ಪದ್ಯ ೫: ಜೋಧರು ಆನೆಯನ್ನು ಹೇಗೆ ಏರಿದರು?

ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು (ದ್ರೋಣ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ರೆಂಚೆಯಲ್ಲಿ ಬಾಣಗಳು ಬಿಲ್ಲುಗಳು ಸೂನಿಗೆಗಳು ಸೇರಿಕೊಂಡಿದ್ದವು. ಸರಿಹಗ್ಗಗಳು ಕೈಗುಂಡು, ಕವಣೆಗಲ್ಲು, ಲೌಡಿ, ಖಡ್ಗಗಳನ್ನು ಜೋಡಿಸಿ ಮಾವುತರು ಗರ್ಜಿಸಿ ಆನೆಯನ್ನೇರಿದರು.

ಅರ್ಥ:
ಗಗನ: ಆಗಸ; ತಳ: ಕೆಳಗು, ಪಾತಾಳ, ನೆಲ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ತುಂಬು: ಅತಿಶಯ, ಬಾಹುಳ್ಯ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕಣೆ: ಬಾಣ; ಬಿಗಿ: ಭದ್ರವಾಗಿರುವುದು; ಆಳಿ: ಮೋಸ, ವಂಚನೆ, ಗುಂಪು; ಬಿಲ್ಲು: ಚಾಪ; ತೆತ್ತಿಸು: ಜೋಡಿಸು, ಕೂಡಿಸು; ಸೂನಿಗೆ: ಒಂದು ಬಗೆಯ ಆಯುಧ; ಉಗಿ: ಹೊರಹಾಕು; ನೇಣು: ಹಗ್ಗ, ಹುರಿ; ಗುಂಡು: ತುಪಾಕಿಯ ಗೋಲಿ, ಗುಂಡುಕಲ್ಲು; ಕವಣೆ: ಕಲ್ಲಿನಿಂದ ಬೀಸಿ ಹೊಡೆಯಲು ಮಾಡಿದ ಜಾಳಿಗೆಯ ಸಾಧನ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ಜೋಡಿಸು: ಕೂಡಿಸು; ಜೋಧ: ಆನೆ ಮೇಲೆ ಕೂತು ಯುದ್ಧ ಮಾಡುವವ; ಅಡರು: ಮೇಲಕ್ಕೆ ಹತ್ತು; ಬೊಬ್ಬಿರಿ: ಆರ್ಭಟಿಸು;

ಪದವಿಂಗಡಣೆ:
ಗಗನ+ ತಳವನು +ಬಿಗಿದ+ ಬಲು +ರೆಂ
ಚೆಗಳ +ತುಂಬಿದ +ಹೊದೆಯ +ಕಣೆಗಳ
ಬಿಗಿದನ್ + ಆಳಿಯ +ಬಿಲ್ಲುಗಳ +ತೆತ್ತಿಸಿದ +ಸೂನಿಗೆಯ
ಉಗಿವ+ ಸರಿನೇಣುಗಳ +ಕೈಗುಂ
ಡುಗಳ+ ಕವಣೆಯ +ಲೌಡಿ +ಕರವಾ
ಳುಗಳ+ ಜೋಡಿಸಿ +ಜೋದರ್+ಅಡರಿದರ್+ಅಂದು +ಬೊಬ್ಬಿರಿದು

ನಿಮ್ಮ ಟಿಪ್ಪಣಿ ಬರೆಯಿರಿ