ಪದ್ಯ ೨೯: ಭೀಮ ದುರ್ಯೋಧನರ ಯುದ್ಧದ ಲೆಕ್ಕಾಚಾರವು ಹೇಗಿತ್ತು?

ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ (ಗದಾ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅವರ ಲೆಕ್ಕಾಚಾರ ತಪ್ಪಿಹೋಗುತ್ತಿತ್ತು. ಮನಸ್ಸಿನ ಮೇಲುಗೈ ಮನಸ್ಸಿನಲ್ಲೇ ಉಳಿಯುತ್ತಿತ್ತು. ಹೊಡೆತದ ಪೆಟ್ಟುಗಳು ಮನಸ್ಸಿನಲ್ಲೇ ನಿಲ್ಲುತ್ತಿದ್ದವು. ಕೋಪವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ಮನಸ್ಸುಗಳು ಕುದಿಯುತ್ತಿದ್ದವು. ಜಯವನ್ನು ಶೀಘ್ರವಾಗಿ ಸಾಧಿಸುವ ಛಲದಿಂದ ಇಬ್ಬರೂ ಕಾದಿದರು.

ಅರ್ಥ:
ನೆನಹು: ಜ್ಞಾಪಕ; ನೆಗ್ಗು: ಕುಗ್ಗು, ಕುಸಿ; ಉಪ್ಪರ: ಎತ್ತರ, ಉನ್ನತಿ; ಕೈ: ಹಸ್ತ; ಮನ: ಮನಸ್ಸು; ಕಬಳಿಸು: ನುಂಗು; ತೆರಹು: ಬಿಚ್ಚು, ಎಡೆ, ಜಾಗ; ಬಿಮ್ಮು: ದೊಡ್ಡತನ, ಘನತೆ; ಬಿಗಿ: ಬಂಧಿಸು; ತೆಗೆ: ಹೊರತರು; ಘಾಯ: ಪೆಟ್ಟು; ಘಾತಿ: ಹೊಡೆತ; ಕೋಪ: ಕುಪಿತ; ಕುದಿ: ಶಾಖದಿಂದ ಉಕ್ಕು, ಮರಳು; ಕರಣ: ಕೆಲಸ, ಜ್ಞಾನೇಂದ್ರಿಯ; ತನು: ದೇಹ; ಜಯ: ಗೆಲುವು; ತವಕ: ಬಯಕೆ, ಆತುರ; ತನಿ:ಹೆಚ್ಚಾಗು; ಮನ: ಮನಸ್ಸು; ತೋಟಿಕಾರ: ಜಗಳಗಂಟ; ಕಾದಿದರು: ಹೋರಾಡು; ಕಡುಗು: ತೀವ್ರವಾಗು;

ಪದವಿಂಗಡಣೆ:
ನೆನಹು +ನೆಗ್ಗಿದುದ್+ಉಪ್ಪರದ+ ಕೈ
ಮನವ +ಕಬಳಿಸಿ +ತೆರಹು +ಬಿರು+ಬಿ
ಮ್ಮಿನಲಿ +ಬಿಗಿದುದು +ತೆಗೆದವ್+ಇಬ್ಬರ+ ಘಾಯಘಾತಿಗಳು
ಕೊನರ್ವ+ ಕೋಪದ +ಕುದಿವ +ಕರಣದ
ತನುವಿಗುಪ್ತಿಯ +ಜಯದ +ತವಕದ
ತನಿಮನದ +ಕಡು+ತೋಟಿಕಾರರು +ಕಾದಿದರು +ಕಡುಗಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊನರ್ವ ಕೋಪದ ಕುದಿವ ಕರಣದ

ಪದ್ಯ ೨೮: ಭೀಮ ದುರ್ಯೋಧನರ ಕಾಳಗವು ಹೇಗೆ ಸಾಗಿತು?

ಗಾಹಿನಲಿ ಗಾಡಿಸಿದ ಗದೆ ಹೊರ
ಬಾಹೆಯಲಿ ಹಿಮ್ಗಿದವು ಠಾಣದ
ಲೂಹಿಸಿದ ಮನ ಮಗ್ಗಿದುದು ಕಂದೊಳಲ ತೋಹಿನಲಿ
ಕಾಹುರದ ಹೊಯ್ಲಗಳು ನೋಟದ
ಕಾಹಿನಲಿ ಕಿಡಿಗೆದರೆ ಘಾಯದ
ಸೋಹೆಯರಿವ ಸುಜಾಣರೊದಗಿದರರಸ ಕೇಳೆಂದ (ಗದಾ ಪರ್ವ, ೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಚ್ಚರದಿಂದ ಗುರಿಯಿಟ್ಟು ಹೊಡೆದ ಗದೆಗಳು ಗುರಿತಪ್ಪಿ ಎತ್ತಲೋ ಹೋದವು. ಹೀಗೆ ಹೊಡೆತ ಬೀಳಬಹುದೆಂಬ ಮನಸ್ಸುಗಳು ನೋಡು ನೋಡುತ್ತಿದ್ದಂತೆ ತಪ್ಪಿಹೋದವು ಗುರಿಯಿಟ್ಟು ಹೊಡೆದಾಗ ಎಲ್ಲಿಗೆ ಪೆಟ್ಟು ಬೀಳಬಹುದೆಂದು ಊಹಿಸಿ ತಪ್ಪಿಸಿಕೊಳ್ಳುತ್ತಿದ್ದ ಜಾಣರಿಬ್ಬರೂ ಕಾದಿದರು.

ಅರ್ಥ:
ಗಾಹು: ಮೋಸ, ಕಪಟ; ಗಾಢಿಸು: ತುಂಬು; ಗದೆ: ಮುದ್ಗರ; ಹೊರ: ಆಚೆ; ಬಾಹೆ: ಪಕ್ಕ, ಪಾರ್ಶ್ವ; ಹಿಂಗು: ಕಡಮೆಯಾಗು; ಠಾಣ: ಸ್ಥಳ; ಊಹೆ: ಅಂದಾಜು; ಮನ: ಮನಸ್ಸು; ಮಗ್ಗು: ಕುಂದು, ಕುಗ್ಗು; ಕಂದೊಳಲು: ಕಂಗೆಡು; ತೋಹು: ಸಮೂಹ; ಕಾಹು: ಸಂರಕ್ಷಣೆ; ಹೊಯ್ಲು: ಏಟು, ಹೊಡೆತ; ನೋಟ: ದೃಷ್ಟಿ; ಕಾಹಿ: ಕಾಯುವವ, ರಕ್ಷಿಸುವ; ಕಿಡಿ: ಬೆಂಕಿ; ಕೆದರು: ಹರಡು; ಘಾಯ: ಪೆಟ್ಟು; ಸೋಹೆ: ಸುಳಿವು, ಸೂಚನೆ; ಅರಿ: ತಿಳಿ; ಜಾಣ: ಬುದ್ಧಿವಂತ; ಒದಗು: ಲಭ್ಯ, ದೊರೆತುದು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗಾಹಿನಲಿ+ ಗಾಡಿಸಿದ +ಗದೆ +ಹೊರ
ಬಾಹೆಯಲಿ +ಹಿಂಗಿದವು +ಠಾಣದಲ್
ಊಹಿಸಿದ +ಮನ +ಮಗ್ಗಿದುದು +ಕಂದೊಳಲ +ತೋಹಿನಲಿ
ಕಾಹುರದ +ಹೊಯ್ಲಗಳು +ನೋಟದ
ಕಾಹಿನಲಿ +ಕಿಡಿಗೆದರೆ +ಘಾಯದ
ಸೋಹೆ+ಅರಿವ +ಸುಜಾಣರ್+ಒದಗಿದರ್+ಅರಸ +ಕೇಳೆಂದ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಾಹಿನಲಿ ಗಾಡಿಸಿದ ಗದೆ
(೨) ಗಾಹಿ, ಕಾಹಿ; ಬಾಹೆ, ಸೋಹೆ – ಪ್ರಾಸ ಪದಗಳು

ಪದ್ಯ ೨೭: ದುರ್ಯೋಧನ ಭೀಮರ ರಣರಸವು ಹೇಗಿತ್ತು?

ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲ ಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ (ಗದಾ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಒಂದು ಕ್ಷಣವೂ ಎಚ್ಚರವನ್ನು ಕಳೆದುಕೊಳ್ಳಲಿಲ್ಲ. ಹೊಡೆದು ಗಾಯಗೊಳಿಸಲು ಒಂದು ಕ್ಷಣವೂ ತಪ್ಪಲಿಲ್ಲ. ಗದೆಗದೆಗಳು ತಾಕಿ ಹಿಂದಕ್ಕೆ ಸರಿದವು. ಅವರಿಬ್ಬರ ನೋಟಗಳು ಪರಸ್ಪರರ ಮನಸ್ಸನ್ನು ಕದ್ದು ಕಂಡು ಹಿಡಿದು ಬಿಡುತ್ತಿದ್ದವು. ಗದೆಗಳು ನೆಗ್ಗಿದವು. ಮೂದಲಿಕೆಗಳು ಗಾಯಗೊಳಿಸಿದವು. ಅವರ ಕದನವನ್ನು ಸಾರವನ್ನು ವರ್ಣಿಸಲಾರೆ.

ಅರ್ಥ:
ಮರಹ: ಮರೆತುಹೋಗು, ಜ್ಞಾಪಕವಿಲ್ಲದ ಸ್ಥಿತಿ; ಪಡೆ: ದೊರಕಿಸು; ಘಾಯ: ಪೆಟ್ಟು; ಖಂಡಿಗಳೆ: ಭೇದಿಸು; ತೆರಹು: ಬಿಚ್ಚು, ತೆರೆ; ಕಾಣು: ತೋರು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಹೊರಗೆ: ಆಚೆ; ಬಿದ್ದು: ಬೀಳು, ಜಾರು; ಕದ್ದು: ಕಳ್ಳತನ; ದೃಷ್ಟಿ: ನೋಟ; ಮನ: ಮನಸ್ಸು; ಇರಿ: ಚುಚ್ಚು; ಗದೆ: ಮುದ್ಗರ; ನೆಗ್ಗು:ಕುಗ್ಗು, ಕುಸಿ; ರೋಷ: ಕೋಪ; ಜರೆ: ಬಯ್ಯು; ನುಡಿ: ಮಾತು; ತಾಗು: ಮುಟ್ಟು; ಹೊಗಳು: ಪ್ರಶಂಶಿಸು; ಅಗ್ಗ: ಶ್ರೇಷ್ಠ; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಮರಹ +ಪಡೆಯರು +ಘಾಯ +ಖಂಡಿಗೆ
ತೆರಹುಗಾಣರು +ಹೊಯ್ಲ+ ಹೋರಟೆ
ಹೊರಗೆ +ಬಿದ್ದವು+ ಕದ್ದವಿಬ್ಬರ+ ದೃಷ್ಟಿ+ ಮನಮನವ
ಇರಿವ +ಗದೆ +ನೆಗ್ಗಿದವು+ ರೋಷದಿ
ಜರೆವ+ ನುಡಿ +ತಾಗಿದವು +ಹೊಗಳುವ
ಡರಿಯೆನ್+ಅಗ್ಗದ+ ಭೀಮ +ದುರಿಯೋಧನರ +ರಣ+ರಸವ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲ ಹೋರಟೆ ಹೊರಗೆ