ಪದ್ಯ ೧೨: ಕೌರವರ ಧೈರ್ಯವೇಕೆ ಹಾರಿತು?

ಗರುಡನುಬ್ಬಟೆಗಹಿನಿಕರ ಜ
ಜ್ಝರಿತವಾದವೊಲಿವನ ಕಡು ನಿ
ಬ್ಬರದ ಧಾಳಿಗೆ ಧೈರ್ಯಗೆಟ್ಟುದು ಕೂಡೆ ಕುರುಸೇನೆ
ಹೊರಳಿಯೊಡೆದರು ಭಟರು ಸಿಡಿದರು
ಜರುಗಿದರು ಜವಗುಂದಿದರು ಮಡ
ಮುರಿದು ಬಿರುದರು ತಣಿದುದೈ ಪರಿಭವದ ಸೂರೆಯಲಿ (ದ್ರೋಣ ಪರ್ವ, ೧೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಗರುಡನ ದಾಳಿಗೆ ಹಾವುಗಳು ಜರ್ಝರಿತವಾದ ಹಾಗೆ, ಘಟೋತ್ಕಚನ ನಿಷ್ಠುರ ದಾಳಿಗೆ ಕುರುಸೈನ್ಯದ ಧೈರ್ಯ ಹಾರಿಹೋಯಿತು. ಸೈನಿಕರು ಕಂಡಕಂಡ ಕಡೆಗಳಿಗೋಡಿದರು. ಹೊಡೆತಗಳಿಗೆ ಸಿಡಿದರು. ಧೈರ್ಯಗುಂದಿದರು. ಬಿರುದುಳ್ಳ ಭಟರು ಸೋಲಿನ ಸೂರೆಯಲ್ಲಿ ತೃಪ್ತಿಹೊಂದಿದರು.

ಅರ್ಥ:
ಗರುಡ: ಖಗದ ಜಾತಿ; ಉಬ್ಬಟೆ: ಅತಿಶಯ; ಅಹಿ: ಹಾವು; ನಿಕರ: ಗುಂಪು; ಜರ್ಜ್ಝರಿತ: ಚೂರು ಚೂರಾಗು; ಕಡು: ಬಹಳ; ನಿಬ್ಬರ: ಅತಿಶಯ, ಹೆಚ್ಚಳ; ಧಾಳಿ: ಆಕ್ರಮಣ; ಧೈರ್ಯ: ಎದೆಗಾರಿಕೆ, ಕೆಚ್ಚು; ಹೊರಳು: ತಿರುವು, ಬಾಗು; ಒಡೆ: ಸೀಳು; ಭಟ: ಸೈನಿಕ; ಸಿಡಿ: ಸೀಳು; ಜರುಗು: ಪಕ್ಕಕ್ಕೆ ಸರಿ, ಜರಿ; ಜವ: ಯಮ; ಕುಂದು: ಕೊರತೆ, ನೂನ್ಯತೆ; ಮಡ: ಪಾದದ ಹಿಂಭಾಗ, ಹಿಮ್ಮಡಿ; ಮುರಿ: ಸೀಳು; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ತಣಿ: ತೃಪ್ತಿಹೊಂದು; ಪರಿಭವ: ಅಪಮಾನ, ಸೋಲು; ಸೂರೆ: ಕೊಳ್ಳೆ, ಲೂಟಿ;

ಪದವಿಂಗಡಣೆ:
ಗರುಡನ್+ಉಬ್ಬಟೆಗ್+ಅಹಿ+ನಿಕರ+ ಜ
ಜ್ಝರಿತವಾದವೊಲ್+ಇವನ +ಕಡು +ನಿ
ಬ್ಬರದ +ಧಾಳಿಗೆ +ಧೈರ್ಯ+ಕೆಟ್ಟುದು +ಕೂಡೆ +ಕುರುಸೇನೆ
ಹೊರಳಿ+ಒಡೆದರು +ಭಟರು +ಸಿಡಿದರು
ಜರುಗಿದರು +ಜವ+ಕುಂದಿದರು +ಮಡ
ಮುರಿದು +ಬಿರುದರು +ತಣಿದುದೈ +ಪರಿಭವದ +ಸೂರೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರುಡನುಬ್ಬಟೆಗಹಿನಿಕರ ಜಜ್ಝರಿತವಾದವೊಲಿ

ಪದ್ಯ ೧೧: ಯುದ್ಧರಂಗವು ಹೇಗೆ ರಂಜಿಸಿತು?

ಸುರಿದ ಕರುಳ್ಗಳ ಸಿಡಿದ ಹಲುಗಳ
ಜರಿದ ತಲೆಗಳ ಹಾಯ್ದ ಮೂಳೆಯ
ಹರಿದ ನರವಿನ ಬಿಗಿದ ಹುಬ್ಬಿನ ಬಿಟ್ಟ ಕಣ್ಣುಗಳ
ಮುರಿದ ಗೋಣಿನ ಬಸಿವ ತೊರಳೆಯ
ಹರಿವ ರಕುತದ ತಳಿತ ಖಂಡದ
ಬಿರಿದ ಬಸುರಿನ ರೌರವದ ರಣಭೂಮಿ ರಂಜಿಸಿತು (ದ್ರೋಣ ಪರ್ವ, ೧೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಜೋಲು ಬಿದ್ದ ಕರುಳುಗಳು, ಮುರಿದು ಹಾರಿದ ಹಲ್ಲುಗಳು, ಕೆಳಜಾರಿದ ತಲೆಗಳು, ಹೊರಗೆ ಕಾಣಿಸುತ್ತಿದ್ದ ಮೂಳೆಗಳು, ಹರಿದ ನರಗಳು, ಬಿಗಿದ ಹುಬ್ಬುಗಳು, ಬಿಟ್ಟ ಕಣ್ಣುಗಳು, ಮುರಿದ ಕುತ್ತಿಗೆಗಳು, ಸೋರುವ ಗುಲ್ಮಗಳು, ಹರಿಯುವ ರಕ್ತ, ಹೊರಕ್ಕೆ ಬಂದ ಮಾಂಸ ಖಂಡ, ಬಿರಿದ ಹೊಟ್ಟೆಗಳ ಭಯಂಕರವಾದ ಯುದ್ಧರಂಗವು ರಂಜಿಸಿತು.

ಅರ್ಥ:
ಸುರಿ: ಮೇಲಿನಿಂದ ಬೀಳು, ವರ್ಷಿಸು; ಕರುಳು: ಪಚನಾಂಗ; ಸಿಡಿ: ಚಿಮ್ಮು; ಹಲು: ದಂತ; ಜರಿ: ಪತನವಾಗು, ಬೀಳು; ತಲೆ: ಶಿರ; ಹಾಯ್ದು: ಹೊಡೆ; ಮೂಳೆ: ಎಲುಬು; ಹರಿ: ಸೀಳು; ನರ: ಶಕ್ತಿ, ಸಾಮರ್ಥ್ಯ; ಬಿಗಿ: ಬಂಧಿಸು; ಹುಬ್ಬು: ಕಣ್ಣಿನ ಮೇಲಿನ ಕೂದಲು; ಬಿಟ್ಟ: ತೊರೆ; ಕಣ್ಣು: ನಯನ; ಮುರಿ: ಸೀಳು; ಗೋಣು: ಕಂಠ, ಕುತ್ತಿಗೆ; ಬಸಿ: ಒಸರು, ಸ್ರವಿಸು; ತೊರಳೆ: ಗುಲ್ಮ, ಪ್ಲೀಹ; ಹರಿ: ಪ್ರವಹಿಸು; ರಕುತ: ನೆತ್ತರು; ತಳಿತ: ಚಿಗುರು; ಖಂಡ: ತುಂಡು, ಚೂರು; ಬಿರಿ: ಬಿರುಕು, ಸೀಳು; ಬಸುರು: ಹೊಟ್ಟೆ; ರೌರವ: ಭಯಂಕರ; ರಣಭೂಮಿ: ಯುದ್ಧಭೂಮಿ; ರಂಜಿಸು: ಹೊಳೆ, ಪ್ರಕಾಶಿಸು

ಪದವಿಂಗಡಣೆ:
ಸುರಿದ +ಕರುಳ್ಗಳ +ಸಿಡಿದ +ಹಲುಗಳ
ಜರಿದ +ತಲೆಗಳ +ಹಾಯ್ದ +ಮೂಳೆಯ
ಹರಿದ +ನರವಿನ +ಬಿಗಿದ +ಹುಬ್ಬಿನ +ಬಿಟ್ಟ +ಕಣ್ಣುಗಳ
ಮುರಿದ +ಗೋಣಿನ +ಬಸಿವ +ತೊರಳೆಯ
ಹರಿವ +ರಕುತದ +ತಳಿತ +ಖಂಡದ
ಬಿರಿದ +ಬಸುರಿನ +ರೌರವದ +ರಣಭೂಮಿ +ರಂಜಿಸಿತು

ಅಚ್ಚರಿ:
(೧) ರ ಕಾರದ ತ್ರಿವಳಿ ಪದ – ರೌರವದ ರಣಭೂಮಿ ರಂಜಿಸಿತು
(೨) ಸುರಿ, ಜರಿ, ಹರಿ, ಮುರಿ, ಬಿರಿ – ಪ್ರಾಸ ಪದಗಳು

ಪದ್ಯ ೧೦: ಘಟೋತ್ಕಚನ ಯುದ್ಧವು ಹೇಗೆ ನಡೆದಿತ್ತು?

ಎರಗಿದನು ಸಿಡಿಲಾಗಿ ಕಂಗಳೊ
ಳಿರುಕಿದನು ಮಿಂಚಾಗಿ ಮಳೆಯನು
ಕರೆದು ನಾದಿದನಾತಪತ್ರ ತನುತ್ರ ಸೀಸಕವ
ತುರುಕಿದನು ಹೊಗೆಯಾಗಿ ಮಿಗೆ ಬೊ
ಬ್ಬಿರಿದನೊಂದೆಡೆಯಲ್ಲಿ ಸುಭಟರ
ನೊರಲಿಸಿದನೊಂದೆಡೆಯಲೇನೆಂಬೆನು ಮಹಾರಣವ (ದ್ರೋಣ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಿಡಿಲಾಗಿ ಹೊಡೆದನು, ಮಿಂಚಾಗಿ ಕಣ್ಣುಗಳ ಬಳಿ ಸುಳಿದಉ ಕಂಗೆಡಿಸಿದನು. ಮಳೆಯಾಗಿ ಸುರಿದು ಕೊಡೆ, ಕವಚ, ಶಿರಸ್ತ್ರಾಣಗಲನ್ನು ನೆನೆಸಿದನು. ಹೊಗೆಯಾಗಿ ಹೊಕ್ಕು ಉಸಿರುಗೆಡಿಸಿದನು. ಅಲ್ಲಲ್ಲಿ ನಿಮ್ತು ಭಯಂಕರವಾಗಿ ಬೊಬ್ಬಿರಿದನು. ಆ ಮಹಾಯುದ್ಧವನ್ನು ಹೇಗೆ ವರ್ಣಿಸಲಿ ಎಂದು ಸಂಜಯನು ವಿವರಿಸಿದನು.

ಅರ್ಥ:
ಎರಗು: ಬಾಗು; ಸಿಡಿಲು: ಚಿಮ್ಮು, ಸಿಡಿ; ಕಂಗಳು: ಕಣ್ಣು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಮಿಂಚು: ಹೊಳಪು; ಮಳೆ: ವರ್ಷ; ಕರೆ: ಬರೆಮಾಡು; ನಾದು: ಕಲಸು; ಆತಪತ್ರ: ಕೊಡೆ, ಛತ್ರಿ; ತನುತ್ರ: ಕವಚ; ಸೀಸಕ: ಶಿರಸ್ತ್ರಾಣ; ತುರುಕು: ಒತ್ತಿ ತುಂಬು; ಹೊಗೆ: ಧೂಮ; ಮಿಗೆ: ಹೆಚ್ಚು; ಬೊಬ್ಬಿರಿ: ಕೂಗು, ಅರಚು; ಸುಭಟ: ಸೈನಿಕ; ಒರಲು: ಅರಚು, ಕೂಗಿಕೊಳ್ಳು; ಮಹಾರಣ: ಮಹಾಯುದ್ಧ;

ಪದವಿಂಗಡಣೆ:
ಎರಗಿದನು +ಸಿಡಿಲಾಗಿ +ಕಂಗಳೊಳ್
ಇರುಕಿದನು +ಮಿಂಚಾಗಿ +ಮಳೆಯನು
ಕರೆದು +ನಾದಿದನ್+ಆತಪತ್ರ +ತನುತ್ರ +ಸೀಸಕವ
ತುರುಕಿದನು +ಹೊಗೆಯಾಗಿ +ಮಿಗೆ +ಬೊ
ಬ್ಬಿರಿದನ್+ಒಂದೆಡೆಯಲ್ಲಿ +ಸುಭಟರನ್
ಒರಲಿಸಿದನ್+ಒಂದೆಡೆಯಲ್+ಏನೆಂಬೆನು +ಮಹಾರಣವ

ಅಚ್ಚರಿ:
(೧) ಸಿಡಿಲಾಗಿ, ಮಿಂಚಾಗಿ, ಹೊಗೆಯಾಗಿ – ಘಟೋತ್ಕಚನ ಮಾಯಾಯುದ್ಧದ ಪರಿ
(೨) ತನುತ್ರ, ಆತಪತ್ರ – ಪದಗಳ ಬಳಕೆ