ಪದ್ಯ ೩೯: ದೇವತೆಗಳು ಯಾರ ಮುಡಿಗೆ ಹೂ ಮಳೆಗರೆದರು?

ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಲ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ (ಗದಾ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಆಶ್ಚರ್ಯಕರವಾದ ಸಂಗತಿಯನ್ನು ಕೇಳು. ಕೌರವನು ಯುದ್ಧದಲ್ಲಿ ಸಫಲನಾದನು. ಕೌರವನ ಸಿರಿಮುಡಿಗೆ ದೇವತೆಗಳು ಹೂ ಮಳೆಗರೆದರು. ವೈರಿರಾಜರು ತಲೆ ತಗ್ಗಿಸಿದರು. ಶ್ರೀಕೃಷ್ಣನೂ, ಪಾಂಡವರೂ ಮೂಗಿನ ಮೇಲೆ ಬೆರಳಿಟ್ಟು ನಿಟ್ಟುಸಿರುಗರೆದು ತಮ್ಮ ಪಾಪ ಕರ್ಮವನ್ನು ಬೈದುಕೊಂಡರು.

ಅರ್ಥ:
ಅರಸ: ರಾಜ; ಆಶ್ಚರಿಯ: ಅದ್ಭುತ; ಅರಸ: ರಾಜ; ಆಹವ: ಯುದ್ಧ; ಸಫಲ: ಫಲಕಾರಿಯಾದ; ಸುರಕುಲ: ದೇವತೆಗಳ ಗುಂಪು; ಅರಳ: ಹೂವು; ಮಳೆ: ವರ್ಶ; ಸಿರಿಮುಡಿ: ಶ್ರೇಷ್ಠವಾದ ಶಿರ; ಅರಿ: ವೈರಿ; ನೃಪ: ರಾಜ; ತಲೆ: ಶಿರ; ಕುತ್ತು: ತಗ್ಗಿಸು; ಮುರಹರ: ಕೃಷ್ಣ; ಯಮಳ: ಅವಳಿ ಮಕ್ಕಳು; ಬೆರಳು: ಅಂಗುಲಿ; ಮೂಗು: ನಾಸಿಕ; ಸುಯ್ದು: ನಿಟ್ಟುಸಿರು; ಬಯ್ದು: ಜರೆದು; ದುಷ್ಕೃತ: ಕೆಟ್ಟ ಕೆಲಸ, ಕರ್ಮ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು +ನಿ
ಮ್ಮರಸನ್+ಆಹವ +ಸಫಲ+ ಸುರಕುಲವ್
ಅರಳ +ಮಳೆಗರೆದುದು +ಕಣಾ +ಕುರುಪತಿಯ +ಸಿರಿಮುಡಿಗೆ
ಅರಿ+ನೃಪರು +ತಲೆಗುತ್ತಿದರು +ಮುರ
ಹರ +ಯುಧಿಷ್ಠಿರ +ಪಾರ್ಥ +ಯಮಳರು
ಬೆರಳ+ ಮೂಗಿನಲಿದ್ದು+ ಸುಯ್ದರು+ ಬಯ್ದು +ದುಷ್ಕೃತವ

ಅಚ್ಚರಿ:
(೧) ಅರಸ, ನೃಪ -ಸಮಾನಾರ್ಥಕ ಪದ
(೨) ಜಯವನ್ನು ಆಚರಿಸಿದ ಪರಿ – ಸುರಕುಲವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ

ಪದ್ಯ ೩೮: ಕೌರವನನ್ನು ಅಮರಗಣ ಹೇಗೆ ಹೊಗಳಿತು?

ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ (ಗದಾ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಮಹಾಕೋಲಾಹಲವಾಯಿತು. ಪಿಶಾಚರು, ರಾಕ್ಷಸರು, ವಿದ್ಯಾಧರರು, ಉರಗರು, ಯಕ್ಷಕಿನ್ನನರು, ವೀರನೆಂದರೆ ನೀನೇ, ನಲ ನಹುಷದ ವಂಶದಲ್ಲಿ ಹುಟ್ಟಿ ವಿಜಯಿಯಾದೆ. ಕೌರವ, ನೀನು ಕರಾಳ ಬಾಹುಬಲವನ್ನುಳ್ಳವನು ಎಂದು ಕೂಗಿದರು.

ಅರ್ಥ:
ಕಳವಳ: ಗೊಂದಲ; ದಿಕ್ಕು: ದಿಶೆ; ಮೂಲೆ: ಕೊನೆ; ಬಿರಿ: ಹೊಡೆ, ಸೀಳು; ಪಿಶಾಚ: ದೆವ್ವ; ರಾಕ್ಷಸ: ಅಸುರ; ಜಾಲ: ಬಲೆ, ಸಮೂಹ; ಉರಗ: ಹಾವು; ಆಳು: ಪರಾಕ್ರಮಿ, ಶೂರ; ಭೂಪಾಲಕ: ರಾಜ; ಕುಲ: ವಂಶ; ಭಂಗ: ಸೋಲು, ಮುರಿ; ಅಭಂಗ: ಜಯಶಾಲಿ; ಕರಾಳ: ದುಷ್ಟ; ಭುಜಬಲ: ಪರಾಕ್ರಮಿ; ಕೊಂಡಾಡು: ಹೊಗಳು; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಮೇಲೆ +ಕಳವಳವಾಯ್ತು +ದಿಕ್ಕಿನ
ಮೂಲೆ +ಬಿರಿಯೆ +ಪಿಶಾಚ+ರಾಕ್ಷಸ
ಜಾಲ +ವಿದ್ಯಾಧರ +ಮಹ+ಉರಗ +ಯಕ್ಷ+ ಕಿನ್ನರರು
ಆಳು +ನೀನಹೆ +ನಳ+ ನಹುಷ +ಭೂ
ಪಾಲ+ಕುಲದಲ್+ಅಭಂಗನಾದೆ +ಕ
ರಾಳ+ಭುಜಬಲ +ನೀನೆನುತ +ಕೊಂಡಾಡಿತ್+ಅಮರಗಣಾ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಭೂಪಾಲಕುಲದಲಭಂಗನಾದೆ ಕರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ

ಪದ್ಯ ೩೭: ದುರ್ಯೋಧನನು ಏನು ಹೇಳುತ್ತಾ ಗದೆಯನ್ನು ತಿರುಗಿಸಿದನು?

ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ (ಗದಾ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೌರವನು ಗರ್ಜಿಸುತ್ತಾ, ಸತ್ತು ಹೋದವನನ್ನು ನಾನು ಹೊಡೆಯುವುದಿಲ್ಲ, ಅರ್ಜುನ ಮಹಾಸ್ತ್ರವನ್ನು ಹೂದು, ಧರ್ಮಜ ಬಿಲ್ಲನ್ನು ಹಿಡಿ, ನಕುಲ ಸಹದೇವರು ಆಯುಧಗಳನ್ನು ಹಿದಿಯಲಿ, ಸಾತ್ಯಕಿ ಬಿಲ್ಲನ್ನು ಹಿಡಿ, ಶಿಖಂಡಿ, ಧೃಷ್ಟದ್ಯುಮ್ನರೇ ನನ್ನನ್ನು ಇದಿರಿಸಿ, ನಿಮ್ಮವನ ಸೇಡನ್ನು ತೀರಿಸಲು ಬನ್ನಿ ಎಂದು ಕೌರವನು ಗದೆಯನ್ನು ತಿರುಗಿಸಿದನು.

ಅರ್ಥ:
ಮಡಿ: ಸಾವು; ಹೊಯ್ಯು: ಹೊಡೆ; ತೊಡು: ಹೂಡು; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಬಿಲು: ಬಿಲ್ಲು, ಚಾಪ; ತುಡುಕು: ಹೋರಾಡು, ಸೆಣಸು; ಯಮಳರು: ಅವಳಿ ಮಕ್ಕಳು; ಕೈದು: ಆಯುಧ; ಶರ: ಬಾಣ; ಶರಾಸನ: ಬಿಲ್ಲು; ಹಿಡಿ: ಗ್ರಹಿಸು; ಸುತ: ಮಗ; ಅವಗಡಿಸು: ಸೋಲಿಸು; ಹರಿಬ: ಕೆಲಸ, ಕಾರ್ಯ; ಮಿಡುಕು: ಅಲುಗಾಟ, ಚಲನೆ; ತೂಗು: ಅಲ್ಲಾಡಿಸು; ಅವನಿಪತಿ: ರಾಜ; ಗದೆ: ಮುದ್ಗರ;

ಪದವಿಂಗಡಣೆ:
ಮಡಿದವನ +ಹೊಯ್ಯೆನು+ ಧನಂಜಯ
ತೊಡು +ಮಹಾಸ್ತ್ರವನ್+ಅವನಿಪತಿ +ಬಿಲು
ದುಡುಕು +ಯಮಳರು +ಕೈದುಗೊಳಿ +ಸಾತ್ಯಕಿ +ಶರಾಸನವ
ಹಿಡಿ +ಶಿಖಂಡಿ +ದ್ರುಪದಸುತರ್+ಅವ
ಗಡಿಸಿರೈ +ನಿಮ್ಮವನ+ ಹರಿಬಕೆ
ಮಿಡುಕುವಡೆ +ಬಹುದೆನುತ +ತೂಗಿದನ್+ಅವನಿಪತಿ +ಗದೆಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ

ಪದ್ಯ ೩೬: ಕೌರವನ ಹೊಡೆತದಿಂದ ಭೀಮನ ಸ್ಥಿತಿ ಹೇಗಿತ್ತು?

ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ (ಗದಾ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನು ಮತ್ತೆ ಭೀಮನ ನೆತ್ತಿಯನ್ನು ಸರ್ವಶಕ್ತಿಯಿಂದಲೂ ಹೊಡೆಯಲು, ಭೀಮನು ಓಲಿ ಮೂರ್ಛೆಯಿಮ್ದ ಕೆಳಬಿದ್ದನು. ಕಣ್ಣುಗಳು ನೆಟ್ಟವು. ಉಸಿರಾಡುವಾಗ ರಕ್ತದ ಹನಿಗಳು ಒಸರಿಸಿದವು. ಗದೆ ಪಕ್ಕಕ್ಕೆ ಹಾರಿತು, ಭೀಮನು ನೆಲದ ಮೇಲೊರಗಿದನು.

ಅರ್ಥ:
ಮತ್ತೆ: ಪುನಃ; ಹೊಯ್ದು: ಹೊಡೆ; ನೆತ್ತಿ: ಶಿರ; ನಿಪ್ಪಸರ: ಅತಿಶಯ, ಹೆಚ್ಚಳ; ಕಳೆ: ಬೀಡು, ತೊರೆ, ಹೋಗಲಾಡಿಸು; ಝೋಂಪು: ಮೂರ್ಛೆ; ತಿರುಗು: ಹೊರಲಾಡು; ಬಿದ್ದು: ಎರಗು, ಬೀಳು; ಬಿಗಿ: ಕಟ್ಟು, ಬಂಧಿಸು; ಮೂರ್ಛೆ: ಎಚ್ಚರವಿಲ್ಲದ ಸ್ಥಿತಿ; ಕೆತ್ತು: ನಡುಕ, ಸ್ಪಂದನ; ಕಂಗಳು: ಕಣ್ಣು; ಸುಯ್ಲು: ನಿಟ್ಟುಸಿರು; ಲಹರಿ: ರಭಸ, ಆವೇಗ; ಸುತ್ತಲು: ಎಲ್ಲಾಕಡೆ; ಅರುಣಾಂಬು: ರಕ್ತ; ಸಿಡಿ: ಹಾರು; ಗದೆ: ಮುದ್ಗರ; ಭಟ: ಸೈನಿಕ; ಒರಗು: ಕೆಳಕ್ಕೆ ಬಾಗು; ಮರವೆ: ಮರವು, ಜ್ಞಾಪಕವಿಲ್ಲದಿರುವುದು;

ಪದವಿಂಗಡಣೆ:
ಮತ್ತೆ +ಹೊಯ್ದನು +ಭೀಮಸೇನನ
ನೆತ್ತಿಯನು +ನಿಪ್ಪಸರದಲಿ +ಕಳೆ
ಹತ್ತಿ+ ಝೋಂಪಿಸಿ +ತಿರುಗಿ +ಬಿದ್ದನು +ಬಿಗಿದ +ಮೂರ್ಛೆಯಲಿ
ಕೆತ್ತ+ ಕಂಗಳ +ಸುಯ್ಲ+ ಲಹರಿಯ
ಸುತ್ತಲೊಗುವ್+ಅರುಣಾಂಬುಗಳ +ಕೆಲ
ದತ್ತ +ಸಿಡಿದಿಹ +ಗದೆಯ +ಭಟನ್+ಒರಗಿದನು+ಮರವೆಯಲಿ

ಅಚ್ಚರಿ:
(೧) ಮೂರ್ಛೆ, ಮರವೆ – ಸಾಮ್ಯಾರ್ಥ ಪದ
(೨) ಭೀಮನನ್ನು ಗದೆಯ ಭಟ ಎಂದು ಕರೆದಿರುವುದು

ಪದ್ಯ ೩೫: ಕೌರವನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ (ಗದಾ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಭೀಮನ ತಿವಿತವನ್ನು ತಪ್ಪಿಸಿಕೊಂಡು ಕೌರಾನು ನಾಭಿಗೆ ಗುರಿಯಿಟ್ಟು ಜಂಘೆಗೆ ಹೂಡಿ, ಮೇಲೆ ಹಾರಿ ಭೀಮನ ತಲೆ, ಭುಜಗಳಿದ್ದ ಸೀಸಕ, ಕವಚಗಳನ್ನು ಪುಡಿಪುಡಿಯಾಗುವಂತೆ ಹೊಡೆದು ಗರ್ಜಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳ್: ಆಲಿಸು; ತಿವಿ: ಚುಚ್ಚು; ತಪ್ಪಿಸು: ಸುಳ್ಳಾಗು; ಕವಿ: ಆವರಿಸು; ನಾಭಿ: ಹೊಕ್ಕಳು; ತೋರು: ಪ್ರಕಟಿಸು; ಜಂಘೆ: ತೊಡೆ; ಝಳಪ: ವೇಗ; ಲವಣಿ: ಕಾಂತಿ; ಲಳಿ: ರಭಸ; ಎದ್ದು: ಮೇಲೆ ಬಂದು; ಹೊಯ್ದು: ಹೊಡೆ; ಪವನಜ: ಭೀಮ; ಭುಜ: ಬಾಹು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ; ಜಿಗಿಜಿಯಾಗಿ: ಪುಡಿಯಾಗಿ; ಬೀಳು: ಎರಗು, ಬಾಗು; ಬೊಬ್ಬಿರಿ: ಗರ್ಜಿಸು; ಅರಸ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್ +ಭೀಮಸೇನನ
ತಿವಿಗುಳನು+ ತಪ್ಪಿಸಿ+ ಸುಯೋಧನ
ಕವಿದು +ನಾಭಿಗೆ +ತೋರಿ +ಜಂಘೆಗೆ +ಹೂಡಿ +ಝಳಪದಲಿ
ಲವಣಿಯಲಿ +ಲಳಿಯೆದ್ದು+ ಹೊಯ್ದನು
ಪವನಜನ +ಭುಜ+ಶಿರವ +ಸೀಸಕ
ಕವಚವ+ಜಿಗಿಜಿಯಾಗೆ +ಬೀಳೆನುತ್+ಅರಸ +ಬೊಬ್ಬಿರಿದ

ಅಚ್ಚರಿ:
(೧) ಲ ಕಾರದ ಜೋಡಿ ಪದ – ಲವಣಿಯಲಿ ಲಳಿಯೆದ್ದು
(೨) ಅವನಿಪತಿ, ಅರಸ – ಸಮಾನಾರ್ಥಕ ಪದ

ಪದ್ಯ ೩೪: ಭೀಮನು ಕೌರವನನ್ನು ಹೇಗೆ ಹಂಗಿಸಿದನು?

ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ್ಯ ಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೇವಲ ನಿಷ್ಪ್ರಯೋಜಕ ಮಾತುಗಳಿಂದ ಬೈದರೆ ನೀನೇನು ದೊಡ್ಡವನೇ? ಬಾಯಿಂದ ಗದಾಪ್ರಹಾರ ಮಾಡುವೆಯೋ ಅಥವ ಕೈಗಳಿಂದ ತೋರುವೆಯೋ? ನೀನು ಜಾತಿಯಿಂದ ಕ್ಷತ್ರಿಯನಲ್ಲವೇ? ನಿನ್ನ ಕೈಯಲ್ಲಿ ಆಯುಧವಿದೆ, ಗುರಿಯಾಗಿ ನಾನಿದ್ದೇನೆ, ನಿನ್ನಲ್ಲಡಗಿರುವ ಪರಾಕ್ರಮವನ್ನು ಪ್ರಕಟಿಸು ಎನ್ನುತ್ತಾ ಭಿಮನು ಕೌರವನನ್ನು ತಿವಿದನು.

ಅರ್ಥ:
ಹೊಯ್ದು: ಹೊಡೆ; ತೋರು: ಗೋಚರಿಸು; ಬಂಜೆ: ನಿಷ್ಫಲ; ನುಡಿ: ಮಾತು; ಬಯ್ದು: ಜರೆ, ಹಂಗಿಸು; ಅಧಿಕ: ಹೆಚ್ಚು; ಬಾಹು: ತೋಳು; ಮೇಣ್: ಅಥವ; ಮುಖ: ಆನನ; ಜಾತಿ: ಕುಲ; ಕಯ್ದು: ಆಯುಧ; ಪಣ: ಸ್ಪರ್ಧೆ, ಧನ; ಗುಪ್ತ: ಗುಟ್ಟು; ಪ್ರತಾಪ: ಶಕ್ತಿ, ಪರಾಕ್ರಮ; ಪ್ರಕಟಿಸು: ತೋರು; ತಿವಿ: ಚುಚ್ಚು;

ಪದವಿಂಗಡಣೆ:
ಹೊಯ್ದು +ತೋರಾ +ಬಂಜೆ +ನುಡಿಯಲಿ
ಬಯ್ದಡ್+ಅಧಿಕನೆ +ಬಾಹುವಿಂ +ಹೊರ
ಹೊಯ್ದವನೊ+ ಮೇಣ್ +ಮುಖದಲೋ +ನೀನಾರು +ಜಾತಿಯಲಿ
ಕಯ್ದು+ ನಿನಗಿದೆ +ಲಕ್ಷ್ಯ+ ಪಣ +ನಮಗ್
ಎಯ್ದುವಡೆ +ಗುಪ್ತ+ಪ್ರತಾಪವನ್
ಎಯ್ದೆ +ಪ್ರಕಟಿಸ್+ಎನುತ್ತ+ ತಿವಿದನು +ಭೀಮ +ಕುರುಪತಿಯ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಬಂಜೆ ನುಡಿಯಲಿಬಯ್ದಡಧಿಕನೆ
(೨) ಕೌರವನನ್ನು ಕೆರಳಿಸುವ ಪರಿ – ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ