ಪದ್ಯ ೬೭: ಆದಿಶೇಷನ ಕೊರಳೇಕೆ ನೆಟ್ಟಗೆ ನಿಂತಿತು?

ರಥಚಯವ ನುಗ್ಗೊತ್ತಿದನು ಸಾ
ರಥಿಗಳನು ಸೀಳಿದನು ಸುಮಹಾ
ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ
ಶಿಥಿಲವಾಯಿತು ವೈರಿಬಲವತಿ
ಮಥನವಾಯಿತು ದೈತ್ಯನೂಳಿಗ
ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ (ದ್ರೋಣ ಪರ್ವ, ೧೫ ಸಂಧಿ, ೬೭ ಪದ್ಯ)

ತಾತ್ಪರ್ಯ:
ಬಕಾಸುರನ ಮಗನ ಸೇನೆಯ ರಥಗಳನ್ನು ಪುಡಿಯಾಗುವಂತೆ ಕುಕ್ಕಿದನು. ಸಾರಥಿಗಳನ್ನು ಸೀಳಿದನು. ಮಹಾರಥರ ನಡುವೆ ನುಗ್ಗಿ ಅವರ ಬಿಂಕವನ್ನು ಮುರಿದನು. ವೈರಿ ಸೈನ್ಯವು ಬಲಹೀನವಾಯಿತು. ಘಟೋತ್ಕಚನ ಹಾವಳಿ ಮಿತಿ ಮೀರಿತು. ಭೂಮಿಯ ಭಾರವು ಕುಗ್ಗಿದುದರಿಂದ ಆದಿಶೇಷನ ಕೊರಳು ನೆಟ್ಟನೆ ನಿಂತಿತು.

ಅರ್ಥ:
ರಥ: ಬಂಡಿ; ಚಯ: ಸಮೂಹ, ರಾಶಿ; ನುಗ್ಗು: ತಳ್ಳು; ಒತ್ತು: ಆಕ್ರಮಿಸು, ಮುತ್ತು; ಸಾರಥಿ: ಸೂತ; ಸೀಳು: ಕಡಿದು ಹಾಕು; ಮಹಾರಥ: ಪರಾಕ್ರಮಿ; ಬಿಂಕ: ಗರ್ವ, ಜಂಬ; ಬಿಗುಹು: ಗಟ್ಟಿ; ಮುರಿ: ಸೀಳು; ಹೊಕ್ಕು: ಸೇರು; ಬೀದಿ: ಮಾರ್ಗ; ಶಿಥಿಲ: ದೃಢವಲ್ಲದ; ವೈರಿ: ಶತ್ರು; ಬಲ: ಶಕ್ತಿ; ಮಥನ: ನಾಶ; ದೈತ್ಯ: ರಾಕ್ಷಶ; ಊಳಿಗ: ಕೆಲಸ, ಕಾರ್ಯ; ಪೃಥು: ಭೂಮಿ; ಲಘು: ಭಾರವಿಲ್ಲದ; ಫಣಿ: ಹಾವು; ಕೊರಳು: ಕಂಠ; ನಿಮಿರು: ನೆಟ್ಟಗಾಗು;

ಪದವಿಂಗಡಣೆ:
ರಥ+ಚಯವ +ನುಗ್+ಒತ್ತಿದನು +ಸಾ
ರಥಿಗಳನು +ಸೀಳಿದನು +ಸುಮಹಾ
ರಥರ +ಬಿಂಕದ +ಬಿಗುಹ +ಮುರಿದನು +ಹೊಕ್ಕು +ಬೀದಿಯಲಿ
ಶಿಥಿಲವಾಯಿತು +ವೈರಿಬಲವ್+ಅತಿ
ಮಥನವಾಯಿತು +ದೈತ್ಯನ್+ಊಳಿಗ
ಪೃಥುವಿ +ಲಘುತರವಾಯ್ತು +ಫಣಿಪನ+ ಕೊರಳು +ಸೈನಿಮಿರೆ

ಅಚ್ಚರಿ:
(೧) ರೂಪಕದ ಪ್ರಯೋಗ – ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ
(೨) ರಥ, ರಥಿ, ರಥ – ೧-೩ ಸಾಲಿನ ಪದಗಳ ರಚನೆ

ಪದ್ಯ ೬೬: ಬಕಾಸುರನ ಮಗನನ್ನು ಘಟೋತ್ಕಚನು ಏನು ಮಾಡಿದನು?

ಸಿಡಿಲು ಮೊರೆದರೆ ಸರ್ಪನಂಜುವು
ದಡಗುವನೆ ಗರುಡನು ವೃಥಾ ಕೆಡೆ
ನುಡಿಯ ನುಡಿದರೆ ದಿಟ್ಟನೆಂಬರೆ ವೀರರಾದವರು
ಫಡ ಫಡೆನುತ ಬಕಾಸುರನ ಮಗ
ನಡಸಿದನು ಕೂರಂಬನಾತನ
ಕಡುಹ ಹೊಗಳುತ ಹೊಕ್ಕು ಹಿಡಿದನು ಬೀಸಿದನು (ದ್ರೋಣ ಪರ್ವ, ೧೫ ಸಂಧಿ, ೬೬ ಪದ್ಯ)

ತಾತ್ಪರ್ಯ:
ಬಕಾಸುರನ ಮಗನು ನುಡಿಯುತ್ತಾ, ಎಲವೋ ಘಟೋತ್ಕಚ, ಸಿಡಿಲಿನ ಶಬ್ದಕ್ಕೆ ಹೆದರುತ್ತದೆ. ಗರುಡನು ಅಡಗಿಕೊಳ್ಳುವನೇ? ಬಾಯಿಗೆ ಬಂದಂತೆ ಮಾತನಾಡಿದರೆ ನೀನು ದಿಟ್ಟನೆಂದು ವೀರರು ಲೆಕ್ಕಿಸುವರೇ? ಫಡಾ ಎಂದು ಘಟೋತ್ಕಚನ ಮೇಲೆ ಬಾಣಗಳನ್ನು ಬಿಡಲು, ಘಟೋತ್ಕಚನು ಆತನ ಶೌರ್ಯವನ್ನು ಹೊಗಳುತ್ತಾ ನುಗ್ಗಿ ಅವನನ್ನು ಹಿಡಿದು ಒಗೆದನು.

ಅರ್ಥ:
ಸಿಡಿಲು: ಅಶನಿ, ಚಿಮ್ಮು; ಮೊರೆ:ಧ್ವನಿ ಮಾಡು, ಝೇಂಕರಿಸು; ಸರ್ಪ: ಉರಗ; ಅಂಜು: ಹೆದರು; ಅಡಗು: ಅವಿತುಕೊಳ್ಳು; ವೃಥ: ಸುಮ್ಮನೆ; ಕೆಡೆ: ಬೀಳು, ಕುಸಿ; ಫಡ: ತಿರಸ್ಕಾರದ ಮಾತು; ಮಗ: ಸುತ; ಅಡಸು: ಆಕ್ರಮಿಸು, ಮುತ್ತು; ಕೂರಂಬು: ಹರಿತವಾದ ಬಾಣ; ಕಡುಹು: ಪರಾಕ್ರಮ; ಹೊಗಳು: ಪ್ರಶಂಶಿಸು; ಹೊಕ್ಕು: ಸೇರು; ಹಿಡಿ: ಗ್ರಹಿಸು; ಬೀಸು: ತೂಗುವಿಕೆ;

ಪದವಿಂಗಡಣೆ:
ಸಿಡಿಲು+ ಮೊರೆದರೆ+ ಸರ್ಪನ್+ಅಂಜುವುದ್
ಅಡಗುವನೆ +ಗರುಡನು +ವೃಥಾ +ಕೆಡೆ
ನುಡಿಯ +ನುಡಿದರೆ +ದಿಟ್ಟನೆಂಬರೆ +ವೀರರಾದವರು
ಫಡ +ಫಡೆನುತ+ ಬಕಾಸುರನ+ ಮಗನ್
ಅಡಸಿದನು +ಕೂರಂಬನ್+ಆತನ
ಕಡುಹ+ ಹೊಗಳುತ+ ಹೊಕ್ಕು +ಹಿಡಿದನು+ ಬೀಸಿದನು

ಅಚ್ಚರಿ:
(೧) ಉಪಮಾನದ ಪ್ರಯೋಗ -ಸಿಡಿಲು ಮೊರೆದರೆ ಸರ್ಪನಂಜುವುದಡಗುವನೆ ಗರುಡನು

ಪದ್ಯ ೬೫: ಅತಿರಥರು ಹೇಗೆ ಬೊಬ್ಬಿರಿದರು?

ಜಾಗು ದೈತ್ಯರ ರಭಸದಲಿ ಲೇ
ಸಾಗಿ ಕಾದಿದಿರೀಸು ನಮ್ಮಲಿ
ತಾಗಿ ನಿಂದವರಾರು ಕೆಚ್ಚುಳ್ಳವರು ಕಲಿತನದ
ಆಗಲಿನ್ನಾವುದು ನಮಗೆ ಕೈ
ಲಾಗು ನಿಮ್ಮಸುಗಳು ಶರೀರವ
ನೀಗಿ ಕಳೆಯಲಿ ಎಂದು ಬೊಬ್ಬಿರಿದೆಚ್ಚನತಿರಥರ (ದ್ರೋಣ ಪರ್ವ, ೧೫ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭಲೇ ದೈತ್ಯ ರಭಸದಿಂದ ಚೆನ್ನಾಗಿ ಕಾದಾಡುತ್ತಿರುವಿರಿ, ನಮ್ಮೊಡನೆ ಇಷ್ಟಾದರೂ ಕಾದಿದವರಾರೂ ಇಲ್ಲ. ನಮಗೆ ಇದು ಬಹಳ ಗಿಟ್ಟುತ್ತದೆ. ನಿಮ್ಮ ದೇಹಗಳನ್ನು ಪ್ರಾಣಗಳು ಬಿಟ್ಟು ಹೋಗಲಿ ಎಂದು ಅಬ್ಬರಿಸಿ ಅತಿರಥರ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಜಾಗು: ಬಾಗು; ದೈತ್ಯ: ರಾಕ್ಷಸ; ರಭಸ: ವೇಗ; ಲೇಸು: ಒಳಿತು; ಕಾದು: ಹೋರಾಡು; ನಿಂದು: ನಿಲ್ಲು; ಕೆಚ್ಚು: ಧೈರ್ಯ, ಸಾಹಸ; ಕಲಿ: ಶೂರ; ಅಸು: ಪ್ರಾಣ; ಶರೀರ: ಒಡಲು; ಕಳೆ: ತೊರೆ, ಹೋಗಲಾಡಿಸು; ಬೊಬ್ಬಿರಿ: ಗರ್ಜಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಜಾಗು +ದೈತ್ಯರ +ರಭಸದಲಿ+ ಲೇ
ಸಾಗಿ+ ಕಾದಿದಿರ್+ಈಸು +ನಮ್ಮಲಿ
ತಾಗಿ +ನಿಂದವರಾರು +ಕೆಚ್ಚುಳ್ಳವರು+ ಕಲಿತನದ
ಆಗಲಿನ್ನಾವುದು +ನಮಗೆ+ ಕೈ
ಲಾಗು +ನಿಮ್ಮಸುಗಳು+ ಶರೀರವನ್
ಈಗಿ +ಕಳೆಯಲಿ +ಎಂದು +ಬೊಬ್ಬಿರಿದ್+ಎಚ್ಚನ್+ಅತಿರಥರ

ಅಚ್ಚರಿ:
(೧) ಸಾಯಿರಿ ಎಂದು ಹೇಳುವ ಪರಿ – ನಿಮ್ಮಸುಗಳು ಶರೀರವನೀಗಿ ಕಳೆಯಲಿ

ಪದ್ಯ ೬೪: ರಣರಂಗವು ಹೇಗೆ ತೋರಿತು?

ಉರು ತಿಮಿಂಗಿಳನಬುಧಿಯಲಿ ಡಾ
ವರಿಸುವುದು ಹುಲುಮೀನಿನಂತಿರ
ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ
ಅರಿದ ಕೊರಳಿನ ಬಸಿವ ಬಂಬಲು
ಗರುಳ ಜರಿವ ಕಪಾಲದೊಗುನೆ
ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ (ದ್ರೋಣ ಪರ್ವ, ೧೫ ಸಂಧಿ, ೬೪ ಪದ್ಯ)

ತಾತ್ಪರ್ಯ:
ತಿಮಿಂಗಿಲವು ಸಮುದ್ರದಲ್ಲಿ ರಭಸದಿಂದ ಚಲಿಸಿ ಮೀನುಗಳನ್ನು ನುಂಗುತ್ತದೆ. ಕೌರವ ಪಕ್ಷದ ದೈತ್ಯರು ಹುಲು ಮೀನುಗಳಿದ್ದಂತೆ. ಅವರನ್ನು ಘಟೋತ್ಕಚನು ಸಮೂಲವಾಗಿ ಧಟ್ಟಿಸಿದನು. ಕತ್ತರಿಸಿದ ಕೊರಳು, ಜೋಲುವ ಕರುಳು, ಕಡಿದು ಬಿದ್ದ ಕಪಾಲಗಳು ಇವುಗಳಿಂದ ರಕ್ತ ಸುರಿದು ರಣರಂಗವು ರೌದ್ರರಸವನ್ನು ತೋರಿತು.

ಅರ್ಥ:
ಉರು: ವಿಶೇಷವಾದ; ಅಬುಧಿ: ಸಾಗರ; ಡಾವರಿಸು: ಸುತ್ತು, ತಿರುಗಾಡು; ಹುಲು: ಕ್ಷುದ್ರ, ಅಲ್ಪ; ಮೀನು: ಮತ್ಸ್ಯ; ಅರಸ: ರಾಜ; ಹೇಳು: ತಿಳಿಸ್; ಮೊಗೆ: ಮಣ್ಣಿನ ಗಡಿಗೆ; ದೈತ್ಯ: ರಾಕ್ಷಸ; ಜಲನಿಧಿ: ಸಾಗರ; ಅರಿ: ಸೀಳು; ಕೊರಳು: ಕಂಠ; ಬಸಿ: ಒಸರು, ಸ್ರವಿಸು; ಬಂಬಲು: ರಾಶಿ; ಕರುಳು: ಪಚನಾಂಗ; ಜರಿ: ತಿರಸ್ಕರಿಸು; ಕಪಾಲ: ಕೆನ್ನೆ; ನೆತ್ತರ: ರಕ್ತ; ರಣ: ಯುದ್ಧರಂಗ; ಅವನಿ: ಭೂಮಿ; ಕರೆವು: ಬರೆಮಾಡು; ರೌದ್ರ: ಭಯಂಕರ; ರಸ: ಸಾರ;

ಪದವಿಂಗಡಣೆ:
ಉರು +ತಿಮಿಂಗಿಳನ್+ಅಬುಧಿಯಲಿ+ ಡಾ
ವರಿಸುವುದು +ಹುಲು+ಮೀನಿನಂತಿರಲ್
ಅರಸ +ಹೇಳುವುದೇನು +ಮೊಗೆದನು +ದೈತ್ಯ +ಜಲನಿಧಿಯ
ಅರಿದ+ ಕೊರಳಿನ+ ಬಸಿವ +ಬಂಬಲು
ಕರುಳ +ಜರಿವ +ಕಪಾಲದೊಗುನ್
ಎತ್ತರ +ರಣ+ಅವನಿ +ಕರೆವುತಿರ್ದುದು +ರೌದ್ರಮಯ+ರಸವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರು ತಿಮಿಂಗಿಳನಬುಧಿಯಲಿ ಡಾವರಿಸುವುದು ಹುಲುಮೀನಿನಂತಿರ
(೨) ಅಬುಧಿ, ಜಲನಿಧಿ – ಸಮಾನಾರ್ಥಕ ಪದ

ಪದ್ಯ ೬೩: ಸೈನ್ಯವನ್ನು ಘಟೋತ್ಕಚನ ಮಂದಿ ಹೇಗೆ ಹೊಕ್ಕರು?

ಎಸುಗೆಯೊಳ್ಳಿತಲಾಯುಧನಲಂ
ಬುಸನ ಪರಿ ತಪ್ಪಲ್ಲ ತಪ್ಪ
ಲ್ಲಸುರನಹೆಯೋ ಜಾಗು ಕಿಮ್ಮೀರಾತ್ಮಜಾಯೆನುತ
ಅಸಿ ಪರಶು ಪಟ್ಟಿಸ ಮುಸುಂಡಿ
ಪ್ರಸರ ಧಾರಾಪಾತದಲೈ ಮೈ
ಬಸಿಯೆ ರಕುತದ ಸಾರ ಸಾಲಿಡೆ ಬಲದೊಳೊಳಹೊಕ್ಕ (ದ್ರೋಣ ಪರ್ವ, ೧೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ಆಲಾಯುಧಾ ನಿನ್ನ ಬಾಣ ಪ್ರ್ಯಓಗ ಬಲು ಚೆನ್ನ, ಅಲಂಬುಸ ನಿನ್ನ ರೀತಿ ತಪ್ಪಲ್ಲ. ಹೌದು ಕಿಮ್ಮೀರನ ಮಗನೇ ಸರಿ, ಎನ್ನುತ್ತಾ ಕತ್ತಿ, ಗಂಡುಗೊಡಲಿ, ಪಟ್ಟಿಸ, ಮುಸುಂಡಿಗಳಿಂದ ಹೊಡೆದು ರಕ್ತ ಹರಿಯುತ್ತಿರಲು ಸೈನ್ಯದ ಒಳಕ್ಕೆ ಹೊಕ್ಕನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಪರಿ: ರೀತಿ; ತಪ್ಪು: ಸರಿಯಿಲ್ಲದ್ದು; ಅಸುರ: ರಾಕ್ಷಸ; ಜಾಗು: ಬಾಗು, ಒಲೆದಾಡು; ಆತ್ಮಜ: ಮಗ; ಅಸಿ: ಕತ್ತಿ; ಪರಶು: ಕೊಡಲಿ, ಕುಠಾರ; ಪಟ್ಟಸ: ಭರ್ಜಿ, ಈಟಿ; ಮುಸುಂಡಿ: ಮಕೇಡಿ, ಅಂಜುಬುರುಕ; ಪ್ರಸರ: ಸಮೂಹ; ಧಾರಾಪಾತ: ಜಲಪಾತ; ಬಸಿ: ಒಸರು, ಸ್ರವಿಸು; ಮೈ: ತನು, ದೇಹ; ರಕುತ: ನೆತ್ತರು; ಸಾರ: ತಿರುಳು, ಗುಣ; ಬಲ: ಸೈನ್ಯ;

ಪದವಿಂಗಡಣೆ:
ಎಸುಗೆ+ ಒಳ್ಳಿತ್ +ಅಲಾಯುಧನ್+ಅಲಂ
ಬುಸನ +ಪರಿ +ತಪ್ಪಲ್ಲ +ತಪ್ಪಲ್ಲ್
ಅಸುರನ್+ಅಹೆಯೋ +ಜಾಗು +ಕಿಮ್ಮೀರ+ಆತ್ಮಜಾ+ಎನುತ
ಅಸಿ +ಪರಶು+ ಪಟ್ಟಿಸ +ಮುಸುಂಡಿ
ಪ್ರಸರ +ಧಾರಾಪಾತದಲೈ +ಮೈ
ಬಸಿಯೆ +ರಕುತದ+ ಸಾರ +ಸಾಲಿಡೆ +ಬಲದೊಳ್+ಒಳಹೊಕ್ಕ

ಅಚ್ಚರಿ:
(೧) ಪ್ರಶಂಶಿಸುವ ಪರಿ – ಎಸುಗೆಯೊಳ್ಳಿತಲಾಯುಧನಲಂಬುಸನ ಪರಿ ತಪ್ಪಲ್ಲ
(೨) ೧ ಸಾಲು ಒಂದೇ ಪದವಾಗಿ ರಚಿತವಾಗಿರುವುದು
(೩) ಆಯುಧಗಳ ಹೆಸರು – ಅಸಿ, ಪರಶು, ಪಟ್ಟಿಸ, ಮುಸುಂಡಿ