ಪದ್ಯ ೩೫: ಕರ್ಣನು ರಾಕ್ಷಸರನ್ನು ಹೇಗೆ ಹೊಗಳಿದನು?

ದಾನವರು ದಕ್ಕಡಾರು ಧೈರ್ಯೋ
ದ್ದಾನಶೀಲರು ಘಾಯವನು ಗಿರಿ
ಯಾನಬಾರದು ಮುಷ್ಟಿಬಲವೆಗ್ಗಳರು ಸತ್ವದಲಿ
ಈ ನಿರಂತರ ಬಾಣ ರಚನಾ
ನೂನ ಧನುರಭ್ಯಾಸದನುವನ
ದೇನ ಹೇಳುವೆ ಲೇಸೆನುತ ಕಲಿಕರ್ಣ ತೆಗೆದೆಚ್ಚ (ದ್ರೋಣ ಪರ್ವ, ೧೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ರಾಕ್ಷಸರು ಶೂರರು, ಅಪರಿಮಿತ ಧೈರ್ಯಶಾಲಿಗಳು, ಅವರ ಹೊಡೆತವನ್ನು ಬೆಟ್ಟವೂ ಸಹಿಸಲಾರದು. ಮುಷ್ಟಿ ಬಲದಲ್ಲಿ ಹೆಚ್ಚಿದವರು. ಈ ರೀತಿ ನಿರಂತರ ಬಾಣ ಪ್ರಯೋಗದ ರೀತಿಯನ್ನು ಹೇಗೆಂದು ಹೊಗಳಲಿ, ಬಲು ಚೆನ್ನು ಎನ್ನುತ್ತಾ ಕರ್ಣನು ಬಾಣಗಳನ್ನು ಬಿಟ್ಟನು.

ಅರ್ಥ:
ದಾನವ: ರಾಕ್ಷಸ; ದಕ್ಕಡ: ಸಾಹಸಿ; ಧೈರ್ಯ: ಎದೆಗಾರಿಕೆ, ಕೆಚ್ಚು; ಉದ್ದಾನ: ಅಪರಿಮಿತ; ಶೀಲ: ನಡತೆ, ಸ್ವಭಾವ; ಘಾಯ: ಪೆಟ್ಟು; ಗಿರಿ: ಬೆಟ್ಟ; ಮುಷ್ಟಿ: ಮುಚ್ಚಿದ ಅಂಗೈ, ಮುಟ್ಟಿಗೆ; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಸತ್ವ: ಸಾರ; ನಿರಂತರ: ಯಾವಾಗಲು; ಬಾಣ: ಶರ; ರಚನೆ: ನಿರ್ಮಾಣ, ಸೃಷ್ಟಿ; ನೂನ: ಕೊರತೆ, ನ್ಯೂನತೆ; ಧನು: ಬಿಲ್ಲು; ಅಭ್ಯಾಸ: ವ್ಯಾಸಂಗ; ಅನುವು: ವ್ಯಾಸಂಗ; ಹೇಳು: ತಿಳಿಸು; ಲೇಸು: ಒಳಿತು; ಕಲಿ: ಶೂರ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ದಾನವರು +ದಕ್ಕಡಾರು +ಧೈರ್ಯೋ
ದ್ದಾನ+ಶೀಲರು +ಘಾಯವನು +ಗಿರಿ
ಯಾನಬಾರದು+ ಮುಷ್ಟಿಬಲ+ವೆಗ್ಗಳರು +ಸತ್ವದಲಿ
ಈ +ನಿರಂತರ+ ಬಾಣ +ರಚನಾ
ನೂನ +ಧನುರ್+ಅಭ್ಯಾಸದ್+ಅನುವನದ್
ಏನ +ಹೇಳುವೆ +ಲೇಸೆನುತ +ಕಲಿಕರ್ಣ +ತೆಗೆದೆಚ್ಚ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಾನವರು ದಕ್ಕಡಾರು ಧೈರ್ಯೋದ್ದಾನಶೀಲರು

ಪದ್ಯ ೩೪: ಕರ್ಣನು ಘಟೋತ್ಕಚನ ಮೇಲೆ ಹೇಗೆ ಯುದ್ಧ ಮಾಡಿದನು?

ಫಡ ದೊಠಾರಿಸಿ ನುಡಿದ ಜಿಹ್ವೆಯ
ಹೆಡತಲೆಯಲುಗಿವೆನು ಕಣಾ ಕೇಳ್
ತೊಡಕಿ ತನ್ನಲಿ ಬದುಕುವವರಾರಿಂದ್ರ ಯಮರೊಳಗೆ
ಕಡುಹುಕಾರರ ಗರ್ವವಿಷಗಾ
ರುಡವನೆನ್ನಲಿ ನೋಡು ನೋಡೆನು
ತೊಡನೊಡನೆ ಶರವಳೆಯ ಕರೆದನು ಪವನಸುತಸೂನು (ದ್ರೋಣ ಪರ್ವ, ೧೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಛೀ, ಮೀರಿ ಮಾತಾಡಿದ ನಾಲಗೆಯನ್ನು ತಲೆಯಹಿಂದೆ ತೆಗೆಯುತ್ತೇನೆ, ನೋಡುತ್ತಿರು. ಇಂದ್ರ ಯಮರೇ ನನ್ನೊಡನೆ ಹೋರಾಡಿ ಬದುಕಲಾರರು. ಪರಾಕ್ರಮಿಗಳ ಗರ್ವದ ವಿಷಕ್ಕೆ ನನ್ನ ಗಾರುಡವಿದ್ಯೆಯಿದೆ ನೋಡು, ಹೀಗೆಂದು ಅವನು ಮೇಲಿಂದ ಮೇಲೆ ಬಾಣಗಳ ಮಳೆಗರೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದೊಠಾರ: ಬಲಿಷ್ಠ; ನುಡಿ: ಮಾತು; ಜಿಹ್ವೆ: ನಾಲಿಗೆ; ಹೆಡತಲೆ: ಹಿಂದಲೆ; ತೊಡಕು: ಸಿಕ್ಕಿಕೊಳ್ಳು; ಬದುಕು: ಜೀವ; ಯಮ: ಜವ; ಕಡುಹು: ಪರಾಕ್ರಮ; ಗರ್ವ: ಅಹಂಕಾರ; ವಿಷ: ಗರಳ; ಗಾರುಡ: ಮೋಡಿ ವಿದ್ಯೆ, ಮಾಯಗಾರ; ನೋಡು: ವೀಕ್ಷಿಸು; ಶರ: ಬಾಣ; ಪವನಸುತ: ಭೀಮ; ಪವನ: ವಾಯು; ಸೂನು: ಮಗ;

ಪದವಿಂಗಡಣೆ:
ಫಡ+ ದೊಠಾರಿಸಿ+ ನುಡಿದ +ಜಿಹ್ವೆಯ
ಹೆಡತಲೆಯಲ್+ಉಗಿವೆನು +ಕಣಾ +ಕೇಳ್
ತೊಡಕಿ+ ತನ್ನಲಿ +ಬದುಕುವವರಾರ್+ಇಂದ್ರ+ ಯಮರೊಳಗೆ
ಕಡುಹುಕಾರರ +ಗರ್ವವಿಷ+ಗಾ
ರುಡವನ್+ಎನ್ನಲಿ +ನೋಡು +ನೋಡೆನುತ್
ಒಡನೊಡನೆ+ ಶರವಳೆಯ +ಕರೆದನು +ಪವನಸುತಸೂನು

ಅಚ್ಚರಿ:
(೧) ಘಟೋತ್ಕಚನನ್ನು ಕರೆದ ಪರಿ – ಪವನಸುತಸೂನು

ಪದ್ಯ ೩೩: ಕರ್ಣನು ಘಟೋತ್ಕಚನಿಗೆ ಏನು ಹೇಳಿದ?

ತಾನೆ ತನ್ನನೆ ಹೊಗಳಿಕೊಂಬರೆ
ಮಾನನಿಧಿಯಾದವರು ಸಾಕೀ
ದಾನವರ ಗರುವಾಯಿ ಬಾರಿಯ ಭಂಡವಿದ್ಯೆಗಳು
ಏನು ಹೊಸತೆಂತೆಂತು ಶರಸಂ
ಧಾನವುಳಿದಗ್ಗಳಿಕೆಗಲ ಮಾ
ತೇನು ಬಲ್ಲರೆ ಬಿಲ್ಲ ಹಿಡಿ ಹಿಡಿ ಕಾಣಲಹುದೆಂದ (ದ್ರೋಣ ಪರ್ವ, ೧೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಆತ್ಮಗೌರವವುಳ್ಳವರು ತಮ್ಮನ್ನು ತಾವೇ ಹೊಗಳಿಕೊಳ್ಳುವರೇ? ರಾಕ್ಷಸರ ಘನತೆಯ ಭಂಡವಿದ್ಯೆಯನ್ನು ಸಾಕುಮಾಡು. ಏನು ಹೊಸ ಚಾತುರ್ಯ ಕಲಿತಿರುವೇ? ಬಿಲ್ಲಿನಲ್ಲಿ ಬಾಣ ಹೂಡಿ ಬಿಡಲು ಬರುವುದೋ ಇಲ್ಲವೋ? ಉಳಿದ ಮಾತುಗಳಿಂದೇನು? ಗೊತ್ತಿದ್ದರೆ ಬಿಲ್ಲು ಹಿಡಿ, ಮುಂದಾಗುವುದನ್ನು ನೋಡಬಹುದು.

ಅರ್ಥ:
ಹೊಗಳು: ಪ್ರಶಂಶಿಸು; ನಿಧಿ: ಸಂಪತ್ತು; ಮಾನನಿಧಿ: ಮರ್ಯಾಧೆಯ ನಿಧಿಯಾಗಿ ಉಳ್ಳವನು; ಸಾಕು: ನಿಲ್ಲು; ದಾನವ: ರಾಕ್ಷಸ; ಗರುವ: ಹಿರಿಯ, ಶ್ರೇಷ್ಠ; ಬಾರಿ: ಸಲ, ಸರದಿ; ಭಂಡ: ನಾಚಿಕೆ, ಲಜ್ಜೆ; ಹೊಸ: ನವೀನ; ಶರ: ಬಾಣ; ಸಂಧಾನ: ಸಂಯೋಗ, ಸೇರುವೆ; ಅಗ್ಗಳಿಕೆ: ಶ್ರೇಷ್ಠ; ಬಲ್ಲೆ: ತಿಳಿ; ಬಿಲ್ಲು: ಚಾಪ; ಹಿಡಿ: ಗ್ರಹಿಸು; ಕಾಣು: ತೋರು;

ಪದವಿಂಗಡಣೆ:
ತಾನೆ +ತನ್ನನೆ +ಹೊಗಳಿಕೊಂಬರೆ
ಮಾನನಿಧಿ+ಯಾದವರು +ಸಾಕೀ
ದಾನವರ +ಗರುವಾಯಿ +ಬಾರಿಯ +ಭಂಡವಿದ್ಯೆಗಳು
ಏನು +ಹೊಸತ್+ಎಂತೆಂತು +ಶರ+ಸಂ
ಧಾನವುಳಿದ್+ಅಗ್ಗಳಿಕೆಗಳ +ಮಾ
ತೇನು +ಬಲ್ಲರೆ +ಬಿಲ್ಲ +ಹಿಡಿ +ಹಿಡಿ +ಕಾಣಲಹುದೆಂದ

ಅಚ್ಚರಿ:
(೧) ಶುಭಾಷಿತ ನುಡಿ – ತಾನೆ ತನ್ನನೆ ಹೊಗಳಿಕೊಂಬರೆ ಮಾನನಿಧಿಯಾದವರು

ಪದ್ಯ ೩೨: ಘಟೋತ್ಕಚನು ಕರ್ಣನಿಗೆ ಏನು ಹೇಳಿದ?

ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ (ದ್ರೋಣ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಎಲೋ ಕರ್ಣ, ನೀಣು ಭಾರೀ ಗಂಡಸು. ನನ್ನನ್ನು ಎದುರಿಸಿ ನಿಂತದ್ದೇ ಸಾಕು, ಮಹಾಪರಾಕ್ರಮಿಗಳಾದ ದೇವತೆಗಳನ್ನೂ ಸೀಳಿಹಾಕಬಲ್ಲೆ. ಮನುಷ್ಯರ ಪಾಡೇನು? ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ, ಯುದ್ಧದಲ್ಲಿ ಸತ್ತರೂ ಕೀರ್ತಿ ಬರುತ್ತದೆ. ವೈರಿಸೈನ್ಯದಲ್ಲಿ ನೀನು ದಿಟ್ಟ ಎಂದು ಇದಿರಾದನು.

ಅರ್ಥ:
ನೆರೆ: ಗುಂಪು; ಗಂಡು: ಗಂಡಸು, ಪರಾಕ್ರಮಿ; ಮಲೆ: ಉದ್ಧಟತನದಿಂದ ಕೂಡಿರು; ಸುರ: ದೇವತೆ; ಸಿತಗ: ಕಾಮುಕ, ಜಾರ; ಸೀಳು: ಚೂರು, ತುಂಡು; ಮಾನವ: ನರ; ಪಾಡು: ರೀತಿ, ಬಗೆ; ಕಲಿ: ಶೂರ; ಮೆಚ್ಚು: ಒಲುಮೆ, ಪ್ರೀತಿ; ಸತ್ತರೆ: ಮರಣ ಹೊಂದಿದರೆ; ಮೊಳೆ: ಚಿಗುರು, ಅಂಕುರಿಸು; ಕೀರ್ತಿ: ಖ್ಯಾತಿ; ರಿಪು: ವೈರಿ; ದಿಟ್ಟ: ಧೈರ್ಯಶಾಲಿ; ಅಸುರ: ರಾಕ್ಷಸ; ಮಾರಾಂತು: ಎದುರಾಗಿ, ಯುದ್ಧಕ್ಕೆ ನಿಂತು;

ಪದವಿಂಗಡಣೆ:
ಎಲವೊ +ನೆರೆ +ಗಂಡಹೆ +ಕಣಾ +ನೀ
ಮಲೆತು +ನಿಂದುದು +ಸಾಲದೇ +ಸುರ
ರೊಳಗೆ +ಸಿತಗರ +ಸೀಳುವೆನು +ಮಾನವರ +ಪಾಡೇನು
ಕಲಿತನಕೆ +ಮೆಚ್ಚಿದೆನು +ಸತ್ತರೆ
ಮೊಳೆಯದಿಹುದೇ +ಕೀರ್ತಿ +ರಿಪುಬಲ
ದೊಳಗೆ +ದಿಟ್ಟನು +ಕರ್ಣ +ನೀನೆನುತ್+ಅಸುರ +ಮಾರಾಂತ

ಅಚ್ಚರಿ:
(೧) ಘಟೋತ್ಕಚನ ಹಿರಿಮೆ – ಸುರರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು

ಪದ್ಯ ೩೧: ಕರ್ಣನು ಯಾರ ಮೇಲೆ ಯುದ್ಧವನ್ನು ಸಾರಿದನು?

ಇತ್ತಲೈ ದನುಜೇಂದ್ರ ಕದನವ
ದಿತ್ತಲಿತ್ತಲು ಗಮನ ಸುಭಟರ
ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ
ಮೃತ್ಯು ನಿನಗಾನೆನ್ನೊಡನೆ ತಲೆ
ಯೊತ್ತಿನೋಡೆಂದೆನುತ ಬೊಬ್ಬಿರಿ
ವುತ್ತ ದೈತ್ಯನ ತರುಬಿದನು ಬಲವೆಲ್ಲ ಬೆರಗಾಗೆ (ದ್ರೋಣ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನು ಯುದ್ಧವನ್ನು ಮುಂದುವರೆಸುತ್ತಾ, ಎಲೈ ರಾಕ್ಷಸರ ರಾಜ, ಯುದ್ಧ ಇಲ್ಲಿದೆ, ನಿನ್ನ ಗಮನವು ನನ್ನತ್ತ ಬರಲಿ, ಕತ್ತಲೆಯಲ್ಲಿ ಶತ್ರುವೀರರನ್ನೋಡಿಸಿದ ಪೌರುಷವನ್ನು ನಮ್ಮ ಹತ್ತಿರ ತೋರಿಸು. ನಿನ್ನ ಮೃತ್ಯುವಾದ ನನ್ನೊಡನೆ ಯುದ್ಧಮಾಡಿ ತೋರಿಸು ಎಂದು ಗರ್ಜಿಸಿ ಘಟೋತ್ಕಚನನ್ನು ತರುಬಿದನು.

ಅರ್ಥ:
ದನುಜೇಂದ್ರ: ರಾಕ್ಷಸರ ದೊರೆ; ಕದನ: ಯುದ್ಧ; ಗಮನ: ಲಕ್ಷ್ಯ, ಅವಧಾನ; ಸುಭಟ: ಪರಾಕ್ರಮಿ; ಕತ್ತಲೆ: ಅಂಧಕಾರ; ಓಡು: ಧಾವಿಸು; ತೋರು: ಗೋಚರಿಸು; ಮೃತ್ಯು: ಸಾವು; ತಲೆ: ಶಿರ; ಒತ್ತು: ಮುತ್ತು, ಚುಚ್ಚು; ಬೊಬ್ಬಿರಿ: ಆರ್ಭಟಿಸು; ದೈತ್ಯ: ರಾಕ್ಷಸ; ತರುಬು: ತಡೆ, ನಿಲ್ಲಿಸು; ಬಲ: ಶಕ್ತಿ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಇತ್ತಲೈ +ದನುಜೇಂದ್ರ +ಕದನವದ್
ಇತ್ತಲಿತ್ತಲು +ಗಮನ +ಸುಭಟರ
ಕತ್ತಲೆಯೊಳ್+ಓಡಿಸಿದ +ಕಡುಹನು +ತೋರು +ನಮ್ಮೊಡನೆ
ಮೃತ್ಯು +ನಿನಗಾನ್+ಎನ್ನೊಡನೆ +ತಲೆ
ಒತ್ತಿ+ನೋಡೆಂದ್+ಎನುತ +ಬೊಬ್ಬಿರಿ
ವುತ್ತ +ದೈತ್ಯನ +ತರುಬಿದನು +ಬಲವೆಲ್ಲ +ಬೆರಗಾಗೆ

ಅಚ್ಚರಿ:
(೧) ದನುಜ, ದೈತ್ಯ – ಸಮಾನಾರ್ಥಕ ಪದ
(೨) ಘಟೋತ್ಕಚನನ್ನು ಹಂಗಿಸುವ ಪರಿ – ಸುಭಟರ ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ