ಪದ್ಯ ೨೨: ಭೀಷ್ಮನ ಉಗ್ರರೂಪವನ್ನು ಕಂಡು ದೇವತೆಗಳೇನನ್ನು ಕೇಳುತ್ತಿದ್ದರು?

ಭುವನ ನೆರೆ ಹೊಗೆವಂದು ಹೆಚ್ಚಿದ
ಶಿವನ ಖತಿ ಮೈದೋರಿತೆನೆ ರಿಪು
ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ
ಜವನ ಪುರಿಗಿಂಬಿಲ್ಲ ಕೊಂಡೊ
ಯ್ವವರು ಕೈಗುಂದಿದರು ಗಂಗಾ
ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ (ಭೀಷ್ಮ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೂಮಿಯು ಸುಡುವ ಕಾಲ ಬಂದಾಗ ಶಿವನೂ ಕೋಪಗೊಂಡರೆ ಹೇಗೋ ಹಾಗೆ ಭೀಷ್ಮನ ಕೋಪವು ಮತ್ತೆ ಮತ್ತೆ ಹೆಚ್ಚಿತು. ಯಮಪುರಕ್ಕೆ ಸತ್ತ ಭಟರನ್ನು ಕರೆದೊಯ್ಯಲು ಜನರಿಲ್ಲ, ಈಗ ಅವರನ್ನು ಕೊಂಡೊಯ್ಯುವವರ ಕೈಗಳು ಸೋತು ಹೋದವು, ದೇವತೆಗಳು ಇಷ್ಟಾದರೂ ಭೀಷ್ಮನೇಕೆ ಸಂಹಾರ ಕಾರ್ಯವನ್ನು ಬಿಟ್ಟಿಲ್ಲ ಎಂದು ನುಡಿದರು.

ಅರ್ಥ:
ಭುವನ: ಜಗತ್ತು, ಪ್ರಪಂಚ; ನೆರೆ: ಗುಂಪು; ಹೊಗೆ:ಸುಡು, ದಹಿಸು; ಹೆಚ್ಚು: ಅಧಿಕ; ಖತಿ: ಕೋಪ; ಮೈದೋರು: ಕಾಣಿಸು; ರಿಪು: ವೈರಿ; ನಿವಹ: ಗುಂಪು; ನೆಲೆಗೊಂಡು: ನಿಲ್ಲು; ಖಾತಿ: ಕೋಪ, ಕ್ರೋಧ; ಕೊಪ್ಪರಿಸು: ತಿವಿ, ಹೊಡೆ; ಜವ: ಯಮ; ಪುರಿ: ಊರು; ಒಯ್ಯು: ಸೇರು; ಕೈಗುಂದು: ಸೋತುಹೋಗು; ಗಂಗಾಭವ: ಭೀಷ್ಮ; ಕೊಲು: ಸಾಯಿಸು; ಬಿಡನು: ತೊರೆಯನು; ಅಮರಗಣ: ದೇವತೆಗಳು;

ಪದವಿಂಗಡಣೆ:
ಭುವನ +ನೆರೆ +ಹೊಗೆವಂದು +ಹೆಚ್ಚಿದ
ಶಿವನ +ಖತಿ +ಮೈದೋರಿತೆನೆ +ರಿಪು
ನಿವಹದಲಿ +ನೆಲೆಗೊಂಡುದ್+ಈತನ +ಖಾತಿ +ಕೊಪ್ಪರಿಸಿ
ಜವನಪುರಿಗ್+ ಇಂಬಿಲ್ಲ +ಕೊಂಡ್
ಒಯ್ವವರು+ ಕೈಗುಂದಿದರು+ ಗಂಗಾ
ಭವನು +ಕೊಲುವುದ+ ಬಿಡನ್+ಇದೇನ್+ಎನುತಿರ್ದುದ್+ಅಮರಗಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭುವನ ನೆರೆ ಹೊಗೆವಂದು ಹೆಚ್ಚಿದ ಶಿವನ ಖತಿ ಮೈದೋರಿತೆನೆ

ಪದ್ಯ ೨೧: ಭೀಷ್ಮನು ಎಷ್ಟು ಜನರನ್ನು ಸಂಹರಿಸಿದನು?

ಧರಣಿಪತಿಗಳು ಹತ್ತು ಸಾವಿರ
ವುರುಳಿತಾ ದಿವಸದಲಿ ಹಿಂದಣ
ಕೊರತೆಯುಳಿ ಲೆಕ್ಕಕ್ಕೆ ಕೊಂದನು ಹತ್ತು ಸಾವಿರವ
ಮರಳಿ ಮೂಸಾರಿವರ ಮತ್ತಂ
ತೆರಡು ಸಾವಿರ ಮತ್ತೆ ಐಸಾ
ವಿರವ ಸವರಿದನಹಿತ ಬಲದಲಿ ಭೂಪ ಕೇಳೆಂದ (ಭೀಷ್ಮ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಆ ದಿವಸದ ಲೆಕ್ಕಕ್ಕೆ ಹತ್ತು ಸಾವಿರ ರಾಜರನ್ನು ಕೊಂದನು. ಹಿಂದೆ ಕಡಿಮೆ ಬಂದ ಲೆಕ್ಕಕ್ಕೆ ಇನ್ನೂ ಹತ್ತು ಸಾವಿರ ಜನರನ್ನು ಸಂಹರಿಸಿದನು. ಮತ್ತೆ ಮೂರು ಸಾವಿರ ಆಮೇಲೆ ಎರಡು ಸಾವಿರ, ಮತ್ತೆ ಐದು ಸಾವಿರ ರಾಜರನ್ನು ಪಾಂಡವರ ಸೈನ್ಯದಲ್ಲಿ ಭೀಷ್ಮನು ಸಂಹರಿಸಿದನು.

ಅರ್ಥ:
ಧರಣಿಪತಿ: ರಾಜ; ಸಾವಿರ: ಸಹಸ್ರ; ಉರುಳು: ಕೆಳಗೆ ಬೀಳು; ದಿವಸ: ದಿನ; ಹಿಂದಣ: ಹಿಂದಿನ; ಕೊರತೆ: ನ್ಯೂನತೆ; ಉಳಿದ: ಮಿಕ್ಕ; ಲೆಕ್ಕ: ಗಣಿತ; ಕೊಂದು: ಸಾಯಿಸು; ಮರಳಿ: ಮತ್ತೆ; ಸವರು: ನಾಶಮಾದು; ಅಹಿತ: ವೈರಿ; ಬಲ: ಶಕ್ತಿ, ಸೈನ್ಯ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಧರಣಿಪತಿಗಳು+ ಹತ್ತು +ಸಾವಿರ
ಉರುಳಿತ್+ಆ+ ದಿವಸದಲಿ +ಹಿಂದಣ
ಕೊರತೆ+ಉಳಿ +ಲೆಕ್ಕಕ್ಕೆ +ಕೊಂದನು +ಹತ್ತು +ಸಾವಿರವ
ಮರಳಿ +ಮೂಸಾವಿರವ+ ಮತ್ತಂತ್
ಎರಡು +ಸಾವಿರ +ಮತ್ತೆ +ಐ+ಸಾ
ವಿರವ +ಸವರಿದನ್+ಅಹಿತ +ಬಲದಲಿ +ಭೂಪ +ಕೇಳೆಂದ

ಅಚ್ಚರಿ:
(೧) ಧರಣಿಪತಿ, ಭೂಪ – ಸಮಾನಾರ್ಥಕ ಪದಗಳು

ಪದ್ಯ ೨೦: ಭೀಷ್ಮರು ಯಾರನ್ನು ಅಪ್ಸರೆಯರ ಬಳಿ ಕಳುಹಿಸಿದನು?

ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ (ಭೀಷ್ಮ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜಿಂಕೆಯ ಮರಿಗಳು ತಮ್ಮ ಗೊರಸಿನಿಂದ ಸಿಂಹವನ್ನು ಹೊಡೆವಂತೆ ರಾಜರು ಪ್ರೌಢ ಪ್ರತಾಪಿಯಾದ ಭೀಷ್ಮನನ್ನು ಖಡ್ಗದಿಮ್ದ ಹೊಡೆಯಲು ಬಂದರು. ಅವರ ಸಾಹಸವನ್ನು ಹೊಗಳುತ್ತಾ ಭೀಷ್ಮನು ಅವರು ಅಪ್ಸರ ಸ್ತ್ರೀಯರನ್ನು ಕಾಮಿಸುವಂತೆ ಮಾಡಿದನು.

ಅರ್ಥ:
ಅಂಗವಿಸು: ಬಯಸು, ಸ್ವೀಕರಿಸು; ಮರಿಹುಲ್ಲೆ: ಜಿಂಕೆಮರಿ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಸಿಂಗ: ಸಿಂಹ, ಕೇಸರಿ; ಹೊಯ್ವ: ಹೊಡೆಯುವ; ನೃಪ: ರಾಜ; ಉತ್ತುಂಗ: ಉನ್ನತವಾದ; ಸಹಸಿ: ಪರಾಕ್ರಮಿ; ಕೈಮಾಡು: ಹೋರಾಡು; ಖಡ್ಗ: ಕತ್ತಿ; ಅಂಗವಣೆ: ಬಯಕೆ, ಉದ್ದೇಶ; ಹೊಗು: ತೆರಳು; ದಿವಿಜಾಂಗನೆ: ಅಪ್ಸರೆ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಭಂಗ: ತುಂಡು, ಚೂರು; ಅಭಂಗ: ಸೋಲಿಲ್ಲದ; ಮೆರೆ: ಹೊಳೆ, ಪ್ರಕಾಶಿಸು; ಉನ್ನತ: ಹೆಚ್ಚು; ಬಾಹು: ಭುಜ; ವಿಕ್ರಮ: ಪರಾಕ್ರಮ;

ಪದವಿಂಗಡಣೆ:
ಅಂಗವಿಸಿ +ಮರಿಹುಲ್ಲೆ +ಖುರದಲಿ
ಸಿಂಗವನು +ಹೊಯ್ವಂತೆ +ನೃಪರ್
ಉತ್ತುಂಗ +ಸಹಸಿಯ +ಮೇಲೆ +ಕೈಮಾಡಿದರು +ಖಡ್ಗದಲಿ
ಅಂಗವಣೆಯನು +ಹೊಗಳುತಾ +ದಿವಿ
ಜಾಂಗನಾ +ಕಾಮುಕರ+ ಮಾಡಿ+
ಅಭಂಗ +ಭೀಷ್ಮನು +ಮೆರೆದನ್+ಉನ್ನತ +ಬಾಹುವಿಕ್ರಮವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಗವಿಸಿ ಮರಿಹುಲ್ಲೆ ಖುರದಲಿ ಸಿಂಗವನು ಹೊಯ್ವಂತೆ
(೨) ಸಾಯಿಸಿದನು ಎಂದು ಹೇಳಲು – ದಿವಿಜಾಂಗನಾ ಕಾಮುಕರ ಮಾಡಿಯಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ

ಪದ್ಯ ೧೯: ಸೈನ್ಯದ ನಂತರ ಭೀಷ್ಮನೆದುರು ಯಾರು ನಿಂತರು?

ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲಕೊಳ್ಳಎ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೈನ್ಯವು ಪುಡಿಯಾದ ಮೇಲೆ ರಾಜರು, ಭೀಷ್ಮನ ಬಾಣಗಳನ್ನು ಲೆಕ್ಕಿಸದೆ, ಭೀಷ್ಮನೆದುರಿಗೆ ಬಂದು ನಿಂತರು. ಭೀಷ್ಮನು ನಿಮ್ಮ ಪರಾಕ್ರಮ ಹಿರಿದಾದುದು, ಎಷ್ಟೇ ಆಗಲಿ ನೀವು ರಾಜರಲ್ಲವೇ ಎನ್ನುತ್ತಾ ಅವರ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಆಳು: ಸೈನಿಕ; ಮುರಿ: ಸೀಳು; ಹೊಕ್ಕು: ಸೇರು; ನೃಪಾಲ: ರಾಜ; ಬೊಬ್ಬಿರಿದು: ಅರಚು; ಕೋಲ: ಬಾಣ; ಹರಿ: ಸೀಳು; ರಥ: ಬಂಡಿ; ಹೊರೆ: ರಕ್ಷಣೆ, ಆಶ್ರಯ; ಆಳುತನ: ಪರಾಕ್ರಮ; ಅಂಗವಣೆ: ರೀತಿ, ಬಯಕೆ; ಒಳ್ಳಿತು: ಸರಿಯಾದ; ಮೇಳ: ಗುಂಪು; ಬಳಿಕ: ನಂತರ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಪೂತ: ಪುಣ್ಯವಂತ; ಮಝ: ಭಲೇ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಆಳು+ ಮುರಿದವು +ಮೇಲೆ +ಹೊಕ್ಕು +ನೃ
ಪಾಲಕರು+ ಬೊಬ್ಬಿರಿದು +ಭೀಷ್ಮನ
ಕೋಲಕೊಳ್ಳದೆ+ ಕೊಂಡು+ ಹರಿದರು +ರಥದ +ಹೊರೆಗಾಗಿ
ಆಳುತನದ್+ಅಂಗವಣೆ+ಒಳ್ಳಿತು
ಮೇಳವೇ +ಬಳಿಕೇನು +ಪೃಥ್ವೀ
ಪಾಲರಲ್ಲಾ +ಪೂತು +ಮಝ +ಎನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ನೃಪಾಲ, ಪೃಥ್ವೀಪಾಲ – ಸಮಾನಾರ್ಥಕ ಪದ

ಪದ್ಯ ೧೮: ಭೀಷ್ಮನೆದುರು ಯಾರು ಪುನಃ ಬಂದು ನಿಲ್ಲುತ್ತಿದ್ದರು?

ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ (ಭೀಷ್ಮ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭೀಷ್ಮನು ಕುದುರೆಗಳ ಸೈನ್ಯವನ್ನು ಕಡಿದು ಹಾಕಿದರು. ಹೇರಾನೆಗಳನ್ನು ಕೆಡವಿದರು. ರಥಗಳನ್ನು ಕಡಿದು ಕಾಲಾಳುಗಳನ್ನು ಕೊಚ್ಚಿದನು. ಆದರೂ ದೇಹದ ಮೇಲಿನ ಮೋಹವನ್ನು ಬಿಟ್ಟು ಪಾಂಡವ ದಳವು ಮತ್ತೆ ಮತ್ತೆ ಗರ್ಜಿಸಿ ಭೀಷ್ಮನೆದುರಿಗೆ ಬಂದು ನಿಲ್ಲುತ್ತಿತ್ತು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತುರಗ: ಕುದುರೆ; ದಳ: ಸೈನ್ಯ; ಕೆಡಹು: ನಾಶಮಾಡು; ಹೇರಾನೆ: ದೊಡ್ಡದಾದ ಆನೆ; ತಡೆ: ನಿಲ್ಲಿಸು; ಕಡಿ: ಕತ್ತರಿಸು; ಒಗ್ಗು: ಗುಂಪು; ರಥ: ಬಂಡಿ; ಉರೆ: ಹೆಚ್ಚು; ಕೊಚ್ಚು: ಕತ್ತರಿಸು; ಕಾಲಾಳು: ಸೈನಿಕರು; ಹೊಡಕರಿಸು: ಕಾಣಿಸು; ಹೊದರು: ಗುಂಪು; ಮುಂದಕೆ: ಎದುರು; ನಡೆ: ಚಲಿಸು; ಕೈಮಾಡು: ಹೋರಾಡು; ಕಾಯ: ದೇಹ; ತೊಡಕು: ಸಿಕ್ಕು, ಗೋಜು; ತೆಕ್ಕೆ: ಗುಂಪು; ಕಟ್ಟು: ಬಂಧಿಸು; ಭಟ: ಸೈನಿಕ; ನಾಕ: ಸ್ವರ್ಗ;

ಪದವಿಂಗಡಣೆ:
ಕಡಿದು +ಬಿಸುಟನು +ತುರಗ +ದಳವನು
ಕೆಡಹಿದನು +ಹೇರಾನೆಗಳ +ತಡೆ
ಗಡಿದನ್+ಒಗ್ಗಿನ +ರಥವನ್+ಉರೆ +ಕೊಚ್ಚಿದನು +ಕಾಲಾಳ
ಹೊಡಕರಿಸಿ+ ಹೊದರೆದ್ದು +ಮುಂದಕೆ
ನಡೆನಡೆದು+ ಕೈಮಾಡಿ +ಕಾಯದ
ತೊಡಕನೊಲ್ಲದೆ +ತೆಕ್ಕೆಗೆಟ್ಟಿತು +ಭಟರು +ನಾಕದಲಿ

ಅಚ್ಚರಿ:
(೧) ಭಟರ ಛಲವನ್ನು ವಿವರಿಸುವ ಪರಿ – ಕಾಯದತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ

ಪದ್ಯ ೧೭: ಭೀಷ್ಮನು ಶತ್ರು ಸೈನಿಕರಿಗೆ ಏನು ಹೇಳಿದನು?

ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ (ಭೀಷ್ಮ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಶತ್ರು ಸೈನಿಕರೇ ಅಮರಾವತಿಯ ಅಪ್ಸರೆಯರ ಕೇರಿಗೆ ಹೋಗುವ ಆತುರವಿದೆಯೇ? ಹಾಗೆ ತವಕಿಸುವವರನ್ನು ಖಂಡಿತವಾಗಿ ಅಲ್ಲಿಗೆ ಕಳಿಸುತ್ತೇನೆ; ಖಂಡಿತ ತಪ್ಪುವುದಿಲ್ಲ, ಬನ್ನಿ ಕಾಲಾಳುಗಳು, ರಾವುತರು, ಜೋದರು, ಮಹಾರಥರು ಬನ್ನಿ. ಇನ್ನೂ ಅಲ್ಲಿಗೆ ಹೋಗುವ ತವಕವಿದ್ದವರನ್ನು ಕರೆಯಿರಿ ಎಂದು ಭೀಷ್ಮನು ಬಾಣಗಳನ್ನು ಬಿಟ್ಟನು.

ಅರ್ಥ:
ದಿವಿಜ: ದೇವತೆ; ನಗರಿ: ಊರು; ದಿವಿಜನಗರಿ: ಅಮರಾವತಿ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ಕವಿ: ಆವರಿಸು; ಮನ: ಮನಸ್ಸು; ಮುಂದು: ಎದುರು; ಹಜ್ಜೆ: ಪಾದ; ತವಕ: ಬಯಕೆ, ಆತುರ; ಅಳುಕು: ಹೆದರು; ಮೇಣ್: ಅಥವಾ; ಕೈತಪ್ಪು: ಕಳಚು; ಕಾಲಾಳು: ಸೈನಿಕರು; ರಾವುತ: ರಥಿ; ಅವಗಡಿಸು: ಕಡೆಗಣಿಸು; ಜೋದರು: ಯೋಧರು; ನವ: ಹೊಸ; ಮಹಾರಥ: ಯೋಧ, ಪರಾಕ್ರಮಿ; ಕರೆ: ಬರೆಮಾಡು; ಎಚ್ಚು: ಬಾಣಬಿಡು;

ಪದವಿಂಗಡಣೆ:
ದಿವಿಜ +ನಗರಿಯ +ಸೂಳೆ+ಕೇರಿಗೆ
ಕವಿವ +ಮನವೇ +ಮುಂದು +ಹಜ್ಜೆಗೆ
ತವಕಿಸುವರ್+ಅಳುಕುವರೆ+ ಮೇಣ್ +ಕೈತಪ್ಪ +ಮಾಡಿಸೆನು
ಕವಿಯಿರೈ +ಕಾಲಾಳು +ರಾವುತರ್
ಅವಗಡಿಸಿರೈ +ಜೋದರೆಸಿರೈ
ನವ +ಮಹಾರಥರ್+ಅಂಬ +ಕರೆಯಿರ್+ಎನುತ್ತ +ಕವಿದ್+ಎಚ್ಚ

ಅಚ್ಚರಿ:
(೧) ಸಾಯಬೇಕೆ ಎಂದು ಹೇಳುವ ಪರಿ – ದಿವಿಜ ನಗರಿಯ ಸೂಳೆಗೇರಿಗೆಕವಿವ ಮನವೇ

ಪದ್ಯ ೧೬: ಭೀಷ್ಮರೇಕೆ ಗಹಗಹಿಸಿದರು?

ಆಳು ಕುದುರೆಯ ಬೀಯಮಾಡಿ ನೃ
ಪಾಲ ಮಾಡುವುದೇನು ದೊರೆಗಳು
ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು
ಚಾಳ ನೂಕಿಸಿ ಹೊತ್ತುಗಳೆವರು
ಹೇಳಿ ಫಲವೇನಿನ್ನು ರಣ ಹೀ
ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಚತುರಂಗ ಸೈನ್ಯದ ಸಂಹಾರ ಮಾಡಿಸಿ, ದೊರೆಗಳು ಮಾಡುತ್ತಿರುವುದಾದರೂ ಏನು? ಭೀಮಾರ್ಜುನರು ಯುದ್ಧಕ್ಕೆ ಬರಬಾರದೇ? ಅವರು ಕ್ಷುಲ್ಲಕರನ್ನು ಮುಂದೂಡಿ ಹೊತ್ತು ಕಳೆಯುತ್ತಿದ್ದಾರಲ್ಲಾ, ಯುದ್ಧದ ಛಲ ಅವರಿಗಿಲ್ಲವೇ ಎಂದು ಭೀಷ್ಮನು ಗಹಗಹಿಸಿ ನಕ್ಕನು.

ಅರ್ಥ:
ಆಳು: ಸೈನಿಕ; ಕುದುರೆ: ಅಶ್ವ; ಬೀಯ: ವ್ಯಯ, ಹಾಳು; ನೃಪಾಲ: ರಾಜ; ದೊರೆ: ರಾಜ; ಕಾಳೆಗ: ಯುದ್ಧ; ಮೈದೋರು: ಕಾಣಿಸು, ಎದುರು ನಿಲ್ಲು; ಚಾಳ: ಪ್ರಯೋಜನವಿಲ್ಲದ, ಒಂದೇ ಬಗೆಯ ಮನೆಗಳ ಸಾಲು; ನೂಕು: ತಳ್ಳು; ಹೊತ್ತು: ಸಮಯ; ಕಳೆ: ವ್ಯಯಿಸು; ಹೇಳು: ತಿಳಿಸು; ಫಲ: ಪ್ರಯೋಜನ; ರಣ: ಯುದ್ಧ; ಹೀಹಾಳಿ: ತೆಗಳಿಕೆ; ಗಹಗಹಿಸು: ಗಟ್ಟಿಯಾಗಿ ನಗು; ಕಲಿ: ಶೂರ;

ಪದವಿಂಗಡಣೆ:
ಆಳು +ಕುದುರೆಯ +ಬೀಯಮಾಡಿ +ನೃ
ಪಾಲ +ಮಾಡುವುದೇನು +ದೊರೆಗಳು
ಕಾಳೆಗಕೆ +ಮೈದೋರಬಾರದೆ+ ಭೀಮ +ಫಲುಗುಣರು
ಚಾಳ +ನೂಕಿಸಿ +ಹೊತ್ತು+ಕಳೆವರು
ಹೇಳಿ +ಫಲವೇನಿನ್ನು +ರಣ +ಹೀ
ಹಾಳಿ +ತಮಗಿಲ್ಲೆಂದು +ಗಹಗಹಿಸಿದನು +ಕಲಿ+ಭೀಷ್ಮ

ಅಚ್ಚರಿ:
(೧) ರೂಪಕದ ಪ್ರಯೋಗ – ಚಾಳ ನೂಕಿಸಿ ಹೊತ್ತುಗಳೆವರು ಹೇಳಿ ಫಲವೇನಿನ್ನು

ಪದ್ಯ ೧೫: ಸೈನಿಕರು ಯಾವುದರಲ್ಲಿ ಈಜುತ್ತಿದ್ದರು?

ಬೀಳುತಿರ್ದರು ಭಟರು ಮತ್ತೆ ಛ
ಡಾಳಿಸಿತು ತಲೆಮಾರಿಗಳು ಹೆಣ
ಸಾಲನೆಡಹಿದರರುಣವಾರಿಯ ತೊರೆಯನೀಸಿದರು
ಆಳು ಹೊಕ್ಕರು ದಂತಿಘಟೆಗಳು
ತೂಳಿದವು ಕಡುಹೆದ್ದು ತುರಗದ
ಮೇಲೆ ರಾವುತರಳವಿಗೊಟ್ಟುದು ತೇರ ಬಾಹೆಯಲಿ (ಭೀಷ್ಮ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮುಂಚೂಣಿಯಲ್ಲಿದ್ದ ಸೈನಿಕರು ಬಿದ್ದೊಡನೆ, ಅವರ ಹೆಣಗಳನ್ನು ತುಳಿದು ರಕ್ತದ ತೊರೆಗಳನ್ನು ಈಜಿ ಹಿಂದಿನ ಸೈನ್ಯ ಬರುತ್ತಿತ್ತು. ರಾವುತರದಂಡು ಮತ್ತೆ ಭೀಷ್ಮನ ತೇರಮುಂದೆ ಬಂದು ನಿಲ್ಲುತ್ತಿತ್ತು.

ಅರ್ಥ:
ಬೀಳು: ಕುಗ್ಗು; ಭಟ: ಸೈನಿಕ; ಮತ್ತೆ: ಪುನಃ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ತಲೆಮಾರಿ: ತಲೆಕಡಿಯುವವ, ಕ್ರೂರಿ; ಹೆಣ: ಜೀವವಿಲ್ಲದ ಶರೀರ; ಸಾಲು: ಆವಳಿ; ಎಡಹು: ಬೀಳು; ಅರುಣವಾರಿ: ಕೆಂಪು ನೀರು, ರಕ್ತ; ತೊರೆ: ಸರೋವರ; ಈಸು: ಈಜು; ಆಳು: ಸೈನ್ಯ; ಹೊಕ್ಕು: ಸೇರು; ದಂತಿ: ಆನೆ; ಘಟೆ: ಗುಂಪು; ತೂಳು: ಬೆನ್ನಟ್ಟು, ಹಿಂಬಾಲಿಸು; ಕಡು: ಬಹಳ; ಎದ್ದು: ಮೇಲೇಳು; ತುರಗ: ಕುದುರೆ; ರಾವುತ: ರಥಿ; ಅಳವಿ: ಯುದ್ಧ; ತೇರು: ಬಂಡಿ; ಬಾಹೆ: ಬದಿ, ಹೊರಭಾಗ;

ಪದವಿಂಗಡಣೆ:
ಬೀಳುತಿರ್ದರು +ಭಟರು +ಮತ್ತೆ +ಛ
ಡಾಳಿಸಿತು +ತಲೆಮಾರಿಗಳು+ ಹೆಣ
ಸಾಲನ್+ಎಡಹಿದರ್+ಅರುಣವಾರಿಯ +ತೊರೆಯನ್+ಈಸಿದರು
ಆಳು +ಹೊಕ್ಕರು +ದಂತಿಘಟೆಗಳು
ತೂಳಿದವು +ಕಡುಹೆದ್ದು +ತುರಗದ
ಮೇಲೆ +ರಾವುತರ್+ಅಳವಿಗೊಟ್ಟುದು +ತೇರ +ಬಾಹೆಯಲಿ

ಅಚ್ಚರಿ:
(೧) ಯುದ್ಧದ ತೀವ್ರತೆಯನ್ನು ವಿವರಿಸುವ ಪರಿ – ಹೆಣ ಸಾಲನೆಡಹಿದರರುಣವಾರಿಯ ತೊರೆಯನೀಸಿದರು