ಪದ್ಯ ೩೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ (ವಿರಾಟ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆಯುಧಗಳ ಅಲಗಿನ ಧಾರೆಗಳ ಕಾಂತಿಯ ಗುಚ್ಚಗಳು ಒಂದು ಕಡೆ ಥಳಥಳಿಸಿದರೆ, ಅದನ್ನು ನೋಡಿ ನಗುವಂತೆ ಬಂಗಾರದ ಹಿಡಿಕೆಗಳ ಕಾಂತಿಯು ಝಗಝಗಿಸಿತು. ಉತ್ತರನು ಕಣ್ಮುಚ್ಚಿ ಅರ್ಜುನನಿಗೆ ಕೈಮುಗಿದು ತಂದೆ ನನ್ನನ್ನು ಇಳಿಸಿಕೊಂಡು ಬಿಡು, ನಾನು ಶಸ್ತ್ರಗಳ ಸೀಮೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಹೊರಳಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಧಾರೆ: ಪ್ರವಾಹ; ತಳಪದ: ಕೆಳಗೆ, ಒಂದು ಬದಿ; ಕಾಂತಿ: ಪ್ರಕಾಶ; ಹೊನ್ನು: ಚಿನ್ನ; ಹೊನ್ನಾಯುಗ: ಬಂಗಾರದ ಹಿಡಿಕೆ; ಬಹಳ: ತುಂಬ; ಪ್ರಭೆ: ಕಾಂತಿ; ಶರ: ಬಾಣ; ಶರೌಘ: ಬಾಣಗಳ ಸಮೂಹ; ಶರೌಘಾನಲ: ಬಾಣಗಳ ಸಮೂಹದಿಂದ ಹುಟ್ಟಿದ ಬೆಂಕಿ; ಗಹಗಹಿಸು: ಗಟ್ಟಿಯಾಗಿ ನಗು; ಝಗಝಗಿಸು: ಹೊಳೆ, ಪ್ರಕಾಶಿಸು; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಕೈ: ಹಸ್ತ; ಕೈಮುಗಿ: ನಮಸ್ಕರಿಸು; ಸಾರಥಿ: ಸೂತ; ತೆಗೆದುಕೊ: ಹೊರತರು; ತಂದೆ: ಅಪ್ಪ, ಅಯ್ಯ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಸೀಮೆ: ಎಲ್ಲೆ, ಗಡಿ;

ಪದವಿಂಗಡಣೆ:
ಹೊಗರ+ ಹೊರಳಿಯ +ಹೊಳೆವ +ಬಾಯ್
ಧಾರೆಗಳ+ತಳಪದ+ ಕಾಂತಿ +ಹೊನ್ನಾ
ಯುಗದ +ಬಹಳ +ಪ್ರಭೆ +ಶರೌಘ+ಅನಲನ +ಗಹಗಹಿಸಿ
ಝಗಝಗಿಸೆ+ ಕಣ್ಮುಚ್ಚಿ +ಕೈಗಳ
ಮುಗಿದು +ಸಾರಥಿಗೆಂದನ್+ಎನ್ನನು
ತೆಗೆದುಕೊಳ್ಳೈ +ತಂದೆ +ಸಿಲುಕಿದೆ +ಶಸ್ತ್ರ +ಸೀಮೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಗರ ಹೊರಳಿಯ ಹೊಳೆವ
(೨) ಜೋಡಿ ಪದಗಳು – ಗಹಗಹಿಸಿ, ಝಗಝಗಿಸಿ

ನಿಮ್ಮ ಟಿಪ್ಪಣಿ ಬರೆಯಿರಿ