ಪದ್ಯ ೬೪: ಕೌರವ ಸೈನ್ಯದ ದುಃಸ್ಥಿತಿಯನ್ನು ಯಾರು ಕಂಡರು?

ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ (ಭೀಷ್ಮ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಶಸ್ತ್ರಾಸ್ತ್ರಗಳೂ, ಧ್ವಜಗಳೂ ಬೆಟ್ಟದಮ್ತೆ ಬಿದ್ದವು. ರಣರಂಗವು ಮರಗಿಡಗಳು ಮಲಗಿದ ಅಡವಿಯಂತೆ ಕಾಣುತ್ತಿತ್ತು. ಸೈನ್ಯವು ಚಲ್ಲಾಪಿಲ್ಲಿಯಾಯಿತು. ಹಿಮ್ಮೆಟ್ಟುವ ಸೈನ್ಯವು ಸಮುದ್ರದ ತೆರೆಗಳಂತೆ ತೋರಿತು. ತನ್ನ ಸಮಸ್ತ ಸೈನ್ಯದ ದುಃಸ್ಥಿತಿಯನ್ನು ಕೌರವನು ನೋಡಿದನು.

ಅರ್ಥ:
ಒಟ್ಟು: ಗುಂಪು; ಕೈದು: ಆಯುಧ; ಸತ್ತಿಗೆ: ಕೊಡೆ, ಛತ್ರಿ; ಬೆಟ್ಟ: ಗಿರಿ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೆಳೆ: ಜಗ್ಗು, ಎಳೆ; ಅಡವಿ: ಕಾಡು; ಪವಡಿಸು: ಮಲಗು; ತೆರ: ಪದ್ಧತಿ, ತರಹ; ರಣಾಗ್ರ: ಯುದ್ಧದ ಮುಂಭಾಗ; ಥಟ್ಟು: ಗುಂಪು; ಮುರಿ: ಸೀಳು; ಕೂಡೆ: ಜೊತೆ; ತೆರೆ: ತೆಗೆ, ಬಿಚ್ಚು; ಸಾಲು: ಆವಳಿ, ಗುಂಪು; ಸಾಗರ: ಅಂಬುಧಿ, ಸಮುದ್ರ; ರಾಯ: ರಾಜ; ಅಘ: ಪಾಪ; ಕಂಡು: ತೋರು; ಸಕಲ: ಎಲ್ಲಾ; ಮೋಹರ: ಯುದ್ಧ;

ಪದವಿಂಗಡಣೆ:
ಒಟ್ಟಿದವು +ಕೈದುಗಳು +ಸತ್ತಿಗೆ
ಬೆಟ್ಟವಾದವು +ಸಿಂಧ+ಸೆಳೆಗಳು
ನಟ್ಟಡವಿ +ಪವಡಿಸಿದ+ ತೆರನಾದುದು +ರಣಾಗ್ರದಲಿ
ಥಟ್ಟು +ಮುರಿದುದು +ಕೂಡೆ +ತೆರೆ +ಸಾ
ಲಿಟ್ಟ +ಸಾಗರದಂತೆ +ರಾಯಘ
ರಟ್ಟ +ಕಂಡನು +ಕೌರವೇಶ್ವರ +ಸಕಲ +ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಟ್ಟಿದವು ಕೈದುಗಳು ಸತ್ತಿಗೆ ಬೆಟ್ಟವಾದವು; ಥಟ್ಟು ಮುರಿದುದು ಕೂಡೆ ತೆರೆ ಸಾಲಿಟ್ಟ ಸಾಗರದಂತೆ

ನಿಮ್ಮ ಟಿಪ್ಪಣಿ ಬರೆಯಿರಿ