ಪದ್ಯ ೧೪: ಕೌರವನು ಹೇಗೆ ತನ್ನ ಚೇತೋಭಾವವನ್ನು ತೋರಿದನು?

ನಿಮಿಷದಲಿ ಕಂದೆರೆದನಂತಃ
ಶ್ರಮದ ಝಳವಡಗಿತು ವಿಪಕ್ಷ
ಭ್ರಮಣಚೇತೋಭಾವ ಭವನದ ಮುಖವಿಕಾಸದಲಿ
ತಮದ ತನಿಮಸಕದಲಿ ಭುಜವಿ
ಕ್ರಮ ಛಡಾಳಿಸಲೆದ್ದು ಭೂಪೋ
ತ್ತಮನು ಕೊಂಡನು ಗದೆಯನನುವಾಗೆಂದನನಿಲಜನ (ಗದಾ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಒಂದು ನಿಮಿಷದಲ್ಲಿ ಕೌರವನು ಕಣ್ಣುಬಿಟ್ಟನು. ಆಯಾಸ ಹಾರಿಹೋಯಿತು. ಶತ್ರುವಿನ ಸತ್ವಾತಿಶಯವನ್ನು ಭಾವಿಸಿ ಮುಖವರಳಿತು. ಕೋಪವೇರಿ ಪರಾಕ್ರಮವು ಹೊಮ್ಮಲು ಕೌರವನು ಗದೆಯನ್ನು ತೆಗೆದುಕೊಂಡು ಭೀಮ ಸಿದ್ಧನಾಗು ಎಂದು ಗರ್ಜಿಸಿದನು.

ಅರ್ಥ:
ನಿಮಿಷ: ಕ್ಷಣಮಾತ್ರದಲಿ; ಕಂದೆರೆದು: ಕಣ್ಣನ್ನು ಬಿಚ್ಚು; ಅಂತಃಶ್ರಮ: ಒಳಗಿನ ಆಯಾಸ; ಝಳ: ಕಾಂತಿ; ಅಡಗು: ಮುಚ್ಚಿಕೊಳ್ಳು; ವಿಪಕ್ಷ: ಎದುರಾಳಿ, ವೈರಿ; ಭ್ರಮಣ: ತಿರುಗು; ಚೇತೋಭಾವ: ಸತ್ವಶಕ್ತಿ; ಭವನ: ಆಲಯ; ಮುಖ: ಆನನ; ವಿಕಾಸ: ಅರಳುವಿಕೆ, ವಿಕಸನ; ತಮ: ಅಂಧಕಾರ; ತನಿ: ಚಿಗುರು; ಮಸಕ: ಆಧಿಕ್ಯ, ಹೆಚ್ಚಳ; ಭುಜ: ಬಾಹು; ವಿಕ್ರಮ: ಶೂರ, ಸಾಹಸ; ಕೊಂಡು: ಪಡೆ; ಗದೆ: ಮುದ್ಗರ; ಅನುವಾಗು: ಸಿದ್ಧನಾಗು; ಅನಿಲಜ: ಭೀಮ;

ಪದವಿಂಗಡಣೆ:
ನಿಮಿಷದಲಿ +ಕಂದೆರೆದನ್+ಅಂತಃ
ಶ್ರಮದ +ಝಳವ್+ಅಡಗಿತು +ವಿಪಕ್ಷ
ಭ್ರಮಣ+ಚೇತೋಭಾವ +ಭವನ+ ಮುಖ+ವಿಕಾಸದಲಿ
ತಮದ +ತನಿ+ಮಸಕದಲಿ +ಭುಜ+ವಿ
ಕ್ರಮ+ ಛಡಾಳಿಸಲ್+ಎದ್ದು +ಭೂಪೋ
ತ್ತಮನು+ ಕೊಂಡನು +ಗದೆಯನ್+ಅನುವಾಗೆಂದನ್+ಅನಿಲಜನ

ಅಚ್ಚರಿ:
(೧) ಕೌರವನನ್ನು ಭೂಪೋತ್ತಮ ಎಂದು ಕರೆದಿರುವುದು
(೨) ಕೌರವನ ಅಂತಃಸತ್ವವು ಎಚ್ಚರಗೊಂಡ ಪರಿ – ತಮದ ತನಿಮಸಕದಲಿ ಭುಜವಿಕ್ರಮ ಛಡಾಳಿಸಲೆದ್ದು ಭೂಪೋತ್ತಮನು ಕೊಂಡನು ಗದೆಯನ

ಪದ್ಯ ೧೩: ಕೌರವನು ಹೇಗೆ ಚೇತರಿಸಿಕೊಂಡನು?

ಹಾರಿತೊಂದೆಸೆಗಾಗಿ ಗದೆ ಮುರಿ
ದೇರಿದವು ಕಣ್ಣಾಲಿ ನೆತ್ತಿಯ
ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ
ಜಾರಿತಂತಸ್ತಿಮಿತ ಭಯ ಹುರಿ
ಹೇರಿತಧಿಕಕ್ರೋಧ ಕರಣದ
ತಾರುಥಟ್ಟಡಗಿದುದಪಸರಿಸಿತಸು ನಿಜಾಂಗದಲಿ (ಗದಾ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗದೆ ಒಂದು ಕಡೆಗೆ ಹಾರಿತು. ಕಣ್ಣುಗುಡ್ಡೆಗಳು ನೆಟ್ಟುಕೊಂಡವು. ನೆತ್ತಿಯಿಂದ ರಕ್ತ ಒಂದು ನಿಮಿಷ ಹರಿಯಿತು. ಒಂದು ವಿಘಳಿಗೆಯಲ್ಲಿ ಮೂರ್ಛೆ ಕಳೆದು ಪ್ರಾಣಬಂದು ಮನಸ್ಸಿನಲ್ಲಿ ಅತಿಶಯ ಕ್ರೋಧ ಆವರಿಸಿತು.

ಅರ್ಥ:
ಹಾರು: ಲಂಘಿಸು; ದೆಸೆ: ದಿಕ್ಕು; ಗದೆ: ಮುದ್ಗರ; ಮುರಿ: ಸೀಳು; ಏರು: ಮೇಲೇಳು; ಕಣ್ಣಾಲಿ: ಕಣ್ಣಿನ ಕೊನೆ; ನೆತ್ತಿ: ಶಿರ; ಜೋರು: ಸೋರುವಿಕೆ; ಮುಸುಕು: ಹೊದಿಕೆ; ಮುಖ: ಆನನ; ವಿಘಳಿಗೆ: ಕಾಲ; ಮಾತ್ರ: ಕೇವಲ; ಜಾರು: ಕೆಳಗೆ ಬೀಳು; ಅಂತಸ್ತಿಮಿತ: ಮನಶ್ಶಾಂತಿಯುಳ್ಳ; ಭಯ: ಅಂಜಿಕೆ; ಹುರಿಯೇರು: ಚ್ಚು, ಬಲ, ಗಟ್ಟಿತನ; ಅಧಿಕ: ಹೆಚ್ಚು; ಕ್ರೋಧ: ಕೋಪ; ಕರಣ: ಕಿವಿ; ತಾರು: ಸೊರಗು, ಬಡಕಲಾಗು; ಥಟ್ಟು: ಪಕ್ಕ, ಕಡೆ; ಅಡಗು: ಅವಿತುಕೊಳ್ಳು; ಪಸರಿಸು: ಹರದು; ಅಂಗ: ದೇಹದ ಭಾಗ;

ಪದವಿಂಗಡಣೆ:
ಹಾರಿತ್+ಒಂದೆಸೆಗಾಗಿ+ ಗದೆ +ಮುರಿದ್
ಏರಿದವು +ಕಣ್ಣಾಲಿ +ನೆತ್ತಿಯ
ಜೋರು +ಮುಸುಕಿತು +ಮುಖವನೊಂದು +ವಿಘಳಿಗೆ +ಮಾತ್ರದಲಿ
ಜಾರಿತ್+ಅಂತಸ್ತಿಮಿತ +ಭಯ +ಹುರಿ
ಹೇರಿತ್+ಅಧಿಕ+ಕ್ರೋಧ +ಕರಣದ
ತಾರುಥಟ್ಟ್+ಅಡಗಿದುದ+ಪಸರಿಸಿತ್+ಅಸು+ ನಿಜಾಂಗದಲಿ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ತಾರುಥಟ್ಟಡಗಿದುದಪಸರಿಸಿತಸು
(೨) ದುರ್ಯೋಧನನ ಸ್ಥಿತಿ – ಮುರಿದೇರಿದವು ಕಣ್ಣಾಲಿ ನೆತ್ತಿಯ ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ

ಪದ್ಯ ೧೨: ಕೌರವನು ಹೇಗೆ ಮೂರ್ಛಿತನಾದನು?

ದೂಟಿ ಬಿದ್ದವು ಸೀಸಕವು ಶತ
ಕೋಟಿ ಘಾಯದ ಘಟನೆಯೊಳು ಶತ
ಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ
ತಾಟಿತಸು ಕಂಠದಲುಸುರ ಪರಿ
ಪಾಟಿ ತಪ್ಪಿತು ಮೃತ್ಯುವಿನ ದರ
ಚೀಟಿ ಹಿಡಿದನೊ ಹೇಳೆನಲು ಮಲಗಿದನು ಮೈಮರೆದು (ಗದಾ ಪರ್ವ, ೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸಿಡಿಲ ಹೊಡೆತಕ್ಕೆ ಹಿಮಾಲಯದ ಶಿಖರ ಪುಡಿ ಪುಡಿಯಾದಂತೆ ಶಿರಸ್ತ್ರಾಣದ ಮಣಿಗಳು ಎಲ್ಲಾ ಕಡೆ ಸಿಡಿದವು. ಪ್ರಾಣವಿನ್ನೇನು ಹಾರಿಹೋಯಿತು, ಉಸಿರಾಟ ತಪ್ಪಿಯೇ ಬಿಟ್ಟಿತು, ಮೃತ್ಯುವಿನ ಚೀಟಿಯನ್ನು ಕೊಂಡುಕೊಂಡನೋ ಎಂಬಂತೆ ಕೌರವನು ಮೂರ್ಛಿತನಾದನು.

ಅರ್ಥ:
ದೂಟು: ಕುಪ್ಪಳಿಸು, ಹಾರು; ಬಿದ್ದು: ಬೀಳು; ಸೀಸಕ: ಶಿರಸ್ತ್ರಾಣ; ಶತ: ನೂರು; ಘಾಯ: ಪೆಟ್ಟು; ಘಟನೆ: ಆಗುವಿಕೆ; ಸಿಡಿ: ಹೊರಹೊಮ್ಮು; ಹೇಮಾಚಳ: ಹಿಮಾಲಯ; ಅಚಲ: ಬೆಟ್ಟ; ತುದಿ: ಅಗ್ರಭಾಗ; ತಾಟು: ತಾಗು; ಅಸು: ಪ್ರಾಣ; ಕಂಠ: ಗಂಟಲು; ಉಸುರು: ಜೀವ; ಪರಿಪಾಟಿ: ಸಮಾನ; ತಪ್ಪು: ಸರಿಯಿಲ್ಲದ; ಮೃತ್ಯು: ಸಾವು; ದರಚೀಟಿ: ಅಪ್ಪಣೆ ಚೀಟಿ; ಹಿಡಿ: ಗ್ರಹಿಸು; ಹೇಳು: ತಿಳಿಸು; ಮಲಗು: ನಿದ್ರಿಸು; ಮೈಮರೆದು: ಜ್ಞಾನವಿಲ್ಲದ ಸ್ಥಿತಿ;

ಪದವಿಂಗಡಣೆ:
ದೂಟಿ+ ಬಿದ್ದವು +ಸೀಸಕವು +ಶತ
ಕೋಟಿ +ಘಾಯದ +ಘಟನೆಯೊಳು +ಶತ
ಕೋಟಿ +ಘಾಯಕೆ +ಸಿಡಿದ +ಹೇಮಾಚಳದ +ತುದಿಯಂತೆ
ತಾಟಿತ್+ಅಸು+ಕಂಠದಲ್+ಉಸುರ +ಪರಿ
ಪಾಟಿ +ತಪ್ಪಿತು +ಮೃತ್ಯುವಿನ +ದರ
ಚೀಟಿ +ಹಿಡಿದನೊ +ಹೇಳೆನಲು +ಮಲಗಿದನು +ಮೈಮರೆದು

ಅಚ್ಚರಿ:
(೧) ಶತಕೋಟಿ – ೧, ೨ ಸಾಲಿನ ಕೊನೆಯ ಪದ
(೨) ಕೋಟಿ, ಚೀಟಿ, ಪರಿಪಾಟಿ, ದೂಟಿ – ಪ್ರಾಸ ಪದಗಳು
(೩) ಉಪಮಾನದ ಪ್ರಯೋಗ – ಶತಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ

ಪದ್ಯ ೧೧: ಭೀಮನು ಹೇಗೆ ದುರ್ಯೋಧನನ ತಲೆಗೆ ಹೊಡೆದನು?

ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ (ಗದಾ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ನಿರ್ಭೀತನಾಗಿ ಕೈಯನ್ನು ನೆಲಕ್ಕುದ್ದಿ, ಜಾರಿಹೋಗಿದ್ದ ಗದೆಯನ್ನು ಹಿಡಿದುಕೊಂಡು, ರಕ್ತವನ್ನು ಸೆರಗಿನಿಂದೊರಸಿಕೊಂದು ನೆಲನಡುಗುವಂತೆ ಕೂಗಿ, ಮೇಲಕ್ಕೆದ್ದು ಹಾರಿ ದುರ್ಯೋಧನನ ತಲೆಯನ್ನು ಗದೆಯಿಂದ ಹೊಡೆದನು.

ಅರ್ಥ:
ಹೆದರು: ಭಯಗೊಳ್ಳು; ಹಿಂಗು: ಕಡಿಮೆಯಾಗು; ನೆಲ: ಭೂಮಿ; ಮಾರುದ್ದು: ಪರಸ್ಪರ ಉಜ್ಜು; ಕರ: ಹಸ್ತ; ಸೂಸು: ಎರಚು, ಚಲ್ಲು; ಹಾರಿ: ಲಂಘಿಸು; ಗದೆ: ಮುದ್ಗರ; ಕೊಂಡು: ಪಡೆದು ಸೆರಗು: ಬಟ್ಟೆಯ ತುದಿ; ಸಂತೈಸು: ಸಮಾಧಾನ ಪಡಿಸು; ಶೋಣಿತ: ರಕ್ತ; ಅದಿರು: ನಡುಕ, ಕಂಪನ; ಅವ್ವಳಿಸು: ತಾಗು; ಹೊಳಹು: ಪ್ರಕಾಶ; ಹೊಯ್ಲು: ಹೊಡೆತ; ಹೊದರು: ತೊಡಕು, ತೊಂದರೆ; ಎದ್ದು: ಮೇಲೇಳು; ವಿಭಾಡಿಸು: ನಾಶಮಾಡು; ಹೊಯ್ದು: ಹೊಡೆ; ನೃಪ: ರಾಜ; ಮಸ್ತಕ: ಶಿರ;

ಪದವಿಂಗಡಣೆ:
ಹೆದರು +ಹಿಂಗಿತು +ನೆಲಕೆ +ಮಾರು
ದ್ದಿದನು+ ಕರವನು +ಸೂಸಿ +ಹಾರಿದ
ಗದೆಯ +ಕೊಂಡನು +ಸೆರಗಿನಲಿ +ಸಂತೈಸಿ +ಶೋಣಿತವ
ಅದಿರೆ +ನೆಲನ್+ಅವ್ವಳಿಸಿ +ಮೇಲ್ವಾ
ಯಿದನು +ಹೊಳಹಿನ +ಹೊಯ್ಲ+ ಹೊದ
ರೆದ್ದುದು +ವಿಭಾಡಿಸಿ +ಭೀಮ +ಹೊಯ್ದನು +ನೃಪನ +ಮಸ್ತಕವ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಳಹಿನ ಹೊಯ್ಲ ಹೊದರೆದ್ದುದು
(೨) ನಿರ್ಭಯವನ್ನು ಹೇಳುವ ಪರಿ – ಹೆದರು ಹಿಂಗಿತು

ಪದ್ಯ ೧೦: ಪಾಂಡವರೇಕೆ ಹಾ ಎಂದು ಉದ್ಗರಿಸಿದರು?

ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿರ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ (ಗದಾ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಬಾಯಲ್ಲಿ ರಕ್ತ ಬಂದಿತು. ಕಣ್ಣುಗುಡ್ಡೆ ಬೆಳ್ಳಗಾದವು. ತಲೆತಿರುಗಿ ಅವನು ಕೆಳಕ್ಕೆ ಬಿದ್ದನು. ಪಾಂಡವರು ಭಯದಿಂದ ಹಾ ಎಂದು ಬಾಯಿ ಬಿಡುತ್ತಿರಲು, ಯಾವ ಅಪಾಯವೂ ಆಗದೆ ಭೀಮನು ಎಚ್ಚತ್ತು ಸುತ್ತಲೂ ನೋಡಿದನು.

ಅರ್ಥ:
ಹೊಕ್ಕು: ಸೇರು; ರುಧಿರ: ರಕ್ತ, ನೆತ್ತರು; ಕಂಗಳು: ನಯನ, ಕಣ್ಣು; ಆಯ: ಪ್ರಮಾಣ; ತಪ್ಪಿತು: ಸರಿಯಿಲ್ಲದಾಗು; ಡೆಂಢಣಿಸು: ಕಂಪಿಸು, ಕೊರಗು; ಕಲಿ: ಶೂರ; ವಾಯುಸುತ: ಭೀಮ; ಅಪ್ಪಳಿಸು: ತಟ್ಟು, ತಾಗು; ಬಿದ್ದು: ಎರಗು; ಕಯ್ಯ: ಹಸ್ತ; ಗದೆ: ಮುದ್ಗರ; ಕಳಚು: ಬೇರ್ಪಡಿಸು, ಬೇರೆಮಾಡು; ತನ್ನವರು: ಸಂಬಂಧಿಕರು; ಭಯ: ದಿಗಿಲು; ಬಿಡೆ: ತೊರೆ; ನಿಮಿಷಾರ್ಧ: ಕೂಡಲೆ; ನಿರಪಾಯ: ಅಪಾಯವಿಲ್ಲದೆ; ನೋಡು: ವೀಕ್ಷಿಸು; ಚೇತರಿಸು: ಎಚ್ಚರಗೊಳ್ಳು; ಕೆಲಬಲ: ಅಕ್ಕಪಕ್ಕ;

ಪದವಿಂಗಡಣೆ:
ಬಾಯೊಳ್+ಒಕ್ಕುದು +ರುಧಿರ +ಕಂಗಳದ್
ಆಯ +ತಪ್ಪಿತು +ಡೆಂಢಣಿಸಿ +ಕಲಿ
ವಾಯುಸುತನ್+ಅಪ್ಪಳಿಸಿ+ ಬಿದ್ದನು+ ಕಯ್ಯ +ಗದೆ +ಕಳಚಿ
ಹಾ+ಎನುತ +ತನ್ನವರು +ಭಯದಲಿ
ಬಾಯ +ಬಿಡೆ +ನಿಮಿಷಾರ್ಧದಲಿ +ನಿರ
ಪಾಯನ್+ಎದ್ದನು+ ನೋಡಿದನು +ಚೇತರಿಸಿ +ಕೆಲಬಲನ

ಅಚ್ಚರಿ:
(೧) ಭೀಮನ ಸ್ಥಿತಿ – ಬಾಯೊಳೊಕ್ಕುದು ರುಧಿರ ಕಂಗಳದಾಯ ತಪ್ಪಿತು ಡೆಂಢಣಿಸಿ ಕಲಿ ವಾಯುಸುತನಪ್ಪಳಿಸಿ ಬಿದ್ದನು