ಪದ್ಯ ೧೭: ಅರ್ಜುನನು ದುಃಖದಿಂದ ಅಭಿಮನ್ಯುವನ್ನು ಹೇಗೆ ಕರೆದನು?

ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು (ದ್ರೋಣ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅರ್ಜುನನು ತೊದಲುತ್ತಾ, ಮಗನೆಲ್ಲಿ, ನನ್ನ ಪ್ರೀತಿಯ ಸಾಗರವೆಲ್ಲಿ, ಬಾಲಕರ ಉದ್ಯಾನದ ಮಾವಿನ ಮರವೆಲ್ಲಿ ಹೇಳು ಎಂದು ಮನಸ್ಸಿನಲ್ಲಿ ನೊಂದು, ಸುಭದ್ರೆಯ ಸ್ಥಿತಿಯನ್ನು ನೋಡಿ, ಬೆದೆ ಬೆದೆ ಬೆಂದು ಯುಧಿಷ್ಠಿರನ ಮುಖವನ್ನು ನೋಡಿದನು.

ಅರ್ಥ:
ಕಂದ: ಮಗು; ಮೋಹ: ಪ್ರೀತಿ; ಸಿಂಧು: ಸಾಗರ; ತನುಜ: ಮಗ; ವನ: ಉದ್ಯಾನವನ, ಕಾಡು; ಮಾಕಂದ: ಮಾವಿನ ಮರ; ಹೇಳು: ತಿಳಿಸು; ತೊದಲು: ಸರಿಯಾಗಿ ಮಾತನಾಡದ ಸ್ಥಿತಿ; ನೊಂದು: ನೋವನ್ನುಂಡು; ಮನ: ಮನಸ್ಸು; ಸತಿ: ಹೆಂಡತಿ; ಅಂದ: ಸ್ಥಿತಿ; ಕಾಣು: ತೋರು; ಬೆದೆ: ಬೇಯುವುದನ್ನು ವರ್ಣಿಸುವ ಪದ; ಬೆಂದು: ಸಂಕಟಕ್ಕೊಳಗಾಗು; ಯಮ: ಜವ; ಕುಮಾರ: ಮಗ; ಮೊಗ: ಮುಖ; ನೋಡು: ವೀಕ್ಷಿಸು;

ಪದವಿಂಗಡಣೆ:
ಕಂದನ್+ಆವೆಡೆ +ತನ್ನ +ಮೋಹದ
ಸಿಂಧುವ್+ಆವೆಡೆ +ತನುಜ+ವನ+ ಮಾ
ಕಂದನ್+ಆವೆಡೆ +ಹೇಳೆನುತ +ಫಲುಗುಣನು+ ತೊದಳಿಸುತ
ನೊಂದು +ಮನದಲಿ +ಪಾರ್ಥನಾ +ಸತಿ
ಅಂದವನು+ ಕಾಣುತ್ತ +ಬೆದೆ+ಬೆದೆ
ಬೆಂದು +ಯಮರಾಜನ +ಕುಮಾರನ +ಮೊಗವ +ನೋಡಿದನು

ಅಚ್ಚರಿ:
(೧) ಧರ್ಮಜನನ್ನು ಯಮರಾಜನ ಕುಮಾರ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಕರೆಯುವ ಪರಿ – ತನ್ನ ಮೋಹದ ಸಿಂಧುವಾವೆಡೆ ತನುಜವನ ಮಾಕಂದನಾವೆಡೆ
(೩) ಕಂದ, ಮಾಕಂದ – ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ