ಪದ್ಯ ೧೨: ಭೀಷ್ಮನ ಸಾವಿಗೆ ಯಾರು ದುಃಖಿತರಾದರು?

ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡು ಸುಡೆನುತ್ತ ಹೊರಳಿದರು (ಭೀಷ್ಮ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭೀಷ್ಮನ ಜೊತೆಯಲ್ಲಿದ್ದ ಸೇವಕರು, ಚಾಮರ ಛತ್ರ ಧಾರರು, ಅವನ ಮನೆಯ ವಿಶ್ವಾಸಿಕರು, ಅವನಿಗೆ ಬಿಲ್ಲು ಬಾಣಗಳನ್ನು ಕೊಡುವವರು ಚೀರಿ ಕೆಳಗೆ ಬಿದ್ದು ಹೊರಳಾಡಿ, ಭೀಷ್ಮನು ಪಿತಾಮಹನಲ್ಲವೇ? ಪಾಂಡವರನ್ನು ಸಾಕಿ ಬೆಳಸಿದನಲ್ಲವೇ? ಅವನಿಗೆ ಕೇಡು ಬಗೆದು ಪಾಂಡವರು ನಾರಕಿಗಳು, ಅವರನ್ನು ಸುಡು ಸುಡು ಎಂದು ಆಕ್ರಂದಿಸಿದರು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಕೆಡೆ: ಬೀಳು, ಕುಸಿ; ಹಡಪಿಗ: ತನ್ನ ಒಡೆಯನಿಗೆ ಅಡಕೆ ಎಲೆಯ ಚೀಲವನ್ನು ಹಿಡಿದು ಸೇವೆ ಮಾಡುವವನು; ಸೀಗುರಿ: ಚಾಮರ; ಸತ್ತಿಗೆ: ಕೊಡೆ, ಛತ್ರಿ; ಅರಮನೆ: ರಾಜರ ಆಲಯ; ವಿಶ್ವಾಸಿ: ನಂಬಿಕೆಗೆ ಪಾತ್ರವಾದುದು; ಬಿಲು: ಬಿಲ್ಲು, ಚಾಪ; ಸರಳ: ಬಾಣ; ಗುರು: ಆಚಾರ್ಯ; ಮುತ್ತಯ್ಯ: ಮುತ್ತಾತ; ಹೊರೆ:ರಕ್ಷಣೆ, ಆಶ್ರಯ; ತಂದೆ: ಪಿತ; ತಪ್ಪಿದ: ಕೈಬಿಡು; ಕಡು: ತುಂಬ, ಬಲು; ನರಕ: ಅಧೋಲೋಕ; ಸುಡು: ದಹಿಸು; ಹೊರಳು: ತಿರುವು, ಬಾಗು;

ಪದವಿಂಗಡಣೆ:
ಒರಲಿ +ಕೆಡೆದರು +ಹಡಪಿಗರು +ಸೀ
ಗುರಿಯವರು +ಸತ್ತಿಗೆಯವರು+ ತ
ನ್ನರಮನೆಯ +ವಿಶ್ವಾಸಿಗಳು+ ಬಿಲು+ಸರಳ +ನೀಡುವರು
ಗುರುವಲಾ +ಮುತ್ತಯ್ಯ +ನಮ್ಮನು
ಹೊರೆದ +ತಂದೆಗೆ +ತಪ್ಪಿದರು +ಕಡು
ನರಕಿಗಳು+ ಪಾಂಡವರು+ ಸುಡು +ಸುಡೆನುತ್ತ +ಹೊರಳಿದರು

ಅಚ್ಚರಿ:
(೧) ಭೀಷ್ಮನ ಸಾವಿಗೆ ನೊಂದವರು – ಹಡಪಿಗರು, ಸೀಗುರಿಯವರು, ಸತ್ತಿಗೆಯವರು, ವಿಶ್ವಾಸಿಗಳು

ಪದ್ಯ ೧೧: ಭೀಷ್ಮರು ಎಲ್ಲಿ ಮಲಗಿದರು?

ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ (ಭೀಷ್ಮ ಪರ್ವ, ೧೦ ಸಂಧಿ, ೧೧ ಪದ್ಯ
)

ತಾತ್ಪರ್ಯ:
ಮೈ ತೋಳು ತೊಡೆಗಳು ರಕ್ತ ಧಾರೆಗಳಿಂದ ಕೊಳಕಾಗಿ, ಕರುಳಿಂದ ಸುರಿಯುವ ನೆಣವಸೆ, ಮೂಳೆಯ ಒಟ್ಟಿಲುಗಳಿಂದ ಕೂಡಿ, ಕೆಂಗರಿಯ ಬಾಣಗಳ ಮಂಚದ ಮೇಲೆ ರಣರಂಗ ಮಧ್ಯದಲ್ಲಿ ಭೀಷ್ಮನು ಮಲಗಿದನು.

ಅರ್ಥ:
ಹೂಳು: ಹೂತು ಹಾಕು; ಬಾಣ: ಅಂಬು; ಮೈ: ತನು; ತೋಳು: ಬಾಹು; ತೊಡೆ: ಊರು; ಜೊಂಡು:ತಲೆಯ ಹೊಟ್ಟು, ನೀರಿನಲ್ಲಿ ಕೊಳೆತು ನಾರುವ ಕಸ; ರಕುತ: ನೆತ್ತರು; ಸಾಲು: ಗುಂಪು,ಆವಳಿ; ಕೊಳಚೆ: ಕೆಸರು; ಕರುಳ: ಪಚನಾಂಗ; ಕುಸುರಿ: ತುಂಡು, ಎಂಜಿಲು; ಬಸಿ: ಒಸರು, ಸ್ರವಿಸು, ಜಿನುಗು; ನೆಣವಸೆ: ಹಸಿಯಾದ ಕೊಬ್ಬು; ಮೂಳೆ: ಎಲುಬು; ನೆಲ: ಭೂಮಿ; ಮುಟ್ಟು: ತಾಗು; ಹೊಗರು: ಕಾಂತಿ, ಪ್ರಕಾಶ; ಕೆಂಗರಿಕೋಲು: ಕೆಂಪು ಗರಿಯುಳ್ಳ ಬಾಣ; ಮಂಚ: ಪಲ್ಲಂಗ; ರಣ: ಯುದ್ಧಭೂಮಿ; ಪವಡಿಸು: ಮಲಗು;

ಪದವಿಂಗಡಣೆ:
ಹೂಳಿ +ಹೋಯಿತು +ಬಾಣದಲಿ+ ಮೈ
ತೋಳು +ತೊಡೆ +ಜೊಂಡೆದ್ದು+ ರಕುತದ
ಸಾಲು+ಕೊಳಚೆಯ +ಕರುಳ +ಕುಸುರಿಯ +ಬಸಿವ +ನೆಣವಸೆಯ
ಮೂಳೆಯೊಟ್ಟಿಲ +ನೆಲನ +ಮುಟ್ಟದ
ಜಾಳಿಗೆಯ +ಹೊಗರೊಗುವ+ ಕೆಂಗರಿ
ಕೋಲ+ ಮಂಚದ +ಮೇಲೆ +ರಣದಲಿ +ಭೀಷ್ಮ +ಪವಡಿಸಿದ

ಅಚ್ಚರಿ:
(೧) ಭೀಷ್ಮರು ಮಲಗಿದ ಪರಿ – ಕೆಂಗರಿಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ

ಪದ್ಯ ೧೦: ಕೌರವನ ಸಿರಿ ಏಕೆ ಸೂರೆಗೊಂಡಿತು?

ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ (ಭೀಷ್ಮ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ವೀರಭಟರಲ್ಲಿ ಶಿವನಾದ ಭೀಷ್ಮನು ಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿದನು. ಕೌರವನ ಐಶ್ವರ್ಯವು ಸೂರೆಯಾಯಿತೇ! ವೈರಿಗೆ ಗೆಲುವಾಯಿತೇ! ಘೋರ ವಿಧಿಯು ಯಾರಿಗೆ ಯಾವ ಗತಿಯನ್ನು ತರುವುದೋ ಯಾರು ಬಲ್ಲರು ಶಿವ ಶಿವಾ ಎನ್ನುತ್ತಾ ಭೀಷ್ಮನ ಸಾರಥಿಯು ಕಡು ದುಃಖದಿಂದ ನೊಂದು ಕಂಬನಿ ಹರಿಸಿದನು.

ಅರ್ಥ:
ವೀರ: ಶೂರ; ಭಟ: ಸೈನಿಕ; ಭಾಳಾಕ್ಷ: ಹಣೆಯಲ್ಲಿ ಕಣ್ಣಿರುವ (ಶಿವ); ಸಾರು: ಡಂಗುರ ಹೊಡೆಸು; ಧಾರುಣಿ: ಭೂಮಿ; ಅಕಟ: ಅಯ್ಯೋ; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ಹಗೆ: ವೈರ; ಗೆಲವು: ಜಯ; ಬರಿಸು: ತುಂಬು; ಘೋರ: ಭಯಂಕರವಾದ; ವಿಧಿ: ನಿಯಮ; ಸಾರಥಿ: ಸೂತ; ಕಡು: ತುಂಬ; ಖೇದ: ದುಃಖ; ತುಂಬು: ಭರ್ತಿಯಾಗು; ಕಂಬನಿ: ಕಣ್ಣೀರು;

ಪದವಿಂಗಡಣೆ:
ವೀರಭಟ +ಭಾಳಾಕ್ಷ +ಭೀಷ್ಮನು
ಸಾರಿದನು +ಧಾರುಣಿಯನ್+ಅಕಟಾ
ಕೌರವನ +ಸಿರಿ +ಸೂರೆಯೋದುದೆ +ಹಗೆಗೆ +ಗೆಲವಾಯ್ತೆ
ಆರನ್+ಆವಂಗದಲಿ+ ಬರಿಸದು
ಘೋರ +ವಿಧಿ +ಶಿವಶಿವ+ ಎನುತ್ತಾ
ಸಾರಥಿಯು +ಕಡು+ಖೇದದಲಿ +ತುಂಬಿದನು +ಕಂಬನಿಯ

ಅಚ್ಚರಿ:
(೧)ಭೀಷ್ಮರನ್ನು ಶಿವನಿಗೆ ಹೋಲಿಸುವ ಪರಿ – ವೀರಭಟ ಭಾಳಾಕ್ಷ ಭೀಷ್ಮನು
(೨) ವಿಧಿಯ ಘೋರ ಆಟ – ಆರನಾವಂಗದಲಿ ಬರಿಸದು ಘೋರ ವಿಧಿ ಶಿವಶಿವ

ಪದ್ಯ ೯: ಭೀಷ್ಮರು ಹೇಗೆ ಕುಸಿದರು?

ಚೇಳ ಬೆನ್ನಿನೊಳೊಡೆದು ಮೂಡುವ
ಬಾಲ ವೃಶ್ಚಿಕದಂತೆ ಮಸೆದಿಹ
ಬೋಳೆಯಂಬುಗಳೊಡೆದು ಮೊನೆದೋರಿದವು ಬೆನ್ನಿನೊಳು
ಕೋಲು ಪಾರ್ಥನವವು ಶಿಖಂಡಿಯ
ಕೋಲುಗಳು ತಾನಲ್ಲ ನಿಂದುದು
ಕಾಳೆಗವು ನಮಗೆನುತ ಮೆಲ್ಲನೆ ಮಲಗಿದನು ಭೀಷ್ಮ (ಭೀಷ್ಮ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ಚೇಳಿನ ಬೆನ್ನನ್ನೊಡೆದು ಹೊರ ಬರುವ ಮರಿ ಚೇಳಿನಂತೆ ಈಬಾಣಗಳು ದೇಹವನ್ನು ದಾತಿ ಬೆನ್ನಿನಲ್ಲಿ ಬಂದಿವೆ. ಇವು ಶಿಖಂಡಿಯ ಬಾಣಗಳಲ್ಲ, ಅರ್ಜುನನ ಬಾಣಗಳು, ನಮಗೆ ಯುದ್ಧ ಸಾಕಾಗಿದೆ ಎನ್ನುತ್ತಾ ಭೀಷ್ಮನು ಮೆಲ್ಲನೆ ಮಲಗಿದನು.

ಅರ್ಥ:
ಬೆನ್ನು: ಹಿಂಭಾಗ; ಒಡೆದು: ಸೀಳು; ಮೂಡು: ಹೊರಹೊಮ್ಮು; ಬಾಲ: ಪುಚ್ಛ; ಮಸೆ: ಹರಿತವಾದುದು; ಬೋಳೆ: ಒಂದು ಬಗೆಯ ಹರಿತವಾದ ಬಾಣ; ಅಂಬು: ಬಾಣ; ಮೊನೆ: ಚೂಪು, ತುದಿ; ತೋರು: ಗೋಚರಿಸು; ಕೋಲು: ಬಾಣ; ಶಿಖಂಡಿ: ನಪುಂಸಕ; ಕಾಳೆಗ: ಯುದ್ಧ; ನಿಂದು: ನಿಲ್ಲು; ಮೆಲ್ಲನೆ: ನಿಧಾನ; ಮಲಗು: ನಿದ್ರಿಸು;

ಪದವಿಂಗಡಣೆ:
ಚೇಳ +ಬೆನ್ನಿನೊಳ್+ಒಡೆದು +ಮೂಡುವ
ಬಾಲ +ವೃಶ್ಚಿಕದಂತೆ +ಮಸೆದಿಹ
ಬೋಳೆ+ಅಂಬುಗಳ್+ಒಡೆದು +ಮೊನೆ +ತೋರಿದವು +ಬೆನ್ನಿನೊಳು
ಕೋಲು +ಪಾರ್ಥನವ್+ಅವು +ಶಿಖಂಡಿಯ
ಕೋಲುಗಳು+ ತಾನಲ್ಲ +ನಿಂದುದು
ಕಾಳೆಗವು +ನಮಗೆನುತ +ಮೆಲ್ಲನೆ +ಮಲಗಿದನು +ಭೀಷ್ಮ

ಅಚ್ಚರಿ:
(೧) ಭೀಷ್ಮರು ಕುಸಿದ ಪರಿ – ನಿಂದುದು ಕಾಳೆಗವು ನಮಗೆನುತ ಮೆಲ್ಲನೆ ಮಲಗಿದನು ಭೀಷ್ಮ

ಪದ್ಯ ೮: ಅರ್ಜುನನ ಬಾಣಗಳು ಭೀಷ್ಮರ ದೇಹವನ್ನು ಹೇಗೆ ಚುಚ್ಚಿದವು?

ಒಡಲನೊಚ್ಚತಗೊಂಡವಂಬಿನ
ಕುಡಿಗೆ ನೆರೆಯದು ರಕ್ತಜಲ ಬಳಿ
ವಿಡಿದು ಕವಿವಂಬುಗಳು ಬಂಬಲ್ಗರುಳ ಸೇದಿದವು
ಉಡಿದವೆಲು ಬಾಣಂಗಳೆಲುವಾ
ಗಡಸಿದವು ತನಿರಕುತ ಮಾಂಸವ
ನುದುಗಿದವು ಶರವಿವು ಶಿಖಂಡಿಯ ಬಾಣವಲ್ಲೆಂದ (ಭೀಷ್ಮ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ಈ ಬಾಣಗಳಿಗೆ ನನ್ನ ಒಡಲು ಮೀಸಲಾಗಿದೆ, ಬಾಣಗಳ ಕುಡಿತಕ್ಕೆ ಮೈಯರಕ್ತಸಾಲದು. ಹಿಂದೆ ಬಂದ ಬಾಣಗಳು ಕರುಳಿಗೆ ಹೊಕ್ಕವು. ಮೂಳೆಗಳು ಮುರಿದು ಅವುಗಳ ಜಾಗದಲ್ಲಿ ಬಾಣಗಳೇ ಎಲುಬಾಗಿವೆ, ಬಿಸಿ ರಕ್ತ ಮಾಂಸಗಳು ಸೂಸದಂತೆ ಮಾಡಿವೆ, ಇವು ಶಿಖಂಡಿಯ ಬಾಣಗಳಲ್ಲ ಎಂದು ಭೀಷ್ಮರು ನುಡಿದರು.

ಅರ್ಥ:
ಒಡಲು: ದೇಹ; ಎಚ್ಚು: ಬಾಣಬಿಡು, ಏಟು; ಅಂಬು: ಬಾಣ; ಕುಡಿ: ತುದಿ; ನೆರೆ: ಗುಂಪು; ರಕ್ತಜಲ: ನೆತ್ತರು; ಬಳಿ: ಹತ್ತಿರ; ಕವಿ: ಆವರಿಸು; ಅಂಬು: ಬಾಣ; ಬಂಬಲು: ಗುಂಪು, ಸಮೂಹ; ಕರುಳ: ಪಚನಾಂಗ; ಸೇದು: ಮುದುಡು, ಸೆಳೆ; ಉಡಿ: ಮುರಿ, ತುಂಡು ಮಾಡು; ಎಲುಬು: ಮೂಳೆ; ಬಾಣ: ಸರಳು; ಅಡಸು: ಬಿಗಿಯಾಗಿ ಒತ್ತು; ತನಿ: ಹೆಚ್ಚಾಗು; ರಕುತ: ನೆತ್ತರು; ಮಾಂಸ: ಅಡಬಳ; ಉಡುಗು: ಕುಂದು, ಕೃಶವಾಗು; ಶರ: ಬಾಣ; ಶಿಖಂಡಿ: ನಪುಂಸಕ; ಉಚ್ಚ: ಹೆಚ್ಚು;

ಪದವಿಂಗಡಣೆ:
ಒಡಲನ್+ ಉಚ್ಚತಗೊಂಡವ್+ಅಂಬಿನ
ಕುಡಿಗೆ +ನೆರೆಯದು +ರಕ್ತಜಲ+ ಬಳಿ
ವಿಡಿದು +ಕವಿವ್+ಅಂಬುಗಳು +ಬಂಬಲ್+ಕರುಳ +ಸೇದಿದವು
ಉಡಿದವ್ +ಎಲು+ ಬಾಣಂಗಳ್+ಎಲುವಾಗ್
ಅಡಸಿದವು +ತನಿ+ರಕುತ +ಮಾಂಸವನ್
ಉದುಗಿದವು +ಶರವಿವು+ ಶಿಖಂಡಿಯ +ಬಾಣವಲ್ಲೆಂದ

ಅಚ್ಚರಿ:
(೧) ಅಂಬು, ಶರ, ಬಾಣ – ಸಮಾನಾರ್ಥಕ ಪದ

ಪದ್ಯ ೭: ಭೀಷ್ಮನು ಯಾರ ಬಾಣಗಳಿಗೆ ಹೆದರುವೆನೆಂದನು?

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿ ವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂನುವೆನರ್ಜುನನ ಶರಕೆ (ಭೀಷ್ಮ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಿಂದ ತಪ್ಪಿಸಬಲ್ಲೆ, ಕುಲ ಪರ್ವತಗಳು ನನ್ನ ಮೇಲೆ ಜಾರಿ ಬಿದ್ದರೂ ಉಗುರಿನ ಕೊನೆಯಿಂದ ತಡೆಯಬಲ್ಲೆ, ಆದಿ ವರಾಹನು ಅವನ ಹಲ್ಲುಗಳಿಂದ ಇರಿದರೂ, ನರಸಿಂಹನು ತನ್ನ ಉಗುರುಗಳಿಂದ ಕೆರೆದರೂ ನಾನು ಸಹಿಸಬಲ್ಲೆ, ಆದರೆ ಅರ್ಜುನನ ಬಾಣಗಳಿಗೆ ನಾನು ಹೆದರುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಹರಿ: ವಿಷ್ಣು; ಕೌಮೋದಕಿ: ವಿಷ್ಣುವಿನ ಗದೆ; ಹೊಯ್ಲು: ಹೊಡೆತ; ಆನು: ಎದುರಿಸು; ಅಖಿಲ: ಎಲ್ಲಾ; ಕುಲಗಿರಿ: ದೊಡ್ಡ ಬೆಟ್ಟ; ಜರಿ: ಸೀಳೂ; ಬೀಳು: ಕೆಳಕ್ಕೆ ಕೆಡೆ, ಕುಸಿ; ಆಪು: ಸಾಮರ್ಥ್ಯ; ನಖ: ಉಗುರು; ಕೊನೆ: ತುದಿ; ಭರ: ವೇಗ; ಆದಿ: ಮೊದಲ; ವರಾಹ: ಹಂದಿ; ದಾಡೆ: ಹಲ್ಲು; ಇರಿ: ಚುಚ್ಚು; ಕೆರೆ: ಉಗುರಿನಿಂದ ಗೀಚು, ಗೀರು; ಸೈರಿಸು: ತಾಳು; ಅಂಜು: ಹೆದರು; ಶರ: ಬಾಣ;

ಪದವಿಂಗಡಣೆ:
ಹರಿಯ +ಕೌಮೋದಕಿಯ +ಹೊಯ್ಲನು
ಬೆರಳಲ್+ಆನುವೆನ್+ಅಖಿಲ +ಕುಲಗಿರಿ
ಜರಿದು +ಬೀಳುವಡ್+ಆನಲ್+ಆಪೆನು +ನಖದ +ಕೊನೆಗಳಲಿ
ಭರದಲ್+ಆದಿ +ವರಾಹ +ದಾಡೆಯಲ್
ಇರಿದಡೆಯು +ನರಸಿಂಹ +ನಖದಲಿ
ಕೆರೆದಡೆಯು +ಸೈರಿಸುವೆನ್+ಅಂಜುವೆನ್+ಅರ್ಜುನನ +ಶರಕೆ

ಅಚ್ಚರಿ:
(೧) ಇರಿ, ಜರಿ, ಹೊಯ್ಲು, ಕೆರೆ – ಹೊಡೆತ, ನೋವನ್ನು ಸೂಚಿಸುವ ಪದಗಳು