ಪದ್ಯ ೩: ಭೀಮ ದುರ್ಯೋಧನರ ಯುದ್ಧವನ್ನು ಯಾವುದಕ್ಕೆ ಹೋಲಿಸಬಹುದು?

ಎರಗಿದರು ಸಿಡಿಲಂತೆ ಮಿಂಚಿನ
ಮಿರುಗಿನಂತಿರೆ ಹೊಳೆದು ಹೆಜ್ಜೆಯ
ಹೆರದೆಗೆದು ಹಾಯಿದರು ತಗರಂದದಲಿ ತವಕದಲಿ
ಇರುಕಿದರು ಗ್ರಹದಂತೆ ಮಿಗೆ ಮು
ಕ್ಕುರುಕಿದರು ಮುಗಿಲಂತೆ ರೋಷಕೆ
ನೆರೆಯದಿಬ್ಬರ ಮನವೆನಲು ಹೊಯ್ದಾಡಿದರು ಭಟರು (ಗದಾ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಸಿಡಿಲಿನಂತೆ ಬಡಿದು, ಮಿಂಚಿನಂತೆ ಹೊಳೆದು, ಟಗರುಗಳಂತೆ ಹೆಜ್ಜೆಹಾಕಿ ಗುದ್ದಿ ಹೀಮ್ದೆಗೆದು, ಗ್ರಹದಂತೆ ಹಿಡಿದುಕೊಳ್ಳುವಂತೆ ಮೋಡದಂತೆ ಮುಸುಕಿ, ಅಪಾರ ರೋಷವನ್ನು ಇವರ ಮನಸ್ಸುಗಳು ಹಿಡಿಯಲಾರವೋ ಎಂಬಂತೆ ಇಬ್ಬರೂ ಹೊಯ್ದಾಡಿದರು.

ಅರ್ಥ:
ಎರಗು: ಬೀಳು; ಸಿಡಿಲು: ಅಶನಿ; ಮಿಂಚು: ಹೊಳಪು, ಕಾಂತಿ; ಮಿರುಗು: ಕಾಂತಿ, ಹೊಳಪು; ಹಜ್ಜೆ: ಹೆಜ್ಜೆ, ಪಾದ; ಹೆರದೆಗೆ: ಹಿಂದೆಗೆದು; ಹಾಯಿ: ಹೊಡೆ; ತವಕ: ಬಯಕೆ, ಆತುರ; ಇರುಕಿ: ಹಿಸುಕಿ ಹಿಡಿ; ಗ್ರಹ: ಆಕಾಶಚರಗಳು; ಮಿಗೆ: ಮತ್ತು, ಅಧಿಕವಾಗಿ; ಮುಕ್ಕುರು: ಮುತ್ತು, ಆವರಿಸು; ಮುಗಿಲು: ಆಗಸ; ರೋಷ: ಕೋಪ; ನೆರೆ: ಜೊತೆ; ಮನ: ಮನಸ್ಸು; ಹೊಯ್ದಾಡು: ಹೋರಾಡು; ಭಟ: ಸೈನಿಕ; ತಗರು: ಟಗರು;

ಪದವಿಂಗಡಣೆ:
ಎರಗಿದರು +ಸಿಡಿಲಂತೆ +ಮಿಂಚಿನ
ಮಿರುಗಿನಂತಿರೆ+ ಹೊಳೆದು +ಹೆಜ್ಜೆಯ
ಹೆರ+ತೆಗೆದು+ ಹಾಯಿದರು+ ತಗರಂದದಲಿ +ತವಕದಲಿ
ಇರುಕಿದರು+ ಗ್ರಹದಂತೆ+ ಮಿಗೆ +ಮು
ಕ್ಕುರುಕಿದರು+ ಮುಗಿಲಂತೆ +ರೋಷಕೆ
ನೆರೆಯದ್+ಇಬ್ಬರ+ ಮನವ್+ಎನಲು +ಹೊಯ್ದಾಡಿದರು +ಭಟರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೆಜ್ಜೆಯ ಹೆರದೆಗೆದು ಹಾಯಿದರು ತಗರಂದದಲಿ ತವಕದಲಿ

ಪದ್ಯ ೨: ಭೀಮ ದುರ್ಯೋಧನರು ಯಾವ ರೀತಿ ಹೋರಾಡಿದರು?

ಹಳಚಿದರು ಸುಳಿ ಘಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು (ಗದಾ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಸುಳಿಗಾಳಿಯಂತೆ ಎರಗುವ ಗರುಡನಂತೆ ಹೊಯ್ದು ಸುತ್ತಿ ಬಿಗಿದು ಮದಗಜಗಳಂತೆ ಮೇಲ್ಬಿದ್ದು ಅಗ್ನಿಯಂತೆ ಮುನ್ನುಗ್ಗಿ ಸುಟ್ಟು, ಹಾವಿನಂತೆ ಅಪ್ಪಳಿಸಿ, ಪಾದರಸದಂತೆ ಚುರುಕಾಗಿ ವೀರರಿಬ್ಬರೂ ಕಾದಿದರು.

ಅರ್ಥ:
ಹಳಚು: ತಾಗು, ಬಡಿ; ಸುಳಿ: ಆವರಿಸು, ಮುತ್ತು; ಗಾಳಿ: ವಾಯು; ಖಗ: ಪಕ್ಷಿ; ಖಗಪತಿ: ಪಕ್ಷಿರಾಜ (ಗರುಡ); ಹೊಯ್ಲು: ಹೊಡೆ; ಬಳಸು: ಆವರಿಸು; ಬಿಗಿ: ಭದ್ರವಾಗಿರುವುದು; ಎರಗು: ಬೀಳು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಮತ್ತಗಜ: ಮದಕರಿ; ಶಿಖಿ: ಬೆಂಕಿ; ಚೂರಿಸು: ಚಳಪಳಿಸುವಂತೆ ತಿರುಗಿಸು; ನಿಲುಕು: ಬಿಡುವು, ವಿರಾಮ; ಫಣಿ: ಹಾವು; ಪಯ: ಪಾದ; ಲುಳಿ: ರಭಸ, ವೇಗ; ಒದೆ: ತುಳಿ, ಮೆಟ್ಟು; ಪಾದರಸ: ಒಂದು ಬಗೆಯ ದ್ರವ ರೂಪದ ಲೋಹ, ಪಾರಜ; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ಹಳಚಿದರು +ಸುಳಿ +ಘಾಳಿಯಂತಿರೆ
ಸುಳಿದು +ಖಗಪತಿಯಂತೆ +ಹೊಯ್ಲಲಿ
ಬಳಸಿ +ಬಿಗಿದ್+ಎರಗಿದರು +ಬಿಡೆಯದ +ಮತ್ತ+ಗಜದಂತೆ
ಅಳುವಿದರು +ಶಿಖಿಯಂತೆ +ಚೂರಿಸಿ
ನಿಲುಕಿದರು +ಫಣಿಯಂತೆ +ಪಯ+ಮೈ
ಲುಳಿಯಲ್+ಒಲೆದರು +ಪಾದರಸದಂದದಲಿ+ ಪಟುಭಟರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ

ಪದ್ಯ ೧: ಭೀಮ ದುರ್ಯೋಧನರು ಹೇಗೆ ಕಾದಿದರು?

ಕೇಳು ಧೃತರಾಷ್ಟ್ರಾವನಿಪ ಕೈ
ಮೇಳವಿಸಿದರು ವಿಷಮ ಸಮರಕ
ರಾಳರೋಷಶ್ವಾಸ ಧೂಮಳಮುಖಭಯಂಕರರು
ಚಾಳನದ ಚೌಪಟರು ಶಸ್ತ್ರಾ
ಸ್ಫಾಳನದ ವಜ್ರಾಭಿಘಾತಾ
ಭೀಳನಿಷ್ಠುರರೊದಗಿದರು ಕೌರವ ವೃಕೋದರರು (ಗದಾ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಕರಾಳ ರೋಷದ ಉಸಿರಿನ ಹೊಗೆಯನ್ನು ಸೂಸುತ್ತಾ, ಶತ್ರುಗಳು ಸುತ್ತಮುತ್ತಿದರೂ ಇದಿರಿಸಿ ಗೆಲ್ಲಬಲ್ಲ ಪರಾಕ್ರಮಿಗಳಾದ ಭೀಮ ದುರ್ಯೋಧನರು, ಭಯಂಕರ ವಜ್ರಾಯುಧದ ಹೊಡೆತವನ್ನು ಹೋಲುವ ನಿಷ್ಠುರ ಗದಾಘಾತದಿಂದ ಅಸಮಾನ ಪರಾಕ್ರಮವನ್ನು ಪ್ರದರ್ಶಿಸುತ್ತಾ ಕಾದಿದರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಮೇಳವಿಸು: ಸೇರು, ಜೊತೆಯಾಗು; ಕೈ: ಹಸ್ತ; ಕೈಮೇಳವಿಸು: ಕೈ ಕೈ ಸೇರಿಸಿ ಹೋರಾಡು; ವಿಷಮ: ಕಷ್ಟವಾದ; ಸಮರ: ಯುದ್ಧ; ಕರಾಳ: ಭಯಂಕರ; ರೋಷ: ಕೋಪ; ಶ್ವಾಸ: ಉಸಿರು; ಧೂಮ: ಹೊಗೆ; ಮುಖ: ಆನನ; ಭಯಂಕರ: ಘೋರವಾದ; ಚಾಳನ: ಚಲನೆ; ಚೌಪಟ: ನಾಲ್ಕು ಕಡೆಯೂ ಕಾದಾಡುವ ವೀರ; ಶಸ್ತ್ರ: ಆಯುಧ; ವಜ್ರ: ಗಟ್ಟಿ; ಘಾತ: ಹೊಡೆತ; ನಿಷ್ಠುರ: ಕಠಿಣವಾದುದು; ಒದಗು: ಲಭ್ಯ, ದೊರೆತುದು; ವೃಕೋದರ: ಭೀಮ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಕೈ
ಮೇಳವಿಸಿದರು +ವಿಷಮ +ಸಮರ+ಕ
ರಾಳ+ರೋಷ+ಶ್ವಾಸ+ ಧೂಮಳ+ಮುಖ+ಭಯಂಕರರು
ಚಾಳನದ +ಚೌಪಟರು +ಶಸ್ತ್ರಾ
ಸ್ಫಾಳನದ +ವಜ್ರಾಭಿಘಾತಾ
ಭೀಳ+ನಿಷ್ಠುರರ್+ಒದಗಿದರು +ಕೌರವ +ವೃಕೋದರರು

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ವಿಷಮ ಸಮರ ಕರಾಳ ರೋಷಶ್ವಾಸ ಧೂಮಳಮುಖಭಯಂಕರರು

ನುಡಿಮುತ್ತುಗಳು: ಗದಾ ಪರ್ವ ೭ ಸಂಧಿ

  • ವಿಷಮ ಸಮರ ಕರಾಳ ರೋಷಶ್ವಾಸ ಧೂಮಳಮುಖಭಯಂಕರರು – ಪದ್ಯ ೧
  • ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ – ಪದ್ಯ ೨
  • ಹೆಜ್ಜೆಯ ಹೆರದೆಗೆದು ಹಾಯಿದರು ತಗರಂದದಲಿ ತವಕದಲಿ – ಪದ್ಯ ೩
  • ಸೀಸಕದ ವರಮಣಿ ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ – ಪದ್ಯ ೬
  • ಮಚ್ಚರದ ಮಸಕದ ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ – ಪದ್ಯ ೭
  • ನಭಕ್ಕೆ ಪುಟನೆಗೆದನಿಲಜನ ಸೀಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ – ಪದ್ಯ ೯
  • ಶತಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ – ಪದ್ಯ ೧೨
  • ನಿನ್ನಯ ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ – ಪದ್ಯ ೧೬
  • ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ – ಪದ್ಯ ೧೭
  • ರುಧಿರದಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ – ಪದ್ಯ ೨೨
  • ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ – ಪದ್ಯ ೨೯
  • ಬೇಳುವೆಯ ಕರಣೇಂದ್ರಿಯದ ವೈಹಾಳಿ ನಿಂದುದು – ಪದ್ಯ ೩೦
  • ಕೋಪದ ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ – ಪದ್ಯ ೩೧
  • ನಿಮಿಷದಲಿ ದುಮ್ಮಾನ ಶರಧಿಯೊಳದ್ದುವೆನು – ಪದ್ಯ ೩೨
  • ಬಂಜೆ ನುಡಿಯಲಿಬಯ್ದಡಧಿಕನೆ – ಪದ್ಯ ೩೪
  • ಭೂಪಾಲಕುಲದಲಭಂಗನಾದೆ ಕರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ – ಪದ್ಯ ೩೮
  • ಮಾಯಾವಿಗಳ ಮಾಯೆಯಲಿ ಗೆಲುವುದು – ಪದ್ಯ ೪೪
  • ವಿಜಯಸಿರಿ ರಾಗಾತಿಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ – ಪದ್ಯ ೪೫
  • ವಿಜಯಾಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ – ಪದ್ಯ ೪೬
  • ರೋಷವಹ್ನಿಗೆ ಸಾಣೆವಿಡಿದವೊಲಾಯ್ತು – ಪದ್ಯ ೪೮
  • ಧಾರಿಡುವ ರಕುತಾಂಬು ಮಡುಗಟ್ಟಿದುದು ಮಗ್ಗುಲಲಿ – ಪದ್ಯ ೫೨
  • ಬರಿದೇಕೆ ಚುಚ್ಚುವೆ ಕಾಸಿ ಬಾದಣಗೊರೆದ ಘಾಯದಲಿ – ಪದ್ಯ ೫೪