ಪದ್ಯ ೨೬: ಭೀಮ ಸುಯೋಧನರ ಯುದ್ಧವು ಹೇಗಿತ್ತು?

ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮಬಲರಾಹವಾಗ್ರದಲಿ (ಗದಾ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇಬ್ಬರೂ ಯುದ್ಧವನ್ನು ಸಮಬಲವಾಗಿ ಆಡಿದರು. ನೂಕಿದರೆ ಪಕ್ಕಕ್ಕೆ ಸರಿದು ಹಿಂದಕ್ಕೊತ್ತುವ, ಒತ್ತಿದರೆ ಪಂಥಿಸುವ (ದೂರಕ್ಕೆ ಹೋಗುವ), ಪಂಠಿಸಿದರೆ ಮತ್ತೆ ಕೂಡುವ, ಕಠೋರವಾದ ಗದೆಗಲ ಕಿದಿಗಳನ್ನು ಸುರಿಸುತ್ತಿರಲು, ಖಣಿ ಖಟಿಲೆಂಬ ಸದ್ದಾಗುತ್ತಿರಲು ಸಮಬಲರಾದ ಭೀಮ ದುರ್ಯೋಧನರು ಯುದ್ಧ ಮಾಡಿದರು.

ಅರ್ಥ:
ನೂಕು: ತಳ್ಳು; ಹೆರತೆಗೆ: ಹಿಂದಕ್ಕೆ ಒತ್ತು; ಔಕು: ತಳ್ಳು; ಒತ್ತು:ಚುಚ್ಚು; ಪಂಠಿಸು: ದೂರಕ್ಕೆ ಹೋಗು; ಕೂಡೆ: ಜೊತೆ; ಸಂಧಿಸು: ಕೂಡು; ಕಠೋರ: ಬಿರುಸಾದ; ಕಯ್ದು: ಆಯುಧ; ಕಿಡಿ: ಬೆಂಕಿ; ಓಕರಿಸು: ಹೊರಹಾಕು; ಖಣಿಖಟಿಲ: ಬಾಣದ ಶಬ್ದವನ್ನು ವಿವರಿಸುವ ಪದ; ಝಾಡಿ: ಕಾಂತಿ; ಜೋಕೆ: ಎಚ್ಚರಿಕೆ, ಜಾಗರೂಕತೆ; ಕಾದು: ಹೋರಾಡು; ಸಮಬಲ: ಒಂದೇ ಶಕ್ತಿಯೊಂದಿಗೆ; ಆಹವ: ಯುದ್ಧ; ಅಗ್ರ: ಮುಂದೆ; ಡಾಕೆ: ಆಕ್ರಮಣ;

ಪದವಿಂಗಡಣೆ:
ನೂಕಿದರೆ +ಹೆರತೆಗೆವ+ ಹೆರತೆಗೆದ್
ಔಕುವ್+ಔಕಿದಡ್+ಒತ್ತು+ ಒತ್ತಿದ
ಡಾಕೆಯಲಿ +ಪಂಠಿಸುವ +ಪಂಠಿಸೆ +ಕೂಡೆ +ಸಂಧಿಸುವ
ಆ +ಕಠೋರದ +ಕಯ್ದು+ ಕಿಡಿಗಳ
ನೋಕರಿಸೆ+ ಖಣಿಖಟಿಲ+ ಝಾಡಿಯ
ಜೋಕೆಯಲಿ+ ಕಾದಿದರು +ಸಮಬಲರ್+ಆಹವಾಗ್ರದಲಿ

ಅಚ್ಚರಿ:
(೧) ಪದಗಳ ಬಳಕೆ – ಹೆರತೆಗೆವ ಹೆರತೆಗೆದೌಕುವೌಕಿದಡೊತ್ತು ವೊತ್ತಿದಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ

ಪದ್ಯ ೨೫: ಭೀಮ ದುರ್ಯೋಧನರ ಯುದ್ಧವು ಹೇಗೆ ಸಾಗಿತ್ತು?

ಬವರಿ ಮತ್ಸೋದ್ಗತಿ ವಿಲಂಘನ
ವಿವಳಿತಾಂಗ ವರಾಹಮತ ಸಂ
ಪ್ಲವನ ಪಾರಿಷ್ಟವ ಗದಾಪ್ರಿರಂಭ ವಿಕ್ಷೇಪ
ಲವಣಿ ಲಹರಿಯುದಂಚ ನವ ವಿ
ದ್ರವಣ ಲಘುವಿನ್ಯಸ್ತವೆಂಬೀ
ವಿವರದಲಿ ಕಾದಿದರು ಕೌತುಕವೆನಲು ಸುರನಿಕರ (ಗದಾ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಬವರಿ, ಮೀನಿನ ಚಲನೆ, ಹಾರುವುದು, ನೆಲಹಿಡಿಯುವುದು, ಹಂದಿಯ ಆಕ್ರಮಣ, ಲವಣಿ, ಲಹರಿ, ಉದಂಚ, ಲಘುವಿನ್ಯಸ್ತ ಮೊದಲಾದ ಗದಾಯುದ್ಧದ ರೀತಿಗಲನ್ನು ಉಪಯೋಗಿಸಿ ಅವರು ಕಾದುತ್ತಿರಲು, ದೇವತೆಗಳು ಇದೊಂದು ಕೌತುಕ ಎಂದು ಹೊಗಳುತ್ತಿದ್ದರು.

ಅರ್ಥ:
ಬವರ: ಕಾಳಗ, ಯುದ್ಧ; ಬವರಿ: ತಿರುಗುವುದು; ಮತ್ಸ್ಯ: ಮೀನ; ಗತಿ: ಚಲನೆ; ಲಂಘನ: ಹಾರುವುದು; ವರಾಹ: ಹಂದಿ; ಸಂಪ್ಲವನ: ಪ್ರಳಯ, ಸರ್ವನಾಶ; ವಿಕ್ಷೇಪ: ಚಲನೆ; ಲವಣಿ: ; ಲಹರಿ: ರಭಸ, ಆವೇಗ; ನವ: ಹೊಸ; ವಿದ್ರವಣ: ; ವಿನ್ಯಸ್ತ: ನೆಲೆಗೊಂಡುದು; ವಿವರ: ವಿಸ್ತಾರ, ಹರಹು; ಕಾದು: ಹೋರಾಡು; ಕೌತುಕ: ಆಶ್ಚರ್ಯ; ಸುರ: ದೇವತೆ; ನಿಕರ: ಗುಂಪು;

ಪದವಿಂಗಡಣೆ:
ಬವರಿ +ಮತ್ಸೋದ್ಗತಿ +ವಿಲಂಘನ
ವಿವಳಿತಾಂಗ +ವರಾಹಮತ+ ಸಂ
ಪ್ಲವನ+ ಪಾರಿಷ್ಟವ+ ಗದಾಪ್ರಿರಂಭ +ವಿಕ್ಷೇಪ
ಲವಣಿ +ಲಹರಿ+ಉದಂಚ +ನವ +ವಿ
ದ್ರವಣ +ಲಘು+ವಿನ್ಯಸ್ತವೆಂಬೀ
ವಿವರದಲಿ +ಕಾದಿದರು +ಕೌತುಕವೆನಲು +ಸುರನಿಕರ

ಅಚ್ಚರಿ:
(೧) ಗದಾಯುದ್ಧದ ರೀತಿ – ಬವರಿ, ಮತ್ಸೋದ್ಗತಿ, ವಿಲಂಘನ, ವಿವಳಿತಾಂಗ, ವರಾಹಮತ ಸಂ
ಪ್ಲವನ, ಪಾರಿಷ್ಟವ, ಗದಾಪ್ರಿರಂಭ, ವಿಕ್ಷೇಪ, ಲವಣಿ, ಲಹರಿ, ಉದಂಚ

ಪದ್ಯ ೨೪: ಭೀಮ ದುರ್ಯೋಧನರ ಯುದ್ಧವು ಹೇಗೆ ಕಂಡಿತು?

ಬಿಡುವ ಬಿಡಿಸುವ ಪರರ ಘಾಯವ
ತಡೆವ ಗೋಮೂತ್ರಕದ ಚಿತ್ರದ
ಝಡಪದವಧಾನದ ವಿಧಾನದ ಘಾಯಖಂಡಿಗಳ
ತುಡುಕುವವ್ವಳಿಸುವ ವಿಸಂಧಿಯ
ಹಿಡಿವ ಬಿಚ್ಚುವ ಬಿಗಿವ ಸೆಳೆವವ
ಡಿಸುವೌಕುವ ಕುಶಲದಲಿ ಕಾದಿದರು ಸಮರದಲಿ (ಗದಾ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ವಿರೋಧಿಯನ್ನು ಬಿಡುವ ಅವನ ಪಟ್ಟನ್ನು ಬಿಡಿಸುವ, ಗದೆಯ ಗಾಯವಾಗುವಂತೆ ತಡೆಯುವ, ಗಾಯವಾಗುವಮ್ತೆ ಹೊಡೆಯುವ ಆಕ್ರಮಿಸುವ, ಶ್ರಮದಿಂದ ಉಸಿರುಬಿಡುವ, ಪೆಟ್ಟು ಬೀಳದಮ್ತೆ ಮಾಡುವ, ಬಿಗಿಯುವ, ಎಳೆಯುವ, ತಡೆಯುವ, ಔಕುವ ಚಾತುರ್ಯದಿಂದ ಕಾದಿದರು.

ಅರ್ಥ:
ಬಿಡು: ತೊರೆ; ಬಿಡಿಸು: ಕಳಚು, ಸಡಿಲಿಸು; ಪರರ: ಅನ್ಯ, ಬೇರೆ; ಘಾಯ: ಪೆಟ್ಟು; ತಡೆ: ವಿಳಂಬ, ವಿಘ್ನ; ಮೂತ್ರ: ಕಲ್ಮಷ ಜಲ; ಚಿತ್ರ: ಬರೆದ ಆಕೃತಿ; ಝಡಪ: ತ್ವರೆಯಿಂದ ಕೂಡಿದ; ಅವಧಾನ: ಸ್ಮರಣೆ, ಬುದ್ಧಿ; ವಿಧಾನ: ರೀತಿ; ಘಾಯ: ಪೆಟ್ಟು; ಖಂಡಿ: ಒಂದು ಬಗೆಯ ತೂಕ; ತುಡುಕು: ಹೋರಾಡು, ಸೆಣಸು; ಅವ್ವಳಿಸು: ತಟ್ಟು, ತಾಗು; ವಿಸಂಧಿ: ಹೊಂದಿಕೆಯಾಗದಿರುವಿಕೆ; ಹಿಡಿ: ಗ್ರಹಿಸು; ಬಿಚ್ಚು: ಬೇರೆಮಾಡು; ಬಿಗಿ: ಬಂಧಿಸು; ಸೆಳೆ: ಜಗ್ಗು, ಎಳೆ; ಅವಗಡಿಸು: ಕಡೆಗಣಿಸು; ಔಕು: ತಳ್ಳು; ಕುಶಲ: ಚಾತುರ್ಯ; ಕಾದಿದ: ಹೋರಾಡಿದ; ಸಮರ: ಯುದ್ಧ;

ಪದವಿಂಗಡಣೆ:
ಬಿಡುವ +ಬಿಡಿಸುವ +ಪರರ +ಘಾಯವ
ತಡೆವ +ಗೋಮೂತ್ರಕದ +ಚಿತ್ರದ
ಝಡಪದ+ಅವಧಾನದ +ವಿಧಾನದ +ಘಾಯ+ಖಂಡಿಗಳ
ತುಡುಕುವ್+ಅವ್ವಳಿಸುವ +ವಿಸಂಧಿಯ
ಹಿಡಿವ +ಬಿಚ್ಚುವ+ ಬಿಗಿವ +ಸೆಳೆವ್+
ಅವಗಡಿಸುವ್+ಔಕುವ +ಕುಶಲದಲಿ+ ಕಾದಿದರು +ಸಮರದಲಿ

ಅಚ್ಚರಿ:
(೧) ಗೋಮೂತ್ರಕದ ಚಿತ್ರದ ಝಡಪ – ಗೋವುಗಳು ನಡೆಯುತ್ತಾ ಮೂತ್ರ ವಿಸರ್ಜನೆ ಮಾಡುತ್ತವೆ ಹಾಗೆ, ನೇರವಾಗಿ ಇದಿರಾಳಿಯತ್ತ ಹೋಗಿ ಅಪ್ಪಳಿಸಿದರು ಎಂದು ಅರ್ಥೈಸ ಬಹುದು