ಪದ್ಯ ೫೦: ಸುಯೋಧನನ ಪರಾಕ್ರಮವು ಎಂತಹುದು?

ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ (ಗದಾ ಪರ್ವ, ೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಎಲೈ ಧರ್ಮಜ, ಒಬ್ಬನನ್ನು ಗೆದ್ದರೆ ಉಳಿದವರು ದಾಸರಾಗುತ್ತರೆ ಎಂದು ನೀನು ಹೇಳಿದೆ ಅಲ್ಲವೇ? ಇದನ್ನು ನೀನು ತಿಳಿದು ಹೇಳಿದೆಯಾ? ಯುದ್ಧಕ್ಕೆ ನಿನ್ನನ್ನು ಕರೆದರೆ ನೀಣು ಗೆಲ್ಲಬಲ್ಲೆಯಾ? ಅರ್ಜುನ ಗೆದ್ದಾನೇ? ನಕುಲ ಸಹದೇವರು ಅವನ ಗದೆಯ ಹೊಡೆತವನ್ನು ತಡೆದುಕೊಂಡು ನಿಲ್ಲಬಲ್ಲರೇ?

ಅರ್ಥ:
ಗೆಲಿದು: ಜಯಿಸು; ಉಳಿದ: ಮಿಕ್ಕ; ಕಿಂಕರ: ದಾಸ; ಗಡ: ಅಲ್ಲವೇ; ತಿಳಿ: ಅರಿ; ನುಡಿ: ಮಾತಾಡು; ಆಹವ: ಯುದ್ಧ; ಮುಖ: ಆನನ; ವರಿಸು: ಕೈಹಿಡಿ; ಗೆಲುವು: ಜಯ; ಬಲ್ಲ: ತಿಳಿದ; ನಿಲು: ನಿಲ್ಲು, ಎದುರಿಸು; ಘಾಟ: ಹೆಕ್ಕತ್ತು, ಹೊಡೆತ; ಘಾಯ: ಪೆಟ್ಟು; ಗದೆ: ಮುದ್ಗರ;

ಪದವಿಂಗಡಣೆ:
ಗೆಲಿದಡ್+ಐವರೊಳ್+ ಒಬ್ಬನನು+ ಮಿ
ಕ್ಕುಳಿದವರು+ ಕಿಂಕರರು +ಗಡ +ನೀ
ತಿಳಿದು +ನುಡಿದಾ+ ನಿನ್ನನ್+ಆಹವಮುಖಕೆ +ವರಿಸಿದಡೆ
ಗೆಲಲು +ಬಲ್ಲಾ +ನೀನು +ಫಲುಗುಣ
ಗೆಲುವನೇ+ ನಿನ್ನುಳಿದರಿಬ್ಬರು
ನಿಲುವರೇ+ ಕುರುಪತಿಯ+ಘಾಟದ +ಗದೆಯ +ಘಾಯದಲಿ

ಅಚ್ಚರಿ:
(೧) ಸುಯೋಧನನ ಪರಾಕ್ರಮದ ವರ್ಣನೆ – ಇನ್ನುಳಿದರಿಬ್ಬರು ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ

ಪದ್ಯ ೪೯: ಕೃಷ್ಣನು ಧರ್ಮಜನ ನಿರ್ಧಾರವನ್ನೇಕೆ ಟೀಕಿಸಿದ?

ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ
ಸರಿಸದಲಿ ಮಲೆತವನು ಜೀವಿಸಿ
ಮರಳರರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ (ಗದಾ ಪರ್ವ, ೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮಜನನ್ನು ಕರೆದು, ಎಲೈ ಧರ್ಮಜು ನೀನು ಮಾಢನಾಗಿ ವರ್ತಿಸಿದೆ. ದೊಡ್ಡಸ್ತಿಕೆ ತೋರಿಸಿ ಏನೋ ಹೇಳಿಬಿಟ್ಟೆ. ಸುಯೋಧನನ ಇದಿರು ಯುದ್ಧದಲ್ಲಿ ನಿಂತವನು ಯುದ್ದರಂಗದಿಂದ ಬದುಕಿ ಹೊರಬರಲು ಸಾಧ್ಯವೇ? ನಮ್ಮಲ್ಲಿ ಒಬ್ಬನನ್ನು ಯುದ್ಧಕ್ಕೆ ಆರಿಸಿಕೋ ಎಂದು ಹೇಳಿ ನೀನು ನಮ್ಮನ್ನು ಕೊಂದೆ ಎಂದು ಹೇಳಿದನು.

ಅರ್ಥ:
ಮರುಳ: ಮೂಢ; ಹೆಚ್ಚು: ಅಧಿಕ; ಆಳುತನ: ಶೂರತನ, ದಿಟ್ಟತನ; ಉಬ್ಬರಿಸು: ಅಧಿಕ, ಹೆಚ್ಚು; ನುಡಿ: ಮಾತು; ಅರಿ: ತಿಳಿ; ಕೈ: ಹಸ್ತ; ಬಂದು: ಆಗಮಿಸು; ಕದನಭೂಮಿ: ರಣರಂಗ; ಸರಿಸ: ನೇರವಾಗಿ; ಮಲೆತ: ಗರ್ವಿಸಿದ, ಸೊಕ್ಕಿದ; ಜೀವಿಸು: ಬದುಕಿಸು; ಮರಳು: ಹಿಂದಿರುಗು; ವರಿಸು: ಕೈಹಿಡಿ, ಒಪ್ಪಿಕೊಳ್ಳು; ವಿಗ್ರಹ: ರೂಪ; ಯುದ್ಧ; ಕೊಂದೆ: ಸಾಯಿಸಿದೆ;

ಪದವಿಂಗಡಣೆ:
ಮರುಳೆ+ ನೀ +ಹೆಚ್ಚಾಳುತನಕ್
ಉಬ್ಬರಿಸಿ+ ನುಡಿದೆ +ಸುಯೋಧನನ+ ನೀನ್
ಅರಿಯಲಾಗದೆ+ ಕೈಗೆ +ಬಂದರೆ +ಕದನಭೂಮಿಯಲಿ
ಸರಿಸದಲಿ+ ಮಲೆತವನು +ಜೀವಿಸಿ
ಮರಳರ್+ಅರಿವನೆ+ ನಮ್ಮೊಳೊಬ್ಬನ
ವರಿಸು +ವಿಗ್ರಹಕೆಂದು +ನಮ್ಮನು +ಕೊಂದೆ +ನೀನೆಂದ

ಅಚ್ಚರಿ:
(೧) ಸುಯೋಧನನ ಪರಾಕ್ರಮ – ಸರಿಸದಲಿ ಮಲೆತವನು ಜೀವಿಸಿ ಮರಳರರಿವನೆ

ಪದ್ಯ ೪೮: ಕೌರವನು ಯುದ್ಧಕ್ಕೆ ಯಾವ ಆಯ್ಕೆಯನ್ನು ನೀಡಿದನು?

ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಮ್ಮಿಪ್ಪವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ (ಗದಾ ಪರ್ವ, ೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ನೀವು ಧರ್ಮವನ್ನವಲಂಬಿಸಿದರೆ ಭೀಮನೊಡನೆ ಯುದ್ಧವನ್ನು ಹಿಡಿದೆ. ದುರ್ಜನರಂತೆ ನಡೆಯುವುದಾದರೆ ಸೇನಾ ಸಮೇತರಾಗಿ ನೀವೈವರೂ ಬರಬಹುದು. ಯಾವುದಕ್ಕೂ ನಾನು ಹಿಂಜರಿಯುವುದಿಲ್ಲ. ನೀವೇನನ್ನು ಒಪ್ಪಿಕೊಳ್ಳುವಿರೋ ಅದೇ ನಮ್ಮಿಷ್ಟ, ಎಂದು ದುರ್ಯೋಧನನು ಹೇಳಿದನು. ಆಗ ಧರ್ಮಜನನ್ನು ಶ್ರೀಕೃಷ್ಣನು ಒಂದು ಕಡೆ ಕರೆದು ಹೀಗೆಂದನು.

ಅರ್ಥ:
ವರಿಸು: ಬರುವಂತೆ ಮಾಡು, ಆರಿಸು; ಆದರಿಸು: ಗೌರವಿಸು; ದುರ್ಜನ: ದುಷ್ಟ; ಸರಣಿ: ಸಾಲು; ಬಹಡೆ: ಬರುತ್ತೀರ; ದಳ: ಸೈನ್ಯ; ಸಹಿತ: ಜೊತೆ; ಇದಿರು: ಎದುರು; ತೆರಳು: ಗಮಿಸು; ಪತಿಕರಿಸು: ಅಂಗೀಕರಿಸು; ಇಷ್ಟ: ಆಸೆ; ನೃಪ: ರಾಜ; ಮುರಹರ: ಕೃಷ್ಣ; ಎಕ್ಕಟಿ: ಒಬ್ಬಂಟಿಗ, ಏಕಾಕಿ; ಕರೆ: ಬರೆಮಾಡು; ಗರ್ಜಿಸು: ಕೂಗು;

ಪದವಿಂಗಡಣೆ:
ವರಿಸಿದೆನು +ಭೀಮನನು +ನೀವ್
ಆದರಿಸುವಡೆ +ಧರ್ಮವನು +ದುರ್ಜನ
ಸರಣಿಯಲಿ +ನೀವ್ +ಬಹಡೆ +ದಳಸಹಿತ್+ಐವರ್+ಇದಿರಹುದು
ತೆರಳುವವರಾವಲ್ಲ+ ನೀವ್ +ಪತಿ
ಕರಿಸಿದುದೆ +ನಮ್ಮಿಪ್ಪವ್+ಎನೆ+ ಮುರ
ಹರ+ ಯುಧಿಷ್ಠಿರ+ನೃಪನನ್+ಎಕ್ಕಟಿ+ಕರೆದು +ಗರ್ಜಿಸಿದ

ಅಚ್ಚರಿ:
(೧) ನೀವ್ ಪದದ ಬಳಕೆ – ೩ ಬಾರಿ ಪ್ರಯೋಗ