ಪದ್ಯ ೩೦: ಕೃಪ ಅಶ್ವತ್ಥಾಮರು ಯಾರ ಹೆಸರನ್ನು ಕರೆದರು?

ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ (ಗದಾ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಕೃಪ, ಅಶ್ವತ್ಥಾಮ, ಕೃತವರ್ಮರು ತಮ್ಮ ರಥ ಕುದುರೆಗಳನ್ನು ದೂರದಲ್ಲಿ ನಿಲ್ಲಿಸಿ, ತಲೆ ಮುಸುಕು ಹಾಕಿಕೊಂಡು ಸರೋವರದ ದಡಕ್ಕೆ ಬಂದು, ಮರಬಳ್ಳಿಗಳ ನಡುವೆ ನಿಂತು ಅರಸನನ್ನು ಕರೆದು ತಮ್ಮ ಹೆಸರುಗಳನ್ನು ಹೇಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಗುರುಜ: ಅಶ್ವತ್ಥಾಮ; ಅಶ್ವ: ಕುದುರೆ; ದೂರ: ಅಂತರ; ತಲೆ: ಶಿರ; ಮುಸುಕು: ಹೊದಿಕೆ; ಯೋನಿ; ಕೊಳ: ಸರೋವರ; ತಡಿ: ದಡ; ತರು: ಮರ, ವೃಕ್ಷ; ಲತೆ: ಬಳ್ಳಿ; ಇರುಬು: ಇಕ್ಕಟ್ಟು; ಕಂಜ: ತಾವರೆ; ನಿಂದು: ನಿಲ್ಲು; ಮೆಲ್ಲನೆ: ನಿಧಾನ; ಕೇಳು: ಆಲಿಸು; ಹೆಸರು: ನಾಮ;

ಪದವಿಂಗಡಣೆ:
ಅರಸ +ಕೇಳ್ +ಕೃಪ +ಗುರುಜ +ಕೃತವ
ರ್ಮರು+ ರಥ+ಅಶ್ವಂಗಳನು +ದೂರದಲ್
ಇರಿಸಿ +ತಲೆ+ಮುಸುಕಿನಲಿ +ಬಂದರು +ಕೊಳನ +ತಡಿಗಾಗಿ
ತರು+ಲತೆಗಳ್+ಇರುಬಿನಲಿ+ ಕಂಜಾ
ಕರದ +ತಡಿಯಲಿ +ನಿಂದು +ಮೆಲ್ಲನೆ
ಕರೆದು +ಕೇಳಿಸಿ +ಹೇಳಿದರು+ ತಂತಮ್ಮ +ಹೆಸರುಗಳ

ಅಚ್ಚರಿ:
(೧) ಕೇಳಿ, ಹೇಳಿ – ಪ್ರಾಸ ಪದ
(೨) ಗುಟ್ಟಾಗಿ ಎಂದು ಹೇಳುವ ಪರಿ – ರಥಾಶ್ವಂಗಳನು ದೂರದಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ

ಪದ್ಯ ೨೯: ಧೃತರಾಷ್ಟ್ರನು ಸಂಜಯನನ್ನು ಯಾರ ಬಗ್ಗೆ ವಿಚಾರಿಸಿದನು?

ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ಅರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ (ಗದಾ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ದೊರೆಯ ಅಪ್ಪಣೆಯಂತೆ ಸ್ತ್ರೀವೃಂದವನ್ನು ಇಲ್ಲಿಗೆ ಕರೆತಂದೆನು. ಈ ವೃತ್ತಾಂತವಉ ಇಲ್ಲಿಯವರೆಗೆ ನಡೆಯಿತು. ಇನ್ನೇನು ಹೇಳಲಿ ಎಂದು ಹೇಳಲು, ಧೃತರಾಷ್ಟ್ರನು, ಅಶ್ವತ್ಥಾಮನು ಕೌರವನ ರಕ್ಷಣೆಗೆ ಹೋದನೇ, ಮುಂದೇನಾಯಿತು ಎಂದು ಕುತೂಹಲದಿಂದ ಕೇಳಿದನು.

ಅರ್ಥ:
ತಂದೆ: ಬಂದೆ, ಆಗಮಿಸು; ಸಕಲ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ನೇಮ: ಅಪ್ಪಣೆ; ವೃತ್ತಾಂತ: ವಿವರಣೆ; ವರ್ತಿಸು: ನಡೆದುದು; ಪರಿ: ರೀತಿ, ಕ್ರಮ; ಹೇಳು: ತಿಳಿಸು; ಬೆಸಸು: ಹೇಳು, ಆಜ್ಞಾಪಿಸು; ಅವನೀಪತಿ: ರಾಜ; ಹೊರೆ: ರಕ್ಷಣೆ; ಐತಂದು: ಬಂದು ಸೇರು; ಸೂನು: ಮಗ; ಹದ: ಸ್ಥಿತಿ;

ಪದವಿಂಗಡಣೆ:
ತಂದೆನ್+ಇಲ್ಲಿಗೆ +ಸಕಲ+ ನಾರೀ
ವೃಂದವನು +ಕುರುಪತಿಯ +ನೇಮದಲ್
ಇಂದಿನೀ +ವೃತ್ತಾಂತ + ವರ್ತಿಸಿತಿಲ್ಲಿ +ಪರಿಯಂತ
ಮುಂದೆ +ಹೇಳುವುದೇನು +ನೀ +ಬೆಸ
ಸೆಂದಡ್+ಅವನೀಪತಿಯ+ ಹೊರೆಗ್
ಐತಂದನೇ +ಗುರುಸೂನು +ಮೇಲಣ+ ಹದನ+ ಹೇಳೆಂದ

ಅಚ್ಚರಿ:
(೧) ತಂದೆನಿಲ್ಲಿಗೆ, ಹೊರೆಗೈತಂದನೇ – ಪದಗಳ ಬಳಕೆ

ಪದ್ಯ ೨೮: ಕೌರವನ ರಕ್ಷಣೆಗೆ ಯಾರು ನಿಂತರು?

ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ (ಗದಾ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ಸರೋವರದ ಮಧ್ಯದಲ್ಲಿ ನಿಂತು, ಪಾಳೆಯವನ್ನು ಹಸ್ತಿನಾಪುರಕ್ಕೆ ಕಳುಹಿಸು ಎನಲು, ನಾನಿಲ್ಲಿಗೆ ಬಂದೆನು. ದಾರಿಯ ನಡುವೆ ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮರನ್ನು ನೋಡಿದೆ, ಅವರನ್ನು ಕೌರವನ ರಕ್ಷಣೆಗಾಗಿ ದೊರೆಯ ಬಳಿಗೆ ಕಳುಹಿಸಿದೆ ಎಂದು ಸಂಜಯನು ಹೇಳಿದನು.

ಅರ್ಥ:
ಇಳಿ: ಕೆಳಗೆ ಹೋಗು; ಸರಸಿ: ಸರೋವರ; ಮಧ್ಯ: ನಡುವೆ; ನೃಪ: ರಾಜ; ತಿಲಕ: ಶ್ರೇಷ್ಠ; ನಿಂದು: ನಿಲ್ಲು; ಪಾಳೆಯ: ಬಿಡಾರ; ಕಳುಹು: ತೆರಳು; ಗಜಪುರಿ: ಹಸ್ತಿನಾಪುರ; ಬಂದು: ಆಗಮಿಸು; ಪಥ: ಮಾರ್ಘ; ಮಧ್ಯ: ನಡುವೆ; ಸುಳಿ: ಕಾಣಿಸಿಕೊಳ್ಳು; ಕಂಡು: ನೋಡು; ಗುರು: ಆಚಾರ್ಯ; ಮಗ: ಸುತ; ಉಳಿದ: ಮಿಕ್ಕ; ಕಳುಹು: ಬೀಳ್ಕೊಡು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಇಳಿದು +ಸರಸಿಯ +ಮಧ್ಯದಲಿ +ನೃಪ
ತಿಲಕ +ನಿಂದನು +ಪಾಳೆಯವ +ನೀ
ಕಳುಹು +ಗಜಪುರಿಗ್+ಎನಲು +ಬಂದೆನು +ಪಥದ +ಮಧ್ಯದಲಿ
ಸುಳಿವ +ಕಂಡೆನು +ಕೃಪನನ್+ಆ+ ಗುರು
ಗಳ+ ಮಗನ+ ಕೃತವರ್ಮಕನನಂದ್
ಉಳಿದ +ಮೂವರ +ಕಳುಹಿದೆನು+ ಕುರುಪತಿಯ+ ಹೊರೆಗಾಗಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ನೃಪತಿಲಕ, ಕುರುಪತಿ

ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವಿವರಿಸಿದನು?

ಬೀಳುಕೊಂಡನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಹೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ (ಗದಾ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಾನು ಮ್ನಿಯಿಂದ ಬೀಳ್ಕೊಂಡು ಅರಸನನ್ನು ಹುಡುಕುತ್ತಾ ಹೋಗುವಾಗ ಸಾಲು ಹೆಣಗಳೊಟ್ಟಿಲ ಮೇಲೆ, ತಲೆಯಿಲ್ಲದ ಶರೀರಗಳ ಪಕ್ಕದಲ್ಲಿ ರಕ್ತ ಪೂರಿತವಾದ ಜಾಗದಲ್ಲಿ ಏರುತ್ತಾ, ಬೀಳುತ್ತಾ ನಿಲ್ಲುತ್ತಾ ಬಳಲುತ್ತಾ ಕಾಲು ನಡಿಗೆಯಲ್ಲಿ ಹೋಗುತ್ತಿದ್ದ ಕೌರವನನ್ನು ಕಂಡು ಅವನೊಡನೆ ದ್ವೈಪಾಯನ ಸರೋವರದ ದಡದವರೆಗೆ ಹೋದೆನು.

ಅರ್ಥ:
ಬೀಳುಕೊಂಡು: ತೆರಳು; ಮುನಿ: ಋಷಿ; ಅವನೀಪಾಲಕ: ರಾಜ; ಅರಸು: ಹುಡುಕು; ಕಳ: ಯುದ್ಧಭೂಮಿ; ಸಾಲ: ಗುಂಪು; ಹೆಣ: ಜೀವವಿಲ್ಲದ ಶರೀರ; ಕಬಂಧ: ತಲೆಯಿಲ್ಲದ ದೇಹ, ಮುಂಡ; ರುಧಿರ: ರಕ್ತ; ಪೂರ: ಪೂರ್ಣ; ಬೀಳುತೇಳು: ಹತ್ತು, ಇಳಿ; ನಿಲು: ನಿಲ್ಲು, ತಡೆ; ಬಳಲು: ಆಯಾಸಗೊಳ್ಳು; ಕಾಲುನಡೆ: ಪಾದದಿಂದ ಚಲಿಸುತ್ತಾ; ಸುಳಿ: ಕಾಣಿಸಿಕೊಳ್ಳು; ಭೂಪಾಲಕ: ರಾಜ; ಕಂಡು: ನೋಡು; ಬಂದೆ: ಆಗಮಿಸು; ಕೊಳ: ಸರೋವರ; ತಡಿ: ದಡ;

ಪದವಿಂಗಡಣೆ:
ಬೀಳುಕೊಂಡನು +ಮುನಿಯನ್+ಅವನೀ
ಪಾಲಕನನ್+ಅರಸಿದೆನು +ಕಳನೊಳು
ಸಾಲ +ಹೆಣನೊಟ್ಟಿಲ+ ಕಬಂಧದ +ರುಧಿರ+ಪೂರದಲಿ
ಬೀಳುತೇಳುತ +ನಿಲುತ +ಬಳಲಿದು
ಕಾಲುನಡೆಯಲಿ +ಸುಳಿವ +ಕುರು+ ಭೂ
ಪಾಲಕನ +ಕಂಡೊಡನೆ +ಬಂದೆನು +ಕೊಳನ +ತಡಿಗಾಗಿ

ಅಚ್ಚರಿ:
(೧) ಅವನೀಪಾಲಕ, ಭೂಪಾಲಕ – ಸಮಾನಾರ್ಥಕ ಪದ
(೨) ರಣರಂಗದ ಸ್ಥಿತಿ – ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ

ಪದ್ಯ ೨೫: ಕಷ್ಟದ ಸಮಯದಲ್ಲಿ ಯಾವುದು ನಮ್ಮನ್ನು ರಕ್ಷಿಸುತ್ತದೆ?

ಜಲಧಿಯಲಿ ಪಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡುಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ (ಗದಾ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರದಲ್ಲಿ, ಸರ್ಪದ ಬಾಯಲ್ಲಿ, ಶತ್ರು ಸೈನ್ಯದಿದಿರಿನಲ್ಲಿ, ಸಿಡಿಲು ಬಡಿತದಲ್ಲಿ, ಪರ್ವತ ಶಿಖರಾಲ್ಲಿ, ಕಾಡುಗಿಚ್ಚಿನಲ್ಲಿ ಸಿಕ್ಕಾಗ ನಾವು ಹಿಂದೆ ಮಾಡಿದ ಪುಣ್ಯದ ಫಲವು ಫಲಿಸಿ ನಮ್ಮನ್ನು ರಕ್ಷಿಸುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದಿತು.

ಅರ್ಥ:
ಜಲಧಿ: ಸಾಗರ; ಫಣಿ: ಹಾವು; ವದನ: ಮುಖ; ರಿಪು: ವೈರಿ; ಬಲ: ಶಕ್ತಿ; ಮುಖ: ಆನನ; ಸಿಡಿಲು: ಅಶನಿ; ಹೊಯ್: ಹೊಡೆ; ಹಳುವ: ಕಾಡು; ಗಿರಿ: ಬೆಟ್ಟ; ಶಿಖರ: ತುದಿ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ಬಿಡುಸು: ಕಳಚು, ಸಡಿಲಿಸು; ಪ್ರತಿ: ಸಾಟಿ, ಸಮಾನ; ಫಲಿತ: ಫಲ, ಪ್ರಯೋಜನ; ಪೂರ್ವಾದತ್ತ: ಹಿಂದೆ ಪಡೆದ; ಪುಣ್ಯ: ಸನ್ನಡತೆ; ಆವಳಿ: ಸಾಲು, ಗುಂಪು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಲಧಿಯಲಿ +ಪಣಿ+ವದನದಲಿ +ರಿಪು
ಬಲದ +ಮುಖದಲಿ+ ಸಿಡಿಲ+ ಹೊಯ್ಲಲಿ
ಹಳುವದಲಿ +ಗಿರಿಶಿಖರದಲಿ+ ದಾವಾಗ್ನಿ +ಮಧ್ಯದಲಿ
ಸಿಲುಕಿದಡೆ+ ಬಿಡುಸುವವಲೇ+ ಪ್ರತಿ
ಫಲಿತ+ ಪೂರ್ವಾದತ್ತ+ ಪುಣ್ಯಾ
ವಳಿಗಳೆಂಬುದು+ ತನ್ನೊಳಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಕಷ್ಟದಿಂದ ನಮ್ಮನ್ನು ರಕ್ಷಿಸುವುದು – ಬಿಡುಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳ್
(೨) ಸಂಸ್ಕೃತದ ಸುಭಾಷಿತವನ್ನು ಈ ಕವನ ಹೋಲುತ್ತದೆ
वने रणे शत्रुजलाग्निमध्ये महार्णवे पर्वतमस्तके वा |
सुप्तं प्रमत्ते विषमस्थितं वा रक्षन्ति पुण्यानि पुराकृतानि ||

ಪದ್ಯ ೨೬: ಸಂಜಯನಿಗೆ ವ್ಯಾಸರು ಯಾವ ಅಪ್ಪಣೆ ನೀಡಿದರು?

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ (ಗದಾ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಷ್ಟು ಬೇಗದಿಂದ ವೇದವ್ಯಾಸ ಮುನಿಗಳು ಪ್ರಕಟವಾಗಿ ನನ್ನ ಕೊರಳಿಗೆ ಹೂಡಿದ್ದ ಕತ್ತಿಯನ್ನು ಹಿಡಿದುಕೊಂಡರೋ ತಿಳಿಯಲಿಲ್ಲ. ಸಾವು ತಪ್ಪಿತು. ಬಾದರಾಯಣನು ಪ್ರೀತಿಯಿಂದ ನನ್ನ ಮೈದಡವಿ ಕೌರವನನ್ನು ಹುಡುಕು ಎಂದು ಅಪ್ಪಣೆಕೊಟ್ಟನು.

ಅರ್ಥ:
ವಹಿಲ: ಬೇಗ, ತ್ವರೆ; ಆವಿರ್ಭಾವ: ಹುಟ್ಟುವುದು, ಪ್ರಕಟವಾಗುವುದು; ಅರಿ: ತಿಳಿ; ಮುನಿ: ಋಷಿ; ಅಡ್ಡೈಸು: ಅಡ್ಡ ಬಂದು; ಹಿಡಿ: ಗ್ರಹಿಸು; ಕೊರಳು: ಗಂಟಲು ಆಯುಧ: ಶಸ್ತ್ರ; ಸಾವು: ಮರಣ; ಕೃಪೆ: ದಯೆ; ಮೈದಡವಿ: ನೇವರಿಸು; ಸಂಭಾವಿಸು: ತೃಪ್ತಿಪಡಿಸು, ಗೌರವಿಸು; ಅರಸು: ಹುಡುಕು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಆವ+ ವಹಿಲದೊಳ್+ಆದುದ್+ಆವಿ
ರ್ಭಾವವೆಂದ್+ಆನ್+ಅರಿಯೆನ್+ಆಗಳೆ
ದೇವಮುನಿ+ಅಡ್ಡೈಸಿ +ಹಿಡಿದನು +ಕೊರಳಡ್+ಆಯುಧವ
ಸಾವು +ತಪ್ಪಿತು +ಬಾದರಾಯಣನ್
ಓವಿ+ ಕೃಪೆಯಲಿ +ಮೈದಡವಿ +ಸಂ
ಭಾವಿಸುತ +ಕುರುಪತಿಯನ್+ಅರಸ್+ಎಂದೆನಗೆ +ನೇಮಿಸಿದ

ಅಚ್ಚರಿ:
(೧) ಅ ಕಾರದ ಪದಗಳ ಬಳಕೆ – ಆವ ವಹಿಲದೊಳಾದುದಾವಿರ್ಭಾವವೆಂದಾನರಿಯೆನಾಗಳೆ
(೨) ವ್ಯಾಸರನ್ನು ಕರೆದ ಪರಿ – ಬಾದರಾಯಣ, ದೇವಮುನಿ

ಪದ್ಯ ೨೪: ಸಂಜಯನ ಗಂಟಲಿಗೆ ಯಾರು ಕತ್ತಿಯನ್ನಿಟ್ಟರು?

ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯೆನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ (ಗದಾ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೌರವನನ್ನು ಹುಡುಕುತ್ತಾ ನಾನು ಹೋಗುತ್ತಿರುವಾಗ, ನನ್ನನ್ನು ನೋಡಿ ಸಾತ್ಯಕಿಯು ವೇಗದಿಂದ ಬಂದು ನನ್ನ ಅಕ್ಕಪಕ್ಕದವರನ್ನು ಹೊಡೆದು ನನ್ನನ್ನು ಹಿಡಿದನು. ಆಗ ಧೃಷ್ಟದ್ಯುಮ್ನನು ನನ್ನ ತಲೆಯನ್ನು ಛೇದಿಸು ಎನ್ನಲು ಸಾತ್ಯಕಿಯು ಖಡ್ಗವನ್ನೆಳೆದು ನನ್ನ ಗಂಟಲಿಗೆ ಗುರಿಯಿಟ್ಟನು.

ಅರ್ಥ:
ಅರಸು: ಹುಡುಕು; ಐತರಲು: ಬಂದು ಸೇರು; ಕಂಡು: ನೋಡು; ಸೂಠಿ: ವೇಗ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಹರಿ: ಚಲಿಸು; ಹಿಡಿ: ಗ್ರಹಿಸು; ಹೊಯ್ದು: ಹೊಡೆ; ಕೆಲಬಲ: ಅಕ್ಕಪಕ್ಕ, ಎಡಬಲ; ಕರೆ: ಬರೆಮಾಡು; ಶಿರ: ತಲೆ; ಅರಿ: ಕತ್ತರಿಸು; ಬಳಿಕ: ನಂತರ; ಕರ: ಹಸ್ತ; ಖಡುಗ: ಕತ್ತಿ; ಉಗಿ: ಹೊರಹಾಕು; ಹೂಡು: ಅಣಿಗೊಳಿಸು, ಸಿದ್ಧಗೊಳಿಸು; ಗಂಟಲು: ಕಂಠ;

ಪದವಿಂಗಡಣೆ:
ಕುರುಪತಿಯನ್+ಅರಸುತ್ತ+ ತಾನ್+
ಐತರಲು +ಸಾತ್ಯಕಿ +ಕಂಡು +ಸೂಠಿಯಲ್
ಉರವಣಿಸಿ +ಹರಿತಂದು +ಹಿಡಿದನು +ಹೊಯ್ದು +ಕೆಲಬಲನ
ಕರೆದು +ಧೃಷ್ಟದ್ಯುಮ್ನ +ತನ್ನಯ
ಶಿರವನ್+ಅರಿ+ಎನೆ+ ಬಳಿಕ+ ಸಾತ್ಯಕಿ
ಕರದ+ ಖಡುಗವನ್+ಉಗಿದು +ಹೂಡಿದನ್+ಎನ್ನ +ಗಂಟಲಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಿತಂದು ಹಿಡಿದನು ಹೊಯ್ದು
(೨) ಕತ್ತಿಯನ್ನು ಹೊರತಂದ ಎಂದು ಹೇಳಲು – ಕರದ ಖಡುಗವನುಗಿದು ಹೂಡಿದನ್