ಪದ್ಯ ೧೫: ಸುಭದ್ರೆಯು ನೋವಿನಿಂದ ಏನೆಂದು ನುಡಿದಳು?

ಮಗನು ಪಂಚ ದ್ರೌಪದೇಯರ
ಬಗೆಯನೆನ್ನವನಿರಲು ರಾಜ್ಯವ
ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ
ಬಗೆಯೊಲವು ಫಲವಾಯ್ತಲಾ ಕಾ
ಳೆಗವ ಗೆಲಿದೈವರು ಕುಮಾರರು
ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು (ದ್ರೋಣ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸುಭದ್ರೆ ತನ್ನ ನೋವನ್ನು ಹೊರಹಾಕುತ್ತಾ, ಅಭಿಮನ್ಯುವಿದ್ದರೆ ದ್ರೌಪದಿಯ ಮಕ್ಕಳನ್ನು ಲೆಕ್ಕಿಸದೆ ರಾಜ್ಯವಾಳುವನೆಂದು ಬಗೆದು ಕಂದನನ್ನು ಯುದ್ಧಕ್ಕೆ ನೂಕಿದಿರಲ್ಲವೇ? ನಿಮ್ಮ ಇಷ್ಟ ಸಿದ್ಧಿಸಿತು. ಯುದ್ಧವನ್ನು ಗೆದ್ದು ಐವರು ಉಪಪಾಂಡವರನ್ನು ಹಸ್ತಿನಾವತಿಯ ಅರಸರನ್ನಾಗಿ ಮಾಡಿರಿ ಎಂದು ಅಳುತ್ತಾ ನುಡಿದಳು.

ಅರ್ಥ:
ಮಗ: ಪುತ್ರ; ಪಂಚ: ಐದು; ಬಗೆ: ರೀತಿ; ರಾಜ್ಯ: ರಾಷ್ಟ್ರ; ಹೊಗಿಸು: ಒಳಹೋಗಿಸು; ಕಂದ: ಮಗು; ರಣ: ಯುದ್ಧ; ನೂಕು: ತಳ್ಳು; ಒಲವು: ಪ್ರೀತಿ; ಫಲ: ಪ್ರಯೋಜನ; ಕಾಳೆಗ: ಯುದ್ಧ; ಗೆಲಿದು: ಜಯಿಸು; ಕುಮಾರ: ಮಕ್ಕಳು; ಗಜಪುರ: ಹಸ್ತಿನಾಪುರ; ಹಲುಬು: ದುಃಖಪಡು;

ಪದವಿಂಗಡಣೆ:
ಮಗನು +ಪಂಚ +ದ್ರೌಪದೇಯರ
ಬಗೆಯನ್+ಎನ್ನವನಿರಲು +ರಾಜ್ಯವ
ಹೊಗಿಸಲ್+ಅನುವಿಲ್ಲೆಂದು +ಕಂದನ +ರಣಕೆ +ನೂಕಿದಿರಿ
ಬಗೆ+ಒಲವು +ಫಲವಾಯ್ತಲಾ +ಕಾ
ಳೆಗವ +ಗೆಲಿದ್+ಐವರು +ಕುಮಾರರು
ಹೊಗಿಸಿರೈ +ಗಜಪುರವನೆಂದು +ಸುಭದ್ರೆ +ಹಲುಬಿದಳು

ಅಚ್ಚರಿ:
(೧) ಮಗ, ಕುಮಾರ, ಕಂದ; ರಣ, ಕಾಳೆಗ – ಸಾಮ್ಯಾರ್ಥ ಪದ

ನಿಮ್ಮ ಟಿಪ್ಪಣಿ ಬರೆಯಿರಿ