ಪದ್ಯ ೧೧: ಉತ್ತರನು ಸಾರಥಿಯನ್ನು ಹೇಗೆ ಬಯ್ದನು?

ನುಡಿಯ ಕೇಳದೆ ಮೂಮ್ದೆ ನಾಲ್ಕೆಂ
ಟಡಿಯನರ್ಜುನ ರಥವ ನಡೆಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿತೆ ಲೇಸು ಲೇಸೆಂದ (ವಿರಾಟ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಮಾತನ್ನು ಮೀರಿ ನಾಲ್ಕೆಂಟು ಅಡಿ ದೂರ ರಥವನ್ನು ನಡೆಸುವುದರೊಳಗೆ, ಉತ್ತರನ ಕೈನರಗಳು ಸಡಲಿ ಬಿಲ್ಲು ಬಾಣಗಳು ಕೆಳಗೆ ಬಿದ್ದವು. ಎಲೋ ದ್ರೋಹಿಯಾದ ಸಾರಥಿ, ಕುದುರೆಗಳನ್ನು ನಿಲ್ಲಿಸು, ಹೀಗೆ ಹೇಳುವ ನಾನು ನಿನ್ನ ಒಡೆಯ, ಶತ್ರುವಲ್ಲ, ಸ್ವಾಮಿದ್ರೋಹಿಯೇ ನಿನ್ನ ಕಾರ್ಯ ಬಲು ಚೆನ್ನಾಗಿದೆ ಎಂದು ಉತ್ತರನು ಹೇಳಿದನು.

ಅರ್ಥ:
ನುಡಿ: ಮಾತು; ಕೇಳು: ಆಲಿಸು; ಮುಂದೆ: ಎದುರು; ಅಡಿ:ಹನ್ನೆರಡು ಅಂಗುಲದ ಉದ್ದಳತೆ; ರಥ: ಬಂಡಿ; ನಡೆಸು: ಚಲಿಸು; ಹಿಡಿ ಬಂಧಿಸು; ಬಿಲ್ಲು: ಚಾಪ; ಅಂಬು: ಬಾಣ; ಬಿದ್ದು: ಕೆಳಗೆ ಬೀಳು; ಕೈ: ಹಸ್ತ; ನರ: ಅರ್ಜುನ; ತೆಗೆ: ಹೊರತರು; ಹಿಡಿ: ಗ್ರಹಿಸು; ಹಯ: ಕುದುರೆ; ಸಾರಥಿ: ಸೂತ; ಹಗೆ: ಶತ್ರು; ಒಡೆಯ: ನಾಯಕ; ದುರಹಿತ: ದ್ರೋಹ, ವಿಶ್ವಾಸಘಾತ; ಲೇಸು: ಒಳಿತು;

ಪದವಿಂಗಡಣೆ:
ನುಡಿಯ +ಕೇಳದೆ +ಮುಂದೆ+ ನಾಲ್ಕೆಂಟ್
ಅಡಿಯನ್+ಅರ್ಜುನ +ರಥವ +ನಡೆಸಲು
ಹಿಡಿದ +ಬಿಲ್ಲ್+ಅಂಬುಗಳು +ಬಿದ್ದವು +ಕೈಯ +ನರ +ತೆಗೆದು
ಹಿಡಿ +ಹಯವನ್+ಇರಿಗಾರ+ ಸಾರಥಿ
ನುಡಿವವರು +ನಾವ್ +ಹಗೆಗಳೇ+ ನಿನ್ನ್
ಒಡೆಯರಲ್ಲಾ +ಸ್ವಾಮಿ +ದುರುಹಿತೆ ಲೇಸು ಲೇಸೆಂದ

ಅಚ್ಚರಿ:
(೧) ಉತ್ತರನ ಹೆದರಿಕೆಯನ್ನು ಚಿತ್ರಿಸುವ ಪರಿ – ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
(೨) ನುಡಿ, ಅಡಿ, ಹಿಡಿ – ಪ್ರಾಸ ಪದಗಳು

ಪದ್ಯ ೧೦: ಉತ್ತರನು ಸಾರಥಿಗೆ ಏನು ಹೇಳಿದ?

ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡುಸುಡು
ಕಾಕಲಾ ಕಣ್ಣೊಡೆಯದೇ ಕಾಣಾ ಮಹಾಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕ ವೆಳ್ಳನಿತಿಲ್ಲಲಾ ತೆಗೆ
ಸಾಕು ವಾಘೆಯ ಮರಳಿ ಸೆಳೆ ತೇಜಿಗಳ ತಿರುಹೆಂದ (ವಿರಾಟ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ರಥವು ಮುನ್ನುಗ್ಗುತಿರುವುದನ್ನು ನೋಡಿ, ಸಾರಥಿ ರಥವನ್ನೇಕೆ ಮುಂದಕ್ಕೆ ನಡೆಸಿ ಗಂಟಲನ್ನು ಕೊಯ್ಯುತ್ತಿಯ? ನಿನ್ನ ಕೆಲಸವನ್ನು ಸುಡಲಿ, ಆ ಮಹಾ ಸೈನ್ಯವನ್ನು ನೋಡು, ಕಣ್ಣು ಒಡೆದು ಹೋಗುವುದಿಲ್ಲವೇ? ದೇವತೆಗಳೂ ಇದನ್ನೆದುರಿಸಲಾರರು. ನಿನಗೆ ಎಳ್ಳಷ್ಟೂ ವಿವೇಕವಿಲ್ಲ. ಸಾಕು, ಲಗಾಮನ್ನೆಳೆದು ರಥವನ್ನು ಮರಳಿಸು ಎಂದನು.

ಅರ್ಥ:
ಸಾರಥಿ: ಸೂತ; ರಥ: ಬಂಡಿ; ಮುಂದಕೆ: ಎದುರು; ನೂಕು: ತಳ್ಳು; ಗಂಟಲ: ಕಂಥ; ಕೊಯ್ವೆ: ಸೀಳು; ಸುಡು: ಸುಟ್ಟು ಹಾಕು, ದಹಿಸು; ಕಾಕ: ಒಣಜಂಬ; ಕಣ್ಣು: ನಯನ; ಒಡೆ: ಸೀಳು; ಮಹಾಬಲ: ದೊಡ್ಡ ಸೈನ್ಯ; ನಾಕ: ಸ್ವರ್ಗ; ನಿಳಯ: ಮನೆ; ಅರಿ: ತಿಳಿ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಎಳ್ಳು: ತಿಲ್ಲು, ಸ್ವಲ್ಪವು: ತೆಗೆ: ಹೊರಹಾಕು; ಸಾಕು: ನಿಲ್ಲು; ವಾಘೆ: ಲಗಾಮು; ಮರಳಿ: ಹಿಂದಿರುಗು; ಸೆಳೆ: ಎಳೆತ, ಸೆಳೆತ; ತೇಜಿ: ಕುದುರೆ; ತಿರುಹು: ತಿರುಗಿಸು;

ಪದವಿಂಗಡಣೆ:
ಏಕೆ +ಸಾರಥಿ +ರಥವ +ಮುಂದಕೆ
ನೂಕಿ +ಗಂಟಲ+ ಕೊಯ್ವೆ +ಸುಡುಸುಡು
ಕಾಕಲಾ +ಕಣ್ಣೊಡೆಯದೇ +ಕಾಣಾ +ಮಹಾಬಲವ
ನಾಕನಿಳಯರಿಗ್+ಅರಿದು+ ನಿನಗೆ+ ವಿ
ವೇಕವ್ +ಎಳ್ಳನಿತ್+ಇಲ್ಲಲಾ +ತೆಗೆ
ಸಾಕು +ವಾಘೆಯ +ಮರಳಿ+ ಸೆಳೆ+ ತೇಜಿಗಳ+ ತಿರುಹೆಂದ

ಅಚ್ಚರಿ:
(೧) ಉತ್ತರನ ಭಯ – ರಥವ ಮುಂದಕೆನೂಕಿ ಗಂಟಲ ಕೊಯ್ವೆ; ಕಣ್ಣೊಡೆಯದೇ ಕಾಣಾ ಮಹಾಬಲವ; ನಿನಗೆ ವಿವೇಕ ವೆಳ್ಳನಿತಿಲ್ಲಲಾ

ಪದ್ಯ ೯: ಉತ್ತರನು ಹೇಗೆ ಭಯಭೀತನಾದನು?

ಸಾರಿ ಬರಬರಲವನ ತನುಮಿಗೆ
ಭಾರಿಸಿತು ಮೈಮುರಿದು ರೋಮನ್ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ (ವಿರಾಟ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ರಥವು ಮುಂದಕ್ಕೆ ಹೋಗುತ್ತಲೇ ಇತ್ತು, ಉತ್ತರನ ಮೈ ಜಡವಾಯಿತು, ಮೈ ಕುಗ್ಗಿತು, ಭಯದಿಂದ ಕೂದಲು ನೆಟ್ಟಗಾದವು, ಮೈ ಬಿಸಿಯಾಯಿತು, ಅವಯವಗಳು ನಡುಗಿದವು. ಭಯದ ಹೆಚ್ಚಳದಿಂದ ಅಂಗುಳು, ತುಟಿ ಒಣಗಿದವು. ಕಣ್ಣಿನ ರೆಪ್ಪೆ ಸೀದು ಹೋಯಿತು ಸುಕುಮಾರ ಉತ್ತರನು ಕೈಗಳಿಂದ ಮುಖವನ್ನು ಮುಚ್ಚಿಕೊಂಡನು.

ಅರ್ಥ:
ಸಾರಿ: ಬಾರಿ, ಸರತಿ; ಬರಲು: ಆಗಮಿಸಲು; ತನು: ದೇಹ; ಭಾರಿಸು: ಅಪ್ಪಳಿಸು; ಮೈ: ತನು, ದೇಹ; ರೋಮ: ಕೂದಲು; ವಿಕಾರ: ಬದಲಾವಣೆ; ಘನ: ಗಟ್ಟಿ, ಭಾರ; ಕಾಹೇರು: ಉದ್ವೇಗಗೊಳ್ಳು; ಅವಯವ: ದೇಹದ ಅಂಗ; ನಡುಗು: ಕಂಪಿಸು; ಡೆಂಡಣಿಸು: ಕಂಪಿಸು, ಕೊರಗು; ಭೂರಿ:ಹೆಚ್ಚು, ಅಧಿಕ; ಭಯ: ಹೆದರಿಕೆ; ತಾಪ: ಕಾವು; ತಾಳಿಗೆ: ಗಂಟಲು; ನೀರು: ಜಲ; ತುಟಿ: ಅಧರ; ಸುಕುಮಾರ: ಪುತ್ರ; ಎವೆ: ಕಣ್ಣಿನ ರೆಪ್ಪೆ; ಸೀಯು: ಕರಕಲಾಗು; ಕರ: ಹಸ್ತ; ಮುಚ್ಚು: ಮರೆಮಾಡು; ಮುಖ: ಆನನ;

ಪದವಿಂಗಡಣೆ:
ಸಾರಿ +ಬರಬರಲ್+ಅವನ +ತನುಮಿಗೆ
ಭಾರಿಸಿತು+ ಮೈಮುರಿದು+ ರೋಮ+ವಿ
ಕಾರ +ಘನ +ಕಾಹೇರಿತ್+ಅವಯವ +ನಡುಗಿ +ಡೆಂಡಣಿಸಿ
ಭೂರಿಭಯ +ತಾಪದಲಿ +ತಾಳಿಗೆ
ನೀರುದೆಗೆದುದು +ತುಟಿ+ಒಣಗಿ+ ಸುಕು
ಮಾರ +ಕಣ್ಣೆವೆ +ಸೀಯೆ +ಕರದಲಿ+ ಮುಚ್ಚಿದನು +ಮುಖವ

ಅಚ್ಚರಿ:
(೧) ಉತ್ತರನ ಭೀತಿಯನ್ನು ವರ್ಣಿಸುವ ಪರಿ – ಭೂರಿಭಯ ತಾಪದಲಿ ತಾಳಿಗೆನೀರುದೆಗೆದುದು ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ

ಪದ್ಯ ೮: ಅರ್ಜುನನು ಉತ್ತರ ಕುಮಾರನಿಗೆ ಏನು ಹೇಳಿದ?

ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಹೋದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು (ವಿರಾಟ ಪರ್ವ, ೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಮಾತುಗಳನ್ನು ಕೇಳಿ, ಎಲೈ ಕುಮಾರ ಮೊದಲ ಬಾರಿ ಮುತ್ತಿಟ್ಟಾಗ ಹಲ್ಲು ಬಿದ್ದ ಹಾಗೆ ಎಂಬ ಗಾದೆಯಂತೆ, ನೀಣು ಯುದ್ಧವನ್ನೇ ಮಾಡದೆ ಹೆದರಿದ್ದೀಯಾ, ನಾವು ಹೆದರಿಕೊಳ್ಳಲಾಗದು, ಓಡಿ ಹೋಗಿ ನಿಮ್ಮ ವಂಶಕ್ಕೆ ಕಳಂಕವನ್ನು ತರಬೇಡ. ಧೈರ್ಯದಿಂದ ಯುದ್ಧಮಾಡು ಎಂದು ರಥವನ್ನು ವೇಗದಿಂದ ನಡೆಸಿದನು.

ಅರ್ಥ:
ಕುಮಾರ: ಮಗ, ಪುತ್ರ; ಚುಂಬನ: ಮುತ್ತು; ಹಲು: ದಂತ; ಹೋಗು: ಗಮಿಸು, ನಾಶ; ಕಾಳಗ: ಯುದ್ಧ; ಬೆರೆ: ಸೇರು; ಮುನ್ನ: ಮುಂಚೆ; ಹಿಡಿ: ಬಂಧಿಸು; ಸಮರ: ಯುದ್ಧ; ಭೀತಿ: ಭಯ; ಅಳುಕು: ಹೆದರು; ತಂದೆ: ಪಿತ; ಕುಲ: ವಂಶ; ಕುಂದ: ಕೊರತೆ; ತರು: ಕೊಡು, ತೆಗೆದುಕೊಂಡು ಬಾ; ಮನ: ಮನಸ್ಸು; ಗೆಲವು: ಜಯ; ಕಾದು: ಹೋರಾಡು; ರಥ: ಬಂಡಿ; ಬೇಗ: ವೇಗ; ಹರಿಸು: ಚಲಿಸು;

ಪದವಿಂಗಡಣೆ:
ಎಲೆ +ಕುಮಾರಕ +ಮೊದಲ +ಚುಂಬನ
ದೊಳಗೆ +ಹಲು +ಹೋದಂತೆ +ಕಾಳಗ
ದೊಳಗೆ +ಬೆರೆಯದ +ಮುನ್ನ +ಹಿಡಿದೈ+ ಸಮರ+ಭೀತಿಯನು
ಅಳುಕಲಾಗದು +ನಿಮ್ಮ +ತಂದೆಯ
ಕುಲಕೆ +ಕುಂದನು +ತಾರದಿರು +ಮನ
ಗೆಲವಿನಲಿ +ಕಾದೆನುತ+ ರಥವನು+ ಬೇಗ +ಹರಿಸಿದನು

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೊದಲ ಚುಂಬನದೊಳಗೆ ಹಲು ಹೋದಂತೆ
(೨) ಅರ್ಜುನನ ಉಪದೇಶ – ಅಳುಕಲಾಗದು ನಿಮ್ಮ ತಂದೆಯಕುಲಕೆ ಕುಂದನು ತಾರದಿರು ಮನಗೆಲವಿನಲಿ ಕಾದೆನುತ
(೩) ಕಾಳಗ, ಸಮರ – ಸಮನಾರ್ಥಕ ಪದ

ಪದ್ಯ ೭: ಉತ್ತರನು ಬೃಹನ್ನಳೆಗೆ ಏನು ಹೇಳಿದ?

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಗಬಾರದು ಪ್ರಳಯಕಾಲನ
ಮುಸುಕನುಗಿವವರಾರು ಕೌರವ
ನಸಮಬಲನೈ ರಥವ ಮರಳಿಸು ಜಾಳಿಸುವೆನೆಂದ (ವಿರಾಟ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಹಸಿದಿರುವ ಮಾರಿಗಳ ಗುಂಪಿನಲ್ಲಿ ಕುರಿಯು ಬಂದು ಹೊಕ್ಕಂತೆ ಆಗಿದೆ ನನ್ನ ಸ್ಥಿತಿ ಬೃಹನ್ನಳೆ, ಕುದುರೆಗಳ ಓಟವನ್ನು ನಿಲ್ಲಿಸು, ಬಾರುಕೋಲನ್ನು ಕೆಳಕ್ಕೆ ಬಿಸಾಡು, ಈ ಸೈನ್ಯದೆದುರಿಗೆ ಕದಲಲೂ ಬಾರದು, ಪ್ರಳಯಕಾಲದ ಯಮನು ಮುಖಕ್ಕೆ ಹಾಕಿಕೊಂಡಿರುವ ಮುಸುಕನ್ನು ಯಾರಾದರೂ ತೆಗೆಯುವರೇ? ಕೌರವನು ಮಹಾ ಬಲಶಾಲಿ, ರಥವನ್ನು ಹಿಮ್ದಕ್ಕೆ ತಿರುಗಿಸು, ಓಡಿ ಹೋಗೋಣವೆಂದು ಉತ್ತರನು ಬೃಹನ್ನಳೆಗೆ ಹೇಳಿದನು.

ಅರ್ಥ:
ಹಸಿ: ಆಹಾರವನ್ನು ಬಯಸು; ಮಾರಿ: ಕ್ಷುದ್ರದೇವತೆ; ಮಂದೆ: ಗುಂಪು, ಸಮೂಹ; ಕುರಿ: ಮೇಷ; ನುಸುಳು: ತೂರುವಿಕೆ, ನುಣುಚಿಕೊಳ್ಳುವಿಕೆ; ಎಸಗು: ಮಾಡು, ವ್ಯವಹರಿಸು; ತೇಜಿ: ಕುದುರೆ; ತಡೆ: ನಿಲ್ಲಿಸು; ಚಮ್ಮಟಗೆ: ಚಾವಟಿ; ಬಿಸುಡು: ತೊರೆ, ಹೊರಹಾಕು; ಮಿಸುಗು: ಕದಲು, ಅಲುಗು; ಪ್ರಳಯಕಾಲ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶದ ಸಮಯ; ಮುಸುಕು: ಹೊದಿಕೆ; ಉಗಿ: ಹೊರಹಾಕು; ಅಸಮಬಲ: ಅಪ್ರತಿಮ ಬಲಶಾಲಿ; ರಥ: ಬಂಡಿ; ಮರಳು: ಹಿಂದಿರುಗಿಸು; ಜಾಳಿಸು: ಚಲಿಸು, ನಡೆ;

ಪದವಿಂಗಡಣೆ:
ಹಸಿದ +ಮಾರಿಯ +ಮಂದೆಯಲಿ +ಕುರಿ
ನುಸುಳಿದಂತಾದೆನು+ ಬೃಹನ್ನಳೆ
ಯೆಸಗದಿರು +ತೇಜಿಗಳ+ ತಡೆ+ ಚಮ್ಮಟಿಗೆಯನು +ಬಿಸುಡು
ಮಿಸುಗಬಾರದು+ ಪ್ರಳಯಕಾಲನ
ಮುಸುಕನ್+ಉಗಿವವರಾರು+ ಕೌರವನ್
ಅಸಮಬಲನೈ+ ರಥವ+ ಮರಳಿಸು+ ಜಾಳಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸಿದ ಮಾರಿಯ ಮಂದೆಯಲಿ ಕುರಿನುಸುಳಿದಂತಾದೆನು