ಪದ್ಯ ೪೧: ಘಟೋತ್ಕಚನು ಕರ್ಣನ ಮೇಲೆ ಯಾವ ಆಯುಧವನ್ನು ಬಿಟ್ಟನು?

ದರಿಗಳೊಳು ದರ್ವೀಕರಾವಳಿ
ಯುರವಣಿಸಿದರೆ ಬಲ್ಲುದೇ ಕುಲ
ಗಿರಿ ಮಹಾದೇವಾವ ಸತ್ವವೊ ದಾನವೇಶ್ವರಗೆ
ಅರಿಯ ಶರಹತಿಗೊಡಲು ನೆರೆ ಜ
ಜ್ಝರಿತವಾಗಲು ನೊಂದುದಿಲ್ಲ
ಬ್ಬರಿಸಿ ಪರಿಘದಲಿಟ್ಟನಂಬುಜಬಂಧುನಂದನನ (ದ್ರೋಣ ಪರ್ವ, ೧೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕೊಳ್ಳಗಳ್ಳಲ್ಲಿ ಹಾವುಗಳು ಬಂದರೆ ಕುಲಗಿರಿಗೆ ಅದು ತಿಳಿದೀತೇ? ಕರ್ಣನ ಬಾಣಗಳಿಂದ ದೇಹವು ಜಜ್ಝರಿತವಾದರೂ ದೈತ್ಯನಿಗೆ ನೋವಾಗಲಿಲ್ಲ. ಅವನು ಗರ್ಜಿಸಿ ಗದೆಯನ್ನು ಕರ್ಣನ ಮೇಲೆ ಬಿಟ್ಟನು.

ಅರ್ಥ:
ದರಿ: ಆಳ, ರಸಾತಳ, ಹಳ್ಳ; ದರ್ವೀಕರ: ಹಾವು; ಆವಳಿ: ಸಾಲು, ಗುಂಪು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬಲ್ಲ: ತಿಳಿ; ಕುಲಗಿರಿ: ದೊಡ್ಡ ಬೆಟ್ಟ; ಸತ್ವ: ಸಾರ; ದಾನವ: ರಾಕ್ಷಸ; ಅರಿ: ತಿಳಿ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಕೊಡು: ನೀಡು; ನೆರೆ: ಗುಂಪು; ಜಜ್ಝರಿತ: ಪರಾಕ್ರಮಿ, ಶೂರ; ನೊಂದು: ಪೆಟ್ಟು; ಅಬ್ಬರಿಸು: ಆರ್ಭಟಿಸು; ಪರಿಘ: ಗದೆ; ಅಂಬುಜ: ತಾವರೆ; ಬಂಧು: ಸಂಬಂಧಿಕ; ನಂದನ: ಮಗ;

ಪದವಿಂಗಡಣೆ:
ದರಿಗಳೊಳು +ದರ್ವೀಕರಾವಳಿ
ಯುರವಣಿಸಿದರೆ +ಬಲ್ಲುದೇ +ಕುಲ
ಗಿರಿ +ಮಹಾದೇವ+ಆವ+ ಸತ್ವವೊ +ದಾನವೇಶ್ವರಗೆ
ಅರಿಯ +ಶರಹತಿಗ್+ಒಡಲು +ನೆರೆ +ಜ
ಜ್ಝರಿತವಾಗಲು +ನೊಂದುದಿಲ್ಲ್
ಅಬ್ಬರಿಸಿ +ಪರಿಘದಲಿಟ್ಟನ್+ಅಂಬುಜಬಂಧುನಂದನನ

ಅಚ್ಚರಿ:
(೧) ಕರ್ಣನನ್ನು ಅಂಬುಜಬಂಧುನಂದನ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ದರಿಗಳೊಳು ದರ್ವೀಕರಾವಳಿಯುರವಣಿಸಿದರೆ ಬಲ್ಲುದೇ ಕುಲಗಿರಿ

ಪದ್ಯ ೪೦: ಘಟೋತ್ಕಚನ ಎದೆಯಲ್ಲಿ ಎಷ್ಟು ಬಾಣಗಳು ನಾಟಿದವು?

ಹೊಗರುಗಿಡಿಗಳ ಬಾಯಿಧಾರೆಯ
ಲೊಗೆವ ಹೊಗೆಗಳ ಹೊದರಿನುರಿ ಜಾ
ಳಿಗೆಯ ಭೋಂಕಾರದ ಭಯಂಕರ ಶೂಲವೈತರಲು
ನಗುತ ಮೂರಂಬಿನಲಿ ಕೈದುವ
ತೆಗೆಸಿದನು ನೆರೆ ಹತ್ತು ಶರವನು
ಹಗೆಯ ಹೇರುರದೊಳಗೆ ಹೂಳಿದು ಕರ್ಣ ಬೊಬ್ಬಿರಿದ (ದ್ರೋಣ ಪರ್ವ, ೧೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಿಡಿಗಳ ಗುಂಪು, ಹೊಗೆ, ಉರಿಜಾಳಿಗೆಗಳನ್ನುಗುಳುತ್ತಾ ಭೋಂಕಾರಮಾಡುತ್ತಾ ಭಯಂಕರ ಶೂಲವು ಬರಲು, ಕರ್ಣನು ನಗುತ್ತಾ ಮೂರು ಬಾಣಗಳಿಂದ ಅದನ್ನು ತುಂಡುಮಾಡಿ ಹತ್ತು ಬಾಣಗಳನ್ನು ದೈತ್ಯನ ವಿಶಾಲವಾದ ಎದೆಯಲ್ಲಿ ಹೂಳಿದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಕಿಡಿ: ಬೆಂಕಿ; ಧಾರೆ: ಮಳೆ; ಒಗೆ: ಹುಟ್ಟು, ಎಸೆ; ಹೊಗೆ: ಧೂಮ; ಹೊದರು: ತೊಡಕು, ತೊಂದರೆ; ಉರಿ: ಬೆಂಕಿ; ಜಾಳಿಗೆ: ಬಲೆ, ಜಾಲ; ಭೋಂಕಾರ: ಶಬ್ದವನ್ನು ಸೂಚಿಸುವ ಪದ; ಭಯಂಕರ: ಹೆದರಿಕೆಯನ್ನುಂಟು ಮಾಡುವಂತಹುದು; ಶೂಲ: ತ್ರಿಶೂಲ, ಆಯುಧ; ಐತರು: ಬಂದು ಸೇರು; ನಗು: ಹರ್ಷ; ಅಂಬು: ಬಾಣ; ಕೈದು: ಆಯುಧ; ತೆಗೆಸು: ಹೊರತರು; ನೆರೆ: ಗುಂಪು; ಶರ: ಬಾಣ; ಹಗೆ: ವೈರಿ; ಹೇರು: ಹೊರೆ, ಭಾರ; ಹೂಳು: ಹೂತು ಹಾಕು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಹೊಗರು+ಕಿಡಿಗಳ +ಬಾಯಿ+ಧಾರೆಯಲ್
ಒಗೆವ +ಹೊಗೆಗಳ +ಹೊದರಿನ್+ಉರಿ +ಜಾ
ಳಿಗೆಯ +ಭೋಂಕಾರದ +ಭಯಂಕರ ಶೂಲವೈತರಲು
ನಗುತ +ಮೂರಂಬಿನಲಿ +ಕೈದುವ
ತೆಗೆಸಿದನು +ನೆರೆ +ಹತ್ತು +ಶರವನು
ಹಗೆಯ +ಹೇರುರದೊಳಗೆ+ ಹೂಳಿದು +ಕರ್ಣ +ಬೊಬ್ಬಿರಿದ

ಅಚ್ಚರಿ:
(೧) ಹೊಗರು, ಹೊಗೆ, ಹೊದರಿ, ಹೂಲಿದು, ಹೇರು, ಹಗೆ – ಹ ಕಾರದ ಪದಗಳು

ಪದ್ಯ ೩೯: ಕರ್ಣ ಘಟೋತ್ಕಚರ ಯುದ್ಧವು ಹೇಗೆ ನಡೆಯಿತು?

ಎರಡು ಬಲವಿವರಿಬ್ಬರಾಹವ
ದುರವಣೆಯನೇ ನೋಡುತಿರ್ದುದು
ಸರಿಮಿಗಿಲ ಕಾದಿದರು ಶಿವ ಶಿವ ಭಾರಿಯಂಕದಲಿ
ಸರಳು ತೀರಲು ತೀರದಸುರನ
ಕೆರಳಿದುರಿ ಕುಡಿಯಿಟ್ಟುದಿವನ
ಬ್ಬರನೆ ಕೆಡೆಬೀಳೆನುತ ಶೂಲದಲಿಟ್ಟನಿನಸುತನ (ದ್ರೋಣ ಪರ್ವ, ೧೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಇಬ್ಬರ ಕಾಳಗವನ್ನು ಎರಡು ಸೈನ್ಯಗಳು ನಿಂತು ನೋಡುತ್ತಿದವು. ಮಹಾಯುದ್ಧದಲ್ಲಿ ಸರಿ ಮಿಗಿಲಾಗಿ ಇಬ್ಬರೂ ಹೋರಾಡಿದರು. ಬಾಣಗಳೆಲ್ಲ ಮುಗಿದರೂ ದೈತ್ಯನ ಕೋಪದ ಉರಿ ಕಡಿಮೆಯಾಗದೇ ಉಜ್ವಲವಾಯಿತು. ಬೀಳು, ಎಂದಬ್ಬರಿಸಿ ಶೂಲವನ್ನು ಕರ್ಣನು ಮೇಲೆಸೆದನು.

ಅರ್ಥ:
ಬಲ: ಸೈನ್ಯ; ಆಹವ: ಯುದ್ಧ; ಉರವಣೆ: ಹೆಚ್ಚು, ಅಧಿಕ; ನೋಡು: ವೀಕ್ಷಿಸು; ಸರಿಮಿಗಿಲು: ಒಬ್ಬ ವ್ಯಕ್ತಿಗಿಂತ ಮತ್ತೊಬ್ಬ ವ್ಯಕ್ತಿ ಮೇಲಾಗಿರುವುದು, ಅತಿಶಯ; ಕಾದು: ಹೋರಾಡು; ಭಾರಿ: ಅತಿಶಯವಾದ; ಅಂಕ: ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಸರಳು: ಬಾಣ; ತೀರಲು: ಮುಗಿಯಲು; ಅಸುರ: ರಾಕ್ಷಸ; ಕೆರಳು: ರೇಗು, ಕನಲು; ಉರಿ: ಬೆಂಕಿ; ಕುಡಿ: ಪಾನಮಾದು; ಅಬ್ಬರ: ಆರ್ಭಟ; ಕೆಡೆ: ಬೀಳು, ಕುಸಿ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಇನಸುತ: ಸೂರ್ಯನ ಮಗ;

ಪದವಿಂಗಡಣೆ:
ಎರಡು +ಬಲವ್+ಇವರಿಬ್ಬರ+ಆಹವದ್
ಉರವಣೆಯನೇ+ ನೋಡುತಿರ್ದುದು
ಸರಿಮಿಗಿಲ +ಕಾದಿದರು +ಶಿವ +ಶಿವ +ಭಾರಿ+ಅಂಕದಲಿ
ಸರಳು +ತೀರಲು +ತೀರದ್+ಅಸುರನ
ಕೆರಳಿದ್+ಉರಿ +ಕುಡಿಯಿಟ್ಟುದ್+ಇವನ್
ಅಬ್ಬರನೆ +ಕೆಡೆ+ಬೀಳೆನುತ +ಶೂಲದಲಿಟ್ಟನ್+ಇನ+ಸುತನ

ಅಚ್ಚರಿ:
(೧) ಇಬ್ಬರ ಯುದ್ಧವನ್ನು ವರ್ಣಿಸುವ ಪರಿ – ಸರಿಮಿಗಿಲ ಕಾದಿದರು ಶಿವ ಶಿವ ಭಾರಿಯಂಕದಲಿ

ಪದ್ಯ ೩೮: ಘಟೋತ್ಕಚನ ಮುಂದೆ ಯಾರು ನಿಲ್ಲಬಲ್ಲರು?

ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆರಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಮುಂದೆ ನಿಂತರೆ ಕರ್ಣನೇ ನಿಲ್ಲಬೇಕು. ಶಿವ ಶಿವಾ, ಕರ್ಣನ ದಾಳಿಯನ್ನು ಸೈರಿಸಿ ನಿಲ್ಲಲು ಘಟೋತ್ಕಚನಿಗೆ ಮಾತ್ರ ಸಾಧ್ಯ, ಉಳಿದ ಮಹಾವೀರರೆನ್ನಿಸಿಕೊಳ್ಳುವವರು ಕೇವಲ ಶಕ್ತಿದರಿದ್ರರು, ವೀರರೆನ್ನಿಸಿಕೊಳ್ಳುವುದಕ್ಕೆ ಅನರ್ಹರು. ಇವರಿಗೆ ಸರಿಯಾದವರು ಉಭಯ ಸೈನ್ಯಗಳಲ್ಲೂ ಇಲ್ಲ.

ಅರ್ಥ:
ನಿಲುವು: ನಿಲ್ಲು; ಅಡ್: ಅಡ್ಡ, ನಡುವೆ; ಅಸುರ: ರಾಕ್ಷಸ; ಮುಂದೆ: ಎದುರು; ಬೇಹುದು: ಬೇಕು; ಉರುಬೆ: ಅಬ್ಬರ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ಒಪ್ಪು: ಒಪ್ಪಿಗೆ, ಸಮ್ಮತಿ; ಉಳಿದ: ಮಿಕ್ಕ; ಭೂರಿ: ಹೆಚ್ಚಾದ, ಅಧಿಕವಾದ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ; ವೆಗ್ಗಳೆ: ಶ್ರೇಷ್ಠ; ಬಲ: ಸೈನ್ಯ; ಅರಿ: ವೈರಿ;

ಪದವಿಂಗಡಣೆ:
ನಿಲುವಡ್+ಅಸುರನ +ಮುಂದೆ +ಕರ್ಣನೆ
ನಿಲಲು +ಬೇಹುದು +ಕರ್ಣನ್+ಉರುಬೆಗೆ
ನಿಲುವಡ್+ಈ+ ಅಮರಾರಿಗ್+ಒಪ್ಪುವುದೈ +ಮಹಾದೇವ
ಉಳಿದ +ಭೂರಿಯ+ ಬಣಗುಗಳು+ ವೆ
ಗ್ಗಳೆಯವೆರಸರಿಗೆ +ನೋಂತರೇ+ ಕುರು
ಬಲದೊಳ್+ಅರಿಬಲದೊಳಗೆ +ಸರಿಯಿನ್ನಿವರಿಗಿಲ್ಲೆಂದ

ಅಚ್ಚರಿ:
(೧) ಕುರುಬಲ, ಅರಿಬಲ – ಬಲ ಪದದ ಬಳಕೆ
(೨) ನಿಲುವಡ್, ನಿಲಲು – ೧-೩ ಸಾಲಿನ ಮೊದಲ ಪದಗಳು

ಪದ್ಯ ೩೭: ದೇವತೆಗಳು ಘಟೋತ್ಕಚನನ್ನು ಹೇಗೆ ಹೊಗಳಿದರು?

ತಾರಕನ ಕೈಟಭನ ಮಹಿಷನ
ವೀರ ಜಂಭನ ಕಾಲನೇಮಿಯ
ತಾರಕಾಕ್ಷನ ಕುಂಭಕರ್ಣನ ಮುರ ಗುಹಾಸುರನ
ಆರುಭಟೆ ರಣದುಬ್ಬಟೆಯ ಜ
ಜ್ಝಾರತನವಿವನೊಬ್ಬನಲಿ ಕೈ
ವಾರವೇ ನೆರೆ ಕಾಣಲಾಯ್ತೆಂದುದು ಸುರಸ್ತೋಮ (ದ್ರೋಣ ಪರ್ವ, ೧೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ತಾರಕ, ಕೈಟಭ, ಮಹಿಷ, ಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರರ ಆರ್ಭಟವು ಇವನೊಬ್ಬನಲ್ಲೀ ಸೇರಿಕೊಂಡಿವೆ. ಇಲ್ಲಿಯೇ ಕಾಣುವಂತಾಯಿತು ಎಂದು ದೇವತೆಗಳು ಹೊಗಳಿದರು.

ಅರ್ಥ:
ವೀರ: ಪರಾಕ್ರಮಿ; ಆರುಭಟೆ: ಗರ್ಜನೆ; ರಣ: ಯುದ್ಧ; ಉಬ್ಬಟೆ: ಅಧಿಕ; ಜಜ್ಝಾರ: ಪರಾಕ್ರಮಿ, ಶೂರ; ಕೈವಾರ: ಕೊಂಡಾಟ; ನೆರೆ: ಗುಂಪು; ಕಾಣು: ತೋರು; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ತಾರಕನ +ಕೈಟಭನ +ಮಹಿಷನ
ವೀರ +ಜಂಭನ +ಕಾಲನೇಮಿಯ
ತಾರಕಾಕ್ಷನ+ ಕುಂಭಕರ್ಣನ +ಮುರ +ಗುಹಾಸುರನ
ಆರುಭಟೆ +ರಣದುಬ್ಬಟೆಯ+ ಜ
ಜ್ಝಾರತನವ್+ಇವನೊಬ್ಬನಲಿ +ಕೈ
ವಾರವೇ +ನೆರೆ +ಕಾಣಲಾಯ್ತೆಂದುದು +ಸುರಸ್ತೋಮ

ಅಚ್ಚರಿ:
(೧) ರಾಕ್ಷಸರ ಹೆಸರು – ತಾರಕ, ಕೈಟಭ, ಮಹಿಷ, ಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರ

ಪದ್ಯ ೩೬: ಕರ್ಣ ಘಟೋತ್ಕಚರ ಯುದ್ಧ ಹೇಗೆ ನಡೆಯಿತು?

ಹಾರಿದವು ಗರಿಸಹಿತ ದೇಹವ
ಡೋರುಗಳೆದಂಬುಗಳು ನೆತ್ತರ
ಜೋರು ಮಸಗಿತು ಕೂಡೆ ಜಾಜಿನ ಗಿರಿಯರೌಕುಳದ
ಏರಬಾಯ್ಗಳ ತಳಿತಖಂಡದ
ಸೂರೆಗೊಂಡವು ಹಿಂದಣಂಬುಗ
ಳಾರೆನಭಿವರ್ಣಿಸಲು ಕರ್ಣಘಟೋತ್ಕಚಾಹವವ (ದ್ರೋಣ ಪರ್ವ, ೧೬ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆ ಬಾಣಗಳು ಗರಿಸಮೇತವಾಗಿ ಘಟೋತ್ಕಾನ ದೇಹದಲ್ಲಿ ಹೊಕ್ಕವು. ರಕ್ತವು ಹರಿದು ಅವನು ಕೆಂಪಾದ ಬೆಟ್ಟದಂತೆ ಕಾಣಿಸಿಕೊಂಡನು. ಗಾಯದ ಬಾಯಿಂದ ಹೊರಹೊಮ್ಮಿದ ಮಾಂಸಖಂಡಗಳನ್ನು ಬಾಣಗಳು ಸೂರೆಗೊಂಡವು. ಅವರ ಯುದ್ಧವನ್ನು ನಾನು ಹೇಗೆ ವರ್ಣಿಸಲಿ ಎಂದು ಸಂಜಯನು ಹೇಳಿದನು.

ಅರ್ಥ:
ಹಾರು: ಜಿಗಿ; ಹರಿ: ಬಾಣದ ಹಿಂಭಾಗ; ಸಹಿತ: ಜೊತೆ; ದೇಹ: ತನು, ಒಡಲು; ಡೋರುಗಳೆ: ರಂಧ್ರಮಾಡು, ತೂತುಮಾಡು; ಅಂಬು: ಬಾಣ; ನೆತ್ತರು: ರಕ್ತ; ಜೋರು: ರಭಸ; ಮಸಗು: ಹರಡು; ಕೆರಳು; ಕೂಡೆ: ಜೊತೆ; ಜಾಜಿ: ಕೆಂಪುಬಣ್ಣ; ಗಿರಿ: ಬೆಟ್ಟ; ಔಕು: ಒತ್ತು; ಏರು: ಹೆಚ್ಚಾಗು; ತಳಿತ: ಚಿಗುರಿದ; ಖಂಡ: ತುಂಡು, ಚೂರು; ಸೂರೆ: ಕೊಳ್ಳೆ, ಲೂಟಿ; ಹಿಂದಣ: ಹಿಂಭಾಗ; ಅಂಬು: ಬಾಣ; ಅಭಿವರ್ಣಿಸು: ವಿವರಿಸು; ಆಹವ: ಯುದ್ಧ;

ಪದವಿಂಗಡಣೆ:
ಹಾರಿದವು +ಗರಿಸಹಿತ +ದೇಹವ
ಡೋರುಗಳೆದ್+ಅಂಬುಗಳು +ನೆತ್ತರ
ಜೋರು +ಮಸಗಿತು +ಕೂಡೆ +ಜಾಜಿನ +ಗಿರಿಯರ್+ಔಕುಳದ
ಏರಬಾಯ್ಗಳ +ತಳಿತ+ಖಂಡದ
ಸೂರೆಗೊಂಡವು+ ಹಿಂದಣ್+ಅಂಬುಗಳ್
ಆರೆನ್+ಅಭಿವರ್ಣಿಸಲು +ಕರ್ಣ+ಘಟೋತ್ಕಚ+ಆಹವವ

ಅಚ್ಚರಿ:
(೧) ರೂಪಕದ ಪ್ರಯೋಗ – ನೆತ್ತರ ಜೋರು ಮಸಗಿತು ಕೂಡೆ ಜಾಜಿನ ಗಿರಿಯರೌಕುಳದ