ಪದ್ಯ ೩: ಕೊಳದ ಬಳಿ ಯಾರು ಬಂದು ನಿಂತರು?

ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ (ಗದಾ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ಶತ್ರುಸೇನೆಯು ಬಂದು ಕೊಳದ ತೀರವನ್ನು ಮುತ್ತಿ ಸುತ್ತುವರಿದು ಭೂಮಿ ಬಿರಿಯುವಂತೆ ಬೊಬ್ಬೆಯನ್ನು ಹಾಕಿದರು. ಯುಧಿಷ್ಠಿರನು ಪಲ್ಲಕ್ಕಿಯಲ್ಲಿ ಬಂದಿಳಿದು ನಿಂತನು. ಅವನೊಡನೆ ಭೀಮಾರ್ಜುನನಕುಲಸಹದೇವರೂ, ಶ್ರೀಕೃಷ್ಣನೂ ಧೃಷ್ಟದ್ಯುಮ್ನ ಶಿಖಂಡಿ ಬಂದು ನಿಂತರು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಕೊಳ: ಸರೋವರ; ತೀರ: ದಡ; ವೇಡೈಸು: ಸುತ್ತುವರಿ; ಸರಸಿ: ಸರೋವರ; ಬಂದಿಕಾರ: ಕಳ್ಳ, ಸೆರೆಹಿಡಿಯಲ್ಪಟ್ಟವ; ಬೊಬ್ಬಿರಿ: ಗರ್ಜಿಸು; ಅಬ್ಬರ: ಆರ್ಭಟ; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಅಂದಣ: ಪಲ್ಲಕ್ಕಿ, ಮೇನೆ; ಐತಂದು: ಬಂದು ಸೇರು; ಸೂನು: ಮಗ; ಸಹಿತ: ಜೊತೆ; ನಿಂದು: ನಿಲ್ಲು; ಯಮಳ: ನಕುಲ ಸಹದೇವ;

ಪದವಿಂಗಡಣೆ:
ಬಂದುದ್+ಅರಿಬಲ+ ಕೊಳನ +ತೀರದಲ್
ಅಂದು +ವೇಢೈಸಿದರು+ ಸರಸಿಯ
ಬಂದಿಕಾರರು +ಬೊಬ್ಬಿರಿದರ್+ಅಬ್ಬರಕೆ +ಧರೆ +ಬಿರಿಯೆ
ಅಂದಣದಲ್+ಐತಂದು +ಧರ್ಮಜ
ನಿಂದನ್+ಅರ್ಜುನ +ಭೀಮ +ಯಮಳ +ಮು
ಕುಂದ +ಸಾತ್ಯಕಿ +ದ್ರುಪದ+ಸೂನು +ಶಿಖಂಡಿಗಳು+ ಸಹಿತ

ಅಚ್ಚರಿ:
(೧) ಕೊಳ, ಸರಸಿ – ಸಮಾನಾರ್ಥಕ ಪದ
(೨) ಶಬ್ದದ ತೀವ್ರತೆ – ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ

ನಿಮ್ಮ ಟಿಪ್ಪಣಿ ಬರೆಯಿರಿ