ಪದ್ಯ ೧೧: ರಥಿಕರು ನಿದ್ರೆಯಲ್ಲಿ ಏನನ್ನು ಕನವರಿಸುತ್ತಿದ್ದರು?

ಕಲಹವೆನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ (ದ್ರೋಣ ಪರ್ವ, ೧೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳ ರಥಿಕರು ಮಲಗಿ ಕನಸಿನಲ್ಲಿ ಯುದ್ಧಮಾಡುತ್ತಾ, ಬೇಗ, ಬೇಗ ಭಲೇ ಸಾರಥಿ ಜಾಗು ಎನ್ನುತ್ತಿದ್ದರು. ಓಡದಿರಿ, ವಿಅರಿಯು ಮಾಂಸವನ್ನು ತಿನ್ನು ರಕ್ತವನ್ನು ಸುರಿದುಕೋ ಎನ್ನುತ್ತಾ ಜೋರಾಗಿ ಕನವರಿಸುತ್ತಿದ್ದರು.

ಅರ್ಥ:
ಕಲಹ: ಯುದ್ಧ; ಕನಸು: ಸ್ವಪ್ನ; ಕಂಡು: ನೋಡು; ಅವ್ವಳಿಸು: ಆರ್ಭಟಿಸು; ಹಳು:ಹಗುರವಾದುದು; ಪೂತು: ಭಲೆ; ಸಾರಥಿ: ಸೂತ; ಜಾಗು: ಎಚ್ಚರ; ತಡಮಾಡು; ಮಹಾರಥ: ಪರಾಕ್ರಮಿ; ತೊಲಗು: ದೂರ ಸರಿ; ಅಹಿ: ವೈರಿ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಮೇಲಿನಿಂದ ಬೀಳು; ಕಳವಳ: ಗೊಂದಲ; ವೀರ: ಶೂರ; ಒಡ್ಡು: ರಾಶಿ, ಸಮೂಹ; ರಭಸ: ವೇಗ;

ಪದವಿಂಗಡಣೆ:
ಕಲಹವೆನು +ಕನಸಿನಲಿ +ಕಂಡ್
ಅವ್ವಳಿಸಿ +ಹಳುಹಳು +ಪೂತು +ಸಾರಥಿ
ಭಲರೆ+ ಸಾರಥಿ+ ಜಾಗುರೆನುತಿರ್ದುದು +ಮಹಾರಥರು
ತೊಲಗದಿರಿ+ ತಿನ್ನಡಗನ್+ಅಹಿತನ
ತಿಳಿ+ರಕುತವನು +ಸುರಿಯೆನುತ +ಕಳ
ವಳಿಸುತಿರ್ದರು +ವೀರರ್+ಎರಡ್+ಒಡ್ಡಿನಲಿ +ರಭಸದಲಿ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಹವೆನು ಕನಸಿನಲಿ ಕಂಡವ್ವಳಿಸಿ
(೨) ತ ಕಾರದ ತ್ರಿವಳಿ ಪದ – ತೊಲಗದಿರಿ ತಿನ್ನಡಗನಹಿತನ ತಿಳಿರಕುತವನು

ಪದ್ಯ ೧೦: ಮಾವುತರು ಎಲ್ಲಿ ನಿದ್ರಿಸಿದರು?

ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು (ದ್ರೋಣ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪ್ರೀತಿಯ ಪತ್ನಿಯೊಡನೆ ಮನ್ಮಥ ಕಲಹದಲ್ಲಿ ಬೆಂಡಾಗಿರುವ ಪತಿಯು ಕಳಶ ಕುಚಗಳ ಮಧ್ಯದಲ್ಲಿ ತಲೆಯಿಟ್ಟು ಮಲಗುವಂತೆ, ಯುದ್ಧ ಶ್ರಮದಿಂದ ಬೆಂಡಾದ ಮಾವುತರು ಆನೆಗಳ ಕುಂಭ ಸ್ಥಳಗಳ ಮೇಲೆ ಮಲಗೆ ಕಣ್ಣು ಮುಚ್ಚಿ ನಿದ್ರಿಸಿದರು.

ಅರ್ಥ:
ಒಲಿದ: ಪ್ರೀತಿಯ; ಕಾಂತೆ: ಪ್ರಿಯತಮೆ; ಕೂಡು: ಜೊತೆ; ಮನುಮಥ: ಮನ್ಮಥ, ಕಾಮದೇವ; ಕಲಹ: ಜಗಳ; ಬೆಂಡು: ತಿರುಳಿಲ್ಲದುದು; ಕಾಂತ: ಪ್ರಿಯತಮ; ಕಳಶ: ಕೊಡ; ಕುಚ: ಮೊಲೆ, ಸ್ತನ; ಮಧ್ಯ: ನಡುವೆ; ಮಲಗು: ನಿದ್ರಿಸು; ರಜನಿ: ರಾತ್ರಿ; ಸಮರ: ಯುದ್ಧ; ಶ್ರಮ: ದಣಿವು; ವೆಗ್ಗಳ: ಶ್ರೇಷ್ಠ; ಗಜ: ಆನೆ; ಗಜರೋಹಕ: ಮಾವುತ; ಕುಂಭ: ಕೊಡ, ಕಲಶ; ಸ್ಥಳ: ಜಾಗ; ಒರಗು: ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ನಿದ್ರೆ: ಶಯನ; ಈಕ್ಷಣ: ಕಣ್ಣು, ನೋಟ; ಮುದ್ರಿತ: ಗುರುತು;

ಪದವಿಂಗಡಣೆ:
ಒಲಿದ +ಕಾಂತೆಯ +ಕೂಡೆ +ಮನುಮಥ
ಕಲಹದಲಿ +ಬೆಂಡಾದ +ಕಾಂತನು
ಕಳಶ+ಕುಚ +ಮಧ್ಯದಲಿ+ ಮಲಗುವವೋಲು +ರಜನಿಯಲಿ
ಒಲಿದ +ಸಮರ+ಶ್ರಮದಲ್+ಅತಿ+ವೆ
ಗ್ಗಳ+ ಗಜರೋಹಕರು+ ಕುಂಭ
ಸ್ಥಳದ +ಮೇಲೊರಗಿದರು +ನಿದ್ರಾ +ಮುದ್ರಿತ+ಈಕ್ಷಣರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಲಿದ ಕಾಂತೆಯ ಕೂಡೆ ಮನುಮಥ ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು

ಪದ್ಯ ೯: ಕುದುರೆಗಳು ಹೇಗೆ ಮಲಗಿದ್ದವು?

ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ (ದ್ರೋಣ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಾಯಿಂದ ನೊರೆಯಿಳಿಯುತ್ತಿರಲು, ಮೈ ಬೆಂಡಾಗಿ ತುದಿಗೊರಸನ್ನೂರಿ ಕಣ್ಣನ್ನು ಅರೆತೆರೆದು ಲಾಯದಲ್ಲಿ ಮಲಗಿದಂತೆ ಕುದುರೆಗಳ ಸಾಲು ಮಲಗಿತ್ತು. ರಾವುತರ ಕಿರೀಟಗಳು ಮರಗೋಡಿನ ಮೇಲಿದ್ದವು.

ಅರ್ಥ:
ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಇಳಿ: ಕೆಳಕ್ಕೆ ಬೀಳು; ಮೈ: ತನು; ಹಳುವ: ಕಾಡು; ಮಿಗೆ: ಅಧಿಕ; ತುದಿ: ಕೊನೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಊರು: ಮೆಟ್ಟು; ನವಾಯಿ: ಹೊಸರೀತಿ, ಠೀವಿ; ಮಿಗಲು: ಹೆಚ್ಚು; ಅರೆ: ಅರ್ಧ; ನೋಟ: ದೃಷ್ಥಿ; ಆಲಿ: ಕಣ್ಣು; ಮಿಡುಕು: ಅಲುಗಾಟ, ಚಲನೆ; ಲಾಯ: ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ಲಂಬಿಸು: ತೂಗಾಡು, ಜೋಲಾಡು; ವಾನಾಯುಜ: ಕುದುರೆ; ಸಾಲು: ಆವಳಿ; ಒರಗು: ಮಲಗು, ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಮರಗೋಡು: ಕುದುರೆಯ ನೆತ್ತಿಗೆ ಕಟ್ಟಿದ ಲೋಹದ ರಕ್ಷೆ; ಓಲೈಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಾಯ +ಲೋಳೆಗಳ್+ಇಳಿಯೆ +ಮೈಹಳು
ವಾಯಿ +ಮಿಗೆ +ತುದಿ +ಖುರವನ್+ಊರಿ +ನ
ವಾಯಿ +ಮಿಗಲ್+ಅರೆನೋಟದ್+ಆಲಿಯ +ಮಿಡುಕದವಿಲಣದ
ಲಾಯದಲಿ +ಲಂಬಿಸಿದವೊಲು+ ವಾ
ನಾಯುಜದ +ಸಾಲೆಸೆದುದ್+ಒರಗಿದ
ರಾಯ +ರಾವ್ತರ+ ಮಣಿಮಕುಟ+ ಮರಗೋಡನ್+ಓಲೈಸೆ

ಅಚ್ಚರಿ:

(೧) ವಾನಾಯುಜ – ಕುದುರೆಗಳನ್ನು ಕರೆದ ಪರಿ
(೨) ಲಾಯ, ಬಾಯ, ರಾಯ – ಪ್ರಾಸ ಪದಗಳು
(೩) ಕುದುರೆಗಳು ಮಲಗಿದ ಪರಿ – ವಾನಾಯುಜದ ಸಾಲೆಸೆದುದೊರಗಿದ ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ

ಪದ್ಯ ೮: ಆನೆಗಳು ಹೇಗೆ ಮಲಗಿದವು?

ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಫೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ (ದ್ರೋಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಮೈಯನ್ನು ಅತ್ತಿತ್ತ ತೂಗಾಡಿ, ಸೊಂಡಿಲನ್ನು ದಾಡೆಗಳಲ್ಲಿಟ್ಟು, ಮೂಗಿನಿಂದ ಫೂತ್ಕಾರ ಮಾಡುತ್ತಾ, ಕಿವಿಗಳು ಜೋಲು ಬಿದ್ದಿರಲು, ಕಣ್ಣುಗಳಲ್ಲಿ ನಿದ್ರಾರಸವನ್ನು ಸೂಸುತ್ತಾ, ಎರಡು ಗಲ್ಲಗಳಲ್ಲೂ ಮದಜಲಕ್ಕೆ ಮುತ್ತಿದ ದುಂಬಿಗಳ ಝೇಂಕಾರ ತುಂಬಿರಲು ಆನೆಗಳು ಸಾಲು ಸಾಲಾಗಿ ಮಲಗಿದವು.

ಅರ್ಥ:
ಒಲೆ: ತೂಗಾಡು; ಒಡಲು: ದೇಹ; ಮುರಿ: ಸೀಳು; ಬರಿ: ಕೇವಲ; ಕೈ: ಹಸ್ತ; ದಾಡೆ: ದವಡೆ, ಒಸಡು; ಫೂತ್ಕೃತಿ: ಆರ್ಭಟ; ಬಲಿ: ಗಟ್ಟಿಯಾಗು; ನಾಸಾಪುಟ: ಮೂಗು; ಜೋಲು: ಕೆಳಕ್ಕೆ ಬೀಳು, ನೇತಾಡು; ಕರ್ಣ: ಕಿವಿ; ಪಲ್ಲವ: ಚಿಗುರು; ಕರ್ಣಪಲ್ಲವ: ಚಿಗುರಿನಂತೆ ಮೃದುವಾದ ಕಿವಿ; ತಳಿತ: ಚಿಗುರು; ನಿದ್ರೆ: ಶಯನ; ರಸ: ಸಾರ; ಮುಕ್ಕುಳಿಸು: ಬಾಯಿ ತೊಳೆದುಕೋ; ಅಕ್ಷಿ: ಕಣ್ಣು; ಗಲ್ಲ: ಕೆನ್ನ; ಉಲಿವು: ಶಬ್ದ; ತುಂಬಿ: ಭ್ರಮರ; ರವ: ಶಬ್ದ; ದಂತಿ: ಆನೆ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಒಲೆದ+ ಒಡಲನು +ಮುರಿದು +ಬರಿಕೈ
ಗಳನು +ದಾಡೆಯೊಳ್+ಇಟ್ಟು +ಫೂತ್ಕೃತಿ
ಬಲಿದ +ನಾಸಾಪುಟದ+ ಜೋಲಿದ +ಕರ್ಣ+ಪಲ್ಲವದ
ತಳಿತ +ನಿದ್ರಾರಸವನ್+ಅರೆ +ಮು
ಕ್ಕುಳಿಸಿದ್+ಅಕ್ಷಿಯೊಳ್+ಎರಡು+ ಗಲ್ಲದಲ್
ಉಲಿವ +ತುಂಬಿಯ +ರವದ +ದಂತಿಗಳ್+ಎಸೆದವ್+ಒಗ್ಗಿನಲಿ

ಅಚ್ಚರಿ:
(೧) ನಾಸಾಪುಟ, ದಾಡೆ, ಒಡಲು, ಕರ್ಣ, ಅಕ್ಷಿ – ದೇಹದ ಅಂಗಗಳನ್ನು ಬಳಸಿದ ಪರಿ

ಪದ್ಯ ೭: ಸೈನಿಕರು ಹೇಗೆ ನಿದ್ರೆಗೆ ಜಾರಿದರು?

ನರನ ಮಾತಿಂ ಮುನ್ನ ನಿದ್ರಾ
ಭರದ ಭಾರಿಯ ಹೊರೆಯ ಭಟರಿ
ತ್ತರದಲೊಲೆದರು ಸಡಿಲಿದವು ಕೈದುಗಳು ಕರಗಳಲಿ
ನೆರೆದುಸುರ ವೈಹಾಳಿಗಳ ನಿ
ಬ್ಬರದ ಮೊರಹಿನ ಮುರಿದಗೋಣಿನ
ಕರದ ತಲೆಗಿಂಬುಗಳ ಕಾಲಾಳೊರಗಿತವನಿಯಲಿ (ದ್ರೋಣ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಗಿಸುವ ಮೊದಲೇ ನಿದ್ರೆಯ ಭಾರದಿಂದ ಭಟರು ಅತ್ತಿತ್ತ ತೂಗಾಡಿದರು. ಕೈಯಲ್ಲಿದ್ದ ಆಯುಧಗಳು ಸಡಲಿ ಬಿದ್ದವು. ಗೊರಕೆಗಳು ಎಲ್ಲೆಲ್ಲೂ ಕೇಳಿದವು. ಕಾಲಾಳುಗಳು ತೋಳನ್ನೇ ತಲೆದಿಂಬಾಗಿ ಮಾಡಿಕೊಂಡು ಭೂಮಿಯ ಮೇಲೆ ಮಲಗಿದರು.

ಅರ್ಥ:
ನರ: ಅರ್ಜುನ; ಮಾತು: ನುಡಿ; ಮುನ್ನ: ಮೊದಲು; ನಿದ್ರೆ: ಶಯನ; ಭರ: ವೇಗ; ಭಾರಿ: ಗಟ್ಟಿ, ದೊಡ್ಡ; ಹೊರೆ: ಭಾರ; ಭಟ: ಸೈನಿಕ; ಒಲೆ: ತೂಗಾಡು; ಸಡಲಿಸು: ಕಳಚು; ಕೈದು: ಆಯುಧ; ಕರ: ಕೈ, ಹಸ್ತ; ನೆರೆ: ಗುಂಪು; ಉಸುರು: ಪ್ರಾಣ; ವೈಹಾಳಿ: ಸಂಚಾರ, ವಿಹಾರ; ನಿಬ್ಬರ: ಅತಿಶಯ, ಹೆಚ್ಚಳ; ಮೊರಹು: ಝೇಂಕಾರ; ಮುರಿ: ಸೀಳು; ಇಂಬು: ಆಶ್ರಯ; ಕರ: ಕೈ, ಹಸ್ತ; ತಲೆ: ಶಿರ; ಕಾಲಾಳು: ಸೈನಿಕ; ಒರಗು: ಮಲಗು, ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ಅವನಿ: ಭೂಮಿ;

ಪದವಿಂಗಡಣೆ:
ನರನ +ಮಾತಿಂ +ಮುನ್ನ +ನಿದ್ರಾ
ಭರದ +ಭಾರಿಯ +ಹೊರೆಯ +ಭಟರ್
ಇತ್ತರದಲ್+ಒಲೆದರು +ಸಡಿಲಿದವು +ಕೈದುಗಳು +ಕರಗಳಲಿ
ನೆರೆದ್+ಉಸುರ +ವೈಹಾಳಿಗಳ +ನಿ
ಬ್ಬರದ +ಮೊರಹಿನ +ಮುರಿದ+ಗೋಣಿನ
ಕರದ +ತಲೆಗ್+ಇಂಬುಗಳ +ಕಾಲಾಳ್+ಒರಗಿತ್+ಅವನಿಯಲಿ

ಅಚ್ಚರಿ:
(೧) ಮಲಗಿದ ಪರಿ – ಮುರಿದಗೋಣಿನ ಕರದ ತಲೆಗಿಂಬುಗಳ ಕಾಲಾಳೊರಗಿತವನಿಯಲಿ
(೨) ನಿದ್ರೆಯ ಸ್ಥಿತಿಯನ್ನು ವರ್ಣಿಸುವ ಪರಿ – ಭಟರಿತ್ತರದಲೊಲೆದರು ಸಡಿಲಿದವು ಕೈದುಗಳು ಕರಗಳಲಿ