ಪದ್ಯ ೩೩: ಕೌರವನು ಭೀಮನ ಬಳಿ ಹೇಗೆ ನುಗ್ಗಿದನು?

ಎಲವೋ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ (ಗದಾ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಹೊಡೆತಗಳ ಪ್ರವಾಹದಲ್ಲಿ ಒಂದು ಕ್ಷಣ ಕೈನಿಂತುಹೋಯಿತು. ನಿನಗೆ ಆದ ಅಭ್ಯುದಯವು ಆಕಸ್ಮಿಕ. ನನ್ನ ಛಲವನ್ನು ನಿಲ್ಲಿಸುವೆನೆಮ್ದುಕೊಂಡಿದ್ದರೆ ಏಲು. ನನ್ನ ಹೊಡೆತಕ್ಕೆ ಹೆದರುವುದಾದರೆ ನಿನ್ನವರನ್ನು ಕರೆಸಿಕೋ, ಹಲವು ಹೊಡೆತಗಳಿಂದೇನು. ನಿನಗೆ ಇದೊಂದೇ ಹೊಡೆತ ಸಾಕು ಎನ್ನುತ್ತಾ ನುಗ್ಗಿದನು.

ಅರ್ಥ:
ವಿಘಾತ: ನಾಶ, ಧ್ವಂಸ; ಕೈದು: ಆಯುಧ; ತೆರಹು: ಬಿಚ್ಚು, ತೆರೆ; ಆಕಸ್ಮಿಕ: ಅನಿರೀಕ್ಷಿತವಾದ ಘಟನೆ; ಅಭ್ಯುದಯ: ಏಳಿಗೆ; ಛಲ: ನೆಪ, ವ್ಯಾಜ; ಬಿಡಿಸು: ತೊರೆ; ಏಳು: ಮೇಲೆ ಹತ್ತು; ಮನ: ಮನಸ್ಸು; ಅಳುಕು: ಹೆದರು; ಕರೆ: ಬರೆಮಾದು; ಹೊಯ್ಲು: ಹೊಡೆ; ಹೊಕ್ಕು: ಸೇರು; ಮಹೀಪಾಲ: ರಾಜ;

ಪದವಿಂಗಡಣೆ:
ಎಲವೋ+ ಭೀಮ +ವಿಘಾತಿಗಳ +ಕೈ
ದೊಳಸಿನಲಿ +ತೆರಹಾಯ್ತು +ನೀನ್
ಇಟ್ಟಳಿಸುವಡೆ +ನಿನಗಾದುದ್+ಆಕಸ್ಮಿಕವದ್+ಅಭ್ಯುದಯ
ಛಲವ +ಬಿಡಿಸುವಡ್+ಏಳು +ನೀ +ಮನವ್
ಅಳಕುವಡೆ +ನಿನ್ನವರ+ ಕರೆ +ಹೊ
ಯ್ಲೊಳಗಿದೊಂದೇ +ಹೊಯ್ಲೆನುತ +ಹೊಕ್ಕನು +ಮಹೀಪಾಲ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು

ಪದ್ಯ ೩೨: ಕೌರವನು ಧರ್ಮಜನನ್ನು ಹೇಗೆ ನಿಂದಿಸಿದನು?

ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ (ಗದಾ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನು ಎಡಗೈ ನೀಡಿ, ನನಗೆ ಪೆಟ್ಟು ಬಿದ್ದಿತೆಂದು ನಿಮಗೆ ಸಂತೋಷವುಕ್ಕಿತೇ? ಇನ್ನೊಂದು ನಿಮಿಷದಲ್ಲಿ ನಿಮ್ಮನ್ನು ದುಃಖದ ಕಡಲಿನಲ್ಲಿ ಅದ್ದುತ್ತೇನೆ. ಈ ನಗು, ಈ ಹುಮ್ಮಸ್ಸು, ಜಯದ ಸಂತೋಷಗಳನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಜರೆದನು.

ಅರ್ಥ:
ಹಾನಿ: ಹಾಳು; ಕಡು: ಬಹಳ; ಸುಮ್ಮಾನ:ಸಂತೋಷ, ಹಿಗ್ಗು; ನಿಮಿಷ: ಕ್ಷಣ; ದುಮ್ಮಾನ: ದುಃಖ; ಶರಧಿ: ಸಾಗರ; ಅದ್ದು: ಮುಳುಗಿಸು; ತಿದ್ದು: ಸರಿಪಡಿಸು; ನಗೆ: ಹರ್ಷ; ಬಗೆ: ರೀತಿ; ವಿಜಯ: ಗೆಲುವು; ಅನುರಾಗ: ಪ್ರೀತಿ; ನಿಲಿಸು: ತಡೆ; ಸೂನು: ಮಗ; ಸೈರಿಸು: ತಾಳು; ಜರೆ: ಬಯ್ಯು, ನಿಂದಿಸು; ವಾಮ: ಎಡಭಾಗ; ಹಸ್ತ: ಕೈ;

ಪದವಿಂಗಡಣೆ:
ಹಾನಿ+ಎಮಗಾಯ್ತೆಂದು +ಕಡು+ಸು
ಮ್ಮಾನವುಕ್ಕಿತೆ+ ನಿಮಿಷದಲಿ+ ದು
ಮ್ಮಾನ+ ಶರಧಿಯೊಳ್+ಅದ್ದುವೆನು +ತಿದ್ದುವೆನು +ನಿನ್ನವರ
ಈ +ನಗೆಯನೀ +ಬಗೆಯನೀ +ವಿಜಯ
ಅನುರಾಗವ +ನಿಲಿಸುವೆನು +ಯಮ
ಸೂನು +ಸೈರಿಸೆನುತ್ತ+ ಜರೆದನು +ವಾಮ+ಹಸ್ತದಲಿ

ಅಚ್ಚರಿ:
(೧) ಸುಮ್ಮಾನ, ದುಮ್ಮಾನ – ವಿರುದ್ಧ ಪದಗಳು
(೨) ದುಃಖವನ್ನು ಓಡಿಸುವೆ ಎಂದು ಹೇಳುವ ಪರಿ – ನಿಮಿಷದಲಿ ದುಮ್ಮಾನ ಶರಧಿಯೊಳದ್ದುವೆನು

ಪದ್ಯ ೩೧: ಕೌರವನು ಮತ್ತೆ ಹೇಗೆ ಮೇಲೆದ್ದನು?

ಒರೆವ ರಕುತವ ಧೂಳಿನಿಂದವೆ
ಹೊರಗ ತೊಡೆತೊಡೆದೌಕಿ ಕೋಪದ
ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ
ಮುರುಕಿಸುವ ರಿಪುಭಟನನೋರೆಯೊ
ಳೆರಗಿ ನೋಡುತ ಸಾರಸತ್ವದ
ನೆರವಣಿಗೆ ಕೈಗೂಡಲೆದ್ದನು ಗದೆಯ ಕೈನೀಡಿ (ಗದಾ ಪರ್ವ, ೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನು ಮೈಯಿಂದ ಒಸರುತ್ತಿದ್ದ ರಕ್ತವನ್ನು ಧೂಳಿನಿಂದೊರಸಿಕೊಂಡನು. ಮತ್ತೆ ಮತ್ತೆ ಧೂಳನ್ನು ಒರೆಸಿ ಹಾಕಿದನು. ಕೌರವನಿಗೆ ಅತ್ಯಧಿಕ ರೋಷ ಹೊಮ್ಮಿತು. ಕಣ್ಣು, ಹುಬ್ಬು, ಉಸಿರಾಟಗಳಲ್ಲಿ ಕೋಪ ಪ್ರಕಟವಾಯಿತು. ಓರೆನೋಟದಿಂದ ವೈರಿಯನ್ನು ನೋಡುತ್ತಾ ಸತ್ವವೆಲ್ಲವೂ ಹಿಂದಿರುಗಲು, ಗದೆಯನ್ನು ಹಿಡಿದು ಮೇಲೆದ್ದನು.

ಅರ್ಥ:
ಒರೆ: ಬಳಿ, ಸವರು; ರಕುತ: ನೆತ್ತರು; ಧೂಳು: ಮಣ್ಣಿನ ಅಂಶ; ಹೊರಗೆ: ಆಚೆ; ತೊಡೆ: ಲೇಪಿಸು, ಬಳಿ, ಸವರು; ಔಕು: ತಳ್ಳು; ಕೋಪ: ಮುಳಿ; ಹೊರಿಗೆ: ಭಾರ, ಹೊರೆ, ಜವಾಬ್ದಾರಿ; ಝಳಪಿಸು: ಹೆದರಿಸು, ಬೀಸು; ಕಂಗಳು: ಕಣ್ಣು; ಹುಬ್ಬು: ಕಣ್ಣಿನ ಮೇಲಿನ ಕೂದಲು; ಸುಯ್ಲು: ನಿಟ್ಟುಸಿರು; ಮುರುಕು: ವಿರೋಧಿಸು; ರಿಪು: ವೈರಿ; ಭಟ: ಸೈನಿಕ; ಓರೆ: ವಕ್ರ, ಡೊಂಕು; ಎರಗು: ಬಾಗು; ನೋಡು: ವೀಕ್ಷಿಸು; ಸಾರ: ಉತ್ಕೃಷ್ಟವಾದ; ಸತ್ವ: ತಿರುಳು; ಕೈಗೂಡು: ಬಂದು ಸೇರು; ಗದೆ: ಮುದ್ಗರ; ನೀಡು: ಕೊಡು;

ಪದವಿಂಗಡಣೆ:
ಒರೆವ +ರಕುತವ +ಧೂಳಿನಿಂದವೆ
ಹೊರಗ +ತೊಡೆತೊಡೆದ್+ಔಕಿ +ಕೋಪದ
ಹೊರಿಗೆ +ಝಳಪಿಸೆ +ಕಂಗಳಲಿ +ಹುಬ್ಬಿನಲಿ +ಸುಯ್ಲಿನಲಿ
ಮುರುಕಿಸುವ +ರಿಪುಭಟನನ್+ಓರೆಯೊಳ್
ಎರಗಿ +ನೋಡುತ +ಸಾರಸತ್ವದನ್
ಎರವಣಿಗೆ +ಕೈಗೂಡಲೆದ್ದನು+ ಗದೆಯ +ಕೈನೀಡಿ

ಅಚ್ಚರಿ:
(೧) ಕೋಪವನ್ನು ವಿವರಿಸುವ ಪರಿ – ಕೋಪದ ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ

ಪದ್ಯ ೩೦: ಕೌರವನೇಕೆ ಸಂತೈಸಿಕೊಂಡನು?

ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ (ಗದಾ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೌರವನಿಗೆ ಮೈತುಂಬ ಹರಡಿದ ನೋವಿನ ಜಾಲವು ಸ್ವಲ್ಪ ಹೊತ್ತಿನಲ್ಲೇ ಕಡಿಮೆಯಾಯಿತು. ಮೂರ್ಛೆ ತೊಲಗಿ ಎಚ್ಚರವಾಯಿತು. ಭೀತಿ ಬಿಟ್ಟು ಹೋಯಿತು, ಇಂದ್ರಿಯಗಳ ತೊಳಲಾಟ ನಿಂತು ಸ್ಥಿಮಿತಕ್ಕೆ ಬಂತು. ಬಳಲಿಕೆಯ ಕಾಟ ನಿಲ್ಲಲು ಕೌರವನು ಸಂತೈಸಿಕೊಂಡನು.

ಅರ್ಥ:
ಜಾಳಿಸು: ಚಲಿಸು, ನಡೆ; ವೇದನೆ: ನೋವು; ಝೊಮ್ಮು:ಝೊಂಪು, ಮರವೆ; ಜಾಲ: ಬಲೆ; ಜವ: ವೇಗ, ರಭಸ; ಹರಿ: ಚಲಿಸು; ಎಚ್ಚರ: ನಿದ್ರೆಯಿಂದ ಏಳುವುದು; ಮರವೆ: ಜ್ಞಾಪಕವಿಲ್ಲದ ಸ್ಥಿತಿ; ಮುಸುಕು:ಹೊದಿಕೆ; ಜಾರು: ಬೀಳು; ಹಾರು: ದೂರಹೋಗು; ಭೀತಿ: ಭಯ; ಬೇಳುವೆ: ಮೋಸ, ವಂಚನೆ, ಮೈಮರೆವು; ಕರಣೇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವೈಹಾಳಿ: ಕುದುರೆ ಸವಾರಿ, ಸಂಚಾರ; ನಿಂದು: ನಿಲ್ಲು; ಬಿಗಿ: ಬಂಧಿಸು; ಬಳಲಿಕೆ: ಆಯಾಸ; ಊಳಿಗ: ಕೆಲಸ, ಕಾರ್ಯ; ಮೊನೆ: ತುದಿ, ಕೊನೆ; ಮುರಿ: ಸೀಳು; ಸಂತೈಸು: ಸಮಾಧಾನಪಡಿಸು; ರಾಯ: ರಾಜ;

ಪದವಿಂಗಡಣೆ:
ಜಾಳಿಸಿದ +ವೇದನೆಯ +ಝೊಮ್ಮಿನ
ಜಾಳಿಗೆಯ +ಜವ +ಹರಿದುದ್+ಎಚ್ಚರ
ಮೇಲು+ಮರವೆಯ +ಮುಸುಕು +ಜಾರಿತು +ಹಾರಿತ್+ಅತಿಭೀತಿ
ಬೇಳುವೆಯ +ಕರಣೇಂದ್ರಿಯದ+ ವೈ
ಹಾಳಿ +ನಿಂದುದು +ಬಿಗಿದ +ಬಳಲಿಕೆ
ಯೂಳಿಗದ+ ಮೊನೆ +ಮುರಿಯೆ +ಸಂತೈಸಿದನು +ಕುರುರಾಯ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಝೊಮ್ಮಿನ ಜಾಳಿಗೆಯ ಜವ
(೨) ಜ ಕಾರದ ಪದಗಳು – ಜಾಳಿಸಿ, ಜವ, ಝೊಮ್ಮು, ಜಾರು
(೩) ರೂಪಕದ ಪ್ರಯೋಗ – ಬೇಳುವೆಯ ಕರಣೇಂದ್ರಿಯದ ವೈಹಾಳಿ ನಿಂದುದು

ಪದ್ಯ ೨೯: ವಂಧಿ ಮಾಗಧರು ಭೀಮನನ್ನು ಹೇಗೆ ಹೊಗಳಿದರು?

ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ (ಗದಾ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮಾ, ಭಲೇ, ಭೇಷ್, ಕೌರವ ರಾಜರಿಗೆ ಕಾಲಯಮ! ಕೌರವ ಕುಲದೀಪಕ್ಕೆ ಚಂಡಮಾರುತ!, ಕೌರವರೆಂಬ ಕತ್ತಲೆಗೆ ಸೂರ್ಯ!, ಅತಿಕೋಪದ ವೈರಿ ಕುಲವನ್ನು ನಾಶಮಾಡಲು ಸಮರ್ಥನಾದವನೇ ಎಂದು ವಂದಿ ಮಾಗಧರು ಭೀಮನನ್ನು ಹೊಗಳಿದರು.

ಅರ್ಥ:
ಭಾಪು: ಭಲೇ; ಮಝರೇ: ಭೇಷ್; ಭೂಪ: ರಾಜ; ವಿಲಯ: ನಾಶ, ಪ್ರಳಯ; ಕೃತಾಂತ: ಯಮ; ದೀಪ: ದೀವಿಗೆ, ಜೊಡರು; ಚಂಡಸಮೀರ: ಚಂಡಮಾರುತ; ನೃಪತಿ: ರಾಜ; ತಿಮಿರ: ಕತ್ತಲು, ಅಂಧಕಾರ; ಮಾರ್ತಾಂಡ: ಸೂರ್ಯ; ಕೋಪ: ಮುಳಿ, ಕುಪಿತ; ಪ್ರತಿಪಕ್ಷ: ಎದುರಾಳಿ; ಕುಲ: ವಂಶ; ನಿರ್ವಾಪಣ: ನಾಶಮಾಡಲು; ಸಮರ್ಥ: ಯೋಗ್ಯ; ಅಭಿರೂಪ: ಅನುರೂಪವಾದ; ಹೊಗಳು: ಪ್ರಶಂಶಿಸು; ವಂದಿ: ಹೊಗಳುಭಟ್ಟ; ಅಬುಧಿ: ಸಾಗರ; ಘೋಷ: ಕೂಗು;

ಪದವಿಂಗಡಣೆ:
ಭಾಪು +ಮಝರೇ +ಭೀಮ +ಕೌರವ
ಭೂಪ+ವಿಲಯ+ಕೃತಾಂತ +ಕುರುಕುಲ
ದೀಪ+ಚಂಡಸಮೀರ +ಕುರುನೃಪ+ತಿಮಿರ+ಮಾರ್ತಾಂಡ
ಕೋಪನ+ಪ್ರತಿಪಕ್ಷಕುಲ+ನಿ
ರ್ವಾಪಣೈಕ+ಸಮರ್ಥ+ ಎನುತ್+ಅಭಿ
ರೂಪನನು +ಹೊಗಳಿದರು +ವಂದಿಗಳ್+ಅಬುಧಿ +ಘೋಷದಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ