದೆಚ್ಚರು ಮಾದ್ರಿಮಿಗೆ ಹಲುಬಿದಳು ಗೋಳಿಡುತ
ಚಂಡಿಕೆಗಳಲ್ಲಾಡೆ ಹರಿದರು
ಪಾಂಡುನಂದನರೈವರೀತನ
ಕಂಡು ಹಾಯೆಂದೊರಲಿ ಹೊರಳಿದವನಿಪನ ಮೇಲೆ (ಆದಿ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾದ್ರಿ ಪಾಂಡು ಇಬ್ಬರನ್ನೂ ಕಂಡ ಕುಂತಿಯು ಮೂರ್ಛೆಗೊಂಡು ಧೊಪ್ಪನೆ ನೆಲಕ್ಕೆ ಬಿದ್ದಳು. ಮಾದ್ರಿಯು ಹಲುಬುತ್ತಾ ಗೋಳಾಡುತ್ತಿದ್ದಳು. ತಲೆಯು ಚಂಡಿಕೆಯಂತೆ ಓಲಾಡುತ್ತಿರಲು, ಪಾಂಡವರೈವರೂ ಓಡಿಹೋಗಿ ತಂದೆಯನ್ನು ಕಂಡು ಹಾ ಎಂದು ಕೂಗಿಕೊಂಡು ಅವನ ದೇಹದ ಮೇಲೆ ಬಿದ್ದು ಹೊರಳಾಡಿದರು.

ಅರ್ಥ:
ಕಂಡು: ನೋಡು; ಧೊಪ್ಪನೆ: ಕೂಡಲೆ, ಜೋರಾಗಿ; ದಿಂಡು: ಬಲ, ಶಕ್ತಿ; ಕೆಡೆ: ಬೀಳು, ಕುಸಿ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮರೆಗೊಂಡು: ಕಾಣದಿರುವ ಸ್ಥಿತಿ; ಎಚ್ಚರ: ಹುಷಾರಾಗಿರುವಿಕೆ; ಹಲುಬು: ದುಃಖಿಸು; ಗೋಳಿಡು: ಜೋರಾಗಿ ಅಳು; ಚಂಡಿಕೆ: ಜುಟ್ಟು, ಶಿಖೆ; ಅಲ್ಲಾಡು: ತೂಗು; ಹರಿ: ಆತುರಪಡು; ನಂದನ: ಮಕ್ಕಳು; ಕಂಡು: ನೋಡು; ಒರಲು: ಕಿರುಚು; ಹೊರಳು: ತಿರುವು, ಬಾಗು; ಅವನಿಪ: ರಾಜ;

ಪದವಿಂಗಡಣೆ:
ಕಂಡಳ್+ಅವರಿಬ್ಬರನು+ ಧೊಪ್ಪನೆ
ದಿಂಡುಗೆಡೆದಳು +ಮೂರ್ಛೆಯಲಿ +ಮರೆ
ಗೊಂಡುದ್+ಎಚ್ಚರು+ ಮಾದ್ರಿಮಿಗೆ+ ಹಲುಬಿದಳು +ಗೋಳಿಡುತ
ಚಂಡಿಕೆಗಳ್+ಅಲ್ಲಾಡೆ+ ಹರಿದರು
ಪಾಂಡುನಂದನರ್+ಐವರ್+ಈತನ
ಕಂಡು +ಹಾಯೆಂದ್+ಒರಲಿ +ಹೊರಳಿದ್+ಅವನಿಪನ +ಮೇಲೆ

ಅಚ್ಚರಿ:
(೧) ಆಘಾತವನ್ನು ವಿವರಿಸುವ ಪರಿ – ಧೊಪ್ಪನೆದಿಂಡುಗೆಡೆದಳು ಮೂರ್ಛೆಯಲಿ ಮರೆಗೊಂಡು

ನಿಮ್ಮ ಟಿಪ್ಪಣಿ ಬರೆಯಿರಿ