ಪದ್ಯ ೨೪: ಕೌರವನು ಕರ್ಣನಿಗೆ ರಾಜರನ್ನು ತೋರಿಸೆ ಏನು ಹೇಳಿದನು?

ದುಗುಡವೋ ಮೇಣ್ ವಿಕ್ರಮಾಗ್ನಿಯ
ತಗಹುಗಳ ತನಿಹೊಗೆಯೊ ರಾಯರ
ಮೊಗವ ನೋಡೈ ಕೀರ್ತಿಕೌಮುದಿ ಕಳಿದ ಕತ್ತಲೆಯೊ
ಬಿಗಿದ ಭೀತಿಯ ಸೂರೆಗಳೊ ಮೋ
ರೆಗಳೊ ಸವಿವಾತುಗಳ ಸೋನೆಯ
ಸೊಗಸುಕಾರರು ನಿಂದ ನಿಲವನು ಕರ್ಣ ನೋಡೆಂದ (ದ್ರೋಣ ಪರ್ವ, ೧೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಇವರಿಗೇನು ದುಃಖವಾಗಿದೆಯೋ ಅಥವಾ ದೈತ್ಯನ ವಿಕ್ರಮಾಗ್ನಿಯ ಹೊಗೆಯಾವರಿಸಿದೆಯೋ? ಈ ರಾಜರ ಮುಖವನ್ನು ಸ್ವಲ್ಪ ನೋಡು. ಇವರ ಮುಖವನ್ನು ನೋಡಿದರೆ ಕೀರ್ತಿಯ ಬೆಳದಿಂಗಳು ಕಳೆದು ಕತ್ತಲೆ ಆವರಿಸಿದೆಯೋ? ಇವರಿಂದ ಭಯ ಹೊರಸೂಸುತ್ತಿದೆಯೋ ಎನ್ನಿಸುತ್ತಿದೆ. ಯಾವಾಗಲೂ ಸವಿಮಾತುಗಳನ್ನಾಡುತ್ತಾ ಉತ್ಸಾಹದಿಂದಿದ್ದ ಇವರು ನಿಂತಿರುವ ಭಂಗಿಯನ್ನು ನೋಡು ಎಂದು ಕೌರವನು ಕರ್ಣನಿಗೆ ಹೇಳಿದನು.

ಅರ್ಥ:
ದುಗುಡ: ದುಃಖ; ಮೇಣ್: ಅಥವ; ವಿಕ್ರಮಾಗ್ನಿ: ಪರಾಕ್ರಮದ ಬೆಂಕಿ; ತಗಹು: ಅಡ್ಡಿ, ತಡೆ; ತನಿ: ಚೆನ್ನಾಗಿ ಬೆಳೆದುದು, ಹೆಚ್ಚಾಗು; ಹೊಗೆ: ಧೂಮ; ರಾಯ: ರಾಜ; ಮೊಗ: ಮುಖ; ನೋಡು: ವೀಕ್ಷಿಸು; ಕೀರ್ತಿ: ಖ್ಯಾತಿ; ಕೌಮುದಿ: ಬೆಳದಿಂಗಳು; ಕಳಿ: ಕಳೆದುಹೋಗು; ಕತ್ತಲೆ: ಅಂಧಕಾರ; ಬಿಗಿ: ಭದ್ರವಾಗಿರುವುದು; ಭೀತಿ: ಭಯ; ಸೂರೆ: ಕೊಳ್ಳೆ, ಲೂಟಿ; ಮೋರೆ: ಮುಖ; ಸವಿ: ರುಚಿ, ಸ್ವಾದ; ಸವಿವಾತು: ಸಿಹಿಯಾದ ಮಾತು; ಸೋನೆ: ಮಳೆ, ತುಂತುರು ಹನಿ; ಸೊಗಸು: ಅಂದ; ನಿಲುವು: ನಿಂತಿರುವ ಭಂಗಿ; ನೋಡು: ವೀಕ್ಷಿಸು;

ಪದವಿಂಗಡಣೆ:
ದುಗುಡವೋ +ಮೇಣ್ +ವಿಕ್ರಮಾಗ್ನಿಯ
ತಗಹುಗಳ +ತನಿ+ಹೊಗೆಯೊ +ರಾಯರ
ಮೊಗವ +ನೋಡೈ +ಕೀರ್ತಿಕೌಮುದಿ +ಕಳಿದ+ ಕತ್ತಲೆಯೊ
ಬಿಗಿದ +ಭೀತಿಯ +ಸೂರೆಗಳೊ+ ಮೋ
ರೆಗಳೊ +ಸವಿವಾತುಗಳ +ಸೋನೆಯ
ಸೊಗಸುಕಾರರು +ನಿಂದ +ನಿಲವನು+ ಕರ್ಣ +ನೋಡೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಕೀರ್ತಿಕೌಮುದಿ ಕಳಿದ ಕತ್ತಲೆಯೊ; ವಿಕ್ರಮಾಗ್ನಿಯ ತಗಹುಗಳ ತನಿಹೊಗೆಯೊ

ಪದ್ಯ ೨೩: ದುರ್ಯೋಧನನು ಕರ್ಣನಿಗೆ ಏನು ಹೇಳಿದನು?

ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಲರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ (ದ್ರೋಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣ, ಈ ಮಾತು ಸಾಕು, ದೈತ್ಯನನ್ನು ಸಂಹರಿಸು, ನಮ್ಮ ಪರಾಕ್ರಮಿಗಳು ಬಾಯಿಬಾಯಿ ಬಿಡುತ್ತಿದ್ದಾರೆ, ತಡೆಯದೆ ತಡಮಾಡದೆ ಈ ರಾಕ್ಷಸನನ್ನು ಸಂಹರಿಸು. ವೀರರೂ ಸಮರ್ಥರೂ ತಲ್ಲಣಗೊಂಡಿದ್ದಾರೆ. ಕಾಲವನ್ನು ಸುಮ್ಮನೇ ವ್ಯರ್ಥಮಾಡಬೇಡ ಎಂದು ದುರ್ಯೋಧನನು ಕರ್ಣನಿಗೆ ಹೇಳಿದನು.

ಅರ್ಥ:
ಸಾಕು: ನಿಲ್ಲಿಸು; ದೈತ್ಯ: ರಾಕ್ಷಸ; ಕೆಡಹು: ಬೀಳಿಸು, ನಾಶಮಾಡು; ಸೇನೆ: ಸೈನ್ಯ; ಸುಭಟ: ವೀರ; ನೂಕು: ತಳ್ಳು; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ತಡೆ: ನಿಲ್ಲಿಸು; ತಡ: ನಿಧಾನ; ಆಕೆವಾಳ: ವೀರ, ಪರಾಕ್ರಮಿ; ವಿಗಡ: ಶೌರ್ಯ, ಪರಾಕ್ರಮ; ವೀರ: ಶೂರ; ತಲ್ಲಣ: ಅಂಜಿಕೆ, ಭಯ; ತಗಹು: ಅಡ್ಡಿ, ತಡೆ; ಕಾಲಕ್ಷೇಪ: ಕಾಲ ಕಳೆಯುವುದು; ರಾಯ: ರಾಜ; ಆನೀಕ: ಸಮೂಹ;

ಪದವಿಂಗಡಣೆ:
ಸಾಕು +ದೈತ್ಯನ +ಕೆಡಹು +ಸೇನೆಯ
ಸಾಕು +ಸುಭಟರು +ಬಾಯಬಿಡುತಿದೆ
ನೂಕು +ನೂಕ್+ಅಮರಾರಿಯನು +ತಡೆ +ತಡವು+ಮಾಡದಿರು
ಆಕೆವಾಳರು +ವಿಗಡ +ವೀರಾ
ನೀಕವಿದೆ +ತಲ್ಲಣದ +ತಗಹಿನ
ಲೇಕೆ +ಕಾಲಕ್ಷೇಪವೆಂದನು +ಕೌರವರ+ರಾಯ

ಅಚ್ಚರಿ:
(೧) ಸಾಕು, ನೂಕು – ಪ್ರಾಸ ಪದಗಳು
(೨) ಆಕೆವಾಳ, ಸುಭಟ, ವಿಗಡ, ವೀರಾನೀಕ – ಸಾಮ್ಯಾರ್ಥ ಪದಗಳು
(೩) ತಡೆ, ತಡ – ಪದಗಳ ಬಳಕೆ

ಪದ್ಯ ೨೨: ಕರ್ಣನು ಘಟೋತ್ಕಚನನ್ನು ಹೇಗೆ ಹೊಗಳಿದನು?

ಶಿವಶಿವಾ ಕೌರವನ ಸುಭಟರು
ದಿವಿಜರಿಗೆ ವೆಗ್ಗಳರು ನಿನಗಿಂ
ದಿವರು ಸೋತರು ಪೂತು ದಾನವ ನೀ ಕೃತಾರ್ಥನಲ
ಇವನ ಪಾಡಿನ ಸುಭಟರೇ ನ
ಮ್ಮವರು ಗೆಲವೇನಿವನದೇ ಮಾ
ಧವನ ಸೂತ್ರದ ಯಂತ್ರವಿದು ಲಯಕಾಲ ನಮಗೆಂದ (ದ್ರೋಣ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಿವ ಶಿವಾ, ದೇವತೆಗಳಿಗೂ ಮಿಗಿಲಾದ ಕೌರವನ ವೀರರು ಇಂದು ನಿನಗೆ ಸೋತರು. ಭಲೇ ರಾಕ್ಷಸ ನೀನೇ ಧನ್ಯ! ನಮ್ಮ ಪರಾಕ್ರಮಿಗಳು ಇವನಿಗೆ ಸೋಲುವಂಥವರೇ! ಗೆಲುವು ಇವನದೇ? ಇದು ಶ್ರೀಕೃಷ್ಣನ ಸೂತ್ರದ ಯಂತ್ರ. ನಮ್ಮ ನಾಶದ ಕಾಲ ಸಮೀಪಿಸಿದೆ ಎಂದು ಕರ್ಣನು ಉದ್ಗರಿಸಿದನು.

ಅರ್ಥ:
ಸುಭಟ: ಪರಾಕ್ರಮಿ, ಸೈನಿಕ; ದಿವಿಜ: ದೇವತೆ; ವೆಗ್ಗಳ: ಶ್ರೇಷ್ಠ; ಸೋಲು: ಪರಾಭವ; ಪೂತು: ಭಲೇ; ದಾನವ: ರಾಕ್ಷಸ; ಕೃತಾರ್ಥ: ಧನ್ಯ; ಪಾಡು: ರೀತಿ; ಗೆಲುವು: ಜಯ; ಮಾಧವ: ಕೃಷ್ಣ; ಸೂತ್ರ: ವಿಧಿ, ನಿಯಮ, ಕಟ್ಟಳೆ; ಯಂತ್ರ: ಉಪಕರಣ; ಲಯ: ನಾಶ; ಕಾಲ: ಸಮಯ;

ಪದವಿಂಗಡಣೆ:
ಶಿವಶಿವಾ +ಕೌರವನ +ಸುಭಟರು
ದಿವಿಜರಿಗೆ +ವೆಗ್ಗಳರು +ನಿನಗಿಂದ್
ಇವರು +ಸೋತರು +ಪೂತು +ದಾನವ +ನೀ +ಕೃತಾರ್ಥನಲ
ಇವನ +ಪಾಡಿನ +ಸುಭಟರೇ +ನ
ಮ್ಮವರು +ಗೆಲವೇನ್+ಇವನದೇ+ ಮಾ
ಧವನ +ಸೂತ್ರದ +ಯಂತ್ರವಿದು +ಲಯಕಾಲ +ನಮಗೆಂದ

ಅಚ್ಚರಿ:
(೧) ಘಟೋತ್ಕಚನನ್ನು ಹೊಗಳಿದ ಪರಿ – ಪೂತು ದಾನವ ನೀ ಕೃತಾರ್ಥನಲ

ಪದ್ಯ ೨೧: ರಾಜರು ಯಾವ ಅವಸ್ಥೆಯಲ್ಲಿದ್ದರು?

ತಳಿತ ಮುಸುಕಿನ ಬೆರಲ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ (ದ್ರೋಣ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮುಖಕ್ಕೆ ಹಾಕಿಕೊಂಡು ಮುಸುಕುಗಳ, ಮೂಗಿನ ಮೇಲಿಟ್ಟ ಬೆರಳುಗಳ, ತಲೆತಗ್ಗಿಸಿ ನೆಲವನ್ನೇ ನೋಡುವ ನೋಟಗಳ, ಭಾರೈಸಿದ ಮೈಗಳ, ಕುಗ್ಗಿದ ಪರಾಕ್ರಮದ ತೊರೆದ ಬಿರುದುಗಳ, ಅನುಭವಿಸಿದ ಮಹಾಭಂಗಗಳ ರಾಜರನ್ನು ನೋಡಿ ಕರ್ಣನು ಘಟೋತ್ಕಚನನ್ನು ಹೊಗಳಿದನು.

ಅರ್ಥ:
ತಳಿತ: ಚಿಗುರಿದ; ಮುಸುಕು: ಆವರಿಸು; ಮೂಗು: ನಾಸಿಕ; ನೆಲ: ಭೂಮಿ; ನೋಟ: ದೃಷ್ಟಿ; ಮೆಯ್ಯ: ತನು; ತೂಕ: ಭಾರ; ಝಳ: ಪ್ರಕಾಶ, ಕಾಂತಿ; ಸುಯ್ಲು: ನಿಡಿದಾದ ಉಸಿರು, ನಿಟ್ಟುಸಿರು; ಮುಖ: ಆನನ; ಮೋನ: ಮಾತನಾಡದಿರುವಿಕೆ, ಮೌನ; ನಸಿ: ಹಾಳಾಗು, ನಾಶವಾಗು; ನೆನಹು: ಜ್ಞಾಪಕ, ನೆನಪು; ಕಳಿ: ಕಳೆದುಹೋಗು; ಕಡುಹು: ಸಾಹಸ, ಹುರುಪು; ಬೀತ: ಜರುಗಿದ; ಬಿರುದು: ಗೌರವ ಸೂಚಕ ಪದ; ಬಲಿ: ಗಟ್ಟಿ; ಭಂಗ: ಮೋಸ, ವಂಚನೆ; ನೃಪತಿ: ರಾಜ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯಪುತ್ರ; ಕಂಡು: ನೋಡು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ತಳಿತ +ಮುಸುಕಿನ +ಬೆರಳ +ಮೂಗಿನ
ನೆಲನ +ನೋಟದ +ಮೆಯ್ಯ +ತೂಕದ
ಝಳದ +ಸುಯ್ಲಿನ +ಮುಖದ +ಮೋನದ +ನಸಿದ +ನೆನಹುಗಳ
ಕಳಿದ+ ಕಡುಹಿನ+ ಬೀತ +ಬಿರುದಿನ
ಬಲಿದ +ಭಂಗದ +ನೃಪತಿಗಳನ್
ಅಗ್ಗಳೆಯ +ರವಿಸುತ +ಕಂಡು +ಹೊಗಳಿದನಾ +ಘಟೋತ್ಕಚನ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೀತ ಬಿರುದಿನ ಬಲಿದ ಭಂಗದ
(೨) ಒಂದೇ ಅಕ್ಷರದ ಜೋಡಿ ಪದಗಳು – ಮುಖದ ಮೋನದ ನಸಿದ ನೆನಹುಗಳ ಕಳಿದ ಕಡುಹಿನ

ಪದ್ಯ ೨೦: ರಾಜರು ಯಾರನ್ನು ಮತ್ತೆ ಯುದ್ದಕ್ಕೆ ಕರೆದರು?

ಶರಣು ಹೊಕ್ಕುದು ಬಂದು ಮಕುಟದ
ಗರುವರವನೀಪಾಲಕರು ಮೋ
ಹರಕೆ ತೋರ್ಪಟ್ಟವರು ಭಾರಿಯ ಬಿರುದಿನತಿಬಳರು
ದುರುಳ ದೈತ್ಯನ ಬಾಧೆ ಘನ ಪರಿ
ಹರಿಸಲರಿಯವು ಕರ್ಣ ನೀನೇ
ಮರಳಿ ಸೇನೆಯ ರಕ್ಷಿಸೆಂದುದು ನಿಖಿಳಪರಿವಾರ (ದ್ರೋಣ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಕುಟವನ್ನು ಹೊತ್ತ ಮಾನನಿಧಿಗಳಾದ ರಾಜರು, ಸೈನ್ಯದಲ್ಲಿ ಮಹಾವೀರರೆಂದು ಪ್ರಸಿದ್ಧರಾದವರು, ದೊಡ್ಡ ದೊಡ್ಡ ಬಿರುದುಗಳನ್ನುಳ್ಳ ಅತಿ ಬಲರು ಬಂದು, ಈ ದುಷ್ಟದೈತ್ಯನ ಬಾಧೆ ಬಹಳ ಭಯಂಕರವಾಗಿದೆ. ನಮ್ಮಿಂದ ಇದನ್ನು ತಪ್ಪಿಸಲು ಸಾಧ್ಯವಿಲ್ಲ, ಕರ್ಣ ಈ ಸೈನ್ಯವನ್ನು ರಕ್ಷಿತು, ಮತ್ತೆ ಯುದ್ಧಮಾಡು ಎಂದು ಬೇಡಿಕೊಂಡರು.

ಅರ್ಥ:
ಶರಣು: ಆಶ್ರಯ, ವಂದನೆ; ಹೊಕ್ಕು: ಸೇರು; ಬಂದು: ಆಗಮಿಸು; ಮಕುಟ: ಕಿರೀಟ; ಗರುವ: ಶ್ರೇಷ್ಠ; ಅವನೀಪಾಲ: ರಾಜ; ಮೋಹರ: ಯುದ್ಧ; ತೋರು: ಗೋಚರಿಸು; ಭಾರಿ: ದೊಡ್ಡ; ಬಿರುದು: ಗೌರವ ಸೂಚಕ ಪದ; ಅತಿಬಳ: ಪರಾಕ್ರಮಿ; ದುರುಳ: ದುಷ್ಟ; ದೈತ್ಯ: ರಾಕ್ಷಸ; ಬಾಧೆ: ನೋವು, ವೇದನೆ; ಘನ: ದೊಡ್ಡ; ಪರಿಹರಿಸು: ನಿವಾರಿಸು; ಅರಿ: ತಿಳಿ; ಮರಳು: ಹಿಂದಿರುಗು; ಸೇನೆ: ಸೈನ್ಯ; ರಕ್ಷಿಸು: ಕಾಪಾಡು; ನಿಖಿಳ: ಎಲ್ಲಾ; ಪರಿವಾರ: ಬಂಧುಜನ, ಪರಿಜನ;

ಪದವಿಂಗಡಣೆ:
ಶರಣು+ ಹೊಕ್ಕುದು +ಬಂದು +ಮಕುಟದ
ಗರುವರ್+ಅವನೀಪಾಲಕರು +ಮೋ
ಹರಕೆ +ತೋರ್ಪಟ್ಟವರು +ಭಾರಿಯ +ಬಿರುದಿನ್+ಅತಿಬಳರು
ದುರುಳ +ದೈತ್ಯನ +ಬಾಧೆ +ಘನ +ಪರಿ
ಹರಿಸಲ್+ಅರಿಯವು +ಕರ್ಣ +ನೀನೇ
ಮರಳಿ +ಸೇನೆಯ +ರಕ್ಷಿಸೆಂದುದು +ನಿಖಿಳ+ಪರಿವಾರ

ಅಚ್ಚರಿ:
(೧) ಪರಾಕ್ರಮಿಗಳೆಂದು ಹೇಳಲು – ಮಕುಟದ ಗರುವರವನೀಪಾಲಕರು

ಪದ್ಯ ೧೯: ಸೈನಿಕರು ಯಾರ ಆಶ್ರಯಕ್ಕೆ ಬಂದರು?

ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರನಿಕಾಯ ಹೊಕ್ಕುದು ರವಿಸುತನ ಮರೆಯ (ದ್ರೋಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಬ್ಬಬ್ಬಾ, ಹಾಲಾಹಲ ವಿಷದ ಉರಿಯನ್ನು ತಡೆದುಕೊಳ್ಳಲಾಗದೇ, ದೇವತೆಗಳೂ ರಾಕ್ಷಸರೂ ಶಿವನ ಮರೆಹೊಕ್ಕಂತೆ, ಘಟೋತ್ಕಚ ಪರ್ವತದಿಂದ ಕಡೆಯಲ್ಪಟ್ಟ ಸೈನ್ಯ ಸಮುದ್ರದ ಸೋಲಿನ ವಿಷದುರಿಯನ್ನು ತಾಳಲಾರದೆ ರಾಜರು ಕರ್ಣನ ಆಶ್ರಯಕ್ಕೆ ಬಂದರು.

ಅರ್ಥ:
ಹೇಳು: ತಿಳಿಸು; ಬಹಳ: ತುಂಬ; ಅಂಭೋನಿಧಿ: ಸಾಗರ; ವಿಷ: ಗರಳ ಉರಿ: ಬೆಂಕಿ; ಧಾಳಿ: ಆಕ್ರಮಣ; ದಾನವ: ರಾಕ್ಷಸ; ಅಮರ: ದೇವತೆ; ಇಂದುಮೌಳಿ: ಶಂಕರ; ಮರೆ: ಆಶ್ರಯ; ಹೊಗು: ತೆರಳು; ದಾನವ: ರಾಕ್ಷಸ; ಅಚಳ: ಬೆಟ್ಟ; ಮಥಿತ: ಕಡಿಯಲ್ಪಟ್ಟ; ಸೇನ: ಸೈನ್ಯ; ಪರಿಭವ: ಸೋಲು; ನರೇಂದ್ರ: ರಾಜ; ನಿಕಾಯ: ಗುಂಪು; ಹೊಕ್ಕು: ಸೇರು; ರವಿಸುತ: ಸೂರ್ಯನ ಮಗ (ಕರ್ಣ); ಮರೆ: ಶರಣಾಗತಿ;

ಪದವಿಂಗಡಣೆ:
ಏನ +ಹೇಳುವೆನಮಮ+ ಬಹಳ+
ಅಂಭೋನಿಧಿಯ +ವಿಷದುರಿಯ +ಧಾಳಿಗೆ
ದಾನವ+ಅಮರರ್+ಇಂದುಮೌಳಿಯ +ಮರೆಯ +ಹೊಗುವಂತೆ
ದಾನವ+ಅಚಳ +ಮಥಿತ +ಸೇನಾಂ
ಭೋನಿಧಿಯ +ಪರಿಭವದ +ವಿಷದುರಿಗ್
ಆ +ನರೇಂದ್ರ+ನಿಕಾಯ +ಹೊಕ್ಕುದು +ರವಿಸುತನ+ ಮರೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಹಳಾಂಭೋನಿಧಿಯ ವಿಷದುರಿಯ ಧಾಳಿಗೆ ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
(೨) ಅಂಭೋನಿಧಿ, ಸೇನಾಂಭೋನಿಧಿ – ೨, ೫ ಸಾಲಿನ ಮೊದಲ ಪದ
(೩) ದಾನವ – ೩,೪ ಸಾಲಿನ ಮೊದಲ ಪದ

ಪದ್ಯ ೧೮: ದ್ರೋಣರೇಕೆ ಯುದ್ಧರಂಗದಲ್ಲಿ ಕಾಣಿಸುತ್ತಿರಲಿಲ್ಲ?

ದ್ರೋಣನೆಂಬರೆ ಮುನ್ನವೇ ನಿ
ರ್ಯಾಣದೀಕ್ಷಿತನಾದನಾತನ
ಕಾಣೆವೈ ಗುರುಸುತನದೃಶ್ಯಾಂಜನವೆ ಸಿದ್ಧಿಸಿತು
ಹೂಣಿಗರು ಮತ್ತಾರು ಶಲ್ಯ
ಕ್ಷೋಣಿಪತಿ ಕೃತವರ್ಮ ಕೃಪನತಿ
ಜಾಣರೋಟದ ವಿದ್ಯೆಗೆನುತಿರ್ದುದು ಭಟಸ್ತೋಮ (ದ್ರೋಣ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದ್ರೋಣನ ಸುದ್ದಿಯೇನು, ಎಂದು ಕೇಳಿದರೆ ಅವನು ಮರಣ ದೀಕ್ಷೆಯನ್ನು ಕೈಗೊಂಡನೋ ಏನೋ, ಎಲ್ಲೂ ಕಾಣಿಸುತ್ತಿಲ್ಲ. ಅಶ್ವತ್ಥಾಮನನ್ನು ಹುಡುಕಲು ಕಣ್ಣಿಗೆ ಅಂಜನವನ್ನು ಹಚ್ಚಿಕೊಳ್ಳಬೇಕು. ಇನ್ನು ಮುನ್ನುಗ್ಗಿ ಯುದ್ಧಮಾಡುವವರಾರು? ಶಲ್ಯ ಕೃತವರ್ಮ, ಕೃಪರು ಓಟದಲ್ಲಿ ಜಾಣರಾದರು ಎಂದು ಸೈನಿಕರು ಮಾತಾಡಿಕೊಳ್ಳುತ್ತಿದ್ದರು.

ಅರ್ಥ:
ಮುನ್ನ: ಮುಂಚೆ; ನಿರ್ಯಾಣ: ಅದೃಶ್ಯವಾಗುವಿಕೆ, ಸಾವು; ದೀಕ್ಷೆ: ಸಂಸ್ಕಾರ; ಕಾಣು: ತೋರು; ಗುರು: ಆಚಾರ್ಯ; ಸುತ: ಮಗ; ಅಂಜನ:ಕಾಡಿಗೆ, ಕಪ್ಪು; ದೃಶ್ಯ: ನೋಟ; ಸಿದ್ಧಿ: ಗುರಿಮುಟ್ಟುವಿಕೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಕ್ಷೋಣಿ: ನೆಲ, ಭೂಮಿ; ಪತಿ: ಒಡೆಯ; ಕ್ಷೋಣಿಪತಿ: ರಾಜ; ಜಾಣ: ಬುದ್ಧಿವಂತ; ಓಟ: ಧಾವಿಸು; ವಿದ್ಯೆ: ಜ್ಞಾನ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ದ್ರೋಣನೆಂಬರೆ+ ಮುನ್ನವೇ +ನಿ
ರ್ಯಾಣ+ದೀಕ್ಷಿತನಾದನ್+ಆತನ
ಕಾಣೆವೈ +ಗುರುಸುತನ+ದೃಶ್ಯಾಂಜನವೆ+ ಸಿದ್ಧಿಸಿತು
ಹೂಣಿಗರು+ ಮತ್ತಾರು +ಶಲ್ಯ
ಕ್ಷೋಣಿಪತಿ+ ಕೃತವರ್ಮ +ಕೃಪನ್+ಅತಿ
ಜಾಣರ್+ಓಟದ +ವಿದ್ಯೆಗೆನುತಿರ್ದುದು +ಭಟಸ್ತೋಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕ್ಷೋಣಿಪತಿ ಕೃತವರ್ಮ ಕೃಪನತಿ
(೨) ದ್ರೋಣನು ಕಾಣದಿರುವುದಕ್ಕೆ ಕಾರಣ – ನಿರ್ಯಾಣದೀಕ್ಷಿತನಾದನಾತನ ಕಾಣೆವೈ