ಪದ್ಯ ೫: ಸಂಜಯನು ಧೃತರಾಷ್ಟ್ರನಿಗೆ ಹೇಗೆ ತನ್ನ ತಪ್ಪನ್ನು ತೋರಿದನು?

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ (ದ್ರೋಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ರಾಜ ನೀನೇಕೆ ಈಗ ದುಃಖಿಸುವೆ? ಅವಿವೇಕತನದಿಂದ ಮಗನನ್ನು ಉಬ್ಬಿಸಿ, ಬೆಳೆಸಿ, ಕುಹಕದ ಕುಟಿಲದ ವಿದ್ಯೆಗಳನ್ನು ಕಲಿಸಿದೆ, ವಿವೇಕಿಗಳಿಗೆ ವೀರರಿಗೆ ನಿಮ್ಮಲ್ಲಿ ಸ್ಥಳವಿಲ್ಲ, ಈಗ ದುಃಖಿಸಿ ಏನು ಬಂತು? ಸಹಿಸಿಕೋ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಶೋಕ: ದುಃಖ; ಜೀಯ: ಒಡೆಯ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಮಗ: ಸುತ; ಹೆಚ್ಚಿಸು: ಏರಿಸು; ಸಾಕು: ಸಲಹು, ರಕ್ಷಿಸು; ಕಲಿಸು: ಹೇಳಿಕೊಟ್ಟ; ಕುಟಿಲ: ಮೋಸ, ವಂಚನೆ; ಕುಹಕ: ಮೋಸ, ವಂಚನೆ; ವಿದ್ಯೆ: ಜ್ಞಾನ; ಆಕೆವಾಳ: ವೀರ, ಪರಾಕ್ರಮಿ; ಹೊರಿಗೆ: ಭಾರ, ಹೊರೆ, ಹೊಣೆಗಾರಿಕೆ; ವಿವೇಕ: ಯುಕ್ತಾಯುಕ್ತ ವಿಚಾರ; ಸಲ್ಲು: ಸರಿಹೊಂದು; ಸಾಕು: ತಡೆ; ಸೈರಿಸು: ತಾಳು; ನೃಪ: ರಾಜ;

ಪದವಿಂಗಡಣೆ:
ಶೋಕವೇತಕೆ+ ಜೀಯ +ನೀನ್+ಅವಿ
ವೇಕಿತನದಲಿ +ಮಗನ +ಹೆಚ್ಚಿಸಿ
ಸಾಕಿ +ಕಲಿಸಿದೆ+ ಕುಟಿಲತನವನು+ ಕುಹಕ +ವಿದ್ಯೆಗಳ
ಆಕೆವಾಳರು +ಹೊರಿಗೆಯುಳ್ಳ +ವಿ
ವೇಕಿಗಳು+ ನಿಮ್ಮಲ್ಲಿ+ಸಲ್ಲರು
ಸಾಕ್+ಇದೇತಕೆ +ಸೈರಿಸೆಂದನು+ ಸಂಜಯನು +ನೃಪನ

ಅಚ್ಚರಿ:
(೧) ಅವಿವೇಕ, ವಿವೇಕ – ವಿರುದ್ಧ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲಿಸಿದೆ ಕುಟಿಲತನವನು ಕುಹಕ
(೩) ಸ ಕಾರದ ಸಾಲು ಪದ – ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು

ಪದ್ಯ ೪: ಧೃತರಾಷ್ಟನು ಹೇಗೆ ದುಃಖಿಸಿದನು?

ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ (ದ್ರೋಣ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಸಂಜಯನ ಮಾತನ್ನು ಕೇಳಿ, ಶಿವ ಶಿವಾ ಭೀಷ್ಮನ ಮರಣ ವಾರ್ತೆಯ ವಿಷವು ಕಿವಿಯಲ್ಲಿರುವಾಗಲೇ ದ್ರೋಣನ ನಿಧನವನ್ನು ಕೇಳಿದೆನೇ? ಭಲೇ ವಿಧಿಯೆ! ಎನ್ನುತ್ತಾ ಕೈಗಳಿಂದ ಮುಖವನ್ನು ಮುಚ್ಚಿ, ಮನಸ್ಸಿನಲ್ಲಿ ಹೆಚ್ಚಿದ ಶೋಕದಿಂದ ಮೈಮರೆದನು.

ಅರ್ಥ:
ಅವಸಾನ: ಸತ್ತಮೇಲೆ; ಶ್ರವಣ: ಕೇಳು; ವಿಷ: ನಂಜು; ಕಳಶ: ಕುಂಭ; ಉದ್ಭವ: ಹುಟ್ಟು; ಕಳಶೋದ್ಭವ: ದ್ರೋಣ; ದೇಹ: ತನು, ಕಾಯ; ವ್ಯಥೆ: ದುಃಖ; ಕೇಳು: ಆಲಿಸು; ಪೂತು: ಭಲೇ; ವಿಧಿ: ನಿಯಮ; ಅವನಿಪತಿ: ರಾಜ; ದುಗುಡ: ದುಃಖ; ಮೋರೆ: ಮುಖ; ಅವುಚು: ಹಿಚುಕು; ಕರತಳ: ಹಸ್ತ; ಚಿತ್ತ: ಮನಸ್ಸು; ಬವಣೆ: ಕಷ್ಟ, ತೊಂದರೆ; ಭಾರಣೆ: ಮಹಿಮೆ, ಗೌರವ; ಕಡು: ತುಂಬ; ಶೋಕ: ನೋವು, ದುಃಖ; ಮೈಮರೆ: ಪ್ರಜ್ಞೆಯನ್ನು ಕಳೆದುಕೊಳ್ಳು;

ಪದವಿಂಗಡಣೆ:
ಶಿವಶಿವಾ+ ಭೀಷ್ಮ+ಅವಸಾನ
ಶ್ರವಣ+ ವಿಷವಿದೆ+ ಮತ್ತೆ+ ಕಳಶೋ
ದ್ಭವನ+ ದೇಹ+ವ್ಯಥೆಯ +ಕೇಳ್ದೆನೆ +ಪೂತು +ವಿಧಿಯೆನುತ
ಅವನಿಪತಿ +ದುಗುಡದಲಿ +ಮೋರೆಯಲ್
ಅವುಚಿದನು +ಕರತಳವ +ಚಿತ್ತದ
ಬವಣಿಗೆಯ +ಭಾರಣೆಯ +ಕಡು+ಶೋಕದಲಿ +ಮೈಮರೆದ

ಅಚ್ಚರಿ:
(೧) ಧೃತರಾಷ್ಟ್ರನ ದುಃಖದ ಚಿತ್ರಣ – ಅವನಿಪತಿ ದುಗುಡದಲಿ ಮೋರೆಯಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ

ಪದ್ಯ ೩: ದ್ರೋಣನು ಎಷ್ಟು ದಿನ ಸೇನಾಧಿಪತಿಯಾಗಿದ್ದ?

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರ ರನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ (ದ್ರೋಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಐದು ದಿವಸಗಳ ಕಾಲ ಯುದ್ಧಮಾಡಿ, ಶತ್ರು ಸೈನ್ಯವನ್ನು ಹೊಡೆದು ಕುಟ್ಟಿ, ವೈರಿರಾಜರನ್ನು ಸಂಹರಿಸಿ ತನ್ನ ಭುಜಬಲವನ್ನು ಮೆರೆದನು. ಆಯುಧದಾರಿಗಳ ಗುರುವಾದ ದ್ರೋಣನು ಆ ಬಳಿಕ ಅಮರಾವತಿಗೆ ಪ್ರಯಾಣ ಮಾಡಿದನು ಎಂದು ಸಂಜಯನು ಹೇಳಲು ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಬಿದ್ದಿತು.

ಅರ್ಥ:
ದಿವಸ: ದಿನ; ಅಹಿತ: ವೈರಿ; ಬಲ: ಸೈನ್ಯ; ಹೊಯ್ದು: ಹೋರಾಡು; ಹೊಡೆ: ಏಟು; ಕುಟ್ಟು: ಅಪ್ಪಳಿಸು; ರಿಪು: ವೈರಿ; ಐದು: ಬಂದುಸೇರು; ದೊರೆ: ರಾಜ; ಇರಿ: ಚುಚ್ಚು; ಮೆರೆ: ಹೊಳೆ; ಭುಜ: ಬಾಹು; ಮಹೋನ್ನತಿ: ಅತಿಶಯ, ಹೆಚ್ಚುಗಾರಿಗೆ; ಕೈದು: ಆಯುಧ; ಗುರು: ಆಚಾರ್ಯ; ಛಡಾಳಿಸು: ಪ್ರಜ್ವಲಿಸು, ಥಳಥಳಿಸು; ಮೈ: ತನು; ತೆಗೆ: ಹೊರತಉ; ನಿರ್ಜರ: ದೇವತೆ; ನಗರ: ಊರು; ಹಾಯ್ದು: ಹಾರು, ಉರಿ: ಬೆಂಕಿ; ಜಠರ: ಹೊಟ್ಟೆ; ಮೋಹರ: ಸೈನ್ಯ, ಯುದ್ಧ; ಅವನಿಪ: ರಾಜ;

ಪದವಿಂಗಡಣೆ:
ಐದು +ದಿವಸದೊಳ್+ಅಹಿತ +ಬಲವನು
ಹೊಯ್ದು +ಹೊಡೆ+ಕುಟ್ಟಾಡಿ +ರಿಪುಗಳೊಳ್
ಐದೆ+ ದೊರೆಗಳನ್+ಇರಿದು +ಮೆರೆದನು +ಭುಜ+ಮಹೋನ್ನತಿಯ
ಕೈದುಕಾರರ+ ಗುರು +ಛಡಾಳಿಸಿ
ಮೈದೆಗೆದು +ನಿರ್ಜರರ+ನಗರಿಗೆ
ಹಾಯ್ದನ್+ಎನಲ್+ಉರಿ+ ಜಠರದಲಿ+ ಮೋಹರಿಸಿತ್+ಅವನಿಪನ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕೈದುಕಾರರ ಗುರು ಛಡಾಳಿಸಿಮೈದೆಗೆದು ನಿರ್ಜರರ ನಗರಿಗೆಹಾಯ್ದನ್
(೨) ಐದು, ಹೊಯ್ದು, ಕೈದು – ಪ್ರಾಸ ಪದಗಳು

ಪದ್ಯ ೨: ದುರ್ಯೋಧನನ ಕಾಲ್ಗುಣ ಎಂತಹದು?

ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಮ್ಬರವೇನನುಸುರುವೆನು
ಮೃತ್ಯು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ (ದ್ರೋಣ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಒಡೆಯಾ ಕೇಳು, ನಿನ್ನ ಮಗನು ಕಾಲಿಟ್ಟಕಡೆ ನೆಲವು ಬಿಸಿಯಾಗಿ ಕಾದಿತು, ಸಮುದ್ರವು ಬತ್ತಿತು, ನಿನ್ನ ಮಗನು ತಲೆಯೆತ್ತಿದರೆ ಆಕಾಶವಉ ಅದನ್ನು ಒಳಕೊಳ್ಳಲಿಲ್ಲ. ಮೃತ್ಯುವು ನಿನಗೆ ಒಲಿದಿದ್ದಾಳೆಂದ ಮೇಲೆ ಉತ್ತರೋತ್ತರವಾದ ಅಭಿವೃದ್ಧಿ ಇನ್ನೆಲ್ಲಿ? ದ್ರೋಣನು ಕೂಡ ಅಸ್ತಂಗತನಾದನು.

ಅರ್ಥ:
ಬತ್ತು: ಒಣಗು, ಬರಿದಾಗು; ಅಂಬುಧಿ: ಸಾಗರ; ಹೊಗು: ತೆರಳು; ಕಾದು: ಹೋರಾಡು; ನೆಲ: ಭೂಮಿ; ನೃಪ: ರಾಜ; ತಲೆ: ಶಿರ; ಕುತ್ತು: ತೊಂದರೆ; ಅಂಬರ: ಆಗಸ; ಉಸುರು: ಮಾತಾಡು; ಮೃತ್ಯು: ಸಾವು; ಒಲಿ: ಬಯಸು, ಅಪೇಕ್ಷಿಸು; ಬಳಿಕ: ನಂತರ; ಉತ್ತರೋತ್ತರ: ಏಳಿಗೆ, ಅಭಿವೃದ್ಧಿ; ನೆರೆ: ಪಕ್ಕ, ಪಾರ್ಶ್ವ; ಚಿತ್ತವಿಸು: ಗಮನವಿಟ್ಟು ಕೇಳು; ಜೀಯ: ಒಡೆಯ; ಹರಿವು: ಕೊನೆಗಾಣಿಸುವ ಉಪಾಯ;

ಪದವಿಂಗಡಣೆ:
ಬತ್ತಿತ್+ಅಂಬುಧಿ +ನಿನ್ನ +ಮಗ +ಹೊಗು
ವತ್ತ+ ಕಾದುದು +ನೆಲನು +ನೃಪ +ತಲೆ
ಕುತ್ತಿ +ಹೊಗಲ್+ಒಳಕೊಳ್ಳದ್+ಅಂಬರವ್+ಏನನ್+ಉಸುರುವೆನು
ಮೃತ್ಯು+ ನಿನಗೊಲಿದಿಹಳು +ಬಳಿಕಿನ್
ಉತ್ತರೋತ್ತರವ್+ಎಲ್ಲಿಯದು +ನೆರೆ
ಚಿತ್ತವಿಸುವುದು +ಜೀಯ +ದ್ರೋಣಂಗಾಯ್ತು +ಹರಿವೆಂದ

ಅಚ್ಚರಿ:
(೧) ದುರ್ಯೋಧನನ ಕಾಲ್ಗುಣ – ಬತ್ತಿತಂಬುಧಿ ನಿನ್ನ ಮಗ ಹೊಗುವತ್ತ ಕಾದುದು ನೆಲನು

ಪದ್ಯ ೧: ಸಂಜಯನು ಧೃತರಾಷ್ಟ್ರನಿಗೆ ಏನು ಹೇಳಿದ?

ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲುಪೋಗಿನ ಕಥೆಯನವಧಾನದಲಿ ಕೇಳೆಂದ (ದ್ರೋಣ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ಹೇಳುತ್ತಾ, ನಿನ್ನ ಮಗ ದುರ್ಯೋಧನನು ಸಮರದಲ್ಲಾಡಿದ ಮಕ್ಕಳಾಟದ ಕಥೆಯು ನಿನ್ನ ಕಿವಿಗಳಿಗೆ ಅಮೃತದ ಮಳೆಯನ್ನು ಸುರಿಸಿ ತೃಪ್ತಿಪಡಿಸಿತೇ? ಬಾಣದ ಮಂಚದ ಮೇಲೆ ಭೀಷ್ಮನು ಹೇಗೆ ಮಲಗಿದ್ದನೆಂದು ಹೇಳಬೇಕೇ? ಮುಂದಿನ ಕಥೆಯನ್ನು ಆಲಿಸು ಎಂದು ಸಂಜಯನು ಹೇಳಿದನು.

ಅರ್ಥ:
ಸೋಲು: ಪರಾಭವ; ಅಮೃತ: ಸುಧೆ; ಕರ್ಣ: ಕಿವಿ; ಮಳೆ: ವರ್ಷ; ಕಾಲ: ಸಮಯ; ಕಿವಿ: ಕರ್ಣ; ನೆರೆ: ಗುಂಪು, ಸಮೂಹ; ಕೇಳು: ಆಲಿಸು; ಕದನ: ಯುದ್ಧ; ಬಾಲ: ಚಿಕ್ಕವ; ಬಾಲಕೇಳಿ: ಚಿಕ್ಕಮಕ್ಕಳ ಆಟ; ಹೇಳು: ತಿಳಿಸು; ಕೆಂಗರಿ: ಕೆಂಪಾದ ರೆಕ್ಕೆ; ಕೋಲು: ಬಾಣ; ಮಂಚ: ಪಲ್ಲಂಗ; ಮಹಿಮ: ಶ್ರೇಷ್ಠ; ಮೇಲು: ಮುಂದಿನ; ಕಥೆ: ವಿಚಾರ; ಅವಧಾನ: ಏಕಚಿತ್ತತೆ; ಕೇಳು: ಆಲಿಸು;

ಪದವಿಂಗಡಣೆ:
ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲುಪೋಗಿನ ಕಥೆಯನವಧಾನದಲಿ ಕೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನನ್ನು ಹಂಗಿಸುವ ಪರಿ – ಸೋಲಿಸಿತೆ ಕರ್ಣಾಮೃತದ ಮಳೆಗಾಲ ನಿನ್ನಯ ಕಿವಿಗಳನು

ನುಡಿಮುತ್ತುಗಳು: ದ್ರೋಣ ಪರ್ವ ೧ ಸಂಧಿ

  • ಸೋಲಿಸಿತೆ ಕರ್ಣಾಮೃತದ ಮಳೆಗಾಲ ನಿನ್ನಯ ಕಿವಿಗಳನು – ಪದ್ಯ ೧
  • ಬತ್ತಿತಂಬುಧಿ ನಿನ್ನ ಮಗ ಹೊಗುವತ್ತ ಕಾದುದು ನೆಲನು – ಪದ್ಯ ೨
  • ಬತ್ತಿದ ಕೆರೆಯೊಳಗೆ ಬಲೆಯೇಕೆ – ಪದ್ಯ ೭
  • ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು – ಪದ್ಯ ೮
  • ಹಗೆ ಹೊಲ್ಲ ದೈವದಲಿ – ಪದ್ಯ ೯
  • ಬಂಧು ವರ್ಗದ ಕೂಡೆ ವಾಸಿಗಳೇತಕೆ – ಪದ್ಯ ೯
  • ಹೊತ್ತ ಮೋನದ ವಿವಿಧ ವಾದ್ಯದಕೆತ್ತ ಬಾಯ್ಗಳ ಪಾಠಕರ ಕೈಹತ್ತುಗೆಯ ಮೊರೆಯ – ಪದ್ಯ ೧೧
  • ಕಠಾರಿಯ ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ – ಪದ್ಯ ೧೨
  • ಕಡುಮನದ ಕಲಿ ರಾಜಪುತ್ರರ ನಡುವೆ ಮೈಪರಿಮಳದಿ ದೆಸೆ ಕಂಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ – ಪದ್ಯ ೧೪
  • ಕಾಣಿಯ ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು – ಪದ್ಯ ೧೬
  • ಪೂರ್ಣಕಾಮನು ನೀನು ಕುರುಬಲ ಕರ್ಣಧಾರನು ನೀನು ವಿಶ್ವ ವಿಕರ್ಣ ನೀನೇ – ಪದ್ಯ ೧೭
  • ಕಾದುವೆನು ರಿಪುಭಟರ ಜೀವವ ಸೇದುವೆನು ಸಮರಂಗ ಭೂಮಿಯ ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ – ಪದ್ಯ ೧೮
  • ಆಯುಧದ ಹರಹುಗಳ ತಲೆಗಳ ಡೋಯಿಗೆಯ ಕಡಿ ಖಂಡಮಯದ ಮಹಾಯತದ ರಣ – ಪದ್ಯ ೨೦
  • ಕರುಣಿಸೈ ಗಾಂಗೇಯ ಕರುಣಾ ಶರಧಿಯೈ – ಪದ್ಯ ೨೧
  • ಹೃದಯಾಂಬುಜದ ಪೀಠದ ವನಜನಾಭ ಧ್ಯಾನಸುಧೆಯಲಿ ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ – ಪದ್ಯ ೨೨
  • ಕುರುಕುಲತಿಲಕನವಸರದಾನೆ ರಿಪು ಮಂಡಳಿಕಮಸ್ತಕಶೂಲ – ಪದ್ಯ ೨೩
  • ತುಳುಕಿದನು ಕಂಬನಿಯ ಕೋಮಳತಳದಿ ಮೈದಡವಿದನು – ಪದ್ಯ ೨೩
  • ನೀಲಮಣಿ ತಲೆಗೇರಿಸಿದ ತೃಣವದಕೆ ಸರಿಯೇ – ಪದ್ಯ ೨೪
  • ಗನ್ನಕಾರನು ಕೃಷ್ಣನವರಿಗೆತನ್ನನೊಚ್ಚತಗೊಟ್ಟನ – ಪದ್ಯ ೨೮
  • ಆಲವಟ್ಟದ ಗಾಳಿಯಲಿ ಮೇಘಾಳಿ ಮುರಿವುದೆ; ಮಿಂಚುಬುಳುವಿಗೆ ಸೋಲುವುದೆ ಕತ್ತಲೆಯ ಕಟಕವು; ಸೀಳಬಹುದೇ ಸೀಸದುಳಿಯಲಿ ಶೈಲವನು – ಪದ್ಯ ೨೯
  • ಜೀಯ ಮಂತ್ರದ ಮಾತು ರಾವುತಪಾಯಕರಿಗೊಪ್ಪುವುದೆ – ಪದ್ಯ ೩೧
  • ಪ್ರಭೆಯದಾರಿಗೆ ಸೂರ್ಯನಿದಿರಿನೊಳ್; ಅಭವನಿರೆ ತಾನಾರು ಭುವನಕೆ ವಿಭುಗಳೈ; ವೈಕುಂಠನಿದಿರಿನೊಳಾರು ದೇವತೆಯೈ; ವಿಭವ ನದಿಗಳಿಗುಂಟೆ ಜಲಧಿಯ ರಭಸದಿದಿರಲಿ – ಪದ್ಯ ೩೫
  • ತೂಗುವೆರಳಿನ ಮಕುಟದೊಲಹಿನೊಳಾ ಗರುವ ಭಟರುಲಿಯೆ ಲಹರಿಯ ಸಾಗರದ ಸೌರಂಭದಂತಿರೆ – ಪದ್ಯ ೩೬
  • ಮಕುಟ ರತ್ನದ ಲಹರಿ ಖಡುಗದ ವಿಕಟ ಧಾರಾರಶ್ಮಿ ದೀಪ ಪ್ರಕರದಲಿ ಥಳಥಳಿಸೆ ರವಿಯವೊಲೆ – ಪದ್ಯ ೩೮
  • ಮರಣ ಮಂತ್ರಾನುಗ್ರಹವನವಧರಿಸಬಹುದೇ ಮಗನೆ – ಪದ್ಯ ೩೮
  • ನುಡಿಗೆ ಮೊಳೆ ಹೊಮ್ಮುವರೆ – ಪದ್ಯ ೪೧
  • ದಿವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ – ಪದ್ಯ ೪೨
  • ಉಗಿದವಂಬರವನು ಮಯೂಖಾಳಿಗಳು – ಪದ್ಯ ೪೩
  • ಭುವನದ ಜನದ ಕಂಗಳತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ – ಪದ್ಯ ೪೩
  • ನಿಸ್ಸಾಳಚಯವದ್ರಿಗಳ ಹೆಡತಲೆ ಸೀಳೆ – ಪದ್ಯ ೪೩
  • ತಳಿತ ಝಲ್ಲರಿಗಳಿಗೆ ಗಗನದವಳಯವೈದದು ನೆರೆದ ಸೇನೆಗೆ ನೆಲನಗಲ ನೆರೆಯದು – ಪದ್ಯ ೪೫
  • ಸಿಡಿಲ ಕುಡುಹುಗಳಿಂದ ಕಮಲಜಹೊಡೆಯಲಬುಜಭವಾಂಡ ಭೇರಿಯ ಕಡುದನಿಗಳೆನಲ್ – ಪದ್ಯ ೪೭
  • ವಿಗಡ ಕುಂಭಜ ಮೇಘ ಋತು ತನಿ ಹೊಗರಿರಿದು ಪರಬಲದ ಕಡುವೇಸಗೆಗೆ ಕವಿದುದು – ಪದ್ಯ ೪೮
  • ಮಾರಿ ಮೊಗವಡದೆರೆದವೊಲು ಜಜ್ಝಾರ ಮಾಸಾಳುಗಳು ನಿಜ ದಾತಾರನವಸರಕೊದಗಿ ಹಣವಿನ ಋಣವ ನೀಗಿದರು – ಪದ್ಯ ೫೦
  • ಬಿಟ್ಟ ಸೂಠಿಯೊಳೇರಿ ಕುದುರೆಗಳಟ್ಟಿದುವು – ಪದ್ಯ ೫೧
  • ಕಳಕಳಕಾರರಸುಗಳಕಾರಿದರು ಕೈಮಾಡಿಕೊಂಡರು ಸುರರ ಕೋಟೆಗಳ – ಪದ್ಯ ೫೨
  • ಬಿನುಗು ಹಾರುವ ನಿನಗೆ ಭೀಮಾರ್ಜುನರ ಪರಿಯಂತೇಕೆ – ಪದ್ಯ ೫೫
  • ಕಡಗಿದಡೆ ಕೋದಂಡ ರುದ್ರನತೊಡಕಿ ಬದುಕುವರಾರು – ಪದ್ಯ ೫೬
  • ಬೆಳುದಿಂಗಳಲಿ ಮೈಬೆವರುವುದೆ – ಪದ್ಯ ೬೨
  • ಕಲಿ ಧರ್ಮಪುತ್ರನ ಬವರದಲಿ ಬೆಂಡಹರೆ – ಪದ್ಯ ೬೨
  • ಕಾಳಕೂಟದ ಬಹಳ ದಾಳಿಗೆಶೂಲಿಯೊಡ್ಡೈಸುವವೊಲ – ಪದ್ಯ ೬೪
  • ಬಂದು ಫಲಗುಣನಡ್ದವಿಸಲಿನ್ನಿಂದುಧರ ಮುಳಿದೇನ ಮಾಡುವ – ಪದ್ಯ ೬೫
  • ಎಲೆ ವಿಕ್ರಮದರಿದ್ರರಿರಾ ವೃಥಾ ಸಂಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ – ಪದ್ಯ ೭೦
  • ವೀರ ಪಾರ್ಥನ ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ – ಪದ್ಯ ೭೧
  • ಪಡುವಣ ಕಡಲೊಳಿನನಿಳಿದ – ಪದ್ಯ ೭೧