ಪದ್ಯ ೩೩: ಕೌರವನು ಭೀಮನ ಬಳಿ ಹೇಗೆ ನುಗ್ಗಿದನು?

ಎಲವೋ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ (ಗದಾ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಹೊಡೆತಗಳ ಪ್ರವಾಹದಲ್ಲಿ ಒಂದು ಕ್ಷಣ ಕೈನಿಂತುಹೋಯಿತು. ನಿನಗೆ ಆದ ಅಭ್ಯುದಯವು ಆಕಸ್ಮಿಕ. ನನ್ನ ಛಲವನ್ನು ನಿಲ್ಲಿಸುವೆನೆಮ್ದುಕೊಂಡಿದ್ದರೆ ಏಲು. ನನ್ನ ಹೊಡೆತಕ್ಕೆ ಹೆದರುವುದಾದರೆ ನಿನ್ನವರನ್ನು ಕರೆಸಿಕೋ, ಹಲವು ಹೊಡೆತಗಳಿಂದೇನು. ನಿನಗೆ ಇದೊಂದೇ ಹೊಡೆತ ಸಾಕು ಎನ್ನುತ್ತಾ ನುಗ್ಗಿದನು.

ಅರ್ಥ:
ವಿಘಾತ: ನಾಶ, ಧ್ವಂಸ; ಕೈದು: ಆಯುಧ; ತೆರಹು: ಬಿಚ್ಚು, ತೆರೆ; ಆಕಸ್ಮಿಕ: ಅನಿರೀಕ್ಷಿತವಾದ ಘಟನೆ; ಅಭ್ಯುದಯ: ಏಳಿಗೆ; ಛಲ: ನೆಪ, ವ್ಯಾಜ; ಬಿಡಿಸು: ತೊರೆ; ಏಳು: ಮೇಲೆ ಹತ್ತು; ಮನ: ಮನಸ್ಸು; ಅಳುಕು: ಹೆದರು; ಕರೆ: ಬರೆಮಾದು; ಹೊಯ್ಲು: ಹೊಡೆ; ಹೊಕ್ಕು: ಸೇರು; ಮಹೀಪಾಲ: ರಾಜ;

ಪದವಿಂಗಡಣೆ:
ಎಲವೋ+ ಭೀಮ +ವಿಘಾತಿಗಳ +ಕೈ
ದೊಳಸಿನಲಿ +ತೆರಹಾಯ್ತು +ನೀನ್
ಇಟ್ಟಳಿಸುವಡೆ +ನಿನಗಾದುದ್+ಆಕಸ್ಮಿಕವದ್+ಅಭ್ಯುದಯ
ಛಲವ +ಬಿಡಿಸುವಡ್+ಏಳು +ನೀ +ಮನವ್
ಅಳಕುವಡೆ +ನಿನ್ನವರ+ ಕರೆ +ಹೊ
ಯ್ಲೊಳಗಿದೊಂದೇ +ಹೊಯ್ಲೆನುತ +ಹೊಕ್ಕನು +ಮಹೀಪಾಲ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು

ಪದ್ಯ ೩೨: ಕೌರವನು ಧರ್ಮಜನನ್ನು ಹೇಗೆ ನಿಂದಿಸಿದನು?

ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ (ಗದಾ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನು ಎಡಗೈ ನೀಡಿ, ನನಗೆ ಪೆಟ್ಟು ಬಿದ್ದಿತೆಂದು ನಿಮಗೆ ಸಂತೋಷವುಕ್ಕಿತೇ? ಇನ್ನೊಂದು ನಿಮಿಷದಲ್ಲಿ ನಿಮ್ಮನ್ನು ದುಃಖದ ಕಡಲಿನಲ್ಲಿ ಅದ್ದುತ್ತೇನೆ. ಈ ನಗು, ಈ ಹುಮ್ಮಸ್ಸು, ಜಯದ ಸಂತೋಷಗಳನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಜರೆದನು.

ಅರ್ಥ:
ಹಾನಿ: ಹಾಳು; ಕಡು: ಬಹಳ; ಸುಮ್ಮಾನ:ಸಂತೋಷ, ಹಿಗ್ಗು; ನಿಮಿಷ: ಕ್ಷಣ; ದುಮ್ಮಾನ: ದುಃಖ; ಶರಧಿ: ಸಾಗರ; ಅದ್ದು: ಮುಳುಗಿಸು; ತಿದ್ದು: ಸರಿಪಡಿಸು; ನಗೆ: ಹರ್ಷ; ಬಗೆ: ರೀತಿ; ವಿಜಯ: ಗೆಲುವು; ಅನುರಾಗ: ಪ್ರೀತಿ; ನಿಲಿಸು: ತಡೆ; ಸೂನು: ಮಗ; ಸೈರಿಸು: ತಾಳು; ಜರೆ: ಬಯ್ಯು, ನಿಂದಿಸು; ವಾಮ: ಎಡಭಾಗ; ಹಸ್ತ: ಕೈ;

ಪದವಿಂಗಡಣೆ:
ಹಾನಿ+ಎಮಗಾಯ್ತೆಂದು +ಕಡು+ಸು
ಮ್ಮಾನವುಕ್ಕಿತೆ+ ನಿಮಿಷದಲಿ+ ದು
ಮ್ಮಾನ+ ಶರಧಿಯೊಳ್+ಅದ್ದುವೆನು +ತಿದ್ದುವೆನು +ನಿನ್ನವರ
ಈ +ನಗೆಯನೀ +ಬಗೆಯನೀ +ವಿಜಯ
ಅನುರಾಗವ +ನಿಲಿಸುವೆನು +ಯಮ
ಸೂನು +ಸೈರಿಸೆನುತ್ತ+ ಜರೆದನು +ವಾಮ+ಹಸ್ತದಲಿ

ಅಚ್ಚರಿ:
(೧) ಸುಮ್ಮಾನ, ದುಮ್ಮಾನ – ವಿರುದ್ಧ ಪದಗಳು
(೨) ದುಃಖವನ್ನು ಓಡಿಸುವೆ ಎಂದು ಹೇಳುವ ಪರಿ – ನಿಮಿಷದಲಿ ದುಮ್ಮಾನ ಶರಧಿಯೊಳದ್ದುವೆನು

ಪದ್ಯ ೩೧: ಕೌರವನು ಮತ್ತೆ ಹೇಗೆ ಮೇಲೆದ್ದನು?

ಒರೆವ ರಕುತವ ಧೂಳಿನಿಂದವೆ
ಹೊರಗ ತೊಡೆತೊಡೆದೌಕಿ ಕೋಪದ
ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ
ಮುರುಕಿಸುವ ರಿಪುಭಟನನೋರೆಯೊ
ಳೆರಗಿ ನೋಡುತ ಸಾರಸತ್ವದ
ನೆರವಣಿಗೆ ಕೈಗೂಡಲೆದ್ದನು ಗದೆಯ ಕೈನೀಡಿ (ಗದಾ ಪರ್ವ, ೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನು ಮೈಯಿಂದ ಒಸರುತ್ತಿದ್ದ ರಕ್ತವನ್ನು ಧೂಳಿನಿಂದೊರಸಿಕೊಂಡನು. ಮತ್ತೆ ಮತ್ತೆ ಧೂಳನ್ನು ಒರೆಸಿ ಹಾಕಿದನು. ಕೌರವನಿಗೆ ಅತ್ಯಧಿಕ ರೋಷ ಹೊಮ್ಮಿತು. ಕಣ್ಣು, ಹುಬ್ಬು, ಉಸಿರಾಟಗಳಲ್ಲಿ ಕೋಪ ಪ್ರಕಟವಾಯಿತು. ಓರೆನೋಟದಿಂದ ವೈರಿಯನ್ನು ನೋಡುತ್ತಾ ಸತ್ವವೆಲ್ಲವೂ ಹಿಂದಿರುಗಲು, ಗದೆಯನ್ನು ಹಿಡಿದು ಮೇಲೆದ್ದನು.

ಅರ್ಥ:
ಒರೆ: ಬಳಿ, ಸವರು; ರಕುತ: ನೆತ್ತರು; ಧೂಳು: ಮಣ್ಣಿನ ಅಂಶ; ಹೊರಗೆ: ಆಚೆ; ತೊಡೆ: ಲೇಪಿಸು, ಬಳಿ, ಸವರು; ಔಕು: ತಳ್ಳು; ಕೋಪ: ಮುಳಿ; ಹೊರಿಗೆ: ಭಾರ, ಹೊರೆ, ಜವಾಬ್ದಾರಿ; ಝಳಪಿಸು: ಹೆದರಿಸು, ಬೀಸು; ಕಂಗಳು: ಕಣ್ಣು; ಹುಬ್ಬು: ಕಣ್ಣಿನ ಮೇಲಿನ ಕೂದಲು; ಸುಯ್ಲು: ನಿಟ್ಟುಸಿರು; ಮುರುಕು: ವಿರೋಧಿಸು; ರಿಪು: ವೈರಿ; ಭಟ: ಸೈನಿಕ; ಓರೆ: ವಕ್ರ, ಡೊಂಕು; ಎರಗು: ಬಾಗು; ನೋಡು: ವೀಕ್ಷಿಸು; ಸಾರ: ಉತ್ಕೃಷ್ಟವಾದ; ಸತ್ವ: ತಿರುಳು; ಕೈಗೂಡು: ಬಂದು ಸೇರು; ಗದೆ: ಮುದ್ಗರ; ನೀಡು: ಕೊಡು;

ಪದವಿಂಗಡಣೆ:
ಒರೆವ +ರಕುತವ +ಧೂಳಿನಿಂದವೆ
ಹೊರಗ +ತೊಡೆತೊಡೆದ್+ಔಕಿ +ಕೋಪದ
ಹೊರಿಗೆ +ಝಳಪಿಸೆ +ಕಂಗಳಲಿ +ಹುಬ್ಬಿನಲಿ +ಸುಯ್ಲಿನಲಿ
ಮುರುಕಿಸುವ +ರಿಪುಭಟನನ್+ಓರೆಯೊಳ್
ಎರಗಿ +ನೋಡುತ +ಸಾರಸತ್ವದನ್
ಎರವಣಿಗೆ +ಕೈಗೂಡಲೆದ್ದನು+ ಗದೆಯ +ಕೈನೀಡಿ

ಅಚ್ಚರಿ:
(೧) ಕೋಪವನ್ನು ವಿವರಿಸುವ ಪರಿ – ಕೋಪದ ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ

ಪದ್ಯ ೩೦: ಕೌರವನೇಕೆ ಸಂತೈಸಿಕೊಂಡನು?

ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ (ಗದಾ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೌರವನಿಗೆ ಮೈತುಂಬ ಹರಡಿದ ನೋವಿನ ಜಾಲವು ಸ್ವಲ್ಪ ಹೊತ್ತಿನಲ್ಲೇ ಕಡಿಮೆಯಾಯಿತು. ಮೂರ್ಛೆ ತೊಲಗಿ ಎಚ್ಚರವಾಯಿತು. ಭೀತಿ ಬಿಟ್ಟು ಹೋಯಿತು, ಇಂದ್ರಿಯಗಳ ತೊಳಲಾಟ ನಿಂತು ಸ್ಥಿಮಿತಕ್ಕೆ ಬಂತು. ಬಳಲಿಕೆಯ ಕಾಟ ನಿಲ್ಲಲು ಕೌರವನು ಸಂತೈಸಿಕೊಂಡನು.

ಅರ್ಥ:
ಜಾಳಿಸು: ಚಲಿಸು, ನಡೆ; ವೇದನೆ: ನೋವು; ಝೊಮ್ಮು:ಝೊಂಪು, ಮರವೆ; ಜಾಲ: ಬಲೆ; ಜವ: ವೇಗ, ರಭಸ; ಹರಿ: ಚಲಿಸು; ಎಚ್ಚರ: ನಿದ್ರೆಯಿಂದ ಏಳುವುದು; ಮರವೆ: ಜ್ಞಾಪಕವಿಲ್ಲದ ಸ್ಥಿತಿ; ಮುಸುಕು:ಹೊದಿಕೆ; ಜಾರು: ಬೀಳು; ಹಾರು: ದೂರಹೋಗು; ಭೀತಿ: ಭಯ; ಬೇಳುವೆ: ಮೋಸ, ವಂಚನೆ, ಮೈಮರೆವು; ಕರಣೇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವೈಹಾಳಿ: ಕುದುರೆ ಸವಾರಿ, ಸಂಚಾರ; ನಿಂದು: ನಿಲ್ಲು; ಬಿಗಿ: ಬಂಧಿಸು; ಬಳಲಿಕೆ: ಆಯಾಸ; ಊಳಿಗ: ಕೆಲಸ, ಕಾರ್ಯ; ಮೊನೆ: ತುದಿ, ಕೊನೆ; ಮುರಿ: ಸೀಳು; ಸಂತೈಸು: ಸಮಾಧಾನಪಡಿಸು; ರಾಯ: ರಾಜ;

ಪದವಿಂಗಡಣೆ:
ಜಾಳಿಸಿದ +ವೇದನೆಯ +ಝೊಮ್ಮಿನ
ಜಾಳಿಗೆಯ +ಜವ +ಹರಿದುದ್+ಎಚ್ಚರ
ಮೇಲು+ಮರವೆಯ +ಮುಸುಕು +ಜಾರಿತು +ಹಾರಿತ್+ಅತಿಭೀತಿ
ಬೇಳುವೆಯ +ಕರಣೇಂದ್ರಿಯದ+ ವೈ
ಹಾಳಿ +ನಿಂದುದು +ಬಿಗಿದ +ಬಳಲಿಕೆ
ಯೂಳಿಗದ+ ಮೊನೆ +ಮುರಿಯೆ +ಸಂತೈಸಿದನು +ಕುರುರಾಯ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಝೊಮ್ಮಿನ ಜಾಳಿಗೆಯ ಜವ
(೨) ಜ ಕಾರದ ಪದಗಳು – ಜಾಳಿಸಿ, ಜವ, ಝೊಮ್ಮು, ಜಾರು
(೩) ರೂಪಕದ ಪ್ರಯೋಗ – ಬೇಳುವೆಯ ಕರಣೇಂದ್ರಿಯದ ವೈಹಾಳಿ ನಿಂದುದು

ಪದ್ಯ ೨೯: ವಂಧಿ ಮಾಗಧರು ಭೀಮನನ್ನು ಹೇಗೆ ಹೊಗಳಿದರು?

ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ (ಗದಾ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮಾ, ಭಲೇ, ಭೇಷ್, ಕೌರವ ರಾಜರಿಗೆ ಕಾಲಯಮ! ಕೌರವ ಕುಲದೀಪಕ್ಕೆ ಚಂಡಮಾರುತ!, ಕೌರವರೆಂಬ ಕತ್ತಲೆಗೆ ಸೂರ್ಯ!, ಅತಿಕೋಪದ ವೈರಿ ಕುಲವನ್ನು ನಾಶಮಾಡಲು ಸಮರ್ಥನಾದವನೇ ಎಂದು ವಂದಿ ಮಾಗಧರು ಭೀಮನನ್ನು ಹೊಗಳಿದರು.

ಅರ್ಥ:
ಭಾಪು: ಭಲೇ; ಮಝರೇ: ಭೇಷ್; ಭೂಪ: ರಾಜ; ವಿಲಯ: ನಾಶ, ಪ್ರಳಯ; ಕೃತಾಂತ: ಯಮ; ದೀಪ: ದೀವಿಗೆ, ಜೊಡರು; ಚಂಡಸಮೀರ: ಚಂಡಮಾರುತ; ನೃಪತಿ: ರಾಜ; ತಿಮಿರ: ಕತ್ತಲು, ಅಂಧಕಾರ; ಮಾರ್ತಾಂಡ: ಸೂರ್ಯ; ಕೋಪ: ಮುಳಿ, ಕುಪಿತ; ಪ್ರತಿಪಕ್ಷ: ಎದುರಾಳಿ; ಕುಲ: ವಂಶ; ನಿರ್ವಾಪಣ: ನಾಶಮಾಡಲು; ಸಮರ್ಥ: ಯೋಗ್ಯ; ಅಭಿರೂಪ: ಅನುರೂಪವಾದ; ಹೊಗಳು: ಪ್ರಶಂಶಿಸು; ವಂದಿ: ಹೊಗಳುಭಟ್ಟ; ಅಬುಧಿ: ಸಾಗರ; ಘೋಷ: ಕೂಗು;

ಪದವಿಂಗಡಣೆ:
ಭಾಪು +ಮಝರೇ +ಭೀಮ +ಕೌರವ
ಭೂಪ+ವಿಲಯ+ಕೃತಾಂತ +ಕುರುಕುಲ
ದೀಪ+ಚಂಡಸಮೀರ +ಕುರುನೃಪ+ತಿಮಿರ+ಮಾರ್ತಾಂಡ
ಕೋಪನ+ಪ್ರತಿಪಕ್ಷಕುಲ+ನಿ
ರ್ವಾಪಣೈಕ+ಸಮರ್ಥ+ ಎನುತ್+ಅಭಿ
ರೂಪನನು +ಹೊಗಳಿದರು +ವಂದಿಗಳ್+ಅಬುಧಿ +ಘೋಷದಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ

ಪದ್ಯ ೨೮: ಪಾಂಡವರೇಕೆ ಸಂತಸ ಪಟ್ಟರು?

ಹಾರಿತೊಂದೆಸೆಗಾಗಿ ಗದೆ ಮೈ
ಹೇರಿತುರು ಘಾಯವನು ಮೊಳಕಾ
ಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ
ಕಾರಿದನು ರಕುತವನು ಕೌರವ
ನೇರು ಬಲುಹೋ ಹೋದನೆನುತವೆ
ಚೀರಿತಾ ಪರಿವಾರ ಸುಮ್ಮಾನದ ಸಘಾಡದಲಿ (ಗದಾ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೌರವನ ಕೈಯ ಗದೆ ಒಂದು ಕಡೆಗೆ ಹಾರಿಹೋಯಿತು. ಅತಿಶಯವಾದ ಗಾಯವಾಗಿ, ಕೌರವನು ಮೊಣಕಾಲನ್ನೂರಿ ಬಿದ್ದನು. ಅವನ ಮುಖಕ್ಕೆ ಧೂಳು ಮೆತ್ತಿತು. ಅವನು ರಕ್ತವನ್ನು ಕಾರಿದನು. ಕೌರವನಿಗೆ ಬಹಳ ಗಾಯವಾಯಿತು. ಅವನು ಹೋದ ಎಂದುಕೊಂಡು ಪಾಂಡವ ಪರಿವಾರದವರು ಅತಿಶಯ ಸಂತೋಷವನ್ನು ತಾಳಿದರು.

ಅರ್ಥ:
ಹಾರು: ಲಂಘಿಸು, ಜಿಗಿ; ದೆಸೆ: ದಿಕ್ಕು; ಗದೆ: ಮುದ್ಗರ; ಮೈ: ತನು, ದೇಹ; ಹೇರು: ಹೊರೆ, ಭಾರ; ಉರು: ಹೆಚ್ಚು; ಘಾಯ: ಪೆಟ್ತು; ಮೊಳಕಾಲು: ಮಂಡಿ; ಊರು: ನೆಲೆಸು; ಬಿದ್ದು: ಜಾರು; ವದನ: ಮುಖ; ವೆಂಠಣಿಸು: ಮುತ್ತಿಗೆ ಹಾಕು, ಸುತ್ತುವರಿ; ರಣ: ಯುದ್ಧ; ಧೂಳು: ಮಣ್ಣಿನ ಪುಡಿ; ಕಾರು: ಕೆಸರು; ರಕುತ: ನೆತ್ತರು; ಬಲುಹ: ಶಕ್ತಿ; ಹೋಗು: ತೆರಳು; ಚೀರು: ಗರ್ಜಿಸು; ಪರಿವಾರ: ಸಂಬಂಧಿಕರು; ಸುಮ್ಮಾನ: ಸಂತಸ; ಸಘಾಡ: ರಭಸ;

ಪದವಿಂಗಡಣೆ:
ಹಾರಿತೊಂದ್ +ದೆಸೆಗಾಗಿ +ಗದೆ +ಮೈ
ಹೇರಿತ್+ಉರು +ಘಾಯವನು +ಮೊಳಕಾಲ್
ಊರಿ+ ಬಿದ್ದನು+ ವದನದಲಿ +ವೆಂಠಣಿಸೆ +ರಣಧೂಳಿ
ಕಾರಿದನು +ರಕುತವನು +ಕೌರವನ್
ಏರು +ಬಲುಹೋ +ಹೋದನೆನುತವೆ
ಚೀರಿತ್+ಆ +ಪರಿವಾರ +ಸುಮ್ಮಾನದ +ಸಘಾಡದಲಿ

ಅಚ್ಚರಿ:
(೧) ಕೌರವನು ಬಿದ್ದ ಪರಿ – ಮೊಳಕಾಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ
(೨) ಸ ಕಾರದ ಜೋಡಿ ಪದ – ಸುಮ್ಮಾನದ ಸಘಾಡದಲಿ

ಪದ್ಯ ೨೭: ಭೀಮನು ಕೌರವನನ್ನು ಹೇಗೆ ಅಪ್ಪಳಿಸಿದನು?

ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಕೌರವ, ಗದಾಯುದ್ಧವನ್ನು ಅಭ್ಯಾಸ ಮಾಡಿದವರಿಗೆ ನಾನೀಗ ಹೊಡೆಯುವ ಹೊಡೆತವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ. ನಿನ್ನನ್ನು ನೀನು ಕಾಪಾಡಿಕೊಳ್ಳಲು ಶಿವನ ರಕ್ಷಣೆಯನ್ನು ಬೇಡು, ನೀನಾದರೋ ಒಬ್ಬ ಅಲ್ಪ ಹೋಗು ಎನ್ನುತ್ತಾ ಭೀಮನು ವಿಷಾದ ಭರದಿಂದ ತನ್ನ ಕೈಯ ಶಕ್ತಿಯನ್ನೆಲ್ಲಾಬಿಟ್ಟು ಕೌರವನನ್ನು ಅಪ್ಪಳಿಸಿದನು.

ಅರ್ಥ:
ಕಾದುಕೋ: ರಕ್ಷಿಸು; ಭೇದ: ಸೀಳು, ಬಿರುಕು, ಛಿದ್ರ; ಸಂಭೇದ: ಸೀಳುವ; ಗದೆ: ಮುದ್ಗರ; ಅಭ್ಯಾಸಿ: ವಿದ್ಯಾರ್ಥಿ; ದುರ್ಭೇದ: ಕಷ್ಟಕರವಾದ; ನೋಡು: ವೀಕ್ಷಿಸು; ಹೊಯ್ಲು: ಹೊಡೆತ; ಮರೆ: ರಕ್ಷಣೆ; ಮಹೇಶ್ವರ: ಈಶ್ವರ; ಹೋದೆ: ಚಿಕ್ಕ ಗಿಡ, ಪೊದೆ; ಜಡಿ: ಗದರಿಸು, ಬೆದರಿಸು; ವಿಷಾದ: ದುಃಖ; ಭರ: ವೇಗ; ಕಾಣು: ತೋರು; ಕೈದಣಿ: ಕೈ ಆಯಾಸಗೊಳ್ಳು; ಅಪ್ಪಳಿಸು: ತಟ್ಟು, ತಾಗು; ಕಲಿ: ಶೂರ;

ಪದವಿಂಗಡಣೆ:
ಕಾದುಕೊಳು +ಕೌರವ +ಗದಾ+ಸಂ
ಭೇದದ್+ಅಭ್ಯಾಸಿಗಳಿಗಿದೆ +ದು
ರ್ಭೇದ +ನೋಡಾ +ಹೊಯ್ಲಿಗಿದು +ಮರೆವೊಗು +ಮಹೇಶ್ವರನ
ಹೋದೆ +ಹೋಗಿನ್ನೆನುತ +ಜಡಿದು +ವಿ
ಷಾದ+ಭರದಲಿ +ಮುಂದುಗಾಣದೆ
ಕೈದಣಿಯಲ್+ಅಪ್ಪಳಿಸಿದನು +ಕಲಿಭೀಮ +ಕುರುಪತಿಯ

ಅಚ್ಚರಿ:
(೧) ಸಂಭೇದ, ದುರ್ಭೇದ – ಪದಗಳ ಬಳಕೆ
(೨) ಕೌರವನನ್ನು ಹಂಗಿಸುವ ಪರಿ – ಹೋದೆ ಹೋಗಿನ್ನೆನುತ
(೩) ಕ ಕಾರದ ತ್ರಿವಳಿ ಪದ – ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ

ಪದ್ಯ ೨೬: ಭೀಮನು ಹೇಗೆ ಎಚ್ಚೆತ್ತನು?

ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ (ಗದಾ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಧಗಳಿಗೆ ಕಾಲ ಮೈಮರೆದಿದ್ದ ಭೀಮನು ಎಚ್ಚೆತ್ತನು. ವೈರದ ಜಾಡ್ಯ ಮಹಾದ್ಭುತವಾಗಿ ಹೆಚ್ಚಿತು. ಭೀಮನು ಕೌರವನ ಕೈಚಳಕವನ್ನು ಹೊಗಳಿ ಶಿವಶಿವಾ ಎನ್ನುತ್ತಾ ಕೈಯಿಂದ ಸಿಡಿದು ಹೋಗಿದ್ದ ಗದೆಯನ್ನು ಹಿಡಿದನು.

ಅರ್ಥ:
ಮೈಮರೆ: ಎಚ್ಚರತಪ್ಪು; ಅರೆಗಳಿಗೆ: ಸ್ವಲ್ಪ ಸಮಯ; ವೈಮನಸ್ಯ: ಅಪಾರವಾದ ದುಃಖ; ಜಾಡ್ಯ: ನಿರುತ್ಸಾಹ, ಸೋಮಾರಿತನ; ರೇಖೆ: ಗೆರೆ, ಗೀಟು; ಸುಯ್: ಶಬ್ದವನ್ನು ವಿವರಿಸುವ ಪರಿ; ಅದ್ಭುತ: ಆಶ್ಚರ್ಯ; ಪರಿಣತ: ಪರಿಪಕ್ವವಾದುದು; ಪಾರವಶ್ಯ: ಬಾಹ್ಯಪ್ರಜ್ಞೆ ಇಲ್ಲದಿರುವುದು; ಹಗೆ: ವೈರಿ; ಕೈಮೆ: ಕೆಲಸ, ಕಪಟ; ಬಣ್ಣಿಸು: ವಿವರಿಸು; ಮರುತ್ಸುತ: ವಾಯುಪುತ್ರ (ಭೀಮ); ಸೂಸು: ಹರಡು; ಗದೆ: ಮುದ್ಗರ; ತಡವರಿಸು: ಹುಡುಕು, ಸವರು;

ಪದವಿಂಗಡಣೆ:
ಮೈಮರೆದನ್+ಅರೆಗಳಿಗೆ +ಮಾತ್ರಕೆ
ವೈಮನಸ್ಯದ +ಜಾಡ್ಯ+ರೇಖೆಯ
ಸುಯ್ +ಮಹಾದ್ಭುತವಾಯ್ತು+ ಪರಿಣತ+ ಪಾರವಶ್ಯದಲಿ
ಹಾ +ಮಹಾದೇವ+ಎನುತ+ ಹಗೆವನ
ಕೈಮೆಯನು +ಬಣ್ಣಿಸುತಲ್+ಎದ್ದನಲೈ
ಮರುತ್+ಸುತ+ ಸೂಸಿ +ಹಾರಿದ +ಗದೆಯ +ತಡವರಿಸಿ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಹಗೆವನ ಕೈಮೆಯನು ಬಣ್ಣಿಸುತಲ್

ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ಪದ್ಯ ೨೪: ಪಾಂಡವಸೇನೆಯು ಏಕೆ ತಲೆ ತಗ್ಗಿಸಿತು?

ಎಡದ ದಂಡೆಯೊಳೊತ್ತಿ ಹೊಯುಳ
ಕದುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ (ಗದಾ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಡದಂಡೆಯಿಂದೊತ್ತಿ, ಹೊಡೆತದ ಭರವನ್ನು ತಪ್ಪಿಸಿ ಭೀಮನು ಕೌರವನ ಮುಡುಹನ್ನು ಹೊಡೆದನು. ದೇವತೆಗಳು ಭಲೇ ಎಂದು ಹೊಗಳಿದರು. ಕೌರವನು ಆ ಪೆಟ್ಟನ್ನು ಗದೆಯಿಂದ ತಪ್ಪಿಸಿ ಭೀಮನ ಸೊಂಟಕ್ಕೆ ಹೊಡೆದನು. ಭೀಮನ ಚಲನೆ ನಿಂತಿತು. ನಗುತ್ತಿದ್ದ ಪಾಂಡವಸೇನೆಯು ನಾಚಿ ತಲೆ ತಗ್ಗಿಸಿತು.

ಅರ್ಥ:
ಎಡ: ವಾಮಭಾಗ; ದಂಡೆ: ಹತ್ತಿರ, ಸಮೀಪ, ದಡ; ಒತ್ತು: ನೂಕು; ಹೊಯ್: ಹೊಡೆ; ಕಡುಹು: ಸಾಹಸ, ಹುರುಪು, ಉತ್ಸಾಹ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಮಝ: ಭಲೇ; ಭಾಪು: ಭಲೇ; ಸುರ: ಅಮರ, ದೇವತೆ; ಸ್ತೋಮ: ಗುಂಪು; ತಡೆ: ನಿಲ್ಲಿಸು; ಘಾಯ: ಪೆಟ್ಟು; ಗದೆ: ಮುದ್ಗರ; ನಡು: ಮಧ್ಯ; ಅಪ್ಪಳಿಸು: ಹೊಡೆ; ಮಿಡುಕು: ಅಲುಗಾಟ, ಚಲನೆ; ನಗು: ಹರ್ಷ; ಬಲ: ಸೈನ್ಯ; ತಲೆ: ಶಿರ; ಮಣಿ: ಬಾಗು, ಬಗ್ಗು;

ಪದವಿಂಗಡಣೆ:
ಎಡದ +ದಂಡೆಯೊಳ್+ಒತ್ತಿ +ಹೊಯ್ಗುಳ
ಕಡುಹ +ತಪ್ಪಿಸಿ +ಕೌರವೇಂದ್ರನ
ಮುಡುಹ +ಹೊಯ್ದನು +ಭೀಮ +ಮಝ +ಭಾಪೆನೆ +ಸುರಸ್ತೋಮ
ತಡೆದನಾ +ಘಾಯವನು +ಗದೆಯಲಿ
ನಡುವನ್+ಅಪ್ಪಳಿಸಿದನು+ ಭೀಮನ
ಮಿಡುಕು +ನಿಂದುದು +ನಗುವ +ಪಾಂಡವ +ಬಲದ +ತಲೆ +ಮಣಿಯೆ

ಅಚ್ಚರಿ:
(೧) ಬಿದ್ದನು ಎಂದು ಹೇಳುವ ಪರಿ – ಭೀಮನ ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ