ಪದ್ಯ ೧೭: ಭೀಮನು ಕೌರವನಿಗೆ ಹೇಗೆ ಉತ್ತರಿಸಿದನು?

ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಯಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹುದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ (ಗದಾ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ್ನು ಬಯ್ಯುತ್ತಾ, ಎಲೈ ಕೌರವ, ಶಕುನಿಯಿಂದ ಕಪಟವನ್ನು ಕಲಿತು ಮೋಸದ ವಿಜಯಸಾಧಿಸಿ ಉಬ್ಬಿದಿರಿ. ಆಗ ಮಾಡಿದ್ದ ಶಪಥವನ್ನು ನಾವು ಈಗ ತೀರಿಸಿ ತೋರಿಸುತ್ತಿದ್ದೇವೆ. ದುಶ್ಯಾಸನ ರಕ್ತಪಾನ, ನಿನ್ನ ತಮ್ಮಂದಿರ ವಧೆಗಳನು ಈಗಾಗಲೇ ತೋರಿಸಿರುವೆ ಜಗತ್ತೇ ಅದನ್ನರಿತಿದೆ ಎಂದು ಭೀಮನು ಗರ್ಜಿಸಿದನು.

ಅರ್ಥ:
ಕಲಿಸು: ಹೇಳಿಕೊಡು; ಕಪಟ: ಮೋಸ; ಕೌಳಿಕ: ಕಟುಕ, ಮೋಸ; ಉಬ್ಬು: ಹೆಚ್ಚು; ವಿಸ್ತಾರ: ವಿಶಾಲತೆ; ಆದಿ: ಮುಂತಾದ; ರಕುತ: ನೆತ್ತರು; ಪಾನ: ಕುಡಿ; ಸಹೋದರ: ತಮ್ಮ; ನಿಕರ: ಗುಂಪು; ನಾಶ: ಹಾಳುಮಾಡು; ಅರುಹು: ತಿಳಿವಳಿಕೆ; ಪ್ರಕಟ: ಸ್ಪಷ್ಟವಾದುದು; ಜಗ: ಪ್ರಪಂಚ; ಗದೆ: ಮುದ್ಗರ; ತೂಗು: ಅಲ್ಲಾಡು;

ಪದವಿಂಗಡಣೆ:
ಶಕುನಿ +ಕಲಿಸಿದ +ಕಪಟದಲಿ +ಕೌ
ಳಿಕದಲ್+ಉಬ್ಬಿದಿರ್+ಇದರ +ವಿಸ್ತಾ
ರಕರಲೇ +ನಾವ್+ಇಂದಿನಲಿ +ದುಶ್ಯಾಸನಾದಿಗಳ
ರಕುತಪಾನ+ ಭವತ್+ ಸಹೋದರ
ನಿಕರ+ನಾಶನವ್+ಅರುಹುದೇ +ಸು
ಪ್ರಕಟವಿದು +ಜಗಕೆಂದು +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಿಸಿದ ಕಪಟದಲಿ ಕೌಳಿಕದಲುಬ್ಬಿದಿರಿದರ

ಪದ್ಯ ೧೬: ಕೌರವನು ಭೀಮನನ್ನು ಹೇಗೆ ಜರೆದನು?

ಆಟವಿಕೆ ಸಂಗದಲಿ ಬಹುವಾ
ಚಾಟ ನೀನಹೆ ನಿನ್ನ ಪುಣ್ಯದ
ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ
ಗೋಟಿನಲಿ ಗುರಿಮಾಡುವೆನು ಜೂ
ಜಾಟದಲಿ ನೀವರಿಯಿರೇ ಬೊ
ಬ್ಬಾಟವಂದೇನಾಯಿತೆಂದನು ಜರೆದು ಕುರುರಾಯ (ಗದಾ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲೈ ಭೀಮ, ನೀನು ಕಾಡಿನಲ್ಲಿದ್ದು ಕಾಡು ಮನುಷ್ಯರಮ್ತೆ ಬಹಳ ಮಾತುಗಳನ್ನು ಕಲಿತಿರುವೆ. ನಿನ್ನ ಪುಣ್ಯದ ತೋಟವನ್ನು ಕಡಿದುರುಳಿಸಿ ನಿಮ್ಮೈವರನ್ನು ನರಕಕ್ಕೆ ಕಳುಹಿಸಿ ಅಲ್ಲಿ ಮೂಲೆಯಲ್ಲಿ ವಾಸಿಸುವಂತೆ ಮಾಡುತ್ತೇನೆ. ನಿನ್ನ ಮಾತಿನ ಆರ್ಭಟವೆಲ್ಲಾ ಜೂಜಾಟದಲ್ಲಿ ಏನಾಗಿತ್ತು ಎಂದು ಭೀಮನನ್ನು ಬಯ್ದನು.

ಅರ್ಥ:
ಆಟವಿಕೆ: ಅರಣ್ಯವಾಸಿ, ಧೂರ್ತ; ಸಂಗ: ಜೊತೆ; ಬಹು: ಬಹಳ, ತುಂಬ; ವಾಚಾಟ: ಮಾತಾಡುವಿಕೆ; ಪುಣ್ಯ: ಸದಾಚಾರ; ತರಿ: ಕಡಿ, ಕತ್ತರಿಸು; ಒಟ್ಟು: ಒಟ್ಟಿಗೆ, ಜೊತೆ; ಯಮಪುರ: ನರಕ; ಗೋಟು: ಶಿಬಿರ, ಪಾಳೆಯ; ಗುರಿ: ಈಡು, ಲಕ್ಷ್ಯ; ಜೂಜಾಟ: ಪಗಡೆ; ಅರಿ: ತಿಳಿ; ಬೊಬ್ಬಾಟ: ಮಾತನಾಡುವಿಕೆ; ಜರೆ: ಬಯ್ಯು;

ಪದವಿಂಗಡಣೆ:
ಆಟವಿಕೆ +ಸಂಗದಲಿ +ಬಹು+ವಾ
ಚಾಟ +ನೀನಹೆ +ನಿನ್ನ+ ಪುಣ್ಯದ
ತೋಟವನು +ತರಿದ್+ ಉಟ್ಟಿ+ ನಿಮ್ಮೈವರನು+ ಯಮಪುರದ
ಗೋಟಿನಲಿ+ ಗುರಿಮಾಡುವೆನು +ಜೂ
ಜಾಟದಲಿ +ನೀವರಿಯಿರೇ +ಬೊ
ಬ್ಬಾಟವ್+ಅಂದೇನಾಯಿತ್+ಎಂದನು +ಜರೆದು +ಕುರುರಾಯ

ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ನಿನ್ನ ಪುಣ್ಯದ ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ
ಗೋಟಿನಲಿ ಗುರಿಮಾಡುವೆನು
(೨) ವಾಚಾಟ, ಬೊಬ್ಬಾಟ – ಸಮಾನಾರ್ಥಕ ಪದ
(೩) ವಾಚಾಟ, ಬೊಬ್ಬಾಟ, ಜೂಜಾಟ – ಪ್ರಾಸ ಪದ

ಪದ್ಯ ೧೫: ಭೀಮನು ದುರ್ಯೋಧನನ್ನು ಹೇಗೆ ಹಂಗಿಸಿದನು?

ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಹುದೆಂದನಾ ಭೀಮ (ಗದಾ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಓಡಿ ಹೋಗಿ ನಿರಿನಲ್ಲಿ ಮುಳುಗಿದವರಿಗೆ ನಾಚಿಕೆಯುಂಟೇ? ರಥವನ್ನಿಳಿದ ಹೇಡಿ ಕಾಲಾಳಿಗೆ ಪಾದ ಚಲನೆಯ ಓರೆಪೋರೆಗಳೇ? ಪರಿವಾರ ನೋಡುತ್ತಲೇ ಇದೆ, ನೀನು ಯುದ್ಧಚಾತುರ್ಯವನ್ನು ತೋರಿಸು, ಇಲ್ಲದಿದ್ದರೆ ಬರಿಯ ಕಂಠವೇ ಬತ್ತಳಿಕೆ, ಮಾತೇ ಯುದ್ಧವಾಗುತ್ತದೆ ಎಂದು ಭೀಮನು ನುಡಿದನು.

ಅರ್ಥ:
ಓಡು: ಧಾವಿಸು; ಜಲ: ನೀರು; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಖೋಡಿ: ದುರುಳತನ, ನೀಚತನ; ರಥ: ಬಂಡಿ; ರಣ: ಯುದ್ಧರಂಗ; ಖೇಡ: ಹೆದರಿದವನು; ಕಾಲಾಳು: ಸೈನಿಕ; ಪಯಗತಿ: ಓಡುವ ವೇಗ; ಓರೆಪೋರೆ: ವಕ್ರ; ನೋಡು: ವೀಕ್ಷಿಸು; ಪರಿವಾರ: ಬಂಧುಜನ; ಕೈಮಾಡು: ಹೋರಾಡು, ಹೊಡಿ; ತೋರು: ಪ್ರದರ್ಶಿಸು; ಬರಿಯ: ಕೇವಲ; ಕಂಠ: ಗಂಟಲು; ಮೂಡಿಗೆ: ಬಾಣಗಳನ್ನಿಡುವ ಚೀಲ, ಬತ್ತಳಿಕೆ; ಡಾವರ: ಬರಗಾಲ; ಲೇಹ: ನೆಕ್ಕುವುದು;

ಪದವಿಂಗಡಣೆ:
ಓಡಿ+ ಜಲದಲಿ +ಮುಳುಗಿದವರಿಗೆ
ಖೋಡಿಯುಂಟೇ +ರಥವಿಳಿದ +ರಣ
ಖೇಡ +ಕಾಲಾಳಿಂಗೆ +ಪಯಗತಿ+ಓರೆಪೋರೆಗಳೆ
ನೋಡುತಿದೆ +ಪರಿವಾರ +ನೀ +ಕೈ
ಮಾಡಿ +ತೋರಾ +ಬರಿಯ +ಕಂಠದ
ಮೂಡಿಗೆಯ +ಡಾವರದ +ಲೇಹುದೆಂದನಾ +ಭೀಮ

ಅಚ್ಚರಿ:
(೧) ಖೋಡಿ, ಖೇಡ – ಖ ಕಾರದ ಪದಗಲ ಬಳಕೆ
(೨) ಹಂಗಿಸುವ ಪರಿ – ನೀ ಕೈಮಾಡಿ ತೋರಾ ಬರಿಯ ಕಂಠದ ಮೂಡಿಗೆಯ ಡಾವರದ ಲೇಹುದೆಂದನಾ ಭೀಮ