ಪದ್ಯ ೬: ಯಾರ ಬಾಣದ ಪೆಟ್ಟನ್ನು ಭೀಷ್ಮರು ಸಹಿಸಲಾರರು?

ಪರಶುರಾಮನ ಕೊಡಲಿಗಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಪರಶುರಾಮನ ಕೊಡಲಿಯ ಹೊಡೆತವನ್ನು ಸಹಿಸಬಲ್ಲೆ. ಪ್ರಳಯ ಭೈರವನ ಇರಿತಕ್ಕೆ ಹೆದರುವುದಿಲ್ಲ. ಸಿಡಿಲು ಬಡಿದರೆ ನನ್ನ ಕೂದಲೂ ಕೊಂಕುವುದಿಲ್ಲ. ಶಿವನ ಪಾಶುಪತಾಸ್ತ್ರವು ಮೈಯಲ್ಲಿ ರಂಧ್ರವನ್ನು ಕೊರೆದರೂ ಬೆದರುವುದಿಲ್ಲ. ಅರ್ಜುನನ ಬಾಣಗಳ ದಾಳಿಗೆ ಸಿಲುಕಿ ನೋಯುತ್ತಿದ್ದೇನೆ, ನೀವು ಬಂದು ಅವನ ಬಾಣಗಳನ್ನು ಪರಿಹರಿಸಿ ಎಂದು ಭೀಷ್ಮನು ಬೇಡಿದನು.

ಅರ್ಥ:
ಕೊಡಲಿ: ಪರಶು; ಕಡಿತ: ಕತ್ತರಿಸು; ಧರಿಸು: ಹಿಡಿ, ತೆಗೆದುಕೊಳ್ಳು; ವಿಲಯ: ನಾಶ, ಪ್ರಳಯ; ಇರಿ: ಚುಚ್ಚು; ಅಂಜು: ಹೆದರು; ಸಿಡಿಲು: ಅಶನಿ; ಹೊಡೆ: ಏಟು, ಹೊಡೆತ; ರೋಮ: ಕೂದಲು; ಕಂಪಿಸು: ಅಲುಗಾಡು; ಹರ: ಈಶ್ವರ; ಅಸ್ತ್ರ: ಶಸ್ತ್ರ; ಬಾದಣ: ತೂತು, ರಂಧ್ರ; ಒರೆ: ತಿಕ್ಕು; ಲೆಕ್ಕಿಸು: ಎಣಿಕೆಮಾಡು; ಸರಳು: ಬಾಣ; ಚೂಣಿ: ಮುಂದಿನ ಸಾಲು; ಸಿಲುಕು: ಸೆರೆಯಾದ ವಸ್ತು; ಪರಿಹರ: ನಿವಾರಣೆ;

ಪದವಿಂಗಡಣೆ:
ಪರಶುರಾಮನ +ಕೊಡಲಿ+ಕಡಿತವ
ಧರಿಸಲಾಪೆನು +ವಿಲಯ +ಭೈರವನ್
ಇರಿದಡ್+ಅಂಜೆನು +ಸಿಡಿಲು +ಹೊಡೆದರೆ +ರೋಮ +ಕಂಪಿಸದು
ಹರನ +ಪಾಶುಪತಾಸ್ತ್ರ+ ಬಾದಣಗ್
ಒರೆದರೆಯು+ ಲೆಕ್ಕಿಸೆನು+ ಪಾರ್ಥನ
ಸರಳ+ ಚೂಣಿಗೆ +ಸಿಲುಕಿದೆನು +ಪರಿಹರಿಸಿ+ ನೀವೆಂದ

ಅಚ್ಚರಿ:
(೧) ಭೀಷ್ಮನು ಬೇಡುವ ಪರಿ – ಪಾರ್ಥನ ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ

ಪದ್ಯ ೫: ಭೀಷ್ಮನು ಯಾರ ಬಾಣದಿಂದ ಹೆಚ್ಚಿನ ನೋವನನುಭವಿಸಿದನು?

ಇವು ಶಿಖಂಡಿಯ ಬಾಣವೇ ವಾ
ಸವನ ಮಗನಂಬುಗಳು ವಿಲಯದ
ಶಿವನ ಶೂಲದ ಗಾಯಕಿವು ಮಿಗಿಲೇನನುಸುರುವೆನು
ಇವನು ಸೈರಿಸಲಾರೆನಿಂದ್ರನ
ಪವಿಯ ಹೊಯ್ಲನು ಹೊರುವೆನಂತ್ಯದ
ಜವನ ದಂಡದ ಹತಿಗೆ ಹೆದರೆನು ಕೇಳಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಭೀಷ್ಮನು ನನ್ನನ್ನು ಚುಚ್ಚಿ ಗಾಯಗೊಳಿಸುತ್ತಿರುವ ಬಾಣಗಳು ಶಿಖಂಡಿಯ ಬಾಣಗಳೆಂದುಕೊಂಡಿರಾ? ಇವು ಅರ್ಜುನನ ಬಾಣಗಳು, ಶಿವನ ತ್ರಿಶೂಲದ ತಿವಿತದಿಂದಾದ ಗಾಯದ ನೋವಿಗಿಂತಲೂ ಈ ಬಾಣಗಳ ನೋವು ಹೆಚ್ಚಿನದು. ಇದನ್ನು ಸೈರಿಸಲಾರೆ. ಇಂದ್ರನ ವಜ್ರಾಯುಧದ ಹೊಡೆತಕ್ಕೂ, ಪ್ರಳಯ ಕಾಲದ ಯಮನ ದಂಡದ ಹೊಡೆತಕ್ಕೂ ನಾನು ಹೆದರುವುದಿಲ್ಲ ಎಂದನು.

ಅರ್ಥ:
ಶಿಖಂಡಿ: ನಪುಂಸಕ; ಬಾಣ: ಸರಳು; ವಾಸವ: ಇಂದ್ರ; ಮಗ: ಸುತ; ಅಂಬು: ಬಾಣ; ವಿಲಯ: ನಾಶ, ಪ್ರಳಯ; ಶೂಲ: ಈಟಿ, ಶಿವನ ತ್ರಿಶೂಲ; ಗಾಯ: ಪೆಟ್ಟು; ಮಿಗಿಲು: ಹೆಚ್ಚು; ಉಸುರು: ಹೇಳು, ಮಾತನಾಡು; ಸೈರಿಸು: ತಾಳು; ಇಂದ್ರ: ದೇವತೆಗಳ ಒಡೆಯ; ಪವಿ: ಇಂದ್ರನ ಆಯುಧ, ವಜ್ರಾಯುಧ; ಹೊಯ್ಲು: ಹೊಡೆತ; ಹೊರು: ತಾಳು; ಅಂತ್ಯ: ಕೊನೆ; ಜವ: ಯಮ; ದಂಡ: ಕೋಲು; ಹತಿ: ಪೆಟ್ಟು, ಹೊಡೆತ; ಹೆದರು: ಅಂಜು;

ಪದವಿಂಗಡಣೆ:
ಇವು +ಶಿಖಂಡಿಯ +ಬಾಣವೇ +ವಾ
ಸವನ +ಮಗನ್+ಅಂಬುಗಳು +ವಿಲಯದ
ಶಿವನ+ ಶೂಲದ +ಗಾಯಕಿವು +ಮಿಗಿಲೇನನ್+ಉಸುರುವೆನು
ಇವನು +ಸೈರಿಸಲಾರೆನ್+ಇಂದ್ರನ
ಪವಿಯ +ಹೊಯ್ಲನು +ಹೊರುವೆನ್+ಅಂತ್ಯದ
ಜವನ+ ದಂಡದ +ಹತಿಗೆ +ಹೆದರೆನು +ಕೇಳಿ +ನೀವೆಂದ

ಅಚ್ಚರಿ:
(೧) ಅರ್ಜುನನನ್ನು ವಾಸವನ ಮಗ ಎಂದು ಕರೆದಿರುವುದು
(೨) ವಜ್ರಾಯುಧವನ್ನು ಇಂದ್ರನ ಪವಿ ಎಂದು ಕರೆದಿರುವುದು

ಪದ್ಯ ೪: ಭೀಷ್ಮನು ಯಾರಲ್ಲಿ ಸಹಾಯ ಬೇಡಿದನು?

ನರನ ಸರಳಿಗೆ ಮೈಯ ಕೊಟ್ಟರೆ
ಮುರಿದು ರಥದಲಿ ನಿಂದು ನಿಜ ಮೋ
ಹರವ ನೋಡುತ ಶಲ್ಯ ಗುರು ಕೃಪ ಕೌರವಾನುಜರ
ಕರೆದು ನುಡಿದನು ಪಾರ್ಥನಂಬಿನ
ಹೊರಳಿ ಹೊಳ್ಳಿಸುತಿದೆ ಮದಂತಃ
ಕರಣ ಕುಂದಿತು ಕಾಯಲಾಪರೆ ಬನ್ನಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಷ್ಮನು ಅರ್ಜುನನ ಬಾಣಗಳಿಗೆ ಮೈಕೊಟ್ಟು, ಓರೆಯಾಗಿ ರಥದಲ್ಲಿ ನಿಂತು, ತನ್ನ ಸೈನ್ಯವನ್ನೀಕ್ಷಿಸುತ್ತಾ, ಶಲ್ಯ, ದ್ರೋಣ, ಕೃಪ, ದುಶ್ಯಾಸನಾದಿಗಳನ್ನು ಕರೆದು ಅರ್ಜುನನ ಬಾಣಗಳ ಗುಂಪು ನನ್ನನ್ನು ನಿರ್ಬಲನನ್ನಾಗಿ ಮಾಡುತ್ತಿದೆ. ನನ್ನ ಮನಸ್ಸು ಕುಗ್ಗಿದೆ ನನ್ನನ್ನು ರಕ್ಷಿಸಬೇಕೆಂದರೆ ನೀವು ಬಂದು ರಕ್ಷಿಸಿ ಎಂದು ಕರೆದನು.

ಅರ್ಥ:
ನರ: ಅರ್ಜುನ; ಸರಳು: ಬಾಣ; ಮೈ: ತನು; ಕೊಡು: ನೀಡು; ಮುರಿ: ಸೀಳು; ರಥ: ಬಂಡಿ; ನಿಜ: ದಿಟ, ತನ್ನ; ಮೋಹರ: ಯುದ್ಧ; ನೋಡು: ವೀಕ್ಷಿಸು; ಅನುಜ: ತಮ್ಮ; ಕರೆ: ಬರೆಮಾಡು; ನುಡಿ: ಮಾತು; ಅಂಬು: ಬಾಣ; ಹೊರಳು: ತಿರುವು, ಬಾಗು; ಹೊಳ್ಳಿಸು: ಟೊಳ್ಳು ಮಾಡು, ಪೊಳ್ಳಾಗಿಸು; ಅಂತಃಕರಣ: ಮನಸ್ಸು; ಕುಂದು: ಕೊರತೆ, ನೂನ್ಯತೆ; ಕಾಯು: ರಕ್ಷಿಸು; ಬನ್ನಿ: ಆಗಮಿಸು;

ಪದವಿಂಗಡಣೆ:
ನರನ +ಸರಳಿಗೆ +ಮೈಯ +ಕೊಟ್ಟರೆ
ಮುರಿದು +ರಥದಲಿ +ನಿಂದು +ನಿಜ +ಮೋ
ಹರವ +ನೋಡುತ +ಶಲ್ಯ +ಗುರು +ಕೃಪ +ಕೌರವ+ಅನುಜರ
ಕರೆದು+ ನುಡಿದನು +ಪಾರ್ಥನ್+ಅಂಬಿನ
ಹೊರಳಿ +ಹೊಳ್ಳಿಸುತಿದೆ +ಮದ್+ಅಂತಃ
ಕರಣ+ ಕುಂದಿತು +ಕಾಯಲಾಪರೆ +ಬನ್ನಿ +ನೀವೆಂದ

ಅಚ್ಚರಿ:
(೧) ಭೀಷ್ಮರ ಸ್ಥಿತಿ – ನರನ ಸರಳಿಗೆ ಮೈಯ ಕೊಟ್ಟರೆ ಮುರಿದು ರಥದಲಿ ನಿಂದು

ಪದ್ಯ ೩: ಭೀಷ್ಮನು ಬಿಲ್ಲನ್ನೇಕೆ ಕೆಳಗಿಟ್ಟನು?

ಎಲೆ ಮಹಾದೇವೀ ನಪುಂಸಕ
ನಲಿ ನಿರಂತರವೆಮಗೆ ಸಮರವೆ
ಗೆಲವಿದೊಳ್ಳಿತೆ ಸುಡು ಶಿಖಂಡಿಯ ಕೂಡೆ ಬಿಲುವಿಡಿದು
ಅಳುಕದೆಚ್ಚನಲಾ ದುರಾತ್ಮನ
ನಿಲವ ತೆಗೆ ತೆಗೆಯೆನುತ ಚಾಪವ
ನಿಳುಹಿದನು ರಥದೊಳಗೆ ಗಂಗಾಸೂನು ವಹಿಲದಲಿ (ಭೀಷ್ಮ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಭೀಷ್ಮನು ಶಿವ ಶಿವಾ, ಈ ನಪುಂಸಕನೊಡನೆ ನಾವು ಯುದ್ಧ ಮಾಡಬೇಕಾಗಿ ಬಂತೇ? ಇವನನ್ನು ಗೆಲ್ಲುವುದೂ ಒಂದು ಹಿರಿಮೆಯೇ! ಈ ಶಿಖಂಡಿಯ ಹಿಂದೆ ನಿಂತು ಬೆದರದೆ ನಮ್ಮನ್ನು ಹೊಡೆದ ಆ ದುರಾತ್ಮನಾರೋ ಅವನ ಮನೋಭಾವವು ತ್ಯಾಜ್ಯವಾದುದು, ಈ ಸಮರ ಇನ್ನು ಸಾಕು, ಎಂದು ಬಿಲ್ಲು ಬಾಣಗಳನ್ನು ರಥದಲ್ಲಿಟ್ಟನು.

ಅರ್ಥ:
ನಪುಂಸಕ: ಶಿಖಂಡಿ; ನಿರಂತರ: ಯಾವಾಗಲು; ಸಮರ: ಯುದ್ಧ; ಗೆಲುವು: ಜಯ; ಒಳ್ಳಿತು: ಸರಿಯಾದುದು; ಸುಡು: ದಹಿಸು; ಶಿಖಂಡಿ: ನಪುಂಸಕ; ಕೂಡೆ: ಜೊತೆ; ಬಿಲು: ಬಿಲ್ಲು, ಚಾಪ; ಅಳುಕು: ಹೆದರು; ಎಚ್ಚು: ಬಾಣ ಪ್ರಯೋಗ ಮಾಡು; ದುರಾತ್ಮ: ದುಷ್ಟ; ನಿಲವು: ನೆಲಸುವಿಕೆ; ತೆಗೆ: ಹೊರತರು; ಚಾಪ: ಬಿಲ್ಲು; ಇಳುಹು: ತಗ್ಗಿಸು, ಕೆಳಕ್ಕಿಡು; ರಥ: ಬಂಡಿ; ಸೂನು: ಮಗ; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ಎಲೆ +ಮಹಾದೇವ್+ಈ +ನಪುಂಸಕ
ನಲಿ +ನಿರಂತರವ್+ಎಮಗೆ +ಸಮರವೆ
ಗೆಲವಿದೊಳ್ಳಿತೆ +ಸುಡು +ಶಿಖಂಡಿಯ +ಕೂಡೆ +ಬಿಲುವಿಡಿದು
ಅಳುಕದ್+ಎಚ್ಚನಲಾ+ ದುರಾತ್ಮನ
ನಿಲವ+ ತೆಗೆ +ತೆಗೆ+ಎನುತ +ಚಾಪವನ್
ಇಳುಹಿದನು +ರಥದೊಳಗೆ +ಗಂಗಾಸೂನು +ವಹಿಲದಲಿ

ಅಚ್ಚರಿ:
(೧) ಭೀಷ್ಮನು ಬಯ್ದ ಪರಿ – ಅಳುಕದೆಚ್ಚನಲಾ ದುರಾತ್ಮನನಿಲವ ತೆಗೆ ತೆಗೆ

ಪದ್ಯ ೨: ಭೀಷ್ಮನ ನೆತ್ತಿಗೆ ಯಾರು ಬಾಣವನ್ನು ಹೂಡಿದರು?

ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ಕೋದವಂಬುಗಳರಿಯ ನೆತ್ತಿಯಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ (ಭೀಷ್ಮ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನು ಗರ್ಜಿಸಿ ಹೆದೆಯನ್ನು ಒದರಿಸಿ ಬಾಣಗಳನ್ನು ಬಿಡಲು, ಅವು ಬಿಲ್ಲನ್ನೊದೆದು ಹೋಗಿ ಭೀಷ್ಮನ ನೆತ್ತಿಯಲ್ಲಿ ನೆಟ್ಟಿದವು. ಶಿಖಂಡಿಯು ಭೀಷ್ಮನೆದುರಿನಲ್ಲೇ ನಿಂತು, ಕೂಗಿ, ಬಾಣಗಳನ್ನು ಭೀಷ್ಮನ ಮೈಯಲ್ಲಿ ಹೊಗಿಸಿದನು. ಭೀಷ್ಮನ ಮನಸ್ಸಿನಲ್ಲಿ ವೈರಾಗ್ಯವುದಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಬಾಣ: ಸರಳು; ಕೆದರು: ಹರಡು; ಥಟ್ಟು: ಪಕ್ಕ, ಕಡೆ, ಗುಂಪು; ಚಾಪ: ಬಿಲ್ಲು; ಒದೆ: ತುಳಿ, ಮೆಟ್ಟು; ಹಾಯ್ದು: ಹೊಡೆ; ಕೋದು: ಸೇರಿಸು; ಅಂಬು: ಬಾಣ; ಅರಿ: ವೈರಿ; ನೆತ್ತಿ: ತಲೆಯ ಮಧ್ಯಭಾಗ, ನಡುದಲೆ; ಉಲಿ: ಧ್ವನಿ; ಶಿಖಂಡಿ: ನಪುಂಸಕ; ಶರ: ಬಾಣ; ಸಂಘ: ಜೊತೆ; ಹೂಳು: ಹೂತು ಹಾಕು, ಮುಚ್ಚು; ಹೃದಯ: ಎದೆ; ವೈರಾಗ್ಯ: ಪಂಚದ ವಿಷಯಗಳಲ್ಲಿ ಅನಾಸಕ್ತಿ, ವಿರಕ್ತಿ; ಮನೆ: ಆಲಯ; ಕಟ್ಟು: ನಿರ್ಮಿಸು; ನಿಮಿಷ: ಕ್ಷಣಮಾತ್ರ, ಕಾಲದ ಪ್ರಮಾಣ;

ಪದವಿಂಗಡಣೆ:
ಒದರಿ +ಜೇವಡೆಗ್+ಐದು +ಬಾಣವ
ಕೆದರಿದನು +ಥಟ್ಟೈಸಿ +ಚಾಪವನ್
ಒದೆದು +ಹಾಯ್ದವು +ಕೋದವ್+ಅಂಬುಗಳ್+ಅರಿಯ+ ನೆತ್ತಿಯಲಿ
ಇದಿರೊಳ್+ಉಲಿದು +ಶಿಖಂಡಿ+ ಶರ+ ಸಂ
ಘದಲಿ +ಹೂಳಿದನಾಗ+ ಭೀಷ್ಮನ
ಹೃದಯದಲಿ +ವೈರಾಗ್ಯ +ಮನೆಗಟ್ಟಿತ್ತು +ನಿಮಿಷದಲಿ

ಅಚ್ಚರಿ:
(೧) ಬಾಣ, ಶರ – ಸಮಾನಾರ್ಥಕ ಪದ