ಪದ್ಯ ೩೩: ಅರ್ಜುನನೇಕೆ ಕೋಪಗೊಂಡ?

ಒಗ್ಗೊಡೆದು ರಿಪುಸೇನೆ ಸರಿದುದು
ತೆಗ್ಗಿತುಬ್ಬಾಳುಗಳ ನುಡಿ ಮನ
ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು
ಲಗ್ಗೆವರೆಗಳಿಗಮಮ ಮೌನದ
ಸುಗ್ಗಿಯಾಯಿತು ಬಿರುದ ಬೈಚಿಡು
ತಗ್ಗಲೆಯರೊಳಸರಿಯೆ ಕಂಡನು ಪಾರ್ಥ ಖತಿಗೊಂಡ (ಭೀಷ್ಮ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಾಲೋಡೆದು ಪಾಂಡವ ಸೈನ್ಯ ಕೆದರಿತು, ಉಬ್ಬಿ ಉಬ್ಬಿ ಮಾತಾಡುವ ವೀರರ ಮನಸ್ಸುಗಳು ಕುಸಿದವು, ಮಾಂಡಲೀಕರು ತಲೆಯ ಮೇಲೆ ಮುಸುಕನ್ನೆಳೆದುಕೊಂಡರು. ರಣವಾದ್ಯಗಳು ಮೌನವನ್ನು ಹಿಡಿದವು, ತಮ್ಮ ಬಿರುದಿನ ಬಾವುಟಗಳನ್ನು ಮಡಿಸಿದ ವೀರರು ಹಿಂದಕ್ಕೋಡಿದರು. ಇದನ್ನು ನೋಡಿ ಅರ್ಜುನನು ಕೆರಳಿದನು.

ಅರ್ಥ:
ಒಗ್ಗು: ಗುಂಪು; ಒಡೆದು: ಮುರಿದು; ರಿಪು: ವೈರಿ; ಸೇನೆ: ಸೈನ್ಯ; ಸರಿ: ಹೋಗು, ಗಮಿಸು; ತೆಗ್ಗು: ಕಡಿಮೆಯಾಗು; ಉಬ್ಬಾಳು: ಪರಾಕ್ರಮಿ; ನುಡಿ: ಮಾತು; ಮನ: ಮನಸ್ಸು; ನೆಗ್ಗು: ಕುಗ್ಗು, ಕುಸಿ; ಮಂಡಳಿಕ: ಮಾಂಡಳೀಕರು, ಸಾಮಂತ ರಾಜ; ತಲೆ: ಶಿರ; ಮುಸುಕು: ಹೊದಿಕೆ; ಪಸರಿಸು: ಹರಡು; ಲಗ್ಗೆ: ಮುತ್ತಿಗೆ; ಮೌನ: ಶಬ್ದವಿಲ್ಲದ, ನೀರವತೆ; ಸುಗ್ಗಿ: ಸಂಭ್ರಮ; ಬಿರುದು: ಗೌರವ ಸೂಚಕ ಪದ; ಬೈಚಿಡು: ಬಚ್ಚಿಡು; ತಗ್ಗು: ಕಡಿಮೆಯಾಗು, ಬಾಗು; ಒಳಸರಿ: ಹಿಂದೆ ಸರಿ; ಕಂಡು: ನೋಡು; ಖತಿ: ಕೋಪ; ಅಮಮ: ಅಬ್ಬಬ್ಬ;

ಪದವಿಂಗಡಣೆ:
ಒಗ್ಗೊಡೆದು +ರಿಪುಸೇನೆ +ಸರಿದುದು
ತೆಗ್ಗಿತ್+ಉಬ್ಬಾಳುಗಳ ನುಡಿ +ಮನ
ನೆಗ್ಗಿದವು +ಮಂಡಳಿಕರಿಗೆ+ ತಲೆ+ಮುಸುಕು +ಪಸರಿಸಿತು
ಲಗ್ಗೆವ್+ಅರೆಗಳಿರ್+ಅಮಮ +ಮೌನದ
ಸುಗ್ಗಿಯಾಯಿತು +ಬಿರುದ +ಬೈಚಿಡು
ತಗ್ಗಲೆಯರ್+ಒಳಸರಿಯೆ +ಕಂಡನು +ಪಾರ್ಥ +ಖತಿಗೊಂಡ

ಅಚ್ಚರಿ:
(೧) ಪರಾಕ್ರಮಿಗಳು ಪರಾಭವಗೊಂಡರು ಎನ್ನುವ ಪರಿ – ತೆಗ್ಗಿತುಬ್ಬಾಳುಗಳ ನುಡಿ ಮನ ನೆಗ್ಗಿದವು ಮಂಡಳಿಕರಿಗೆ ತಲೆಮುಸುಕು ಪಸರಿಸಿತು

ಪದ್ಯ ೩೨: ದ್ರೋಣನ ಪರಾಕ್ರಮವು ಎಂತಹುದು?

ಆವುದಂತರ ವನ ಕಳಭಕೈ
ರಾವತಕೆ ಮಝ ಭಾಪು ದ್ರೋಣನ
ಡಾವರಕೆ ಪಾಂಚಾಲನೈಸರವನು ಮಹಾದೇವ
ನಾವು ದ್ರುಪದನ ಕಾಣೆವಾವೆಡೆ
ಗಾ ವಿರಾಟನು ಸರಿದನೆತ್ತಲು
ತೀವಿದರು ಸೃಂಜಯರು ನೃಪ ನಾವರಿಯೆವಿದನೆಂದ (ಭೀಷ್ಮ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸಂಜಯನು ರಾಜನಿಗೆ ವಿವರಿಸುತ್ತಾ, ಕಾಣಾನೆಯ ಮರಿಯೆತ್ತ, ದೇವೇಂದ್ರನ ಐರಾವತವೆಲ್ಲಿ? ದ್ರೋಣನ ಪ್ರತಾಪದ ಮುಂದೆ ದ್ರುಪದನೆಷ್ಟರವನು. ದ್ರುಪದನು ಕಾಣಿಸಲೇ ಇಲ್ಲ. ವಿರಾಟ ಸೃಂಜಯರು ಎಲ್ಲಿಗೆ ಓಡಿದರೆಂದು ನನಗೆ ತಿಳಿಯದೆಂದು ಹೇಳಿದನು.

ಅರ್ಥ:
ಅಂತರ: ವ್ಯತ್ಯಾಸ; ವನ: ಕಾದು; ಕಳಭ: ಆನೆಮರಿ; ಐರಾವತ: ಇಂದ್ರನ ಆನೆ; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಡಾವರ: ಭಯಂಕರವಾದ; ಐಸರವ: ಎಷ್ಟರವನ; ಕಾಣು: ತೋರು; ಸರಿ: ಹೋಗು, ಗಮಿಸು; ತೀವು: ಸೇರು, ಕೂಡು; ನೃಪ: ರಾಜ; ಅರಿ: ತಿಳಿ;

ಪದವಿಂಗಡಣೆ:
ಆವುದ್+ಅಂತರ +ವನ +ಕಳಭಕ್
ಐರಾವತಕೆ +ಮಝ +ಭಾಪು +ದ್ರೋಣನ
ಡಾವರಕೆ +ಪಾಂಚಾಲನ್+ಐಸರವನು+ ಮಹಾದೇವ
ನಾವು +ದ್ರುಪದನ +ಕಾಣೆವಾವ್+ಎಡೆಗ್
ಆ+ ವಿರಾಟನು+ ಸರಿದನ್+ಎತ್ತಲು
ತೀವಿದರು +ಸೃಂಜಯರು +ನೃಪ +ನಾವರಿಯೆವ್+ಇದನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆವುದಂತರ ವನ ಕಳಭಕೈರಾವತಕೆ ಮಝ ಭಾಪು

ಪದ್ಯ ೩೧: ದ್ರೋಣರು ಏನು ಹೇಳುತ್ತಾ ಮುನ್ನುಗ್ಗಿದರು?

ಸಾಹಸಿಕರೈ ದ್ರುಪದರಿವದಿರ
ಚೋಹದೋಲೆಯಕಾರತನ ಮನ
ಗಾಹಿನಲಿ ಹೆಮ್ಮಕ್ಕಳಿವದಿರು ಶಿವಶಿವಿವದಿರಿಗೆ
ಆಹವದೊಳೋಸರಿಸಿದರೆ ಭಟ
ಸಾಹಸಕೆ ಕಲೆ ಹೊದ್ದದೇ ಸುಡು
ದೇಹವೇತಕೆ ದೆಸೆಯೆ ಸಾಕೆನುತೈದಿದನು ದ್ರೋಣ (ಭೀಷ್ಮ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರುಪದನೇ ಮೊದಲಾದವರು ಪಾಂಡವರ ಸೇವಕರು, ಇವರು ವೀರರಲ್ಲ, ಶಿವಶಿವಾ ಇಂತಹವರಿಗೆ ಹೆದರಿ ಹಿಮ್ಮೆಟ್ಟಿದರೆ ನಿಮ್ಮ ಸಾಹಸಕ್ಕೆ ಶೌರ್ಯಕ್ಕೆ ಕುಂದಲ್ಲವೇ? ಅಂತಹ ದೇಹವಿದ್ದರೇನು ಹೋದರೇನು ಎನ್ನುತ್ತಾ ದ್ರೋಣನು ಮುನ್ನುಗ್ಗಿದನು.

ಅರ್ಥ:
ಸಾಹಸ: ಪರಾಕ್ರಮ; ಇವದಿರು: ಇಷ್ಟು ಜನ; ಚೋಹ: ಅಚ್ಚರಿ; ಓಲೆಯಕಾರ: ಸೇವಕ; ಮನ: ಮನಸ್ಸು; ಕಾಹು: ಸಂರಕ್ಷಣೆ; ಹೆಮ್ಮಕ್ಕಳು: ಹಿರಿಯ ಮಕ್ಕಳು; ಆಹವ: ಯುದ್ಧ; ಓಸರಿಸು: ಹಿಂಜರಿ; ಭಟ: ಸೈನಿಕ; ಕಲೆ: ಕೂಡು; ಹೊದ್ದು: ಪರಿಣಮಿಸು, ಹೊಂದು; ಸುಡು: ದಹಿಸು; ದೇಹ: ತನು; ದೆಸೆ: ದಿಕ್ಕು; ಸಾಕು: ನಿಲ್ಲಿಸು; ಐದು: ಬಂದುಸೇರು;

ಪದವಿಂಗಡಣೆ:
ಸಾಹಸಿಕರೈ +ದ್ರುಪದರ್+ಇವದಿರ
ಚೋಹದ್+ಓಲೆಯಕಾರತನ +ಮನ
ಕಾಹಿನಲಿ+ ಹೆಮ್ಮಕ್ಕಳ್+ಇವದಿರು +ಶಿವಶಿವ್+ಇವದಿರಿಗೆ
ಆಹವದೊಳ್+ಓಸರಿಸಿದರೆ +ಭಟ
ಸಾಹಸಕೆ +ಕಲೆ +ಹೊದ್ದದೇ +ಸುಡು
ದೇಹವೇತಕೆ+ ದೆಸೆಯೆ+ ಸಾಕೆನುತ್+ಐದಿದನು +ದ್ರೋಣ

ಅಚ್ಚರಿ:
(೧) ದ್ರೋಣನ ಮಾತು – ಆಹವದೊಳೋಸರಿಸಿದರೆ ಭಟ ಸಾಹಸಕೆ ಕಲೆ ಹೊದ್ದದೇ

ಪದ್ಯ ೩೦: ಹಿಮ್ಮೆಟ್ಟಿದ ಸೈನ್ಯವನ್ನು ಯಾರು ಮುಂದೆ ತಂದರು?

ಕಡುಹು ಮುರಿದುದು ಕೌರವೇಂದ್ರನ
ಪಡೆಯ ತರಹರ ದಿಕ್ಕುಗೆಟ್ಟುದು
ಮಡಮುರಿಯಲಂಗೈಸಿದರು ದುಶ್ಯಾಸನಾದಿಗಳು
ಕಡಲು ಮೈದೆಗೆವಂತೆ ಬಹ ಬಹು
ಪಡೆಯ ಕಂಡನು ದ್ರೋಣ ಫಡಫಡ
ಪಡೆಯ ತೆಗೆದರೆ ರಾಯನಾಣೆಯೆನುತ್ತ ಮಾರಾಂತ (ಭೀಷ್ಮ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯದ ಜೋರು ತಗ್ಗಿ ದಿಕ್ಕುಗೆಟ್ಟಿತು. ದುಶ್ಯಾಸನನೇ ಮೊದಲಾದವರ ಹಿಮ್ಮಡಿಗಳು ನಿಸ್ಸತ್ವವಾದವು. ಸಮುದ್ರವು ಹಿಂದಕ್ಕೆ ಹೊರಳಿ ಬಂದಂತೆ ಬರುವ ತಮ್ಮ ಸೈನ್ಯವನ್ನು ನೋಡಿ, ನೀವು ಹಿಮ್ಮೆಟ್ಟಿದರೆ ರಾಜನಾಣೆ ಎಂದು ಗರ್ಜಿಸಿ ದ್ರೋಣನು ಬಂದನು.

ಅರ್ಥ:
ಕಡುಹು: ಸಾಹಸ; ಮುರಿ: ಸೀಳು; ಪಡೆ: ಸೈನ್ಯ, ಬಲ; ತರಹರ: ಸೈರಣೆ, ಸಹನೆ; ದಿಕ್ಕು: ದಿಶೆ; ಕೆಟ್ಟು: ಕೆಡು; ಮಡ: ಪಾದದ ಹಿಂಭಾಗ, ಹರಡು; ಅಂಗೈಸು: ಜತೆಯಾಗು; ಆದಿ: ಮುಂತಾದವರು; ಕಡಲು: ಸಾಗರ; ಮೈದೆಗೆ: ತೋರು, ಪ್ರತ್ಯಕ್ಷವಾಗು; ಬಹು: ಬಹಳ; ಪಡೆ: ಸೈನ್ಯ; ಕಂಡು: ನೋಡು; ಫಡ: ಮೂದಲಿಸುವ ಪದ; ಪಡೆ: ಸೈನ್ಯ; ತೆಗೆ: ತೋರು; ರಾಯ: ರಾಜ; ಆಣೆ: ಪ್ರತಿಜ್ಞೆ; ಮಾರ: ಕೊಲ್ಲುವಿಕೆ; ಮಾರಾಂತ: ಎದುರಾಗಿ;

ಪದವಿಂಗಡಣೆ:
ಕಡುಹು +ಮುರಿದುದು +ಕೌರವೇಂದ್ರನ
ಪಡೆಯ +ತರಹರ +ದಿಕ್ಕುಗೆಟ್ಟುದು
ಮಡಮುರಿಯಲ್+ಅಂಗೈಸಿದರು+ ದುಶ್ಯಾಸನಾದಿಗಳು
ಕಡಲು +ಮೈದೆಗೆವಂತೆ+ ಬಹ +ಬಹು
ಪಡೆಯ +ಕಂಡನು +ದ್ರೋಣ +ಫಡಫಡ
ಪಡೆಯ +ತೆಗೆದರೆ+ ರಾಯನ್+ಆಣೆ+ಎನುತ್ತ +ಮಾರಾಂತ

ಅಚ್ಚರಿ:
(೧) ಪಡೆಯ – ೨, ೫, ೬ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ಕಡಲು ಮೈದೆಗೆವಂತೆ ಬಹ ಬಹುಪಡೆಯ ಕಂಡನು ದ್ರೋಣ