ಪದ್ಯ ೧೨: ಕೃಷ್ಣನು ಭೀಷ್ಮನನ್ನು ಗೆಲ್ಲಲು ಯಾವ ಮಾರ್ಗವನ್ನು ಸೂಚಿಸಿದನು?

ಮುಗುಳುನಗೆ ನಸು ಮೊಳೆಯೆ ಭೀಮಾ
ದಿಗಳಿಗೆಂದನು ಕೃಷ್ಣನರಸಗೆ
ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ
ವಿಗಡತನವಂತಿರಲಿ ಭೀಷ್ಮನ
ಬೆಗಡುಗೊಳಿಸಲು ಹರನ ಹವಣ
ಲ್ಲಗಣಿತನ ಸಾಮದಲಿ ಮುರಿಯಲುಬೇಕು ನಾವೆಂದ (ಭೀಷ್ಮ ಪರ್ವ, ೭ ಸಂಧಿ, ೧೨
ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮುಖದಲ್ಲಿ ಮಂದಸ್ಮಿತವು ಅರಳಿತು, ಧರ್ಮಜನಿಗೆ ವನವಾಸದಲ್ಲೇ ಹೆಚ್ಚು ಆಸಕ್ತಿ, ಯುದ್ಧದಲ್ಲಿ ಅವನಿಗೆ ಮನಸ್ಸಿಲ್ಲವೆಂದು ತೋರುತ್ತದೆ ಎಂದು ಭೀಮನೇ ಮೊದಲಾದವರಿಗೆ ಹೇಳಿದನು. ಭೀಷ್ಮನನ್ನು ಬೆರಗುಗೊಳಿಸಿ ಗೆಲ್ಲಲು ಶಿವನಿಗೂ ಅಸಾಧ್ಯ, ಆದುದರಿಂದ ಭೀಷ್ಮನನ್ನು ಸಂಧಾನದಿಂದ ಗೆಲ್ಲಬೇಕು ಎಂದನು.

ಅರ್ಥ:
ಮುಗುಳುನಗೆ: ಹಸನ್ಮುಖ, ಮಂದಸ್ಮಿತ; ನಸು: ಸ್ವಲ್ಪ; ಮೊಳೆ: ಕುಡಿ, ಚಿಗುರು; ಆದಿ: ಮುಂತಾದ; ಅರಸ: ರಾಜ; ಸೊಗಸು: ಅಂದ, ಚೆಲುವು; ಬನ: ಕಾಡು; ಬರಿ: ಕೇವಲ; ಮನ: ಮನಸ್ಸು; ಕದನ: ಯುದ್ಧ; ಕೇಳಿ: ವಿನೋದ; ವಿಗಡ: ಶೌರ್ಯ, ಪರಾಕ್ರಮ; ಬೆಗಡು: ಭಯಪಡು, ಆಶ್ಚರ್ಯ; ಹರ: ಶಿವ; ಹವಣ: ಸಿದ್ಧತೆ, ಪ್ರಯತ್ನ; ಅಗಣಿತ: ಅಸಂಖ್ಯಾತ; ಸಾಮ: ಶಾಂತಗೊಳಿಸುವಿಕೆ; ಮುರಿ: ಸೀಳು;

ಪದವಿಂಗಡಣೆ:
ಮುಗುಳುನಗೆ+ ನಸು +ಮೊಳೆಯೆ +ಭೀಮಾ
ದಿಗಳಿಗ್+ಎಂದನು +ಕೃಷ್ಣನ್+ಅರಸಗೆ
ಸೊಗಸು +ಬನದಲಿ +ಬರಿಯ +ಮನವೀ +ಕದನ+ಕೇಳಿಯಲಿ
ವಿಗಡತನವಂತಿರಲಿ+ ಭೀಷ್ಮನ
ಬೆಗಡು+ಗೊಳಿಸಲು +ಹರನ +ಹವಣಲ್ಲ್
ಅಗಣಿತನ +ಸಾಮದಲಿ +ಮುರಿಯಲುಬೇಕು +ನಾವೆಂದ

ಅಚ್ಚರಿ:
(೧) ಧರ್ಮಜನನ್ನು ತಮಾಷೆ ಮಾಡುವ ಪರಿ – ಅರಸಗೆ ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ