ಪದ್ಯ ೨೪: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೫?

ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ತಂದೆ ಒಡೆಯ ದುರ್ಯೋಧನನೇ, ಪಾಂಡವರೈವರೂ ಬದುಕಿ ಉಳಿದರು, ನಿನ್ನೊಬ್ಬನನ್ನು ಬಿಟ್ಟು ನಿನ್ನ ತಮ್ಮಂದಿರೆಲ್ಲರೂ ಮಡಿದರು. ಅವರ ಐವರು ಮಕ್ಕಳೂ ಸುಖವಾಗಿ ಜೀವಿಸಿದ್ದಾರೆ, ನಿನ್ನ ಮಕ್ಕಳೆಲ್ಲರನ್ನೂ ಯಮನು ಸಿವುಡು ಕಟ್ಟಿ ಎಳೆದೊಯ್ದ. ಅಪ್ಪಾ ದುರ್ಯೋಧನ ದೈವವನ್ನು ವಿರೋಧಿಸಿ ಈ ದುಃಸ್ಥಿತಿಗೆ ಬಂದೆ ಎಂದು ಸಂಜಯನು ಹೇಳಿದನು.

ಅರ್ಥ:
ಬದುಕು: ಜೀವಿಸು; ಉಳಿ: ಬದುಕಿರು; ಸವರು: ನಾಶ; ಕುಮಾರ: ಮಕ್ಕಳು; ಸೌಖ್ಯ: ಸುಖ, ನೆಮ್ಮದಿ; ಜವ: ಯಮ; ಸಿವಡಿ: ಒಂದು ಅಳತೆ, ಕಿರ್ದಿ; ಹತ್ತು: ಏರು; ನೂರು: ಶತ; ದೈವ: ಭಗವಂತ; ಅವಗಡಿಸು: ಕಡೆಗಣಿಸು; ದುಃಸ್ಥಿತಿ: ಕೆಟ್ಟ ಅವಸ್ಥೆ;

ಪದವಿಂಗಡಣೆ:
ಅವರು +ಬದುಕಿದರ್+ಐವರೂ +ನಿ
ನ್ನವರೊಳಗೆ+ ನೀನುಳಿಯೆ +ನೂರ್ವರು
ಸವರಿತ್+ಅವರ್+ಐವರು+ ಕುಮಾರರು+ ಸೌಖ್ಯ +ಜೀವಿಗಳು
ಜವನ+ಸಿವಡಿಗೆ +ಹತ್ತಿದರು +ನಿ
ನ್ನವರು +ಮಕ್ಕಳು +ನೂರು +ದೈವವನ್
ಅವಗಡಿಸಿ +ದುಃಸ್ಥಿತಿಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ದುಃಸ್ಥಿತಿಗೆ ಕಾರಣ – ದೈವವನವಗಡಿಸಿ ದುಃಸ್ಥಿತಿಗೆ ಬಂದೈ

ಪದ್ಯ ೨೩: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೪?

ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ (ಗದಾ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪರಶುರಾಮನೇ ಕೋಪದಿಂದ ಬಂದರೂ, ಭೀಷ್ಮನೊಬ್ಬನೇ ಅವನನ್ನು ಸೋಲಿಸಿದನು. ಪಾಂಡವ ಬಲದ ಮಹಾರಥರನ್ನು ದ್ರೋಣನು ಸಂಹರಿಸಿದನು. ಸೇನಾಧಿಪತಿಯಾದ ಕರ್ಣನು ಅರ್ಜುನನ ತಲೆಗೆ ಅಪಾಯವನ್ನೊಡಿದ, ಈ ಮಹಾಸತ್ವಶಾಲಿಗಳು ಮಡಿದರು. ಕಡೆಯಲ್ಲಿ ನೀನೊಬ್ಬನೇ ಒಬ್ಬಂಟಿಯಾಗಿ ಉಳಿದು ಕೆಟ್ಟೆ ಎಂದು ಸಂಜಯನು ಹೇಳಿದನು.

ಅರ್ಥ:
ಮುಳಿ: ಕೋಪ; ಅಗ್ಗ: ಶ್ರೇಷ್ಠ; ಗೆಲಿ: ಜಯಿಸು; ಬಲ: ಸೈನ್ಯ; ಸಕಲ: ಎಲ್ಲಾ; ಮಹಾರಥ: ಪರಾಕ್ರಮಿ; ಸಂಹರ: ಸಾವು; ದಳಪತಿ: ಸೇನಾಧಿಪತಿ; ತಲೆ: ಶಿರ; ತಂದು: ತೆಗೆದುಕೊಂಡು ಬಂದು; ಕಡೆ: ಕೊನೆ; ಕೆಡು: ಹಾಳಾಗು; ಅಗ್ಗಿ: ಬೆಂಕಿ;

ಪದವಿಂಗಡಣೆ:
ಮುಳಿದಡ್+ಅಗ್ಗದ +ಪರಶುರಾಮನ
ಗೆಲಿದನ್+ಒಬ್ಬನೆ +ಭೀಷ್ಮ +ಪಾಂಡವ
ಬಲದ +ಸಕಲ +ಮಹಾರಥರ +ಸಂಹರಿಸಿದನು +ದ್ರೋಣ
ದಳಪತಿಯ +ಮಾಡಿದಡೆ +ಪಾರ್ಥನ
ತಲೆಗೆ +ತಂದನು +ಕರ್ಣನ್+ಈ+ಅ
ಗ್ಗಳೆಯರ್+ಅಗ್ಗಿತು +ಕಡೆಯಲೊಬ್ಬನೆ+ ಕೆಟ್ಟೆ +ನೀನೆಂದ

ಅಚ್ಚರಿ:
(೧) ಭೀಷ್ಮರ ಪರಾಕ್ರಮ – ಮುಳಿದಡಗ್ಗದ ಪರಶುರಾಮನಗೆಲಿದನೊಬ್ಬನೆ ಭೀಷ್ಮ
(೨) ದ್ರೋಣರ ಪರಾಕ್ರಮ – ಪಾಂಡವ ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
(೩) ಕರ್ಣನ ಪರಾಕ್ರಮ – ದಳಪತಿಯ ಮಾಡಿದಡೆ ಪಾರ್ಥನ ತಲೆಗೆ ತಂದನು ಕರ್ಣ

ಪದ್ಯ ೨೨: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೩?

ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳುಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯ ಘಟನೆ ನೃಪಾಲ ನಿನಗೆಂದ (ಗದಾ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಡೆತನವೆಲ್ಲಿ? ಏಕಾಕಿಯಾಗಿ ಹೋಗುವುದೆಲ್ಲಿ? ಆನೆ, ಕುದುರೆ, ರಥಗಳ ಸುಖಾಸನದ ಮೇಲೆ ಮಾಡುತ್ತಿದ್ದ ಪ್ರಯಾಣವೆಲ್ಲಿ? ರಣರಂಗದಲ್ಲಿ ಕಾಲಿಂದ ನಡೆಯುತ್ತಿರುವುದೆಲ್ಲಿ? ಯುದ್ಧಾರಂಭಮಾಡಿ ಮುಂದೆ ಹೊರಟುದೇನು, ಸೋತು ಪಲಾಯನ ಮಾಡುವ ಈ ಗತಿಯೆಲ್ಲಿ? ಎಂದು ಸಂಜಯನು ದುರ್ಯೋಧನನನ್ನು ಕೇಳಿದನು.

ಅರ್ಥ:
ಎತ್ತಣ: ಎಲ್ಲಿಯ; ಏಕಾದಶ: ಹನ್ನೊಂದು; ಚಮೂಪತಿ: ಸೇನಾಧಿಪತಿ; ಏಕಾಕಿತನ: ಒಂಟಿತನ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಸುಖಾಸನ: ಸಿಂಹಾಸನ; ಅತಿಶಯ: ಹೆಚ್ಚು; ಸುಳಿವು: ಚಿಹ್ನೆ, ಗುರುತು; ಕೊಳುಗುಳ: ಯುದ್ಧ, ರಣರಂಗ; ಕಾಲ್ನಡೆ: ನಡಿಗೆ; ಆಹವ: ಯುದ್ಧ; ಅಭಿಮುಖ: ಎದುರು; ಬಳಿಕ: ನಂತರ; ಅಪಜಯ: ಸೋಲು; ವಿಧಿ: ನಿಯಮ; ಘಟನೆ: ನಡೆದದ್ದು; ನೃಪಾಲ: ರಾಜ;

ಪದವಿಂಗಡಣೆ:
ಎತ್ತಣ್+ಏಕಾದಶ +ಚಮೂಪತಿ
ಎತ್ತಣೀ+ಏಕಾಕಿತನ +ತಾನ್
ಎತ್ತ +ಗಜ+ಹಯ +ರಥ +ಸುಖಾಸನದ್+ಅತಿಶಯದ +ಸುಳಿವು
ಎತ್ತಣೀ +ಕೊಳುಗುಳದ +ಕಾಲ್ನಡೆ
ಎತ್ತಣ+ಆಹವದ್+ಅಭಿಮುಖತೆ +ಬಳಿಕ್
ಎತ್ತಣ್+ಅಪಜಯ+ವಿಧಿಯ +ಘಟನೆ +ನೃಪಾಲ +ನಿನಗೆಂದ

ಅಚ್ಚರಿ:
(೧) ಎತ್ತಣ – ಪದದ ಬಳಕೆ
(೨) ಏಕಾದಶ, ಏಕಾಕಿತನನ – ಪದಗಳ ಬಳಕೆ

ಪದ್ಯ ೨೧: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೨?

ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ
ಸುಳಿಯೆ ಕೈಗೂಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ (ಗದಾ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸುಂದರವೂ ಅತಿ ಮೃದುಯೂ ಆದ ಹಂಸತೂಲಿಕಾ ತಲ್ಪದಲ್ಲಿ ಮಲಗಿದ ನಿನ್ನ ದೇಹವು, ಮುರಿದ ಆಯುಧಗಳ ಎಲುಬುಗಳ ಮೇಲೆ ಸ್ತೋತು ಮಲಗಿತಲ್ಲವೇ? ಮುಂದೆ ಹೆಜ್ಜೆಯನ್ನಿಟ್ಟರೆ ಕೈಗೊಟ್ಟು ಕರೆದೊಯ್ಯುವ ರಾಜರು, ಅಕ್ಕಪಕ್ಕದಲ್ಲಿ ಪಾಯ, ಅವಧಾರು ಎನ್ನುತ್ತಿದ್ದವರನ್ನು ಕಳಿಸಿ ಬಂದೆಯಲ್ಲಾ, ಇದು ಸಾರ್ವಭೌಮನ ಚಿಹ್ನೆಯೇ ಸರಿ ಎಂದು ಸಂಜಯನು ದುರ್ಯೋಧನನ ಸ್ಥಿತಿಯನ್ನು ನೋಡಿ ಮರುಗಿದನು.

ಅರ್ಥ:
ಲಲಿತ: ಚೆಲುವು; ಮೃದು: ಕೋಮಲ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ತೂಳ: ಆವೇಶ, ಉನ್ಮಾದ; ಉಳಿತ: ತಂಗು, ಬಿಡು; ಕೋಮಲ: ಮೃದು; ಕಾಯ: ದೇಹ; ಕೈದು: ಆಯುಧ; ಎಲುಗ: ಮೂಳೆ; ಹಾಸು: ಹಾಸಿಗೆ, ಶಯ್ಯೆ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಮಲಗು: ನಿದ್ರಿಸು; ಸುಳಿ: ತೀಡು, ಆವರಿಸು; ಅರಸು: ರಾಜ; ಕೆಲಬಲ: ಅಕ್ಕಪಕ್ಕ, ಎಡಬಲ; ಪಾಯವಧಾರು: ಎಚ್ಚರಿಕೆ; ಕಳುಹು: ತೆರಳು; ಬಂದು: ಆಗಮಿಸು; ಸಾರ್ವಭೌಮ: ಚಕ್ರವರ್ತಿ; ಚಿಹ್ನ: ಗುರುತು;

ಪದವಿಂಗಡಣೆ:
ಲಲಿತ +ಮೃದುತರ +ಹಂಸತೂಳದಲ್
ಉಳಿತ +ಕೋಮಲ +ಕಾಯ +ಕೈದುಗಳ್
ಎಲುಗಳೊಟ್ಟಿಲ+ ಹಾಸಿನಲಿ +ಪೈಸರಿಸಿ +ಮಲಗಿತಲಾ
ಸುಳಿಯೆ +ಕೈಗೂಡುವ್+ಅರಸುಗಳ +ಕೆಲ
ಬಲದ +ಪಾಯವಧಾರಿನವರನು
ಕಳುಹಿ +ಬಂದೈ +ಸಾರ್ವಭೌಮರ+ ಚಿಹ್ನವಿದೆಯೆಂದ

ಅಚ್ಚರಿ:
(೧) ದುರ್ಯೋಧನನ ಹಿಂದಿನ ಸ್ಥಿತಿ – ಲಲಿತ ಮೃದುತರ ಹಂಸತೂಳದಲುಳಿತ ಕೋಮಲ ಕಾಯ

ಪದ್ಯ ೨೦: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು?

ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ತಂದೆ ಕುರುರಾಯ, ಬೆಳುದಿಂಗಳನ್ನೂ ತಡೆಯದ ನಿನ್ನ ಮುಡಿಯು ಈಗ ಬಿಸಿಲಿಗೊಡ್ಡಿತೇ? ಸುಗಂಧವನ್ನಾಘ್ರಾಣಿಸುವ ಮೂಗು ಹಳೆಯ ಹೆಣಗಳ ಹೊಲಸು ವಾಸನೆಯಿಂದ ಉಸುರಾಡಲು ಕಷ್ಟಪಡುತ್ತಿದೆಯೇ? ಮಧುರ ಸಂಗೀತದ ರಸವನ್ನು ಕೇಳುವ ಕಿವಿ, ಕಾಗೆ ನರಿಗಳ ಕೂಗನ್ನು ಕೇಳುವಂತಾಯಿತೇ ಎಂದು ಕೊರಗಿದನು.

ಅರ್ಥ:
ಶಶಿ: ಚಂದ್ರ; ರುಚಿ: ಸವಿ; ಸೈರಿಸು: ತಾಳು, ಸಹಿಸು; ಸಿರಿಮುಡಿ: ಶ್ರೇಷ್ಠವಾದ ಶಿರ; ಬಿಸಿಲು: ಸೂರ್ಯನ ಪ್ರಕಾಶ; ಸೆಕೆ: ಹಬೆ; ಸುಗಂಧ: ಪರಿಮಳ: ಪ್ರಸರ: ಹರಡು; ಪೂರ್ಣ: ತುಂಬ; ಘ್ರಾಣ: ಮೂಗು, ಮೂಸುವಿಕೆ; ಹಳೆ: ಹಿಂದಿನ; ಹಳೆವೆಣ: ಬಹಳ ಸಮಯವಾದ ಹೆಣ (ಜೀವವಿಲ್ಲದ ಶರೀರ); ಹೊಲಸು: ಕೊಳಕು, ಅಶುದ್ಧ; ಉಸುರು: ಜೀವ; ತೆಹವು: ತೆರವು, ಬಿಡುವು; ಸುಗೀತ: ಸುಸ್ವರವಾದ ಗಾಯನ, ಸಂಗೀತ; ರಸ: ಸಾರ; ಮಧು: ಜೇನು; ಕಿವಿ: ಕರ್ಣ; ವಾಯಸ: ಕಾಗೆ; ಸೃಗಾಅ: ನರಿ; ಧ್ವನಿ: ಶಬ್ದ; ಸೊಗಸು: ಚೆಂದ; ರಾಯ: ರಾಜ;

ಪದವಿಂಗಡಣೆ:
ಶಶಿರುಚಿಗೆ +ಸೈರಿಸದ +ಸಿರಿಮುಡಿ
ಬಿಸಿಲ +ಸೆಕೆಗಾಂತುದೆ +ಸುಗಂಧ
ಪ್ರಸರ+ಪೂರ್ಣ+ಘ್ರಾಣವೀ +ಹಳೆವೆಣನ +ಹೊಲಸಿನಲಿ
ಉಸುರುದೆಗಹಾದುದೆ +ಸುಗೀತದ
ರಸದ +ಮಧುವಿಂಗಾಂತ +ಕಿವಿ +ವಾ
ಯಸ +ಸೃಗಾಲ+ಧ್ವನಿಗೆ +ಸೊಗಸಿತೆ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ಹಿಂದಿನ ಸ್ಥಿತಿ – ಶಶಿರುಚಿಗೆ ಸೈರಿಸದ ಸಿರಿಮುಡಿ, ಸುಗಂಧ ಪ್ರಸರಪೂರ್ಣಘ್ರಾಣ, ಸುಗೀತದರಸದ ಮಧುವಿಂಗಾಂತ ಕಿವಿ

ಪದ್ಯ ೧೯: ದುರ್ಯೋಧನನು ಯಾವ ಪಾಪ ಮಾಡಿದ?

ರಣಮುಖದೊಳೇಕಾದಶಾಕ್ಷೋ
ಹಿಣೀಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಭಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ (ಗದಾ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸಂಜಯನು ದುರ್ಯೋಧನನ ಸ್ಥಿತಿಯನ್ನು ನೋಡಿ, ಹನ್ನೊಂದು ಅಕ್ಷೋಹಿಣೀ ಸೇನೆಯು ಯುದ್ಧದಲ್ಲಿ ನಾಶವಾಯಿತೇ? ಗೋತ್ರವಧೆಯಿಂದ ಕಳಂಕಿತವಾದ ಈ ಭೂಮಿಯನ್ನು ಧರ್ಮಜನು ಭೋಗಿಸಲಿ, ಭೂಮಿಯನ್ನು ಹಂಚಿಕೊಂಡು ಅನುಭವಿಸುವ ಐಶ್ವರ್ಯವನ್ನು ಧಿಕ್ಕರಿಸಿ, ದೈವದೊಡನೆ ಹೋರಾಡಿ, ಕುರುರಾಜವಂಶವೆಂಬ ಕಲ್ಪತರುವನ್ನು ಕಡಿದುಹಾಕಿದೆ ಎಂದು ಹೇಳಿದನು.

ಅರ್ಥ:
ರಣ: ಯುದ್ಧ; ಮುಖ: ಆನನ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಹರಿ: ನಾಶ; ಉಣು: ತಿನ್ನು; ಧರೆ: ಭೂಮಿ; ಗೋತ್ರ: ಕುಲ, ವಂಶ, ನಾಮಧೇಯ; ವಧ: ನಾಶ; ವಿನ್ಯಸ್ತ: ಇಟ್ಟ, ಇರಿಸಿದ; ಕಿಲ್ಬಿಷ: ಪಾಪ; ಸೆಣಸು: ಹೋರಾಡು; ದೈವ: ಭಗವಂತ; ಧಾರುಣಿ: ಭೂಮಿ; ಹುದು: ತಿರುಳು, ಸಾರ; ಸಿರಿ: ಐಶ್ವರ್ಯ; ಸೇರು: ಜೊತೆಯಾಗು; ಹಣಿ:ಬಾಗು, ಮಣಿ; ವಂಶ: ಕುಲ; ಕಲ್ಪತರು: ಬೇಡಿದುದನ್ನು ಕೊಡುವ ಸ್ವರ್ಗ ಲೋಕದ ಒಂದು ಮರ;

ಪದವಿಂಗಡಣೆ:
ರಣಮುಖದೊಳ್+ಏಕಾದಶ+ಅಕ್ಷೋ
ಹಿಣಿಗೆ+ ಹರಿವಾಯ್ತೇ +ಯುಧಿಷ್ಠಿರನ್
ಉಣಲಿ +ಧರೆಯನು +ಗೋತ್ರವಧ+ವಿನ್ಯಸ್ತ +ಕಿಲ್ಭಿಷವ
ಸೆಣಸ +ಮಾಡಿದೆ +ದೈವದಲಿ +ಧಾ
ರುಣಿಯ +ಹುದುವಿನ +ಸಿರಿಗೆ+ ಸೇರದೆ
ಹಣಿದವಾಡಿದೆ +ರಾಜವಂಶದ +ಕಲ್ಪತರು+ವನವ

ಅಚ್ಚರಿ:
(೧) ಅನುಭವಿಸಲಿ ಎಂದು ಹೇಳುವ ಪರಿ – ಯುಧಿಷ್ಠಿರನುಣಲಿ ಧರೆಯನು
(೨) ದುರ್ಯೋಧನನ ಪಾಪ – ಗೋತ್ರವಧವಿನ್ಯಸ್ತ ಕಿಲ್ಭಿಷವ ಸೆಣಸ ಮಾಡಿದೆ
(೩) ವಂಶ, ಗೋತ್ರ – ಸಮಾನಾರ್ಥಕ ಪದ