ಪದ್ಯ ೭: ದೂತರು ರಾಜನಿಗೆ ಏನೆಂದು ಬಿನ್ನೈಸಿದರು?

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲು ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ (ವಿರಾಟ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ಉತ್ತರನ ಸಹಾಯಕ್ಕಾಗಿ ಮಂತ್ರಿಗಳು, ಸೈನ್ಯವನ್ನು ವಿರಾಟನು ಕಳಿಸಿಕೊಟ್ಟು ದುಃಖಾಕ್ರಾಂತನಾಗಿರಲು, ಊರಿನಲ್ಲಿ ಕೋಲಾಹಲದ ಸದ್ದು ಕೇಳಿತು. ಪಟ್ಟಣದಲ್ಲಿ ಕೆಲವರು ಸೂರೆ ಮಾಡಲಾರಂಭಿಸಿದ್ದರು. ಬಹು ಬೇಗ ವಿರಾಟನ ಸಮ್ಮುಖಕ್ಕೆ ದೂತರು ಬಂದು, ಪ್ರಭೂ ಊರಿನಲ್ಲಿ ವಿಜಯ ಧ್ವಜವನ್ನು ಹಾರಿಸಿ, ಜಯಶಾಲಿಯಾಗಿ ಬರುತ್ತಿರುವ ರಾಜಪುತ್ರನನ್ನು ಎದಿರುಗೊಳ್ಳಲು ಕಳುಹಿಸಿ ಎಂದು ಬಿನ್ನೈಸಿಕೊಂಡರು.

ಅರ್ಥ:
ಮಗ: ಸುತ; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಬಲು: ತುಂಬ; ಮಂತ್ರಿ: ಸಚಿವ; ಅವನಿಪ: ರಾಜ; ಬೀಳೂಗೊಡು: ಕಳುಹಿಸು; ದುಗುಡ: ದುಃಖ; ಹೊಳಲು: ಪಟ್ಟಣ, ನಗರ, ಪ್ರಕಾಶ; ಕೈಸೂರೆ: ಲೂಟಿ; ಕಳಕಳ: ಗೊಂದಲ, ಹೊಳೆವುದನ್ನು ವಿವರಿಸುವ ಪದ; ಮೊಗ: ಮುಖ; ಹರುಷ: ಸಂತಸ; ಅಖಿಳ: ಎಲ್ಲಾ; ದೂತಾಳಿ: ದೂತರ ಗುಂಪು; ಬಂದು: ಆಗಮಿಸು; ಗುಡಿ: ಮನೆ; ಕಟ್ಟು: ನಿರ್ಮಿಸು; ನಗರಿ: ಊರು; ಕಳುಹು: ತೆರಳು; ಇದಿರುಗೊಳಿಸು: ಎದುರುಗೊಳ್ಳು; ಕುಮಾರ: ಪುತ್ರ;

ಪದವಿಂಗಡಣೆ:
ಮಗಗೆ +ಪಡಿಬಲವಾಗಿ +ಬಲು +ಮಂ
ತ್ರಿಗಳನ್+ಅವನಿಪ+ ಬೀಳುಗೊಟ್ಟನು
ದುಗುಡದಿಂದಿರೆ +ಹೊಳಲು +ಕೈಸೂರೆಗಳ+ ಕಳಕಳದ
ಮೊಗದ+ ಹರುಷದಲ್+ಅಖಿಳ +ದೂತಾ
ಳಿಗಳು +ಬಂದುದು +ಗುಡಿಯ +ಕಟ್ಟಿಸು
ನಗರಿಯಲಿ +ಕಳುಹ್+ಇದಿರುಗೊಳಿಸು+ ಕುಮಾರಕನನೆನುತ

ಅಚ್ಚರಿ:
(೧) ಉತ್ತರನ ಪ್ರಶಂಸೆ ಮಾಡುವ ಪರಿ – ಗುಡಿಯ ಕಟ್ಟಿಸು ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ

ನಿಮ್ಮ ಟಿಪ್ಪಣಿ ಬರೆಯಿರಿ