ಪದ್ಯ ೫೪: ಭೀಮ ದುರ್ಯೋಧನರ ಯುದ್ಧವನ್ನು ನೋಡಲು ಯಾರು ಬಂದರು?

ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡೆಯರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ (ಗದಾ ಪರ್ವ, ೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನು ಗದೆಯನ್ನು ಹಿಡಿದುಕೊಂಡು ಯುದ್ಧಕ್ಕೆ ಸಿದ್ಧನಾಗಿ ನಿಂತನು. ಅಣ್ಣತಮ್ಮಂದಿರು ಪಕ್ಕದಲ್ಲಿ ನಿಂತರು. ಯುದ್ಧದ ಅಂಕಣವನ್ನು ತಿಳಿದು ಚತುರಂಗ ಸೈನ್ಯವು ಸುತ್ತಲೂ ನಿಂತಿತು. ಆಕಾಶದಲ್ಲಿ ದೇವತೆಗಳು ವಿಮಾನಗಳಲ್ಲಿ ನೆರೆದರು.

ಅರ್ಥ:
ಗದೆ: ಮುದ್ಗರ; ಕೊಂಡು: ಪಡೆದು; ಇದಿರು: ಎದುರು; ಬಲ: ದಕ್ಷಿಣಭಾಗ; ವಾಮ: ಎಡಭಾಗ; ಬಳಸು: ಆವರಿಸುವಿಕೆ; ಅಗ್ರಜ: ಅಣ್ಣ; ಅನುಜ: ತಮ್ಮ; ಕದನ: ಯುದ್ಧ; ಭೂಮಿ: ಅವನಿ; ಬಿಡೆ: ತೊರೆ; ಅರಿ: ತಿಳಿ; ನಿಂದು: ನಿಲ್ಲು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸುತ್ತು: ತಿರುಗು; ಗಗನ: ಆಗಸ; ಒದಗು: ಲಭ್ಯ, ದೊರೆತುದು; ಸುರ: ದೇವತೆ; ನಿಕರ: ಗುಂಪು; ತೀವಿ: ಚುಚ್ಚು; ವಿಮಾನವೀಥಿ: ಆಗಸ ಮಾರ್ಗ;

ಪದವಿಂಗಡಣೆ:
ಗದೆಯ +ಕೊಂಡನು +ಕೌರವೇಂದ್ರನನ್
ಇದಿರುಗೊಂಡನು +ಭೀಮ +ಬಲವಂ
ಕದಲಿ +ವಾಮಾಂಗದಲಿ +ಬಳಸಿದರ್+ಅಗ್ರಜ+ಅನುಜರು
ಕದನಭೂಮಿಯ +ಬಿಡೆಯರಿದು +ನಿಂ
ದುದು +ಚತುರ್ಬಲ +ಸುತ್ತಿ+ ಗಗನದೊಳ್
ಒದಗಿದುದು +ಸುರನಿಕರ+ ತೀವಿ +ವಿಮಾನವೀಥಿಯಲಿ

ಅಚ್ಚರಿ:
(೧) ಬಲವಂಕ, ವಾಮಾಂಕ – ವಿರುದ್ಧ ಪದಗಳು
(೨) ಆಗಸ ಎಂದು ಹೇಳಲು – ವಿಮಾನವೀಥಿ ಪದದ ಬಳಕೆ

ಪದ್ಯ ೫೩: ಭೀಮನ ಶೌರ್ಯವನ್ನು ಯಾರು ಹೇಗೆ ಹೊಗಳಿದರು?

ಪೂತು ಮಝ ಭಟ ಎನುತ ಕಂಸಾ
ರಾತಿ ಕೊಂಡಾಡಿದನು ಸಾತ್ಯಕಿ
ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ
ವಾತಜನ ಹೊಗಳಿದರು ಸುಭಟ
ವ್ರಾತಸೌಹಾರ್ದದಲಿ ಶೌರ್ಯ
ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳೆಂದ (ಗದಾ ಪರ್ವ, ೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿ, ಶ್ರೀಕೃಷ್ಣನು, ಭಲೇ, ಭೇಷ್ ವೀರನೆಂದರೆ ನೀನು, ಎಂದು ಹೊಗಳಿದನು. ಧರ್ಮಜ, ನಕುಲ, ಅರ್ಜುನ ಸಹದೇವರು ಸಾತ್ಯಕಿ, ಭೀಮನನ್ನು ಕೊಂಡಾಡಿದರು. ವೀರರು ಸ್ನೇಹದಿಂದ ಭೀಮನ ಶೊರ್ಯವನ್ನು ಹೊಗಳಿದರು.

ಅರ್ಥ:
ಪೂತು: ಭೇಷ್; ಮಝ: ಭಲೆ; ಭಟ: ವೀರ; ಅರಾತಿ: ವೈರಿ; ಕೊಂಡಾಡು: ಹೊಗಳು; ಭೂತಳಾಧಿಪ: ರಾಜ; ಭೂತಳ: ಭೂಮಿ; ಯಮಳ: ಅವಳಿ; ನಲವು: ಹರ್ಷ, ಸಂತಸ; ವಾತಜ: ವಾಯುವಿನ ಮಗ (ಭೀಮ); ಹೊಗಳು: ಪ್ರಶಂಶಿಸು; ಸುಭಟ: ವೀರ; ವ್ರಾತ: ಗುಂಪು; ಸೌಹಾರ್ದ: ಸೌಜನ್ಯ; ಶೌರ್ಯ: ಸಾಹಸ, ಪರಾಕ್ರಮ; ಖ್ಯಾತಿ: ಪ್ರಸಿದ್ಧಿ; ಬಣ್ಣಿಸು: ವಿವರಿಸು; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪೂತು +ಮಝ+ ಭಟ +ಎನುತ +ಕಂಸಾ
ರಾತಿ +ಕೊಂಡಾಡಿದನು +ಸಾತ್ಯಕಿ
ಭೂತಳಾಧಿಪ+ ಪಾರ್ಥ+ ಯಮಳಾದಿಗಳು +ನಲವಿನಲಿ
ವಾತಜನ +ಹೊಗಳಿದರು +ಸುಭಟ
ವ್ರಾತ+ಸೌಹಾರ್ದದಲಿ +ಶೌರ್ಯ
ಖ್ಯಾತಿಯನು +ಬಣ್ಣಿಸಿದುದ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಕೃಷ್ಣನನ್ನು ಕಂಸಾರಾತಿ ಎಂದು ಕರೆದಿರುವುದು
(೨) ಭೂತಳಾಧಿಪ, ಅವನೀಪಾಲ – ಸಮಾನಾರ್ಥಕ ಪದಗಳು

ಪದ್ಯ ೫೨: ಭೀಮನು ಕೃಷ್ಣನಿಗೇನು ಹೇಳಿದನು?

ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತು ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ (ಗದಾ ಪರ್ವ, ೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಆಗ ಭೀಮನು, ಹೇ ಕೃಷ್ಣ ನಿನ್ನ ಮುಂದೆ ನಾನು ಹೆಚ್ಚಿನವನೆಂದು ಹೇಳಿಕೊಳ್ಳುವುದಿಲ್ಲ. ನಿಮ್ಮ ಪಾದಗಳ ಅಮೃತಸಮಾನವಾದ ಕರುಣೆಯೇ ನನಗೆ ವಜ್ರಕವಚ. ನನ್ನನ್ನು ವಿರೋಧಿಸಿ ನಿಂತವನೊಡನೆ ಹೋರಾಡಿ ಗದೆಯಿಂದ ಅರಸನ ಬಿರುದುಗಳನ್ನು ಬರೆದು ಎತ್ತಿ ಹಿಡಿಯುತ್ತೇನೆ ಎಂದನು.

ಅರ್ಥ:
ಮುರಾಂತಕ: ಕೃಷ್ಣ; ಮುಂದೆ: ಎದುರು; ಅಗ್ಗಳೆ: ಶ್ರೇಷ್ಠ; ನಿಮ್ಮಡಿ: ನಿಮ್ಮ ಪಾದ; ಸುಧಾ: ಅಮೃತ; ಕರುಣ: ದಯೆ; ಅವಧಾನ: ಏಕಚಿತ್ತತೆ; ವಜ್ರ: ಗಟ್ಟಿ; ಕವಚ: ಹೊದಿಕೆ; ಮಲೆ: ಉದ್ಧಟತನದಿಂದ ಕೂಡಿರು; ಹಗೆ: ವೈರ; ಪಡಿ: ಎದುರು; ಮುಖ: ಎದುರು; ಬಲುವಲಗೆ: ಹೋರಾಡು; ಗದೆ: ಮುದ್ಗರ; ರಾಯ: ರಾಜ; ಬಲುಹ: ಶಕ್ತಿ; ಬಿರುದಾವಳಿ: ಗೌರವ ಸೂಚಕ ಪದ; ಬರೆ: ಲಿಖಿತ; ಕೇಳು: ಆಲಿಸು;

ಪದವಿಂಗಡಣೆ:
ಎಲೆ +ಮುರಾಂತಕ +ನಿಮ್ಮ +ಮುಂದ್
ಅಗ್ಗಳೆಯತನವ್+ಎಮಗಿಲ್ಲ+ ನಿಮ್ಮಡಿ
ಗಳ+ ಸುಧಾ+ಕರುಣ+ಅವಧಾನವೆ +ವಜ್ರ+ಕವಚವಲಾ
ಮಲೆತು +ಹಗೆವನ +ಪಡಿಮುಖದ +ಬಲು
ವಲಗೆಯಲಿ +ಗದೆಯಿಂದ +ರಾಯನ
ಬಲುಹ+ ಬಿರುದಾವಳಿಯ +ಬರೆವೆನು +ಕೃಷ್ಣ+ ಕೇಳೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ – ನಿಮ್ಮಡಿಗಳ ಸುಧಾಕರುಣಾವಧಾನವೆ ವಜ್ರಕವಚವಲಾ