ಪದ್ಯ ೮: ಭೀಷ್ಮರು ಯಾರನ್ನು ಎದುರಿಸಿದರು?

ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡೆಇಂಬರನು ಸಮ
ದಂಡಿಯಲಿ ಮೋಹರಿಸಿ ಸ್ಮರಕೆ ನಡೆದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ತನ್ನ ಮೇಲೆ ನುಗ್ಗಿದ ನಾಯಕರನ್ನು ಹಿಂದಕ್ಕೆ ದಬ್ಬಿ ಹೊಡೆದು ಸೇನೆಯು ಒಟ್ಟಾಗಿರುವಾಗಲೇ ರಾಜರನ್ನು ಮರ್ದಿಸಿ, ಅಭಿಮನ್ಯು, ಸಾತ್ಯಕಿ, ಘಟೋತ್ಕಚರನ್ನು ಸಮಯುದ್ಧದಲ್ಲಿ ಎದುರಿಸಿದನು.

ಅರ್ಥ:
ಕೊಂಡು: ತೆಗೆದು; ಬಹ: ತುಂಬ; ಬಲು: ಬಹಳ; ನಾಯಕ: ಒಡೆಯ; ಖತಿ: ಕೋಪ; ದಡಿ: ಕೋಲು, ಬಡಿಗೆ; ಹೊಯ್ಸು: ಹೊಡೆ; ಸೇನೆ: ಸೈನ್ಯ; ಹಿಂಡು: ಗುಂಪು; ಒಡೆ: ಸೀಳು; ಓಜೆ: ಶ್ರೇಣಿ, ಸಾಲು; ಹುರಿ:ನಾಶಪಡಿಸು; ಮಹೀಶ್ವರ: ರಾಜ; ಗಂಡುಗಲಿ: ಪರಾಕ್ರಮಿ; ಚಂಡಬಲ: ಪರಾಕ್ರಮಿ; ದಂಡಿ: ಶಕ್ತಿ, ಸಾಮರ್ಥ್ಯ; ಮೋಹರ: ಯುದ್ಧ; ಸಮರ: ಕಾಳಗ;

ಪದವಿಂಗಡಣೆ:
ಕೊಂಡುಬಹ+ ಬಲುನಾಯಕರ+ ಖತಿ
ಗೊಂಡು +ದಡಿಯಲಿ +ಹೊಯ್ಸಿ +ಸೇನೆಯ
ಹಿಂಡೊಡೆಯದ್+ಓಜೆಯಲಿ +ಹುರಿ+ಏರಿಸಿ+ ಮಹೀಶ್ವರರ
ಗಂಡುಗಲಿ+ಅಭಿಮನ್ಯು +ಸಾತ್ಯಕಿ
ಚಂಡಬಲ+ ಹೈಡಿಂಬರನು +ಸಮ
ದಂಡಿಯಲಿ +ಮೋಹರಿಸಿ+ ಸಮರಕೆ+ ನಡೆದನಾ+ ಭೀಷ್ಮ

ಅಚ್ಚರಿ:
(೧) ಗಂಡುಗಲಿ, ಚಂಡಬಲ – ಪರಾಕ್ರಮಿಗಳನ್ನು ವಿವರಿಸುವ ಪದ

ಪದ್ಯ ೭: ಪಾಂಡವರ ಸೈನ್ಯವನ್ನು ಯಾರು ಆಕ್ರಮಣ ಮಾಡಿದರು?

ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ (ಭೀಷ್ಮ ಪರ್ವ, ೯ ಸಂಧಿ, ೭ ಪದ್ಯ
)

ತಾತ್ಪರ್ಯ:
ಕೌರವ ವೀರರೆಲ್ಲರೂ ಅರ್ಜುನನತ್ತ ಹೋಗಿ ಅವನನ್ನು ಒಂದು ಕಡೆಗೆ ತೆಗೆದು ಯುದ್ಧವನ್ನಾರಂಭಿಸಿದರು. ಇತ್ತ ಭೀಷ್ಮನು ಬಾಣಗಳ ಹೊರೆಗಳ ಕಟ್ಟುಗಳನ್ನು ಕಿತ್ತು ಶತ್ರುಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಪಾಂಡವ ಸೈನ್ಯದ ಬೆನ್ನುಹತ್ತಿದನು.

ಅರ್ಥ:
ವಿಗಡ: ಶೌರ್ಯ, ಪರಾಕ್ರಮ; ಅನಿಬರು: ಅಷ್ಟುಜನ; ನೆರೆ: ಸೇರು, ಜೊತೆಗೂಡು; ತೆಗೆ: ಹೊರಹಾಕು; ಹೊಗೆ: ಧುಮುಗುಡು; ಅಂತ್ಯ: ಕೊನೆ; ರುದ್ರ: ಶಿವ, ಭಯಂಕರವಾದ; ಅಗ್ಗ: ಶ್ರೇಷ್ಠ; ಕಣ್ಣು: ನೇತ್ರ; ಶಿಖಿ: ಬೆಂಕಿ; ಬಿಗಿ: ಕಟ್ಟು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹರಿ: ಸೀಳು; ಬಿಲ್ಲು: ಚಾಪ; ಉಗುಳು: ಹೊರಹಾಕು; ಅಂಬು: ಬಾಣ; ಅಳವಿ: ಶಕ್ತಿ, ಯುದ್ಧ; ತೆಗೆ: ಹೊರತರು; ಬಲ: ಶಕ್ತಿ, ಸೈನ್ಯ; ಬೆಂಬತ್ತಿ: ಹಿಂಬಾಲಿಸು; ಖಾತಿ: ಕೋಪ;

ಪದವಿಂಗಡಣೆ:
ವಿಗಡರ್+ಅನಿಬರು +ನೆರೆದು +ಪಾರ್ಥನ
ತೆಗೆದರ್+ಅತ್ತಲು +ಭೀಷ್ಮನ್+ಇತ್ತಲು
ಹೊಗೆದನ್+ಅಂತ್ಯದ +ರುದ್ರನ್+ಅಗ್ಗದ +ಕಣ್ಣ +ಶಿಖಿಯಂತೆ
ಬಿಗಿದ +ಹೊದೆಗಳ +ಹರಿದು +ಬಿಲ್ಲಿಂದ್
ಉಗುಳಿಸಿದನ್+ಅಂಬುಗಳನ್+ಅಳವಿಗೆ
ತೆಗೆದು+ ಪಾಂಡವ +ಬಲವ +ಬೆಂಬತ್ತಿದನು +ಖಾತಿಯಲಿ

ಅಚ್ಚರಿ:
(೧) ಬಾಣ ಬಿಟ್ಟನು ಎಂದು ಹೇಳುವ ಪರಿ – ಬಿಲ್ಲಿಂದುಗುಳಿಸಿದನಂಬುಗಳನಳವಿಗೆ

ಪದ್ಯ ೬: ಭೀಷ್ಮರು ಕೌರವ ಸೇನಾನಾಯಕರಿಗೆ ಏನು ಹೇಳಿದರು?

ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡವೆ ಯಮಪುರಕೆ ಮೋಹರಿಸಿ ನೀವೆಂದ (ಭೀಷ್ಮ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶತ್ರುವು ನಮ್ಮನ್ನು ಹಿಮ್ಮೆಟ್ಟುವಂತೆ ಮಾಡಲು ಬಿಡುವರೇ? ಶತ್ರುವಿನ ಮೇಲೆ ಆಕ್ರಮಣಮಾಡಿ ಹಿಂದಕ್ಕೆ ಬರುವುದೇ? ಅರ್ಜುನನು ಪರಬಲಕ್ಕೆ ಮೃತ್ಯುವೇ? ಇರಲಿ, ಏನೆಂದರೇನು ಪ್ರಯೋಜನ, ಅರ್ಜುನನನ್ನು ಮತ್ತೆ ಕೆಣಕಿ ನನ್ನ ಕಡೆಗೆ ಬರಲು ಬಿಡದಿದ್ದರೆ ಶತ್ರು ಸೈನ್ಯವನ್ನು ಕಿತ್ತು ಯಮಪುರಕ್ಕೆ ಕಳಿಸುತ್ತೇನೆ, ನೀವೆಲ್ಲರೂ ಸೈನ್ಯ ಸನ್ನದ್ಧರಾಗಿರಿ ಎಂದು ಭೀಷ್ಮರು ಕೌರವ ಸೇನಾನಾಯಕರಿಗೆ ತಿಳಿಸಿದರು.

ಅರ್ಥ:
ಒತ್ತು: ಆಕ್ರಮಿಸು, ಮುತ್ತು; ಹಗೆ: ವೈರ; ಹಜ್ಜೆ: ಪಾದ; ತೆಗೆ: ಹೊರತರು; ಪರಬಲ: ವೈರಿ ಸೈನ್ಯ; ಮೃತ್ಯು: ಸಾವು; ಸಾಕು: ನಿಲ್ಲಿಸು; ಹೋಗು: ತೆರಳು; ಫಲವೇನು: ಪ್ರಯೋಜನವೇನು; ಕೆಣಕು: ರೇಗಿಸು; ಬಿಡು: ತೊರೆ; ವೈರಿ: ಶತ್ರು; ಸೇನೆ: ಸೈನ್ಯ; ಕಿತ್ತು: ಕೀಳು; ಬಿಸುಡು: ಹೊರಹಾಕು; ಯಮ: ಜವ; ಪುರ: ಊರು; ಮೋಹರ: ಯುದ್ಧ;

ಪದವಿಂಗಡಣೆ:
ಒತ್ತುಗೊಡುವರೆ +ಹಗೆಗೆ+ ಹಜ್ಜೆಯನ್
ಇತ್ತು +ತೆಗೆವರೆ+ ಪಾರ್ಥ +ಪರಬಲ
ಮೃತ್ಯುವೇ +ಸಾಕಿನ್ನು +ಹೋಗಲಿಯೆಂದು +ಫಲವೇನು
ಮತ್ತೆ +ಕೆಣಕುವುದ್+ಅರ್ಜುನನ +ನ
ಮ್ಮತ್ತ +ಬಿಡದಿರೆ+ ವೈರಿಸೇನೆಯ
ಕಿತ್ತು +ಬಿಸುಡವೆ+ ಯಮಪುರಕೆ+ ಮೋಹರಿಸಿ+ ನೀವೆಂದ

ಅಚ್ಚರಿ:
(೧) ಒತ್ತು, ಇತ್ತು, ಕಿತ್ತು – ಪ್ರಾಸ ಪದಗಳು
(೨) ಹಗೆ, ವೈರಿ, ಪರಬಲ – ಸಮಾನಾರ್ಥಕ ಪದ
(೩) ಸಾಯಿಸುವೆ ಎಂದು ಹೇಳುವ ಪರಿ – ವೈರಿಸೇನೆಯ ಕಿತ್ತು ಬಿಸುಡವೆ ಯಮಪುರಕೆ

ಪದ್ಯ ೫: ಭೀಷ್ಮರು ಎಷ್ಟು ಬಿಲ್ಲುಗಳನ್ನು ತರೆಸಿದರು?

ತರಿಸಿದನು ಹದಿನೆಂಟು ಸಾವಿರ
ಸರಳ ಹೊದೆಗಳ ಬಂಡಿಗಳ ಹ
ನ್ನೆರಡು ಸಾವಿರ ಧನುವನುರುತರದಖಿಳ ಕೈದುಗಳ
ಕರಸಿದನು ಸೈಮ್ಧವನ ಶಲ್ಯನ
ಗುರುಸುತನ ಕೃತವರ್ಮ ಭಗದ
ತ್ತರ ಶಕುನಿ ದುಶ್ಯಾಸನ ದ್ರೋಣಾದಿ ನಾಯಕರ (ಭೀಷ್ಮ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಹನ್ನೆರಡು ಸಾವಿರ ಬಿಲ್ಲುಗಳನ್ನೂ, ಹದಿನೆಂಟು ಸಾವಿರ ಬಾಣಗಳ ಬಂಡಿಗಳನ್ನೂ ಭೀಷ್ಮನು ತರಿಸಿದನು. ಸೈಂಧವ, ಶಲ್ಯ, ಅಶ್ವತ್ಥಾಮ, ಕೃತವರ್ಮ, ಭಗದತ್ತ, ಶಕುನಿ, ದುಶ್ಯಾಸನ, ದ್ರೋಣ ಮೊದಲಾದ ಸೇನಾನಾಯಕರನ್ನು ಕರೆಸಿದನು.

ಅರ್ಥ:
ತರಿಸು: ಬರೆಮಾಡು; ಸಾವಿರ: ಸಹಸ್ರ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಬಂಡಿ: ರಥ; ಧನು: ಬಿಲ್ಲು; ಉರುತರ: ಅತಿಶ್ರೇಷ್ಠ; ಅಖಿಳ: ಎಲ್ಲಾ; ಕೈದು: ಆಯುಧ, ಶಸ್ತ್ರ; ಕರಸು: ಬರೆಮಾಡು; ಸುತ: ಮಗ; ಆದಿ: ಮುಂತಾದ; ನಾಯಕ: ಒಡೆಯ;

ಪದವಿಂಗಡಣೆ:
ತರಿಸಿದನು +ಹದಿನೆಂಟು +ಸಾವಿರ
ಸರಳ+ ಹೊದೆಗಳ+ ಬಂಡಿಗಳ+ ಹ
ನ್ನೆರಡು +ಸಾವಿರ +ಧನುವನ್+ಉರುತರದ್+ಅಖಿಳ +ಕೈದುಗಳ
ಕರೆಸಿದನು +ಸೈಂಧವನ +ಶಲ್ಯನ
ಗುರುಸುತನ +ಕೃತವರ್ಮ +ಭಗದ
ತ್ತರ +ಶಕುನಿ +ದುಶ್ಯಾಸನ +ದ್ರೋಣಾದಿ +ನಾಯಕರ

ಅಚ್ಚರಿ:
(೧) ಯುದ್ಧದ ಗಾತ್ರವನ್ನು ತಿಳಿಸುವ ಆಯುಧಗಳ ಲೆಕ್ಕ – ಹದಿನೆಂಟು ಸಾವಿರ ಸರಳ ಹೊದೆಗಳ, ಹನ್ನೆರಡು ಸಾವಿರ ಧನುವ

ಪದ್ಯ ೪: ಭೀಷ್ಮರು ಕೌರವನಿಗೆ ಯಾವ ಭರವಸೆಯನ್ನಿಟ್ಟರು?

ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತೆ ಮಾಣಲದು ನೋಡಾದಡಾಹವವ
ಕ್ಷತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ (ಭೀಷ್ಮ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಮ್ಮ ಮಾತು ನಿನಗ ಕೋಪ, ದುಃಖವನ್ನುಂಟು ಮಾಡಿತೇ? ನಾವು ಅನುಚಿತವನ್ನು ಮಾದುವುದರಲ್ಲೇ ತೊಡಗಿದ್ದೇವೆ ಎನ್ನಿಸಿತೇ? ಅದು ಹಾಗಿರಲಿ, ನಮ್ಮ ಯುದ್ಧವನ್ನು ನೋಡು, ರಾಜನಾದ ನಿನಗೆ ಇನ್ನು ಸುಖವನ್ನುಂಟು ಮಾಡುತ್ತೇನೆ, ನಿನ್ನ ವಿರೋಧಿಗಲ ವಿಧಿಯೇನು ಎನ್ನುವುದನ್ನು ಈಗಲೇ ತೋರಿಸುತ್ತೇನೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖತಿ: ಕೋಪ; ನುಡಿ: ಮಾತು; ಅನುಚಿತ: ಸರಿಯಲ್ಲದ; ಪರಾಯಣ: ಪರಮಗುರಿ; ಮತಿ: ಬುದ್ಧಿ; ತೋರು: ಗೋಚರಿಸು; ಮಾಣು: ನಿಲ್ಲಿಸು; ನೋಡು: ವೀಕ್ಷಿಸು; ಆಹವ: ಯುದ್ಧ; ಕ್ಷತಿ: ಕೇಡು, ನಷ್ಟ; ಹೊರೆ; ಭಾರ; ಸೌಖ್ಯ: ನೆಮ್ಮದಿ; ಸ್ಥಿತಿ: ಅಸ್ತಿತ್ವ, ಅವಸ್ಥೆ; ಭೂಪತಿ: ರಾಜ; ವಿರೋಧಿ: ಶತ್ರು; ವಿಧಿ:ಆಜ್ಞೆ, ಆದೇಶ, ನಿಯಮ; ತೋರು: ಗೋಚರಿಸು;

ಪದವಿಂಗಡಣೆ:
ಖತಿಯ +ಮಾಡಿತೆ +ನಮ್ಮ +ನುಡಿ+ಅನು
ಚಿತ+ಪರಾಯಣರೆಂದು +ನಿನ್ನಯ
ಮತಿಗೆ+ ತೋರಿತೆ+ ಮಾಣಲದು +ನೋಡಾದಡ್+ಆಹವವ
ಕ್ಷತಿಯ +ಹೊರೆಕಾರರಿಗೆ +ಸೌಖ್ಯ
ಸ್ಥಿತಿಯ +ಮಾಡುವೆನ್+ಇನ್ನು +ಕುರುಭೂ
ಪತಿ+ ವಿರೋಧಿಯ +ವಿಧಿಯನ್+ಈಗಳೆ+ ತೋರಿಸುವೆನೆಂದ

ಅಚ್ಚರಿ:
(೧) ಖತಿ, ಮತಿ, ಕ್ಷತಿ, ಸ್ಥಿತಿ, ಭೂಪತಿ – ಪ್ರಾಸ ಪದಗಳು
(೨) ಭರವಸೆಯನ್ನು ನೀಡುವ ಪರಿ – ಕ್ಷತಿಯ ಹೊರೆಕಾರರಿಗೆ ಸೌಖ್ಯಸ್ಥಿತಿಯ ಮಾಡುವೆನ್

ಪದ್ಯ ೩: ದುರ್ಯೋಧನನೇಕೆ ನಿಟ್ಟುಸಿರು ಬಿಟ್ಟನು?

ನುಡಿಯೆವಾವು ಸಮರ್ಥರೆಂದುದೆ
ಕಡು ನಿಧಾನವು ಸುಭಟರೋಟವೆ
ಕಡೆಗೆ ಪರವಹ ಧರ್ಮ ಪಾರ್ಥನು ಜಗದೊಳಗ್ಗಳನು
ನಡುಹೊಳೆಯ ಹರಿಗೋಲ ಮೂಲೆಯ
ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ (ಭೀಷ್ಮ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಭೀಷ್ಮರ ಮಾತು ಕೇಳಿ ದುರ್ಯೋಧನನು, ನಾನು ಏನೂ ಹೇಳುವುದಿಲ್ಲ, ವೀರರು ಹೇಳಿದ್ದೇ ಮಾಡಿದ್ದೇ ಸರಿ, ಅವರು ಓಡಿ ಹೋಗುವುದೇ ಹೆಚ್ಚಿನ ಧರ್ಮ, ಈ ಲೋಕದಲ್ಲಿ ಅರ್ಜುನನೇ ಮಹಾವೀರ, ಯುದ್ಧಕ್ಕೆ ಆರಂಭಾವಿಗಿ ಹತ್ತು ದಿನಗಳಾಗಿವೆ, ಈಗ ನಡುಹೊಳೆಯಲ್ಲಿ ದೋಣಿಯ ಮೂಲೆ ಕೊರೆದರೆ, ನಮ್ಮ ಪುಣ್ಯ ಬಿಟ್ಟು ಹೋಗುವ ಕಾಲ ಎಂದುಕೊಳ್ಳಬೇಕಾಗಿದೆ, ನಾವು ಪುಣ್ಯಹೀನರು ಎಂದು ದುರ್ಯೋಧನನು ನಿಟ್ಟುಸಿರು ಬಿಟ್ಟನು.

ಅರ್ಥ:
ನುಡಿ: ಮಾತು; ಸಮರ್ಥ: ಬಲಶಾಲಿ, ಗಟ್ಟಿಗ; ಕಡು: ವಿಶೇಷ, ಅಧಿಕ; ನಿಧಾನ: ನಿಶ್ಚಯ, ಸಾವಕಾಶ; ಸುಭಟ: ಶೂರ; ಓಟ: ಧಾವಿಸು; ಕಡೆ: ಕೊನೆ; ಪರವಹ: ಶ್ರೇಷ್ಠವಾದ; ಧರ್ಮ: ಧಾರಣೆ ಮಾಡಿದುದು; ಜಗ: ಪ್ರಪಂಚ; ಅಗ್ಗ: ಶ್ರೇಷ್ಠ; ನಡುಹೊಳೆ: ಹೊಳೆಯ ಮಧ್ಯದಲ್ಲಿ; ಹೊಳೆ: ಸರೋವರ, ಸರಸಿ; ಹರಿಗೋಲು: ನಾವೆ, ದೋಣಿ; ಮೂಲೆ: ಕೊನೆ; ಕಡಿ: ಸೀಳು; ಪುಣ್ಯ: ಸದಾಚಾರ; ಬಿಡುಗಡೆ: ತೊರೆ; ಕಾಲ: ಸಮಯ; ಅರಸ: ರಾಜ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ನುಡಿಯೆವಾವು +ಸಮರ್ಥರ್+ಎಂದುದೆ
ಕಡು +ನಿಧಾನವು +ಸುಭಟರ್+ಓಟವೆ
ಕಡೆಗೆ +ಪರವಹ+ ಧರ್ಮ +ಪಾರ್ಥನು +ಜಗದೊಳ್+ಅಗ್ಗಳನು
ನಡುಹೊಳೆಯ +ಹರಿಗೋಲ+ ಮೂಲೆಯ
ಕಡಿದಿರಾದರೆ+ ನಮ್ಮ +ಪುಣ್ಯದ
ಬಿಡುಗಡೆಯ+ ಕಾಲವು +ಶಿವಾ+ ಎಂದ್+ಅರಸ+ ಬಿಸುಸುಯಿದ

ಅಚ್ಚರಿ:
(೧) ರೂಪಕದ ಪ್ರಯೋಗ – ನಡುಹೊಳೆಯ ಹರಿಗೋಲ ಮೂಲೆಯ ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು