ಪದ್ಯ ೪೩: ಪಾಳಯಕ್ಕೆ ಹಿಂದಿರುಗಿದ ಪಾಂಡವರ ಮನದ ಭಾವ ಹೇಗಿತ್ತು?

ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ (ಭೀಷ್ಮ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪಾಂಡವರು ಭೀಷ್ಮನನ್ನು ಬೀಳುಕೊಂಡು ಒಮ್ಮೆ ಸಂತಸ ಒಮ್ಮೆ ಭೀಷ್ಮನಿಗೆ ತಪ್ಪಿದೆವೆಂಬ ದುಃಖಗಳ ಕವಲು ಮನಸ್ಸಿನಿಂದ ವೀರ ನಾರಾಯಣನ ಕರುಣೆಯಿಂದ ತಮ್ಮ ಶಿಬಿರಗಳನ್ನು ಹೊಕ್ಕರು.

ಅರ್ಥ:
ಬೀಳುಕೊಂಡು: ತೆರಳು; ಉತ್ಸವ: ಸಂಭ್ರಮ; ಹರುಷ: ಸಂತಸ; ಭವ: ಹುಟ್ಟು; ತಪ್ಪು: ಸರಿಯಲ್ಲದ; ದುಗುಡ: ದುಃಖ; ಭಾರ: ಹೊರೆ; ಚಿಂತಿಸು: ಯೋಚಿಸು; ಕವಲು: ಟಿಸಿಲು, ಭಿನ್ನತೆ; ಮನ: ಮನಸ್ಸು; ಕಂಪಿಸು: ನಡುಗು; ಶಿಬಿರ: ಪಾಳೆಯ; ಹೊಕ್ಕು: ಸೇರು; ನಿಖಿಲ: ಎಲ್ಲಾ; ನಿವಹ: ಗುಂಪು; ಸಹಿತ: ಜೊತೆ; ಕರುಣ: ದಯೆ;

ಪದವಿಂಗಡಣೆ:
ಇವರು +ಭೀಷ್ಮನ +ಬೀಳುಕೊಂಡ್
ಉತ್ಸವದ +ಹರುಷದಲ್+ಒಮ್ಮೆ+ ಗಂಗಾ
ಭವಗೆ +ತಪ್ಪಿದ +ದುಗುಡ +ಭಾರದಲ್+ಒಮ್ಮೆ +ಚಿಂತಿಸುತ
ಕವಲು +ಮನದಲಿ +ಕಂಪಿಸುತ +ಶಿಬಿ
ರವನು +ಹೊಕ್ಕರು +ನಿಖಿಲ +ಸೇನಾ
ನಿವಹ +ಸಹಿತವೆ +ವೀರ +ನಾರಾಯಣನ +ಕರುಣದಲಿ

ಅಚ್ಚರಿ:
(೧) ಪಾಂಡವರ ಸ್ಥಿತಿ – ಕವಲು ಮನದಲಿ ಕಂಪಿಸುತ ಶಿಬಿರವನು ಹೊಕ್ಕರು

ಪದ್ಯ ೪೨: ಕೌರವರು ಯಾವ ಭಾವದಿಂದ ತೆರಳಿದರು?

ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲು ಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ (ಭೀಷ್ಮ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೌರವ ಪಾಂಡವರಿಬ್ಬರೂ ಪಾಳೆಯಗಳಿಗೆ ಮರಳಿದರು. ಇತ್ತ ಸೂರ್ಯನು ಪಶ್ಚಿಮಾದ್ರಿ ಸ್ತಂಭದ ದೀಪದಂತೆ ಕಾಣಿಸಿದನು. ಮುಖಕ್ಕೆ ಮುಸುಕು ಹಾಕಿ ದುಃಖಸಮುದ್ರದ ಕಾಲುವೆಗಳು ಹರಿಯುತ್ತಿವೆಯೋ ಎಂಬಂತೆ ಚಿತ್ತದಲ್ಲಿ ದುಃಖವನ್ನು ಹಿಡಿದು ಕೌರವರು ತಮ್ಮ ಮನೆಗಳನ್ನು ಹೊಕ್ಕರು.

ಅರ್ಥ:
ಬೀಳುಕೊಳು: ತೆರಳು; ರಾಯ: ರಾಜ; ಪಾಳಯ: ಸೀಂಎ; ಪಡುವಣ: ಪಶ್ಚಿಮ; ಶೈಲ: ಬೆಟ್ಟ; ವಿಪುಲ: ಹೆಚ್ಚು, ಜಾಸ್ತಿ; ಸ್ತಂಭ: ಕಂಬ; ದೀಪಿಕೆ: ದೀಪ; ರವಿ: ಸೂರ್ಯ; ಮೆರೆ: ಪ್ರಕಾಶಿಸು, ಹೊಳೆ; ಮೇಲು: ಮೇಲ್ಭಾಗ; ಮುಸುಕು: ಹೊದಿಕೆ; ಮುಖ: ಆನನ; ಚಿತ್ತ: ಮನಸ್ಸು; ಕಾಳಿಕೆ: ಕೊಳಕು; ದುಮ್ಮಾನ: ದುಃಖ; ಜಲಧಿ: ಸಾಗರ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಬೀಳುಕೊಂಡರು+ ರಾಯರಿಬ್ಬರು
ಪಾಳಯಂಗಳಿಗ್+ಇತ್ತ +ಪಡುವಣ
ಶೈಲ +ವಿಪುಲ +ಸ್ತಂಭ+ದೀಪಿಕೆಯಂತೆ +ರವಿ +ಮೆರೆದ
ಮೇಲು +ಮುಸುಕಿನ +ಮುಖದ +ಚಿತ್ತದ
ಕಾಳಿಕೆಯ +ದುಮ್ಮಾನ+ಜಲಧಿಯ
ಕಾಲುವೆಗಳೆನೆ +ಕೌರವರು+ ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಕೌರವರ ಮನದ ಸ್ಥಿತಿ – ಮೇಲು ಮುಸುಕಿನ ಮುಖದ ಚಿತ್ತದಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ

ಪದ್ಯ ೪೧: ಭೀಷ್ಮರು ದ್ರೋಣಾದಿಗಳಿಗೆ ಏನು ಹೇಳಿದರು?

ಬವರದೊಳಗೌಚಿತ್ಯ ಪರಿಪಾ
ಕವನು ಬಲ್ಲಿರಿ ಕೌರವರ ಪಾಂ
ಡವರ ವೃತ್ತಾಂತದ ರಹಸ್ಯದ ನೆಲೆಯನರಿದಿಹಿರಿ
ನಿವಗೆ ಬೇರೊಂದಿಲ್ಲ ನಾವ್ ಹೇ
ಳುವುದು ಕೃಷ್ಣನ ನೇಮವನು ಮಾ
ಡುವುದೆನುತ ದ್ರೋಣಾದಿ ಸುಭಟರ ಕಳುಹಿದನು ಭೀಷ್ಮ (ಭೀಷ್ಮ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭೀಷ್ಮರು ದ್ರೋಣಾದಿಗಳನ್ನು ಉದ್ದೇಶಿಸುತ್ತಾ, ಯುದ್ಧದಲ್ಲಿ ಚೌಚಿತ್ಯವೇನೆಂಬುದನ್ನು ಬಲ್ಲಿರಿ, ಕೌರವ ಪಾಂಡವರ ರಹಸ್ಯ ವೃತ್ತಾಂತವನ್ನು ತಿಳಿದಿರುವಿರಿ, ನಿಮಗೆ ನಾನು ಬೇರೇನನ್ನು ಹೇಳಬೇಕಾದುದಿಲ್ಲ. ಶ್ರೀಕೃಷ್ಣನು ನೇಮಿಸಿದಂತೆ ನಡೆಯಿರಿ ಎಂದು ಹೇಳಿ ಅವರೆಲ್ಲರನ್ನು ಕಳುಹಿಸಿದನು.

ಅರ್ಥ:
ಬವರ: ಕಾಳಗ, ಯುದ್ಧ; ಔಚಿತ್ಯ: ಸರಿಯಾದ; ಪರಿಪಾಕ: ಪೂರ್ತಿಯಾಗಿ ಬೆಂದುದು; ಬಲ್ಲಿರಿ: ತಿಳಿದಿರುವಿರಿ; ವೃತ್ತಾಂತ: ವಿಆರ; ರಹಸ್ಯ: ಗುಟ್ಟು; ನೆಲೆ: ಆಶ್ರಯ, ಆಧಾರ; ಅರಿ: ತಿಳಿ; ಬೇರೆ: ಅನ್ಯ; ನೇಮ: ನಿಯಮ; ಆದಿ: ಮುಂತಾದ; ಸುಭಟ: ಸೈನಿಕ; ಕಳುಹು: ಬೀಳ್ಕೊಡು;

ಪದವಿಂಗಡಣೆ:
ಬವರದೊಳಗ್+ಔಚಿತ್ಯ +ಪರಿಪಾ
ಕವನು +ಬಲ್ಲಿರಿ +ಕೌರವರ +ಪಾಂ
ಡವರ +ವೃತ್ತಾಂತದ +ರಹಸ್ಯದ +ನೆಲೆಯನ್+ಅರಿದಿಹಿರಿ
ನಿವಗೆ +ಬೇರೊಂದಿಲ್ಲ +ನಾವ್ +ಹೇ
ಳುವುದು +ಕೃಷ್ಣನ +ನೇಮವನು +ಮಾ
ಡುವುದೆನುತ+ ದ್ರೋಣಾದಿ +ಸುಭಟರ+ ಕಳುಹಿದನು +ಭೀಷ್ಮ

ಅಚ್ಚರಿ:
(೧) ಬಲ್ಲಿರಿ, ಅರಿದಿಹಿರಿ – ಸಾಮ್ಯಾರ್ಥ ಪದ

ಪದ್ಯ ೪೦: ಭೀಷ್ಮರು ಯಾರನ್ನು ಮನಸ್ಸಿನಲ್ಲಿ ನೆನೆದರು?

ಇವರು ಕಳುಹಿಸಿಕೊಂಡರಾ ಮಾ
ಧವನ ಮೆಲ್ಲಡಿಗಳನು ಹೃದಯದೊ
ಳವಚಿ ಕಂಗಳು ತುಂಬಿ ದೇವನ ಮೂರ್ತಿಯನು ಹಿಡಿದು
ಸವೆಯದಮಳಾನಂದ ಬಹಳಾ
ರ್ಣವದೊಳಗೆ ಮುಳುಗಾಡಿ ಲಕ್ಷ್ಮೀ
ಧವನ ಕಳುಹಿದನಿತ್ತ ಬೀಳ್ಕೊಟ್ಟನು ಸುಯೋಧನನ (ಭೀಷ್ಮ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಪಾಂಡವರು ಭೀಷ್ಮನಿಂದ ಬೀಳುಕೊಂಡರು. ಭೀಷ್ಮನು ಶ್ರೀಕೃಷ್ಣನ ಪಾದಗಳನ್ನು ಮನಸ್ಸಿನಲ್ಲಿ ದೃಢವಾಗಿ ನಿಲ್ಲಿಸಿ, ಶ್ರೀಕೃಷ್ಣನ ಮುರ್ತಿಯನ್ನು ಮನಸ್ಸಿನಲ್ಲಿ ನಿಲ್ಲಿಸಿ ಆನಂದ ಸಮುದ್ರದಲ್ಲಿ ಮುಳುಗಿ, ಶ್ರೀಕೃಷ್ಣನನ್ನು ಬೀಳ್ಕೊಟ್ಟನು. ಬಳಿಕ ದುರ್ಯೋಧನನನ್ನು ಕಳಿಸಿದನು.

ಅರ್ಥ:
ಕಳುಹಿಸು: ಬೀಳ್ಕೊಡು; ಮಾಧವ: ಕೃಷ್ಣ; ಮೆಲ್ಲಡಿ: ಮೃದುವಾದ ಪಾದ, ಕೋಮಲವಾದ ಅಡಿ; ಹೃದಯ: ಎದೆ; ಅವಚು: ಅಪ್ಪಿಕೊಳ್ಳು; ಕಂಗಳು: ನಯನ; ತುಂಬು: ಭರ್ತಿಯಾಗು; ಮೂರ್ತಿ: ಆಕಾರ; ಹಿಡಿ: ಗ್ರಹಿಸು; ಸವೆ: ತೀರು; ಅಮಲ: ನಿರ್ಮಲ; ಆನಂದ: ಸಂತಸ; ಅರ್ಣವ: ಸಮುದ್ರ; ಮುಳುಗಾಡು: ಈಜು;
ಧವ: ಗಂಡ, ಪತಿ; ಕಳುಹು: ಬೀಳ್ಕೊಡು;

ಪದವಿಂಗಡಣೆ:
ಇವರು +ಕಳುಹಿಸಿಕೊಂಡರಾ+ ಮಾ
ಧವನ +ಮೆಲ್ಲಡಿಗಳನು+ ಹೃದಯದೊಳ್
ಅವಚಿ +ಕಂಗಳು +ತುಂಬಿ +ದೇವನ+ ಮೂರ್ತಿಯನು +ಹಿಡಿದು
ಸವೆಯದ್+ಅಮಳಾನಂದ +ಬಹಳ
ಅರ್ಣವದೊಳಗೆ +ಮುಳುಗಾಡಿ +ಲಕ್ಷ್ಮೀ
ಧವನ +ಕಳುಹಿದನ್+ಇತ್ತ +ಬೀಳ್ಕೊಟ್ಟನು +ಸುಯೋಧನನ

ಅಚ್ಚರಿ:
(೧)ಮಾಧವ, ದೇವ, ಲಕ್ಷ್ಮೀಧವನ – ಕೃಷ್ಣನನ್ನು ಕರೆದ ಪರಿ
(೨) ಕೃಷ್ಣನನ್ನು ಧ್ಯಾನಿಸಿದ ಪರಿ – ಮಾಧವನ ಮೆಲ್ಲಡಿಗಳನು ಹೃದಯದೊಳವಚಿ ಕಂಗಳು ತುಂಬಿ ದೇವನ ಮೂರ್ತಿಯನು ಹಿಡಿದು

ಪದ್ಯ ೩೯: ಭೀಷ್ಮನು ಧರ್ಮಜನಿಗೆ ಏನೆಂದು ಆಶೀರ್ವದಿಸಿದನು?

ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಹೇಳಿದ ಮಾತು ಸರಿಯಾಗಿದೆ, ರಾಜ ಧರ್ಮಜ ನೀನಿನ್ನು ತೆರಳು, ದ್ರುಪದನೇ ಮೊದಲಾದವರಿಗೆ ಹೊರಡಲು ಅಪ್ಪಣೆಕೊಟ್ಟಿದ್ದೇನೆ, ಅಪ್ಪ ಅರ್ಜುನ ಇನ್ನು ಪಾಳೆಯಕ್ಕೆ ಹೋಗು, ಭೂಮಿಯ ಆಶೆಯಿಂದ ನನ್ನಲ್ಲಿ ತಪ್ಪಿದೆವೆಂದು ಎಂದೂ ಬಗೆಯ ಬೇಡಿರಿ, ನೀವು ಜಯಶಾಲಿಗಳಾಗಿರಿ ಎಂದು ಹರಸಿದನು.

ಅರ್ಥ:
ಮುರಹರ: ಕೃಷ್ಣ; ಮಾತು: ನುಡಿ; ಸಾಕು: ನಿಲ್ಲಿಸು; ಅರಸ: ರಾಜ; ಧರ್ಮಜ: ಯುಧಿಷ್ಠಿರ; ಹೋಗು: ತೆರಳು; ಆದಿ: ಮುಂತಾದ; ಮರಳು: ಹಿಂದಿರುಗು; ತಂದೆ: ಪಿತ; ಪಾಳಯ: ಸೀಮೆ; ಧರೆ: ಭೂಮಿ; ಲೋಲುಪ್ತಿ: ಸುಖ, ಸಂತೋಷ; ಸಲೆ: ಸದಾ, ಸರಿಯಾಗಿ; ಕಾತರಿಸು: ತವಕಗೊಳ್ಳು; ತಪ್ಪು: ಸುಳ್ಳಾಗು; ಧರಧುರ: ಆರ್ಭಟ, ಕೋಲಾಹಲ; ನೆನೆ: ಜ್ಞಾಪಿಸು; ವಿಜಯಿ: ಗೆಲುವು; ಅಹುದು: ಸರಿಯಾದುದು;

ಪದವಿಂಗಡಣೆ:
ಮುರಹರನ +ಮಾತ್+ಅಹುದು +ಸಾಕಿನ್ನ್
ಅರಸ +ಧರ್ಮಜ +ಹೋಗು +ದ್ರುಪದ
ಆದ್ಯರಿಗೆ+ ನೇಮವು +ಪಾರ್ಥ +ಮರಳೈ +ತಂದೆ +ಪಾಳಯಕೆ
ಧರೆಯ +ಲೋಲುಪ್ತಿಯಲಿ +ಸಲೆ +ಕಾ
ತರಿಸಿ +ತಪ್ಪಿದೆವ್+ಎಮ್ಮೊಳ್+ಎಂಬೀ
ಧರಧುರವ +ನೆನೆಯದಿರಿ +ವಿಜಯಿಗಳಾಗಿ +ನೀವೆಂದ

ಅಚ್ಚರಿ:
(೧) ಹೋಗು, ಮರಳು – ಸಮಾನಾರ್ಥಕ ಪದ

ಪದ್ಯ ೩೮: ಶ್ರೀಕೃಷ್ಣನು ಭೀಷ್ಮರಿಗೆ ಏನು ಹೇಳಿದನು?

ಬೀಳುಕೊಡಿರೇ ಸಾಕು ಭೀಮನು
ಬಾಲಭಾಷಿತನಾದನೀ ಭೂ
ಪಾಲ ಕೌರವನೆಂಬೆನೇ ಮೊದಲಿಗನು ಮೂರ್ಖರಿಗೆ
ಕಾಳೆಗದೊಳೊಡೆಹಾಯ್ದು ಸಾಯಲಿ
ಬಾಳಲೊಲಿದಂತಾಗಿ ಹೋಗಲಿ
ಹೇಳಿದಿರಿ ನಿಮ್ಮಿಂದ ತಪ್ಪಿಲ್ಲೆಂದನಸುರಾರಿ (ಭೀಷ್ಮ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು, ನಮ್ಮನ್ನು ಬೀಳ್ಕೊಡಿರಿ, ಭೀಮನು ಹುಡುಗುತನದ ಮಾತಾಡಿದನು. ಕೌರವನೋ ಮೂರ್ಖರಲ್ಲಿ ಅಗ್ರಗಣ್ಯನು, ಇವರು ಯುದ್ಧದಲ್ಲಿ ಹೊಡೆದಾಡಿ ಸಾಯಲಿ ಇಲ್ಲವೇ ಒಲಿದು ಒಂದಾಗಲಿ, ನೀವು ಹೇಳಬೇಕಾದುದನ್ನು ಹೇಳಿದ್ದೀರಿ, ತಪ್ಪು ನಿಮ್ಮ ಮೇಲೆ ಬರುವುದಿಲ್ಲ, ಈಗ ನಮ್ಮನ್ನು ಬೀಳ್ಕೊಡಿ ಎಂದು ಕೃಷ್ಣನು ಭೀಷ್ಮರಲ್ಲಿ ಬೇಡಿದನು.

ಅರ್ಥ:
ಬೀಳುಕೊಡು: ತೆರಳು; ಸಾಕು: ನಿಲ್ಲಿಸು; ಬಾಲಭಾಷಿತ: ಚಿಕ್ಕಮಕ್ಕಳಂತೆ ನುಡಿಯುವವ; ಭೂಪಾಲ: ರಾಜ; ಮೊದಲಿಗ: ಅಗ್ರಗಣ್ಯ; ಮೂರ್ಖ: ದಡ್ಡ; ಕಾಳೆಗ: ಯುದ್ಧ; ಒಡೆಹಾಯ್ದು: ಹೋರಾಡು; ಸಾವು: ಮರಣ; ಬಾಳು: ಜೀವಿಸು; ಒಲಿದು: ಪ್ರೀತಿಸು; ಹೋಗು: ತೆರಳು; ಹೇಳು: ತಿಳಿಸು; ತಪ್ಪು: ಸರಿಯಲ್ಲದ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಬೀಳುಕೊಡಿರೇ+ ಸಾಕು +ಭೀಮನು
ಬಾಲಭಾಷಿತನಾದನ್+ಈ+ ಭೂ
ಪಾಲ +ಕೌರವನ್+ಎಂಬೆನೇ +ಮೊದಲಿಗನು+ ಮೂರ್ಖರಿಗೆ
ಕಾಳೆಗದೊಳ್+ಒಡೆಹಾಯ್ದು +ಸಾಯಲಿ
ಬಾಳಲ್+ಒಲಿದಂತಾಗಿ +ಹೋಗಲಿ
ಹೇಳಿದಿರಿ+ ನಿಮ್ಮಿಂದ +ತಪ್ಪಿಲ್ಲೆಂದನ್+ಅಸುರಾರಿ

ಅಚ್ಚರಿ:
(೧) ಕೌರವನನ್ನು ಕರೆದ ಪರಿ – ಭೂಪಾಲ ಕೌರವನೆಂಬೆನೇ ಮೊದಲಿಗನು ಮೂರ್ಖರಿಗೆ