ಪದ್ಯ ೧೯: ಪಾಯದಳದವರು ಹೇಗೆ ಸಿದ್ಧರಾದರು?

ತುರುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ (ದ್ರೋಣ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ತಲೆಗೂದಲನ್ನು ಗಂಟುಕಟ್ಟಿ ಒಳಕ್ಕೆ ಸೇರಿಸಿ, ಸೆರಗಿನ ಮುಂಭಾಗವನ್ನು ಸರಿಯಾಗಿಸಿ, ಸಿಕ್ಕಿಸಿ, ಸೊಂಟಕ್ಕೆ ಬಿಗಿದಿದ್ದ ಕಠಾರಿಗಳ ದಾರದ ಕುಚ್ಚನ್ನು ಸರಿಮಾಡಿಕೊಂಡು, ಅಕ್ಕಪಕ್ಕದವರನ್ನು ಜರಿದು ಎಬ್ಬಿಸಿ, ಕರ್ಪೂರ ವೀಳೆಯವನ್ನು ಸ್ವೀಕರಿಸಿ ಆಯುಧಗಳನ್ನು ತಿರುಗಿಸುತ್ತಾ ಕಾಲಾಳುಗಳು ಸಿದ್ಧರಾದರು.

ಅರ್ಥ:
ತುರುಬು: ಕೂದಲಿನ ಗಂಟು, ಮುಡಿ; ಬಲಿ: ಗಟ್ಟಿಯಾಗು; ಔಕು: ಒತ್ತು; ಮೊನೆ: ತುದಿ, ಕೊನೆ; ಮುಂಜೆರಗು: ಸೆರಗಿನ ಮುಂಭಾಗ; ಸೆಕ್ಕು: ಒಳಸೇರುವಿಕೆ, ಕುಗ್ಗುವಿಕೆ; ಸುತ್ತು: ಬಳಸು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಬಿಗಿ: ಭದ್ರವಾಗಿರುವುದು; ಕಠಾರಿ: ಬಾಕು, ಚೂರಿ, ಕತ್ತಿ; ದಾರ: ನೂಲು; ಗೊಂಡೆ: ಕುಚ್ಚು; ಕೆದರು: ಹರಡು; ಒರಗು: ಮಲಗು, ಕೆಳಕ್ಕೆ ಬಾಗು; ಎಬ್ಬಿಸು: ಏಳಿಸು; ಜರಿ:ಬಯ್ಯು, ಹಳಿ; ವೀಳೆ: ತಾಂಬೂಲ; ಕೈದು: ಆಯುಧ; ತಿರುಹು: ತಿರುಗಿಸು; ಆಯತ: ಉಚಿತವಾದ; ಪಡೆ: ಸೈನ್ಯ, ಬಲ; ಪಾಯದಳ: ಸೈನಿಕ;

ಪದವಿಂಗಡಣೆ:
ತುರುಬ +ಬಲಿದೊಳಗ್+ಔಕಿ +ಮೊನೆ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಸುತ್ತಿನೊಳ್
ಇರುಕಿ +ಬಿಗಿದ +ಕಠಾರಿ +ದಾರದ +ಗೊಂಡೆಯವ +ಕೆದರಿ
ಒರಗಿದ್+ಎಡಬಲದವರನ್+ಎಬ್ಬಿಸಿ
ಜರೆದು +ವೀಳೆಯಗೊಂಡು +ಕೈದುವ
ತಿರುಹುತ್+ಆಯತವಾಯ್ತು +ಪಡೆ+ಎರಡರಲಿ +ಪಾಯದಳ

ಅಚ್ಚರಿ:
(೧) ಒರಗಿದೆಡಬಲದವರನೆಬ್ಬಿಸಿ – ಒಂದೇ ಪದವಾಗಿ ರಚನೆ

ನಿಮ್ಮ ಟಿಪ್ಪಣಿ ಬರೆಯಿರಿ