ಪದ್ಯ ೪೭: ಕೌರವನು ಯಾರನ್ನು ಯುದ್ಧಕ್ಕೆ ಆರಿಸಿದನು?

ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲವೆಂಬ ಡೊಂಬಿನ
ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ (ಗದಾ ಪರ್ವ, ೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ನಿನ್ನೊಡನೆ ನನಗೆ ಯಾವ ಛಲವೂ ಇಲ್ಲ, ಅರ್ಜುನನು ಚಿಕ್ಕವ, ಈ ಯಮಳರು ನನ್ನನ್ನು ಹೊಡೆದು ಕೆಣಕಿದರೂ ಅವರ ಮೇಲೆ ನಾನು ಆಯುಧವನ್ನು ಹಿಡಿಯುವುದಿಲ್ಲ, ಭೀಮನಾದರೋ ಬಾಯಿಬಡುಕ, ಸಾವಿರ ಆನೆಗಳ ಬಲವುಳ್ಳವನೆಂದು ಕೊಚ್ಚಿಕೊಳ್ಳುತ್ತಾನೆ. ಭೀಮನು ನನ್ನನ್ನು ಯುದ್ಧದಲ್ಲಿ ಸೋಲಿಸಿದರೆ ನನಗೆ ಒಪ್ಪಿಗೆ ಎಂದು ಕೌರವನು ನುಡಿದನು.

ಅರ್ಥ:
ಕೂಡ: ಜೊತೆ; ಛಲ: ದೃಢ ನಿಶ್ಚಯ, ನೆಪ; ಮಗು: ಚಿಕ್ಕವ; ಯಮಳ: ಅವಳಿ ಮಕ್ಕಳು; ಕೈದು: ಆಯುಧ; ಹೊಯ್ದು: ಹೋರಾಡು; ಕೆಣಕು: ರೇಗಿಸು; ಬಾಯಿಬಡಿಕ: ಸುಮ್ಮನೆ ಮಾತಾಡುವವ; ಸತ್ವ: ಸಾರ; ನಾಗ: ಆನೆ; ಆಯುತ: ಒಂದುಸಾವಿರ; ಬಲ: ಶಕ್ತಿ; ಡೊಂಬು: ಮೋಸಗಾರ, ವಂಚಕ; ವಾಯು: ಅನಿಲ; ಮಗ: ಪುತ್ರ; ಮಾರಾಂತ: ಯುದ್ಧಕ್ಕೆ ಎದುರು ನಿಲ್ಲು;

ಪದವಿಂಗಡಣೆ:
ಹಾ +ಯುಧಿಷ್ಠಿರ+ ನಿಮ್ಮ +ಕೂಡ್+ ಎಮಗ್
ಆಯ+ಛಲವಿಲ್ಲ್+ಅರ್ಜುನನು +ಮಗುವ್
ಈ+ ಯಮಳರಿಗೆ+ ಕೈದುಗೊಳ್ಳೆನು+ ಹೊಯ್ದು +ಕೆಣಕಿದಡೆ
ಬಾಯಿಬಡಿಕನು +ಸತ್ವದಲಿ +ನಾಗ
ಆಯುತದ +ಬಲವೆಂಬ +ಡೊಂಬಿನ
ವಾಯುವಿನ ಮಗನ್+ಎನ್ನೊಡನೆ +ಮಾರಾಂತಡ್+ಅಹುದೆಂದ

ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಬಾಯಿಬಡಿಕನು ಸತ್ವದಲಿ ನಾಗಾಯುತದ ಬಲವೆಂಬ ಡೊಂಬಿನ
ವಾಯುವಿನ ಮಗ

ಪದ್ಯ ೪೬: ಧರ್ಮಜನು ಯಾವ ಒಪ್ಪಂದದ ನುಡಿಯನ್ನು ಹೇಳಿದನು?

ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ (ಗದಾ ಪರ್ವ, ೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ಮಾತನ್ನು ಮುಂದುವರೆಸುತ್ತಾ, ನೀನು ಸೋತರೆ ನಾವು ಭೂಮಿಯನ್ನಾಳುತ್ತೇವೆ, ನಮ್ಮಲೊಬ್ಬರು ನಿನ್ನೊಡನೆ ಹೋರಾಡಿ ಸೋತರೆ, ಉಳಿದವರು ನಿನ್ನ ಸೇವಕರು, ನಿನಗೆ ಹಸ್ತಿನಾಪುರದ ಐಶ್ವರ್ಯ ವಶವಾಗುತ್ತದೆ. ಇದೇ ನಮಗೂ ನಿಮಗೂ ಒಪ್ಪಂದ ಎಂದನು.

ಅರ್ಥ:
ಸೋಲು: ಪರಾಭವ; ಭೂ: ಭೂಮಿ; ಕಾಮಿನಿ: ಹೆಣ್ಣು; ಭೂಕಾಮಿನಿ: ಭೂದೇವಿ; ಆಳು: ರಾಜ್ಯಭಾರ ಮಾಡು; ಕಿಂಕರ: ದಾಸ, ಸೇವಕ; ಸಿರಿ: ಐಶ್ವರ್ಯ; ಸಂಜನಿತ: ಹುಟ್ಟಿದ; ಸಂಕೇತ: ಗುರುತು; ಸಾಧನ: ಗುರಿಮುಟ್ಟುವಿಕೆ; ನುಡಿ: ಮಾತಾಡು; ಸುತ: ಮಗ; ನಗು: ಹರ್ಷ;

ಪದವಿಂಗಡಣೆ:
ನಿನಗೆ +ಸೋಲವೆ +ನಾವು +ಭೂಕಾ
ಮಿನಿಯನ್+ಆಳ್ವೆವು+ ನಮ್ಮೊಳ್+ ಒಬ್ಬರು
ನಿನಗೆ +ಸೋತಡೆ +ಮಿಕ್ಕ +ನಾಲ್ವರು +ನಿನಗೆ +ಕಿಂಕರರು
ನಿನಗೆ +ಹಸ್ತಿನಪುರದ +ಸಿರಿ +ಸಂ
ಜನಿತವೀ +ಸಂಕೇತವೇ +ಸಾ
ಧನ +ನಿನಗೆ +ನಮಗೆಂದು +ನುಡಿದನು +ಧರ್ಮಸುತ +ನಗುತ

ಅಚ್ಚರಿ:
(೧) ಭೂಮಿಯನ್ನು ಭೂಕಾಮಿನಿ ಎಂದು ಕರೆದ ಪರಿ
(೨) ನಿನಗೆ – ೫ ಬಾರಿ ಪ್ರಯೋಗ; ೧, ೩, ೪ ಸಾಲಿನ ಮೊದಲ ಪದ

ಪದ್ಯ ೪೫: ಧರ್ಮಜನು ಕೌರವನಿಗೆ ಯಾವ ನಿಶ್ಚಯವನ್ನು ತಿಳಿಸಿದನು?

ಮೆಚ್ಚಿದನು ಯಮಸೂನು ಛಲ ನಿನ
ಗೊಚ್ಚತವಲೈ ವೈರಿಭಟರಲಿ
ಬೆಚ್ಚಿದಾಡಿದೆಯಾದಡೇನದು ನಮ್ಮೊಳೈವರಲಿ
ಮೆಚ್ಚಿದರ ನೀ ವರಿಸಿ ಕಾದುವು
ದಚ್ಚರಿಯ ಮಾತೇನು ಗೆಲುವಿನ
ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ (ಗದಾ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ದುರ್ಯೋಧನನ ಧೈರ್ಯಕ್ಕೆ ಮೆಚ್ಚಿ, ಛಲವು ನಿನಗೇ ಮೀಸಲಾದದ್ದು, ಎಲ್ಲ ವಿರೋಧಿಗಳೂ ಯುದ್ಧಕ್ಕೆ ಬರಲಿ ಎಂದು ಕರೆದೆ, ಆದರೇನಂತೆ ನಮ್ಮೈವರಲ್ಲಿ ಒಬ್ಬನನ್ನು ಆರಿಸಿಕೊಂಡು ಯುದ್ಧಮಾಡು, ಅದರಲ್ಲಿ ಗೆದ್ದವನೇ ಭರತ ಖಂಡಕ್ಕೆ ರಾಜನಾಗುತ್ತಾನೆ, ಇದು ಈಗಿನ ನಿಶ್ಚಯ ಎಂದು ಧರ್ಮಜನು ನುಡಿದನು.

ಅರ್ಥ:
ಮೆಚ್ಚು: ಹೊಗಳು; ಸೂನು: ಮಗ; ಛಲ: ದೃಢ ನಿಶ್ಚಯ; ಉಚ್ಚ: ಶ್ರೇಷ್ಠತೆ; ವೈರಿ: ಶತ್ರು; ಭಟ: ಸೈನಿಕ; ಬೆಚ್ಚು: ಭಯ, ಹೆದರಿಕೆ; ವರಿಸು: ಒಪ್ಪಿಕೊಳ್ಳು, ಅಂಗೀಕರಿಸು; ಕಾದು: ಹೋರಾಡು; ಅಚ್ಚರಿ: ಆಶ್ಚರ್ಯ; ಮಾತು: ನುಡಿ; ಗೆಲುವು: ಜಯ; ನಿಚ್ಚಟ: ಕಪಟವಿಲ್ಲದುದು, ಮೋಸವಿಲ್ಲದುದು; ನೆಲ: ಭೂಮಿ; ಕೊಡೆ: ನೀಡು; ಸಮಯ: ಕಾಲ; ಕೃತ: ಮಾಡಿದ, ಮುಗಿಸಿದ;

ಪದವಿಂಗಡಣೆ:
ಮೆಚ್ಚಿದನು +ಯಮಸೂನು +ಛಲ+ ನಿನಗ್
ಉಚ್ಚತವಲೈ+ ವೈರಿಭಟರಲಿ
ಬೆಚ್ಚಿದಾಡಿದೆಯಾದಡೇನದು+ ನಮ್ಮೊಳ್+ಐವರಲಿ
ಮೆಚ್ಚಿದರ +ನೀವ್ + ಅರಿಸಿ +ಕಾದುವುದ್
ಅಚ್ಚರಿಯ +ಮಾತೇನು +ಗೆಲುವಿನ
ನಿಚ್ಚಟನೆ +ನೆಲಕೊಡೆಯನ್+ಅಹುದಿದು+ ಸಮಯ+ಕೃತವೆಂದ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಮೆಚ್ಚಿದನು ಯಮಸೂನು ಛಲ ನಿನಗೊಚ್ಚತವಲೈ

ಪದ್ಯ ೪೪: ಕೌರವನನ್ನು ಸೈನ್ಯದವರು ಹೇಗೆ ಹೊಗಳಿದರು?

ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ಧೀವಸಿಯಾವನೆಂದುದು ನಿಖಿಳ ಪರಿವಾರ (ಗದಾ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವ ಪರಿವಾರದವರು, ದೊರೆಯು ಧೈರ್ಯಶಾಲಿ, ರಾವು, ಮಝ, ಭಲೇ ಪರಾಕ್ರಮಿಯಲ್ಲವೇ ಎಂದು ಹೊಗಳಿತು. ಸೇನಾನಾಯಕರೊಡನೆ ಈ ಸೈನ್ಯವನ್ನು ತಾನೊಬ್ಬನೇ ಇದಿರಿಸುವೆನೆನ್ನುತ್ತಾನೆ, ಹುಟ್ಟಿದವರಿಗೆ ಸಾವು ತಪ್ಪಿದ್ದಲ್ಲ, ಆದರೂ ಕಂಡೂ ಕಂಡೂ ಬುದ್ಧಿಪೂರ್ವಕವಾಗಿ ಇಂತಹ ಯುದ್ಧಕ್ಕೆ ನಿಂತಿದ್ದಾರೆ, ಇಂತಹವರು ಯಾರಿದ್ದಾರೆ ಎಂದು ಹೊಗಳಿದರು.

ಅರ್ಥ:
ದಿಟ್ಟ: ನಿಜ, ಸತ್ಯ; ನೃಪ: ರಾಜ; ಮಝ: ಭಲೆ, ಭೇಷ್; ಜಗಜಟ್ಟಿ: ಪರಾಕ್ರಮಿ; ದೊರೆ: ರಾಜ; ಥಟ್ಟು: ಗುಂಪು; ನಿಲುವೆ: ನಿಲ್ಲು; ಸತ್ವ: ಸರ; ನಿಧಿ: ಹುದುಗಿಟ್ಟ ಧನ, ನಿಕ್ಷೇಪ; ಹುಟ್ಟು: ಜನನ; ಸಾವು: ಮರಣ; ಹಣೆ: ಲಲಾಟ; ಕಟ್ಟು: ಬಂಧಿಸು, ಧರಿಸು; ವಿಧಿ: ನಿಯಮ; ಪರಿ: ರೀತಿ; ಮುಟ್ಟು: ತಾಗು; ಧೀವಸಿ: ಸಾಹಸಿ, ಶೂರ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ರಾವು: ದಿಗ್ಭ್ರಮೆ, ಆರ್ಭಟ;

ಪದವಿಂಗಡಣೆ:
ದಿಟ್ಟನೈ +ನೃಪ+ರಾವು +ಮಝ +ಜಗ
ಜಟ್ಟಿಯಲ್ಲಾ +ದೊರೆಗಳೊಡನ್+ಈ+
ಥಟ್ಟಿಗೊಬ್ಬನೆ+ ನಿಲುವೆನ್+ಎಂದನದ್+ಆವ +ಸತ್ವನಿಧಿ
ಹುಟ್ಟಿದವರಿಗೆ+ ಸಾವು +ಹಣೆಯಲಿ
ಕಟ್ಟಿಹುದು +ವಿಧಿ+ಎಂದಡ್+ಈ+ ಪರಿ
ಮುಟ್ಟೆ +ಧೀವಸಿ+ಆವನೆಂದುದು +ನಿಖಿಳ +ಪರಿವಾರ

ಅಚ್ಚರಿ:
(೧) ದಿಟ್ಟ, ಜಗಜಟ್ಟಿ, ಧೀವಸಿ – ಸಾಮ್ಯಾರ್ಥ ಪದಗಳು
(೨) ಲೋಕ ನೀತಿ: ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿಹುದು ವಿಧಿ