ಪದ್ಯ ೪೧: ವಲಲನು ವಿರಾಟನಿಗೆ ಹೇಗೆ ಉತ್ತರಿಸಿದನು?

ಎನಲು ಕಿರುನಗೆ ಮಿನುಗೆ ಮುಖದಲಿ
ಯನಿಲಜನು ಮಗುಳೆಂದನೇತಕೆ
ಜನಪ ಚಿಂತಿಪೆ ಸತ್ತೊಡೆನಗದು ರಾಜಕಾರ್ಯವಲೆ
ಅನುವರವ ಜಯಿಸಿದೊಡೆ ನೀವೆಂ
ದನಿತು ಮಲ್ಲರುವುತ್ತರಾಯಿಗ
ಳೆನಗೆ ನಿಮ್ಮಯ ಕರುಣ ಸಾಕೆಂದನಿಲಜನು ನುಡಿದ (ವಿರಾಟ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ವಿರಾಟನ ಮಾತು ಕೇಳಿ ಕಿರುನಗೆಯನ್ನು ಬೀರುತ್ತಾ, ರಾಜ ನೀವೇಕೆ ಚಿಂತಿಸುವಿರಿ, ಯುದ್ಧದಲ್ಲಿ ಸೋತರೆ ಅದು ಸ್ವಾಮಿಕಾರ್ಯವಲ್ಲವೇ? ಗೆದ್ದರೆ ಮಲ್ಲರೆಲ್ಲರೂ ಗತಪ್ರಾಣರು, ನನಗೆ ನಿಮ್ಮ ಕರುಣೆಯೊಂದೇ ಸಾಕು ಎಂದು ಭೀಮನು ನುಡಿದನು.

ಅರ್ಥ:
ಕಿರುನಗೆ: ಮಂದಸ್ಮಿತ; ಮಿನುಗು: ಪ್ರಕಾಶ; ಮುಖ: ಆನನ; ಅನಿಲಜ: ವಾಯುಪುತ್ರ; ಮಗುಳು: ತಿರುಗಿ; ಜನಪ: ರಾಜ; ಚಿಂತೆ: ಯೋಚನೆ; ಸಾವು: ಮರಣ; ರಾಜಕಾರ್ಯ: ಸ್ವಾಮಿಕೆಲಸ; ಅನುವರ: ಯುದ್ಧ; ಜಯಿಸು: ಗೆಲ್ಲು; ಅನಿತು: ಅಷ್ಟು; ಮಲ್ಲ: ಜಟ್ಟಿ; ಉತ್ತರಾಯಿ: ಜವಾಬುದಾರಿ, ಬೇರೆಯವ; ಕರುಣ: ದಯೆ; ಅನಿಲಜ: ಭೀಮ; ನುಡಿ: ಮಾತಾಡು;

ಪದವಿಂಗಡಣೆ:
ಎನಲು+ ಕಿರುನಗೆ +ಮಿನುಗೆ +ಮುಖದಲಿ
ಅನಿಲಜನು +ಮಗುಳೆಂದನ್+ಏತಕೆ
ಜನಪ+ ಚಿಂತಿಪೆ+ ಸತ್ತೊಡ್+ಎನಗದು+ ರಾಜಕಾರ್ಯವಲೆ
ಅನುವರವ+ ಜಯಿಸಿದೊಡೆ +ನೀವೆಂದ್
ಅನಿತು+ ಮಲ್ಲರು+ಉತ್ತರಾಯಿಗಳ್
ಎನಗೆ+ ನಿಮ್ಮಯ +ಕರುಣ +ಸಾಕೆಂದ್+ಅನಿಲಜನು +ನುಡಿದ

ಅಚ್ಚರಿ:
(೧) ಅನಿಲಜ – ೨, ೬ ಸಾಲಿನಲ್ಲಿ ಪದ ಪ್ರಯೋಗ
(೨) ಭೀಮನು ರಾಜನಿಗೆ ಅಭಯವನ್ನು ನೀಡುವ ಪರಿ – ಏತಕೆ ಜನಪ ಚಿಂತಿಪೆ ಸತ್ತೊಡೆನಗದು ರಾಜಕಾರ್ಯವಲೆ

ಪದ್ಯ ೪೦: ವಿರಾಟನು ವಲಲನಿಗೆ ಏನು ಹೇಳಿದ?

ಬರವ ಕಾಣುತ ಮತ್ಸ್ಯನೃಪನುಪ
ಚರಿಸಿ ವಲಲಂಗೆಂದನೀ ಸಂ
ಗರದಿ ಜಯಿಸಿದರೆಮ್ಮ ಮಲ್ಲರ ಉತ್ತರಾಹಿಗಳು
ಧುರವ ಬಲ್ಲೈ ಮಲ್ಲವಿದ್ಯೆಯ
ನರಿತಿಹೈ ನೀನೆಂದು ಮುನಿವರ
ನರುಹೆ ಕೇಳ್ಚೆನು ವಲಲ ನಿನ್ನಂತಸ್ಥವೇನೆಂದ (ವಿರಾಟ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಮನು ಬರಲು, ವಿರಾಟನು ವಲಲನನ್ನು ಉಪಚರಿಸಿ, ಈ ದಿನದ ಯುದ್ಧದಲ್ಲಿ ಉತ್ತರ ದೇಶದ ಮಲ್ಲರು ನಮ್ಮ ದೇಶದ ಮಲ್ಲರನ್ನು ಸೋಲಿಸಿದರು. ವಲಲ ನಿನಗೆ ಮಲ್ಲ ವಿದ್ಯೆಗೊತ್ತು ತಾನೆ? ಮಲ್ಲ ಯುದ್ಧವನ್ನು ತಿಳಿದಿರುವೆ ತಾನೆ? ಕಂಕನು ನಿನ್ನ ಬಗ್ಗೆ ಹೇಳಿದ್ದರಿಂದ ನಿನ್ನನ್ನು ಕರೆಸಿದ್ದೇನೆ, ನಿನ್ನ ಮನಸ್ಸಿನಲ್ಲಿರುವುದನ್ನು ತಿಳಿಸೆಂದು ಹೇಳಿದನು.

ಅರ್ಥ:
ಬರ: ಬಂದು; ಕಾಣು: ವೀಕ್ಷಿಸು, ನೋಡು; ನೃಪ: ರಾಜ; ಉಪಚರಿಸು: ಸತ್ಕರಿಸು; ಸಂಗರ: ಯುದ್ಧ; ಜಯಿಸು: ಗೆಲುವು; ಮಲ್ಲ: ಜಟ್ಟಿ ಉತ್ತರ: ಉತ್ತರದಿಕ್ಕು; ಅಹಿ: ಹಾವು; ಧುರ: ಯುದ್ಧ, ಕಾಳಗ; ಬಲ್ಲೆ: ತಿಳಿದಿರುವೆ; ವಿದ್ಯೆ: ಬುದ್ಧಿ, ಜ್ಞಾನ; ಅರಿ: ತಿಳಿ; ಮುನಿ: ಋಷಿ, ಯೋಗಿ; ಅರುಹು: ಹೇಳು; ಕೇಳು: ಆಲಿಸು, ತಿಳಿಸು; ಅಂತಸ್ಥ: ಒಳಗಿರುವ;

ಪದವಿಂಗಡಣೆ:
ಬರವ +ಕಾಣುತ +ಮತ್ಸ್ಯ+ನೃಪನ್+ಉಪ
ಚರಿಸಿ+ ವಲಲಂಗ್+ಎಂದನ್+ಈ+ ಸಂ
ಗರದಿ+ ಜಯಿಸಿದರ್+ಎಮ್ಮ +ಮಲ್ಲರ +ಉತ್ತರಾಹಿಗಳು
ಧುರವ+ ಬಲ್ಲೈ +ಮಲ್ಲವಿದ್ಯೆಯನ್
ಅರಿತಿಹೈ+ ನೀನೆಂದು +ಮುನಿವರನ್
ಅರುಹೆ +ಕೇಳ್ದೆನು +ವಲಲ+ ನಿನ್ನ್+ಅಂತಸ್ಥವೇನೆಂದ

ಅಚ್ಚರಿ:
(೧) ವಲಲನಿಗೆ ಹೇಳಿದ ಸಂಗತಿ – ಸಂಗರದಿ ಜಯಿಸಿದರೆಮ್ಮ ಮಲ್ಲರ ಉತ್ತರಾಹಿಗಳು

ಪದ್ಯ ೩೯: ಭೀಮನು ಹೇಗೆ ಬಂದು ವಿರಾಟನ ಮುಂದೆ ನಿಂತನು?

ಮುರಿದ ಮೀಸೆಯ ಹೊದರುದಲೆ ಕೆಂ
ಪೊರೆದ ಕಂಗಳ ಹೊಗರು ಮೋರೆಯ
ತುರುಗಿದುಬ್ಬಿನ ರೋಮಪುಳಕದ ಬಿಗಿದ ಹುಬ್ಬುಗಳ
ಹೊರೆದ ದೇಹದ ನಿರುತ ರೌದ್ರದ
ಮರುತಜನು ಕದನಕ್ಕೆ ಕಾಲನ
ಕರೆವವೊಲು ನಡೆತಂದು ನಿಂದನು ಮತ್ಸ್ಯನಿದಿರಿನಲಿ (ವಿರಾಟ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ತಿರುವಿದ ಮೀಸೆಗಳು, ಬಾಚದ ತಲೆಗೂದಲುಗಳು, ಕೆಂಪು ಕಣ್ಣುಗಳು, ಕಾಂತಿಭರಿತ ಮುಖ, ಹಿಗ್ಗಿದ ರೋಮ, ರೋಮಾಂಚನಗೊಂಡು ಬಿಗಿದಿದ್ದ ಹುಬ್ಬುಗಳು, ಸುಸ್ಥಿತಿಯಲ್ಲಿದ್ದ ದೇಹದಿಂದ ಭಯಂಕರನಾಗಿ ಕಾಣುತ್ತಿದ್ದ ಭೀಮನು ಯುದ್ಧಕ್ಕೆ ಕಾಲಯಮನನ್ನು ಕರೆಸಿದರೋ ಎಂಬಂತೆ ರಾಜನೆದುರಿನಲ್ಲಿ ಬಂದು ನಿಮ್ತನು.

ಅರ್ಥ:
ಮುರಿ: ತಿರುವು; ಹೊದರು: ಪೊದೆ, ಹಿಂಡಲು; ತಲೆ: ಶಿರ; ಒರೆ: ಸಾಮ್ಯತೆ; ಕಂಗಳು: ಕಣ್ಣು; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ತುರುಗು: ಸಂದಣಿ, ದಟ್ಟಣೆ; ಉಬ್ಬು: ಹಿಗ್ಗು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬಿಗಿ: ಒತ್ತು, ಅಮುಕು; ಹುಬ್ಬು: ಕಣ್ಣಿನ ಮೇಲಿರುವ ಕೂದಲು; ಹೊರೆ: ರಕ್ಷಣೆ, ಭಾರ; ದೇಹ: ಕಾಯ, ತನು; ನಿರುತ: ದಿಟ, ಸತ್ಯ; ರೌದ್ರ: ಭಯಂಕರ; ಮರುತಜ: ಭೀಮ, ವಾಯುಪುತ್ರ; ಕದನ: ಯುದ್ಧ; ಕಾಲ: ಯಮ; ಕರೆ: ಬರೆಮಾಡು; ನಡೆ: ಚಲಿಸು; ನಡೆತಂದು: ನಡೆದುಕೊಂಡು ಬಂದು; ನಿಂದನು: ನಿಲ್ಲು; ಇದಿರು: ಎದುರು;

ಪದವಿಂಗಡಣೆ:
ಮುರಿದ +ಮೀಸೆಯ +ಹೊದರು+ತಲೆ +ಕೆಂ
ಪೊರೆದ+ ಕಂಗಳ +ಹೊಗರು +ಮೋರೆಯ
ತುರುಗಿದ್+ಉಬ್ಬಿನ +ರೋಮ+ಪುಳಕದ+ ಬಿಗಿದ +ಹುಬ್ಬುಗಳ
ಹೊರೆದ +ದೇಹದ +ನಿರುತ +ರೌದ್ರದ
ಮರುತಜನು +ಕದನಕ್ಕೆ +ಕಾಲನ
ಕರೆವವೊಲು +ನಡೆತಂದು +ನಿಂದನು +ಮತ್ಸ್ಯನ್+ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರುತಜನು ಕದನಕ್ಕೆ ಕಾಲನ ಕರೆವವೊಲು ನಡೆತಂದು ನಿಂದನು

ಪದ್ಯ ೩೮: ಕಂಕನು ವಿರಾಟನಿಗೆ ವಲಲನನ್ನು ಕರೆಸಲು ಏಕೆ ಹೇಳಿದನು?

ಬಲ್ಲೆನಾತನ ಕೈಗುಣಕೆ ಸರಿ
ಯಿಲ್ಲ ಸುಭಟರೊಳಸಮ ಸಾಹಸ
ಮಲ್ಲನಿವನೊಳಗರಿವ ಪವನಜ ಮಲ್ಲ ಕೌಶಲವ
ಅಲ್ಲವೆಂದೆನೆ ನೃಪತಿ ತಾ ತ
ಪ್ಪಲ್ಲ ಜಯಿಸಲಿ ಮೇಣುಸೋಲಲಿ
ಬಲ್ಲೆ ನಾನಂಜದಿರು ಬೇಗದಿ ಕರೆಸು ನೀನೆಂದ (ವಿರಾಟ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕಂಕನು ವಿರಾಟನಿಗೆ ಉತ್ತರಿಸುತ್ತಾ, ರಾಜ, ವಲಲನ ಕೈಚಳಕಕ್ಕೆ ಸಮಾನರಾದ ಪರಾಕ್ರಮಿಗಳೇ ಇಲ್ಲ. ಸ್ವತಃ ಭೀಮಸೇನನು ಇವನಿಂದ ಮಲ್ಲವಿದ್ಯೆಯನ್ನು ಕಲಿಯುತ್ತಾನೆ, ಎನ್ನಲು ವಿರಾಟನು ಈ ವಿಚಾರಕ್ಕೆ ಅಲ್ಲಗಳೆದನು, ಆಗ ಕಂಕನು ರಾಜ ವಲಲನು ಗೆಲ್ಲಲಿ, ಸೋಲಲಿ ಹೆದರಬೇಡ, ನನಗೆ ಗೊತ್ತು, ಅವನನ್ನು ಬೇಗ ಕರೆಸು, ಇದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದನು.

ಅರ್ಥ:
ಬಲ್ಲೆ: ತಿಳಿದಿರುವೆ; ಕೈಗುಣ: ಕೈಯ ಸಾಮರ್ಥ್ಯ, ಹಸ್ತಕೌಶಲ; ಸುಭಟ: ಪರಾಕ್ರಮಿ; ಅಸಮ: ಸಮವಲ್ಲದ; ಸಾಹಸ: ಪರಾಕ್ರಮ; ಮಲ್ಲ: ಜಟ್ಟಿ; ಅರಿ: ತಿಳಿ; ಪವನಜ: ಭೀಮ; ಮಲ್ಲ: ಜಟ್ಟಿ; ಕೌಶಲ: ಜಾಣತನ, ಚದುರು; ಅಲ್ಲ: ಬೇಡ; ನೃಪತಿ: ರಾಜ; ತಾ: ಕರೆಸು; ತಪ್ಪು: ಸರಿಯಲ್ಲದು; ಜಯಿಸು: ಗೆಲುವು; ಮೇಣ್: ಅಥವ; ಸೋಲು: ಪರಾಭವ; ಬಲ್ಲೆ: ತಿಳಿ; ಅಂಜು: ಹೆದರು; ಬೇಗ: ಶೀಘ್ರ; ಕರೆಸು: ಬರೆಮಾಡು;

ಪದವಿಂಗಡಣೆ:
ಬಲ್ಲೆನ್+ಆತನ +ಕೈಗುಣಕೆ +ಸರಿ
ಯಿಲ್ಲ +ಸುಭಟರೊಳ್+ಅಸಮ+ ಸಾಹಸ
ಮಲ್ಲನ್+ಇವನ್+ಒಳಗ್+ಅರಿವ+ ಪವನಜ+ ಮಲ್ಲ +ಕೌಶಲವ
ಅಲ್ಲವೆಂದೆನೆ +ನೃಪತಿ+ ತಾ +ತ
ಪ್ಪಲ್ಲ +ಜಯಿಸಲಿ+ ಮೇಣು+ಸೋಲಲಿ
ಬಲ್ಲೆ +ನಾನ್+ಅಂಜದಿರು +ಬೇಗದಿ+ ಕರೆಸು +ನೀನೆಂದ

ಅಚ್ಚರಿ:
(೧) ವಲಲನನ್ನು ಪ್ರಶಂಶಿಸುವ ಪರಿ – ಆತನ ಕೈಗುಣಕೆ ಸರಿಯಿಲ್ಲ ಸುಭಟರೊಳಸಮ ಸಾಹಸ
ಮಲ್ಲನಿವನೊಳಗರಿವ ಪವನಜ ಮಲ್ಲ ಕೌಶಲವ

ಪದ್ಯ ೩೭: ವಿರಾಟನು ಕಂಕನಿಗೆ ಏನು ಹೇಳಿದ?

ಎಲೆ ಮಹೀಸುರ ಯೀವಿವೇಕವ
ಬಳಸುವೆನೆ ನೀನರಿಯದಿದ್ದೊಡೆ
ತಿಳಿವೆ ನಾನೆಲ್ಲವನು ಸಂಹರಿಸುವನು ಸಿಂಧುರನು
ಉಳಿದವರ ಗಣಿಸುವನೆ ತಾನಿ
ನ್ನುಳಿದವರು ಕೃಶರೆಂದು ಬಡವನ
ಕೊಲಿಸ ಬಗೆವರೆ ಕಂಕ ನೀ ಹೇಳೆಂದನಾ ಮತ್ಸ್ಯ (ವಿರಾಟ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಬ್ರಾಹ್ಮಣ, ನಿನ್ನ ತೀರ್ಮಾನವನ್ನು ಒಪ್ಪಿಕೊಳ್ಳುವುದಾದರೆ ಸಿಂಧುರನು ಬಾಣಸಿಗನಾದ ವಲಲನನ್ನು ಕೊಲ್ಲುತ್ತಾನೆ, ನಮ್ಮ ಉಳಿದ ಮಲ್ಲರು ದುರ್ಬಲರೆಂದು ಪರದೇಶಿಯಾದ ಈ ಬಡ ಬಾಣಸಿಗನನ್ನು ಕೊಲ್ಲಿಸಲು ಲೆಕ್ಕಿಸುವುದೇ? ಕಂಕ ನೀನೇ ಹೇಳು ಎಂದು ಮತ್ಸ್ಯನು ಹೇಳಿದನು.

ಅರ್ಥ:
ಮಹೀಸುರ: ಬ್ರಾಹ್ಮಣ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಬಳಸು: ಉಪಯೋಗ ಮಾಡು; ಅರಿ: ತಿಳಿ; ಸಂಹರಿಸು: ನಾಶಮಾಡು; ಉಳಿದ: ಮಿಕ್ಕ; ಗಣಿಸು: ಲಕ್ಷಿಸು; ಉಳಿದ: ಮಿಕ್ಕ; ಕೃಶ: ದುರ್ಬಲ, ತೆಳುವಾದ; ಬಡವ: ದೀನ; ಕೊಲಿಸು: ಸಾಯಿಸು; ಬಗೆ: ರೀತಿ; ಹೇಳು: ತಿಳಿಸು;

ಪದವಿಂಗಡಣೆ:
ಎಲೆ +ಮಹೀಸುರ +ಯೀ+ವಿವೇಕವ
ಬಳಸುವೆನೆ+ ನೀನ್+ಅರಿಯದಿದ್ದೊಡೆ
ತಿಳಿವೆ+ ನಾನೆಲ್ಲವನು +ಸಂಹರಿಸುವನು+ ಸಿಂಧುರನು
ಉಳಿದವರ+ ಗಣಿಸುವನೆ+ ತಾನ್
ಇನ್ನುಳಿದವರು +ಕೃಶರೆಂದು +ಬಡವನ
ಕೊಲಿಸ +ಬಗೆವರೆ+ ಕಂಕ+ ನೀ +ಹೇಳೆಂದನಾ +ಮತ್ಸ್ಯ

ಅಚ್ಚರಿ:
(೧) ವಿರಾಟನು ಮುಂಚೆಯೇ ತೀರ್ಮಾನಿಸಿದ ಪರಿ – ನೀನರಿಯದಿದ್ದೊಡೆ ತಿಳಿವೆ ನಾನೆಲ್ಲವನು ಸಂಹರಿಸುವನು ಸಿಂಧುರನು

ಪದ್ಯ ೩೬: ಕಂಕನು ಮಲ್ಲಯುದ್ಧಕ್ಕೆ ಯಾರನ್ನು ಕರೆಸಲು ಹೇಳಿದನು?

ಅವನಿಪತಿ ಕೇಳ್ನಿನ್ನ ಬಾಣಸಿ
ನವನು ಮಲ್ಲನು ಭೀಮಸೇನನ
ಭವನದಲಿ ಬಲು ಮಲ್ಲವಿದ್ಯೆಯ ಸಾಧಿಸಿದನವನು
ಪವನಸುತನಿಂ ಬಲುಮೆಯೀತನು
ಜವಕೆ ಜವವೊದಗುವನು ನೀನಿಂ
ದಿವನ ಕರೆಸುವುದೆನಲು ಮತ್ಸ್ಯನೃಪಾಲನಿಂತೆಂದ (ವಿರಾಟ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕಂಕನು ತನ್ನ ಉಪಾಯವನ್ನು ತಿಳಿಸುತ್ತಾ, ರಾಜ ನಿನ್ನ ಅಡಿಗೆಯವನಾದ ವಲಲನು ಮಹಾ ಜಟ್ಟಿ, ಭೀಮನ ಮನೆಯ ಗರುಡಿಯಲ್ಲಿ ಅಭ್ಯಾಸ ಮಾಡಿ ಮಲ್ಲ ವಿದ್ಯೆಯನ್ನು ಸಾಧಿಸಿದ್ದಾನೆ, ಭೀಮನಿಗಿಂತ ಒಂದು ಕೈ ಹೆಚ್ಚು ಬಲಶಾಲಿ, ಯಮನಿಗೆ ಯಮನಾಗಿ ನಿಲ್ಲುವಷ್ಟು ಬಲವಂತ, ಎಂತಹ ವೀರನೇ ಆಗಲಿ ಗೆಲ್ಲಬಲಾವನು. ಅವನನ್ನು ಮಲ್ಲಕಾಳಗಕ್ಕೆ ಕರೆಸು ಎಂದನು.

ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಕೇಳು: ಆಲಿಸು; ಬಾಣಸಿ: ಅಡುಗೆಯವ; ಮಲ್ಲ: ಜಟ್ಟಿ; ಭವನ: ಆಲಯ; ಬಲು: ಹೆಚ್ಚು; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಪವನಸುತ: ವಾಯುಪುತ್ರ; ಬಲುಮೆ: ಬಲ, ಶಕ್ತಿ; ಜವ: ಯಮ; ಕರೆಸು: ಬರೆಮಾಡು; ನೃಪಾಲ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್+ನಿನ್ನ+ ಬಾಣಸಿನ್
ಅವನು +ಮಲ್ಲನು +ಭೀಮಸೇನನ
ಭವನದಲಿ +ಬಲು +ಮಲ್ಲವಿದ್ಯೆಯ +ಸಾಧಿಸಿದನವನು
ಪವನಸುತನಿಂ+ ಬಲುಮೆ+ಈತನು
ಜವಕೆ+ ಜವ+ ಒದಗುವನು +ನೀನ್+ಇಂದ್
ಇವನ +ಕರೆಸುವುದ್+ಎನಲು +ಮತ್ಸ್ಯ+ನೃಪಾಲನ್+ಇಂತೆಂದ

ಅಚ್ಚರಿ:
(೧) ಅವನಿಪತಿ, ನೃಪಾಲ – ಸಮನಾರ್ಥಕ ಪದಗಳು
(೨) ಭೀಮನನ್ನು ಹೊಗಳುವ ಪರಿ – ಪವನಸುತನಿಂ ಬಲುಮೆಯೀತನು ಜವಕೆ ಜವವೊದಗುವನು