ಪದ್ಯ ೩೦: ಭೀಷ್ಮರು ಸುಯೋಧನನಿಗೆ ಯಾವ ಬುದ್ಧಿವಾದ ಹೇಳಿದರು?

ಅಳಿದರೊಡಹುಟ್ಟಿದರು ಹಲಬರು
ನೆಲನ ರಾಯರು ಸವೆದರತಿ ಬಲ
ರಳುಕುವರು ನರನೆಂದಡೀ ದ್ರೋಣಾದಿ ನಾಯಕರು
ಅಲಗಿನಂಬಿನ ಹಕ್ಕೆ ನಮಗಾ
ಯ್ತೊಳಜಗಳ ಸಾಕಿನ್ನು ಸೋದರ
ರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ (ಭೀಷ್ಮ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಷ್ಮನು ನಿನ್ನ ಅನೇಕ ತಮ್ಮಂದಿರು ಯುದ್ಧದಲ್ಲಿ ಮಡಿದು ಹೋಗಿದ್ದಾರೆ. ಹಲವು ರಾಜರು ಇಲ್ಲವಾದರು. ದ್ರೋಣನೇ ಮೊದಲಾದ ಅತಿಬಲರಾದ ನಾಯಕರು ಅರ್ಜುನನೆಂದರೆ ಅಳುಕುತ್ತಾರೆ. ನಾನೇ ಸರಳ ಮಂಚದ ಹಾಸಿಗೆಯಲ್ಲಿ ಮಲಗುವ ಹಾಗಾಯಿತು. ಇನ್ನು ಜ್ಞಾತಿಗಳೊಡನೆ ಒಳಜಗಳ ಸಾಕು ಸಂಧಿಮಾಡಿಕೊಂಡು ಬದುಕು ಎಂದು ಭೀಷ್ಮರು ಹೇಳಿದರು.

ಅರ್ಥ:
ಅಳಿ: ನಾಶ; ಒಡಹುಟ್ಟು: ಜೊತೆಗೆ ಹುಟ್ಟಿದವರು; ಹಲಬರು: ಹಲವಾರು, ಬಹಳ; ನೆಲ: ಭೂಮಿ; ರಾಯ: ರಾಜ; ಸವೆ: ಅಳಿ, ಶಕ್ತಿಗುಂದು; ಅತಿ: ಬಹಳ; ಬಲ: ಶಕ್ತಿ; ಅಳುಕು: ಹೆದರು; ನರ: ಅರ್ಜುನ; ನಾಯಕ: ಒಡೆಯ; ಅಲಗು: ಆಯುಧಗಳ ಹರಿತವಾದ ಅಂಚು; ಅಂಬು: ಬಾಣ; ಹಕ್ಕೆ: ಹಾಸುಗೆ, ಶಯ್ಯೆ; ಜಗಳ: ಕಾದಾಟ; ಸಾಕು: ನಿಲ್ಲಿಸು; ಸೋದರ: ಅಣ್ಣ ತಮ್ಮ; ಸಂಪ್ರತಿ: ಒಪ್ಪಂದ; ಬದುಕು: ಜೀವಿಸು;

ಪದವಿಂಗಡಣೆ:
ಅಳಿದರ್+ಒಡಹುಟ್ಟಿದರು+ ಹಲಬರು
ನೆಲನ +ರಾಯರು +ಸವೆದರ್+ಅತಿ+ ಬಲರ್
ಅಳುಕುವರು +ನರನೆಂದಡ್+ಈ+ ದ್ರೋಣಾದಿ +ನಾಯಕರು
ಅಲಗಿನ್+ಅಂಬಿನ +ಹಕ್ಕೆ +ನಮಗಾಯ್ತ್
ಒಳಜಗಳ +ಸಾಕಿನ್ನು +ಸೋದರ
ರೊಳಗೆ +ಸಂಪ್ರತಿಯಾಗಿ +ಬದುಕುವದ್+ಎಂದನಾ

ಅಚ್ಚರಿ:
(೧) ಭೀಷ್ಮರ ಸಲಹೆ – ಸೋದರರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ
(೨) ಅಳಿ, ಸವೆ – ಸಾಮ್ಯಾರ್ಥ ಪದ

ಪದ್ಯ ೨೯: ಭೀಷ್ಮನು ದುರ್ಯೋಧನನಿಗೆ ಏನು ಹೇಳಿದನು?

ತಂದೆ ಕಂಡೈ ಕೌರವೇಶ ಪು
ರಂದರಾತ್ಮ ಜನತಿಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ (ಭೀಷ್ಮ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಅಪ್ಪಾ, ದುರ್ಯೋಧನ, ಅರ್ಜುನನ ಅತಿಶಯ ಬಲವನ್ನು ಈಗ ನೋಡಿದೆಯಲ್ಲಾ, ಹೀಗೆಯೇ ಅವನ ಹಲವು ಗುಣಗಳನ್ನು ಈಗಲೇ ಗುರುತಿಸು. ದ್ರೋಣ, ಕೃಪ, ಅಶ್ವತ್ಥಾಮರು ಬಲು ಹಿಮ್ದಿನಿಂದಲೂ ಅವನ್ನು ಗುರುತಿಸಿದ್ದಾರೆ. ಇನ್ನು ನಿನ್ನ ಮಮ್ದ ಮತಿಯನ್ನು ಬಿಟ್ಟು ಕೃಪಾಳುವಾಗು ಎಂದನು.

ಅರ್ಥ:
ತಂದೆ: ಅಪ್ಪ, ಪಿತ; ಕಂಡು: ನೋಡು; ಪುರಂದರ: ಇಂದ್ರ; ಆತ್ಮಜ: ಮಗ; ಅತಿಬಳವ: ಅತಿಶಯ ಶಕ್ತಿ; ನಿಂದು: ನಿಲ್ಲು; ಕಾಣು: ತೋರು; ಹಲವಂಗ: ಬಹಳ ರೀತಿ; ನರ: ಅರ್ಜುನ; ಹಿಂದೆ: ಪುರಾತನ; ಬಲ್ಲರು: ತಿಳಿದವರು; ನಂದನ: ಮಕ್ಕಳು; ಆದಿ: ಹಲವಾರು; ಕೇಳು: ತಿಳಿಸು; ಮಂದಮತಿ: ದಡ್ಡ; ಬೇಡ: ಸಲ್ಲದು; ಕೃಪಾಳು: ದಯೆ;

ಪದವಿಂಗಡಣೆ:
ತಂದೆ +ಕಂಡೈ +ಕೌರವೇಶ+ ಪು
ರಂದರ+ಆತ್ಮಜನ್+ಅತಿಬಳವ +ನೀನ್
ಇಂದೆ+ ಕಾಣಲುಬೇಹುದೈ +ಹಲವಂಗದಲಿ +ನರನ
ಹಿಂದೆ +ಬಲ್ಲರು +ದ್ರೋಣ +ಕೃಪ +ಗುರು
ನಂದನ+ಆದಿಗಳೆಲ್ಲ+ ಕೇಳೈ
ಮಂದಮತಿತನ +ಬೇಡವಿನ್ನು +ಕೃಪಾಳುವಾಗೆಂದ

ಅಚ್ಚರಿ:
(೧) ಅರ್ಜುನನನ್ನು ಪುರಂದರಾತ್ಮಜ ಎಂದು ಕರೆದಿರುವುದು
(೨) ದುರ್ಯೋಧನನನ್ನು ಮಂದಮತಿ ಎಂದು ಬಯ್ದಪರಿ

ಪದ್ಯ ೨೮: ದುರ್ಯೋಧನನೇಕೆ ಚಿಂತಾಕುಲನಾದನು?

ಸಾಕು ಸಾಕೈ ತಂದೆ ನನ್ನನು
ಸಾಕಿಕೊಂಡೈ ಪಾರ್ಥ ಘನ ತೃ
ಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು
ಸಾಕೆನುತ ಫಲುಗುಣನ ಪರಮ ವಿ
ವೇಕವನು ಪತಿಕರಿಸಿ ನೆರೆ ಚಿಂ
ತಾಕುಳನ ಮಾಡಿದನು ಕೌರವ ರಾಯನನು ಭೀಷ್ಮ (ಭೀಷ್ಮ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ತಂದೆ ಅರ್ಜುನ, ಸಾಕು, ಸಾಕು ನನ್ನ ಬಾಯಾರಿಕೆ ಹೋಗಿ ತೃಪ್ತನಾದೆನು. ನೀನು ನನ್ನನ್ನು ಸಾಕಿಕೊಂಡೆ, ನೀರು ಸಾಕು ಎಂದು ಅರ್ಜುನನ ವಿವೇಕವನ್ನು ಮನ್ನಿಸಿದನು. ಇದರಿಂದ ಕೌರವನು ಚಿಂತಾಕುಲನಾದನು.

ಅರ್ಥ:
ಸಾಕು: ನಿಲ್ಲಿಸು; ತಂದೆ: ಅಯ್ಯ, ಪಿತ; ಸಾಕು: ಸಲಹು; ಘನ: ಶ್ರೇಷ್ಠ; ತೃಷ್ಣ: ತೃಷೆ, ನೀರಡಿಕೆ; ಆಕುಲತೆ: ವ್ಯಾಕುಲ, ಚಿಂತಿತ; ಬೀಳ್ಕೊಂಡು: ತೆರಳು; ಅತಿಶಯ: ಹೆಚ್ಚಿನ; ತೃಪ್ತಿ: ಸಮಾಧಾನ; ಪರಮ: ಶ್ರೇಷ್ಠ; ವಿವೇಕ: ಯುಕ್ತಾಯುಕ್ತ ವಿಚಾರ; ಪತಿಕರಿಸು: ದಯೆತೋರು, ಅನುಗ್ರಹಿಸು; ನೆರೆ: ಪಕ್ಕ; ಚಿಂತೆ: ಯೋಚನೆ;

ಪದವಿಂಗಡಣೆ:
ಸಾಕು +ಸಾಕೈ +ತಂದೆ +ನನ್ನನು
ಸಾಕಿಕೊಂಡೈ +ಪಾರ್ಥ +ಘನ +ತೃ
ಷ್ಣಾಕುಲತೆ +ಬೀಳ್ಕೊಂಡುದ್+ಅತಿಶಯ +ತೃಪ್ತಿ +ನನಗಾಯ್ತು
ಸಾಕೆನುತ +ಫಲುಗುಣನ +ಪರಮ +ವಿ
ವೇಕವನು +ಪತಿಕರಿಸಿ+ ನೆರೆ +ಚಿಂ
ತಾಕುಳನ +ಮಾಡಿದನು +ಕೌರವ +ರಾಯನನು +ಭೀಷ್ಮ

ಅಚ್ಚರಿ:
(೧) ಪಾರ್ಥನನ್ನು ಹೊಗಳಿದ ಪರಿ – ಘನ ತೃಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು; ಫಲುಗುಣನ ಪರಮ ವಿವೇಕವನು ಪತಿಕರಿಸಿ
(೨) ಸಾಕು, ಸಾಕಿಕೊಂಡೆ; ತೃಷ್ಣಾಕುಲತೆ, ಚಿಂತಾಕುಳ – ಪದಗಳ ಬಳಕೆ

ಪದ್ಯ ೨೭: ಅರ್ಜುನನು ಭೀಷ್ಮರಿಗೆ ಹೇಗೆ ನೀರನ್ನು ನೀಡಿದನು?

ಸಲಿಲ ಬಾಣದಲಮಲ ಗಂಗಾ
ಜಲವ ತೆಗೆದನು ತಪ್ತ ಲೋಹದ
ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
ಇಳುಹಿದನು ಸರಳಿಂದ ವದನದ
ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
ಗೆಲಿದನಂತಸ್ತಾಪವನು ನರನಾಥ ಕೇಳೆಂದ (ಭೀಷ್ಮ ಪರ್ವ, ೧೦ ಸಂಧಿ, ೨೭ ಪದ್ಯ
)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನು ವರುಣಾಸ್ತ್ರವನ್ನು ಪ್ರಯೋಗಮಾಡಿ ಉತ್ತಮವಾದ ನಿರ್ಮಲವಾದ ಶುದ್ಧ ನೀರನ್ನು ಆಮಂತ್ರಿಸಿದನು. ಕಾದ ಬಂಗಾರದ ನೀರಿನಂತೆ ಹೊಳೆಯುವ ಆ ನೀರನ್ನು ಬಾಣದ ಬಲದಿಂದ ಭೀಷ್ಮನ ಬಾಯಲ್ಲಿ ಬೀಳುವಂತೆ ಮಾಡಿದನು ಆರ್ತನಾಗಿದ್ದ ಭೀಷ್ಮನು ಆ ನೀರನ್ನು ಕುಡಿದು ಅಂತಸ್ತಾಪವನ್ನು ಕಳೆದುಕೊಂಡನು.

ಅರ್ಥ:
ಸಲಿಲ: ನೀರು; ಬಾಣ: ಸರಳ; ಅಮಲ: ನಿರ್ಮಲ; ಜಲ: ನೀರು; ತೆಗೆ: ಹೊರತರು; ತಪ್ತ: ಕಾಯಿಸಿದ; ಲೋಹ: ಖನಿಜ ಧಾತು; ತನಿ: ಹೆಚ್ಚಾಗು, ಅತಿಶಯವಾಗು; ಹೊಳೆ: ಪ್ರಕಾಶ; ಬಹಳ: ತುಂಬ; ಧಾರೆ: ಪ್ರವಾಹ; ಇಳು: ಬಾಗು; ಸರಳು: ಬಾಣ; ವದನ: ಮುಖ; ಬಳಿ: ಹತ್ತಿರ; ಬಿಡು: ತೊಡಗಿಸು; ಬಹಳ: ತುಂಬ; ಆರ್ತ: ಕಷ್ಟ, ಸಂಕಟ; ಗೆಲಿದು: ಜಯಿಸು; ಅಂತಸ್ತಾಪ: ದೇಹದ ಒಳತಾಪ; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಲಿಲ +ಬಾಣದಲ್+ಅಮಲ +ಗಂಗಾ
ಜಲವ +ತೆಗೆದನು +ತಪ್ತ +ಲೋಹದ
ಜಲದವೊಲು +ತನಿಹೊಳೆವ +ಸಲಿಲದ +ಬಹಳ +ಧಾರೆಗಳ
ಇಳುಹಿದನು +ಸರಳಿಂದ +ವದನದ
ಬಳಿಗೆ +ಬಿಡೆ +ಬಹಳಾರ್ತ +ಭೀಷ್ಮನು
ಗೆಲಿದನ್+ಅಂತಸ್ತಾಪವನು +ನರನಾಥ +ಕೇಳೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
(೨) ನೀರಿನ ವರ್ಣನೆ – ತಪ್ತ ಲೋಹದ ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
(೩) ಜಲ, ಸಲಿಲ – ಸಮಾನಾರ್ಥಕ ಪದ

ಪದ್ಯ ೨೬: ಭೀಷ್ಮರು ದುರ್ಯೋಧನನಿಗೆ ಏನೆಂದು ಬಯ್ದರು?

ಏರ ನೋವಿನೊಳಾದ ತೃಷ್ಣೆಯ
ನಾರಿಸುವರಿವರಳವೆ ಸಾಕಿವ
ತೋರದಿರು ತೆಗೆ ತೊಲಗು ಮೂಢರ ಪರಮಗುರು ನೀನು
ಆರಿತೈ ಗೋನಾಳಿ ಫಲುಗುಣ
ತೋರು ನಿನ್ನರಿತವನು ಸಲಿಲವ
ಬೀರು ಬೇಗದಿನೆನಲು ಬಿಲುಗೊಂಡೆದ್ದನಾ ಪಾರ್ಥ (ಭೀಷ್ಮ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ದುರ್ಯೋಧನನು ಸುಗಂಧಭರಿತ ನೀರನ್ನು ತಂದುದನ್ನು ಕಂಡ ಭೀಷ್ಮನು, ಬಾಣದ ಗಾಯದ ನೋವಿನಿಂದಾದ ಬಾಯಾರಿಕೆಯನ್ನು ಹೋಗಲಾಡಿಸಲು ಇದಕ್ಕೆ ಸಾಧ್ಯವೇ? ನೀನು ಮೂಢರ ಪರಮಗುರು, ದೂರ ಹೋಗು ಎಂದು ದುರ್ಯೋಧನನನ್ನು ಬಯ್ದನು. ಗಂಟಲು ಒಣಗಿದೆ, ಅರ್ಜುನಾ ನೀನೇನು ತಿಳಿದುಕೊಂಡೆಯೋ ನೋಡೋಣ, ಬೇಗ ನೀರನ್ನು ಕೊಡು ಎಂದು ಭೀಷ್ಮನು ಕೇಳಲು, ಅರ್ಜುನನು ಬಿಲ್ಲನ್ನು ಹಿಡಿದು ಎದ್ದನು.

ಅರ್ಥ:
ಏರ: ಹೆಚ್ಚಾದ; ನೋವು: ಬೇನೆ; ತೃಷ್ಣೆ: ಬಾಯಾರಿಕೆ; ಆರಿಸು: ಕಡಿಮೆಮಾಡು; ಅಳವು: ಶಕ್ತಿ; ಸಾಕು: ನಿಲ್ಲಿಸು; ತೋರು: ಗೋಚರಿಸು; ತೆಗೆ: ಹೊರತರು; ತೊಲಗು: ಹೊರಹೋಗು; ಮೂಢ: ತಿಳಿಗೇಡಿ, ಮೂರ್ಖ; ಪರಮ: ಶ್ರೇಷ್ಠ; ಗುರು: ಆಚಾರ್ಯ; ಆರು: ಒಣಗು; ಗೋನಾಳಿ: ಗಂಟಲು; ತೋರು: ಪ್ರದರ್ಶಿಸು; ಅರಿ: ತಿಳುವಳಿಕೆ; ಸಲಿಲ: ನೀರು; ಬೀರು: ಒಗೆ, ಎಸೆ, ತೂರು; ಬೇಗ: ರಭಸ, ವೇಗ; ಬಿಲು: ಚಾಪ, ಬಿಲ್ಲು; ಎದ್ದು: ಮೇಲೇಳು;

ಪದವಿಂಗಡಣೆ:
ಏರ +ನೋವಿನೊಳಾದ +ತೃಷ್ಣೆಯನ್
ಆರಿಸುವರ್+ಇವರ್+ಅಳವೆ +ಸಾಕ್+ಇವ
ತೋರದಿರು +ತೆಗೆ +ತೊಲಗು +ಮೂಢರ +ಪರಮಗುರು +ನೀನು
ಆರಿತೈ+ ಗೋನಾಳಿ +ಫಲುಗುಣ
ತೋರು +ನಿನ್ನ್+ಅರಿತವನು+ ಸಲಿಲವ
ಬೀರು +ಬೇಗದಿನ್+ಎನಲು +ಬಿಲುಗೊಂಡ್+ಎದ್ದನಾ +ಪಾರ್ಥ

ಅಚ್ಚರಿ:
(೧) ದುರ್ಯೋಧನನನ್ನು ಬಯ್ದ ಪರಿ – ತೆಗೆ ತೊಲಗು ಮೂಢರ ಪರಮಗುರು ನೀನು

ಪದ್ಯ ೨೫: ಭೀಷ್ಮನಿಗೆ ದುರ್ಯೋಧನನು ಯಾವ ನೀರನ್ನು ತರಿಸಿದನು?

ತರಿಸಿದನು ಹಿಮರುಚಿಯ ಹಿಂಡಿದ
ಪರಮ ಶೀತೋದಕವೊ ತಾನೆನೆ
ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ
ಸರಸ ಬಹುವಿಧ ಭಕ್ಷ್ಯ ಭೋಜ್ಯವ
ನೆರಹಿದನು ಕುಡಿನೀರ ಗಿಂಡಿಯ
ನರಸ ನೀಡಲು ಕಂಡು ನಕ್ಕನು ಭೀಷ್ಮನಿಂತೆಂದ (ಭೀಷ್ಮ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಶೀತಲವಾದ ಹಿಮರುಚಿಯ ತಂಪಾದ ನೀರಿನೊಂದಿಗೆ ಸುಗಂಧವನ್ನು ಮಿಶ್ರಣ ಮಾಡಿ ಸುಗಂಧಭರಿತವಾದ ತಂಪಾದ ನೀರನ್ನು ತರಿಸಿದನು. ಜೊತೆಗೆ ಭಕ್ಷ್ಯ ಭೋಜ್ಯಗಳನ್ನು ತರಿಸಿದನು. ಇದೆಲ್ಲವನ್ನು ನೋಡಿದ ಭೀಷ್ಮನು ನಕ್ಕು ಹೀಗೆ ನುಡಿದನು.

ಅರ್ಥ:
ತರಿಸು: ಬರೆಮಾಡು; ಹಿಮ: ಮಂಜಿನಗಡ್ಡೆ; ರುಚಿ: ಆಸ್ವಾದ, ಸವಿ; ಹಿಂಡು: ರಸ ಒಸರುವಂತೆ ಗಟ್ಟಿಯಾಗಿ ಹಿಸುಕು; ಪರಮ: ಶ್ರೇಷ್ಠ; ಶೀತ: ತಂಪು; ಉದಕ: ನೀರು; ಸುರಭಿ:ಸುಗಂಧ; ಪರಿಮಳ: ಸುಗಂಧದಿಂದ ಕೂಡಿದ ವಸ್ತು; ಪಾನ: ಕುಡಿಯುವಿಕೆ; ಪರಿ: ವಿಧವಾದ; ಕುಡಿನೀರು: ಪೀಯಜಲ; ಸರಸ: ಚೆಲುವು; ಬಹುವಿಧ: ಹಲವಾರು ಬಗೆಯ; ಭಕ್ಷ್ಯ: ತಿನಿಸು; ಭೋಜ್ಯ: ಊಟ; ಎರಹು: ನೀಡು; ಗಿಂಡಿ: ಕಿರಿದಾದ ಬಾಯುಳ್ಳ ಪಾತ್ರೆ, ಕೊಂಬು; ಅರಸ: ರಾಜ; ನೀಡು: ಒಡ್ಡು, ಚಾಚು; ನಕ್ಕು: ಹರ್ಷಿಸು;

ಪದವಿಂಗಡಣೆ:
ತರಿಸಿದನು +ಹಿಮರುಚಿಯ +ಹಿಂಡಿದ
ಪರಮ +ಶೀತ+ಉದಕವೊ+ ತಾನ್+ಎನೆ
ಸುರಭಿ +ಪರಿಮಳ +ಪಾನವನು +ಪರಿಪರಿಯ +ಕುಡಿನೀರ
ಸರಸ +ಬಹುವಿಧ +ಭಕ್ಷ್ಯ +ಭೋಜ್ಯವನ್
ಎರಹಿದನು +ಕುಡಿನೀರ +ಗಿಂಡಿಯನ್
ಅರಸ +ನೀಡಲು +ಕಂಡು +ನಕ್ಕನು +ಭೀಷ್ಮನಿಂತೆಂದ

ಅಚ್ಚರಿ:
(೧) ನೀರಿನ ವರ್ಣನೆ – ಹಿಮರುಚಿಯ ಹಿಂಡಿದಪರಮ ಶೀತೋದಕವೊ; ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ