ಪದ್ಯ ೧೮: ಸಂಜಯನು ದುರ್ಯೋಧನನನ್ನು ಏನೆಂದು ಕೇಳಿದನು?

ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ (ಗದಾ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅಪ್ಪಾ, ಕುರುರಾಜ, ಸಮುದ್ರದವರೆಗೆ ಹಬ್ಬಿದ ಭೂಮಿಯಲ್ಲಿರುವ ರಾಜರಲ್ಲಿ ನೀನೊಬ್ಬನೇ ಸಾರ್ವಭೌಮ ಎಂಬ ಮಾತು ಇದೀಗ ನಿಶ್ಚಿತವಾಯಿತು. ನಿರಂತರವೂ ನಮಸ್ಕರಿಸುವ ರಾಜರ ಕಿರೀಟಗಳಿಂದ ಶೋಭಿತವಾದ ಈ ಪಾದಗಳಿಂದ ನಡೆಯಲು ಹೇಗೆ ಕಲಿತೆ? ಎಂದು ಸಂಜಯನು ದುಃಖಿಸುತ್ತಾ ಕೇಳಿದನು.

ಅರ್ಥ:
ಕಡಲು: ಸಾಗರ; ತಡಿ: ದಡ; ಪರಿಯಂತ: ಅಲ್ಲಿಯವರೆಗೂ; ರಾಯ: ರಾಜ; ಗಡಣ: ಗುಂಪು; ನುಡಿ: ಮಾತು; ನಿಶ್ಚಯ: ನಿರ್ಧಾರ; ತಂದೆ: ಒಡೆಯ, ಪಿತ; ಬಿಡು: ತೊರೆ; ಬಾಗು: ಕುಗ್ಗು, ಬಗ್ಗು, ಮಣಿ; ನೃಪ: ರಾಜ; ಮಕುಟ: ಕಿರೀಟ; ಕೋಮಲ: ಮೃದು; ಚರಣ: ಪಾದ; ನಡೆ: ಚಲಿಸು; ಕಲಿ: ಅರ್ಥೈಸು; ನೃಪ: ರಾಜ;

ಪದವಿಂಗಡಣೆ:
ಕಡಲ+ತಡಿ +ಪರಿಯಂತ +ರಾಯರ
ಗಡಣದಲಿ +ನೀನೊಬ್ಬನ್+ಎಂಬೀ
ನುಡಿಗೆ+ ನಿಶ್ಚಯವ್+ಈಗಲಾಯಿತು +ತಂದೆ +ಕುರುರಾಯ
ಬಿಡದೆ +ಬಾಗುವ +ನೃಪರ +ಮಕುಟದೊಳ್
ಇಡುವ +ಕೋಮಲ +ಚರಣವಿದರೊಳು
ನಡೆಯಲೆಂತೈ+ ಕಲಿತೆ +ಎಂದನು +ಸಂಜಯನು +ನೃಪನ

ಅಚ್ಚರಿ:
(೧) ದುರ್ಯೋಧನನ ಪಾದವನ್ನು ವರ್ಣಿಸುವ ಪರಿ – ಬಿಡದೆ ಬಾಗುವ ನೃಪರ ಮಕುಟದೊಳಿಡುವ ಕೋಮಲ ಚರಣವಿದರೊಳುನಡೆಯಲೆಂತೈ ಕಲಿತೆ

ಪದ್ಯ ೧೭: ಸಂಜಯನು ಯಾರ ಪಾದಗಳಲ್ಲಿ ಬಿದ್ದನು?

ಬಂದು ಕಂಡನು ರಾಜವನ ಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿದ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ (ಗದಾ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಸಂಜಯನು ಹೋಗಿ ರಾಜವನದ ಮಾವಿನಮರದಂತಿದ್ದ ಧೃತರಾಷ್ಟ್ರನ ಮಗನನ್ನು, ದುಷ್ಟತನದ ಬಳ್ಳಿಯು ಹುಟ್ಟುವ ಗಡ್ಡೆಯನ್ನು ಕಂಡನು. ಕೌರವನ ದುಃಸ್ಥಿತಿಯನ್ನು ಕಂಡು ಕಣ್ಣೀರಿನ ಹೊಳೆ ಹರಿಸಿ, ಸಹಿಸಿಕೊಳ್ಳಲಾಗದೆ ಕೌರವನ ಪಾದಗಳ ಮೇಲೆ ದೊಪ್ಪನೆ ಬಿದ್ದನು.

ಅರ್ಥ:
ಬಂದು: ಆಗಮಿಸು; ಕಂಡು: ನೋಡು; ರಾಜ: ನೃಪ; ವನ: ಕಾಡು; ಮಾಕಂದ: ಮಾವು; ರಾಯ: ರಾಜ; ಕಂದ: ಮಗ; ದೌರ್ಜನ್ಯ: ದುಷ್ಟತನ; ವಲ್ಲಿ: ಲತೆ, ಬಳ್ಳಿ; ವಿಪುಳ: ಬಹಳ; ಕಂದ: ಗೆಡ್ಡೆಗಳು; ವಿಲೋಚನ:ಕಣ್ಣು; ಅಂಬು: ನೀರು; ಸೈರಣೆ: ಸಮಾಧಾನ, ತಾಳ್ಮೆ, ಸಹನೆ; ಮಿಗು: ಹೆಚ್ಚಾಗು; ದೊಪ್ಪನೆ: ಒಮ್ಮಲೆ; ಕೆಡೆ: ಬೀಳು, ಕುಸಿ; ಹೊರಳು: ಉರುಳಾಡು; ಅರಸ: ರಾಜ; ಅಂಘ್ರಿ: ಪಾದ;

ಪದವಿಂಗಡಣೆ:
ಬಂದು +ಕಂಡನು+ ರಾಜವನ+ ಮಾ
ಕಂದನನು +ಧೃತರಾಷ್ಟ್ರ +ರಾಯನ
ಕಂದನನು +ದೌರ್ಜನ್ಯ+ವಲ್ಲೀ +ವಿಪುಳ+ಕಂದನನು
ಮುಂದುವರಿದ +ವಿಲೋಚನಾಂಬುಗ
ಳಿಂದ+ ಸೈರಣೆ +ಮಿಗದೆ +ಸಂಜಯ
ನಂದು+ ದೊಪ್ಪನೆ +ಕೆಡೆದು +ಹೊರಳಿದನ್+ಅರಸನ್+ಅಂಘ್ರಿಯಲಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ, ಕಂದ ಪದದ ಬಳಕೆ – ರಾಜವನ ಮಾಕಂದನನು, ಧೃತರಾಷ್ಟ್ರ ರಾಯನ ಕಂದನನು, ದೌರ್ಜನ್ಯವಲ್ಲೀ ವಿಪುಳಕಂದನನು
(೨) ರಾಜ, ಅರಸ, ರಾಯ – ಸಮಾನಾರ್ಥಕ ಪದ