ಪದ್ಯ ೧೩: ಮಲ್ಲರು ಎಲ್ಲಿ ಬೀಡು ಬಿಟ್ಟರು?

ಸುರನದಿಯನುತ್ತರಿಸಿ ಗೋದಾ
ವರಿಯ ಹೊರೆಗೈದಿದರು ತರಣಿಯ
ಕಿರಣಲಹರಿಯ ಹೊಯ್ಲಿನಲಿ ಶ್ರಮವಾಗೆ ಪರಿಹರಿಸಿ
ಮರುದಿವಸ ತೆರಳಿದರು ಮಲ್ಲರು
ನೆರೆದು ನಡೆದುದು ಬಂದು ಕೃಷ್ಣೆಯ
ವರನದಿಯ ತೀರದಲಿ ಬೀಡು ವಿನಾಥಪುರದಲ್ಲಿ (ವಿರಾಟ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಂಗಾ ಯಮುನಾ ನದಿಗಳನ್ನು ದಟಿ, ಬಿಸಿಲ ಬೇಗೆಯನ್ನು ಗೋದಾವರೀ ತೀರದಲ್ಲಿ ಪರಿಹರಿಸಿಕೊಂಡು, ಮರುದಿನ ಪ್ರ್ಯಾಣ ಬೆಳೆಸಿದರು. ಪ್ರಯಾಣ ಮಾಡುತ್ತಾ ಕೃಷ್ಣಾ ನದಿಯ ತೀರದ ವಿನಾಥಪುರದಲ್ಲಿ ಬೀಡು ಬಿಟ್ಟರು.

ಅರ್ಥ:
ಸುರನದಿ: ಗಂಘೆ; ಉತ್ತರಿಸು: ದಾಟಿಸು; ಐದು: ಬಂದುಸೇರು; ತರಣಿ: ಸೂರ್ಯ; ಕಿರಣ: ರಶ್ಮಿ; ಲಹರಿ: ಅಲೆ, ತೆರೆ; ಹೊಯ್ಲು: ಹೊಡೆತ; ಶ್ರಮ: ಕಷ್ಟ, ದಣಿವು; ಪರಿಹರಿಸು: ನಿವಾರಿಸು; ದಿವಸ: ದಿನ; ತೆರಳು: ಹೋಗು; ಮಲ್ಲ: ಜಟ್ಟಿ; ನೆರೆ: ಸೇರು; ನಡೆ: ಚಲಿಸು; ಬಂದು: ಆಗಮಿಸು; ವರನದಿ: ಶ್ರೇಷ್ಠ ಸರೋವರ; ತೀರ: ದಡ; ಬೀಡು: ಆವಾಸ, ನೆಲೆ; ಪುರ: ಊರು;

ಪದವಿಂಗಡಣೆ:
ಸುರನದಿಯನ್+ಉತ್ತರಿಸಿ +ಗೋದಾ
ವರಿಯ +ಹೊರೆಗೈದಿದರು +ತರಣಿಯ
ಕಿರಣ+ಲಹರಿಯ +ಹೊಯ್ಲಿನಲಿ +ಶ್ರಮವಾಗೆ +ಪರಿಹರಿಸಿ
ಮರುದಿವಸ +ತೆರಳಿದರು +ಮಲ್ಲರು
ನೆರೆದು +ನಡೆದುದು +ಬಂದು+ ಕೃಷ್ಣೆಯ
ವರನದಿಯ+ ತೀರದಲಿ +ಬೀಡು +ವಿನಾಥಪುರದಲ್ಲಿ

ಅಚ್ಚರಿ:
(೧) ದಕ್ಷಿಣಕ್ಕೆ ತೆರಳಿದರು ಎಂದು ಹೇಳಲು ನದಿಗಳ ಹೆಸರ ಬಳಕೆ – ಸುರನದಿ, ಗೋದಾವರಿ, ಕೃಷ್ಣೆ

ಪದ್ಯ ೧೨: ಮಲ್ಲರು ಹಸ್ತಿನಾಪುರದಿಂದ ಹೇಗೆ ತೆರಳಿದರು?

ಹೊಡೆದುವೈ ಭೇರಿಗಳು ತುಂಬಟ
ವೆಡಬಲದ ಡೌಡೆಗಳು ಮಿಗೆ ಬೊ
ಬ್ಬಿಡುವ ನಿಸ್ಸಾಳದ ಮಹಾರವ ರಾಯಗಡಿಬಿಡಿಯ
ಘುಡುಘುಡಿಪ ಹೆಗ್ಗಾಳೆ ಮೊಳಗುವ
ಬೆಡಗು ಜಾಗಟೆ ಬೊಬ್ಬೆಯಲಿ ಜಗ
ನಡುಗೆ ಗಜಪುರದಿಂದ ಬಂದರು ಪಯಣಗತಿಗಳಲಿ (ವಿರಾಟ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭೇರಿಗಳನ್ನು ಹೊಡೆಯಲಾಯಿತು, ತಮಟೆಗಳು ಎರಡುಬದಿಯಲ್ಲಿ ಶಬ್ದಮಾಡಿದವು, ನಗಾರಿಗಳು ಕೂಗಿದವು. ಈ ಶಬ್ದಗಳು ಹೆಚ್ಚಾಗಿ ನಿಸ್ಸಾಳದ, ಜಾಗಟೆಯ ಶಬ್ದವು ಇದರೊಂದಿಗೆ ಸೇರಿ ಮಹಾಧ್ವನಿಯನ್ನೇ ಮೊಳಗಿಸಿತು. ಈ ಧ್ವನಿಗಳು ಭೂಮಿಯನ್ನೇ ನಡುಗಿಸುವಂತಿದ್ದವು, ಇಂತಹ ವಾದ್ಯಗಳ ಶಬ್ದವು ಮೊಳಗುತ್ತಿರಲು ಮಲ್ಲರು ಹಸ್ತಿನಾಪುರವನ್ನು ತೆರಳಿದರು.

ಅರ್ಥ:
ಹೊಡೆ: ಬಾರಿಸು; ಭೇರಿ: ನಗಾರಿ, ದುಂದುಭಿ; ತಂಬಟ: ತಮಟೆ; ಎಡಬಲ: ಅಕ್ಕ ಪಕ್ಕ; ಡೌಡೆ: ನಗಾರಿ; ಮಿಗೆ: ಹೆಚ್ಚು; ಬೊಬ್ಬಿಡು: ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಆರವ: ಶಬ್ದ, ಧ್ವನಿ; ರಾಯ: ರಾಜ; ಘುಡುಘುಡು: ಶಬ್ದವನ್ನು ಸೂಚಿಹೆಸುವ ಪದ; ಹೆಗ್ಗಾಳೆ: ದೊಡ್ಡ ಕಹಳೆ; ಮೊಳಗು: ಧ್ವನಿ, ಸದ್ದು; ಬೆಡಗು: ಅಂದ, ಸೊಬಗು; ಜಾಗಟೆ: ಒಂದು ವಾದ್ಯದ ಹೆಸರು; ಬೊಬ್ಬೆ: ಶಬ್ದ; ಜಗ: ಪ್ರಪಂಚ; ನಡುಗು: ಅಲ್ಲಾಡು; ಗಜಪುರಿ: ಹಸ್ತಿನಾವತಿ; ಬಂದು: ಆಗಮಿಸು; ಪಯಣ: ಪ್ರಯಾಣ; ಗತಿ: ವೇಗ;

ಪದವಿಂಗಡಣೆ:
ಹೊಡೆದುವೈ+ ಭೇರಿಗಳು+ ತುಂಬಟವ್
ಎಡಬಲದ +ಡೌಡೆಗಳು +ಮಿಗೆ +ಬೊ
ಬ್ಬಿಡುವ +ನಿಸ್ಸಾಳದ +ಮಹಾರವ +ರಾಯಗ್+ಅಡಿಬಿಡಿಯ
ಘುಡುಘುಡಿಪ+ ಹೆಗ್ಗಾಳೆ +ಮೊಳಗುವ
ಬೆಡಗು +ಜಾಗಟೆ +ಬೊಬ್ಬೆಯಲಿ+ ಜಗ
ನಡುಗೆ +ಗಜಪುರದಿಂದ +ಬಂದರು +ಪಯಣ+ಗತಿಗಳಲಿ

ಅಚ್ಚರಿ:
(೧) ಭೇರಿ, ತುಂಬಟ, ಡೌಡೆ, ನಿಸ್ಸಾಳ, ಹೆಗ್ಗಾಳೆ, ಜಾಗಟೆ – ವಾದ್ಯಗಳ ಹೆಸರು

ಪದ್ಯ ೧೧: ಕೌರವನು ಮಲ್ಲರನ್ನು ಹೇಗೆ ಬೀಳ್ಕೊಟ್ಟನು?

ತರಿಸಿದನು ಹೊಂದೊಡವೆ ರತ್ನಾ
ಭರಣವೊಪ್ಪುವ ತೋಳ ಭಾಪುರಿ
ವರಮಣಿಗಳಿಂದೆಸೆವ ಬಿರುದಿನ ಕಡೆಯ ಸರಪಳಿಯ
ಕೊರಳ ಹಾರವ ವಜ್ರಮಾಣಿಕ
ತುರುಗಿ ತೂಳುವ ಕಾಲಪೆಂಡೆಯ
ವರಸುವಸ್ತ್ರಾದಿಗಳ ವೀಳೆಯವಿತ್ತು ಬೀಳ್ಕೊಂಡ (ವಿರಾಟ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಂಗಾರದೊಡವೆ, ರತ್ನಾಭರಣಗಳು, ತೋಳ ಭಾಪುರಿ, ಮಣಿ ಖಚಿತವಾದ ಬಿರುದಿನ ಸರಪಳಿ, ಕೊರಳಹಾರ, ವಜ್ರ ಖಚಿತ ಕಾಲಪೆಂಡೆಯ, ವೀಳೆಯ ಒಳ್ಳೆಯ ವಸ್ತ್ರಗಳೇ ಮೊದಲಾದುವನ್ನು ಉಡುಗೊರೆಯಾಗಿ ಕೊಟ್ಟು ಕೌರವನು ಮಲ್ಲರನ್ನು ಬೀಳ್ಕೊಟ್ಟನು.

ಅರ್ಥ:
ತರಿಸು: ಬರೆಮಾಡು; ಒಡವೆ: ಆಭರಣ; ಹೊಂದೊಡವೆ: ಚಿನ್ನದ ಆಭರಣ; ರತ್ನ: ಬೆಲೆಬಾಳುವ ಮಣಿ; ತೋಳು: ಬಾಹು; ಭಾಪುರಿ: ತೋಳಿಗೆ ಧರಿಸುವ ಆಭರಣ, ಬಾಹುಪೂರ; ವರ: ಶ್ರೇಷ್ಠ; ಮಣಿ: ಮುತ್ತು; ಎಸೆವ: ಹೊಳೆವ; ಬಿರುದು: ಗೌರವಸೂಚಕ ಹೆಸರು; ಸರಪಳಿ: ಕೊಂಡಿ; ಕೊರಳು: ಗಂಟಲು; ಹಾರ: ಮಾಲೆ; ವಜ್ರ: ಹೀರ; ಮಾಣಿಕ: ಪದ್ಮರಾಗ, ಕೆಂಪು ಹರಳು; ತುರುಗು: ದಟ್ಟಣೆ, ಹೆಚ್ಚು; ತೂಳು: ಮೈದುಂಬು; ಕಾಲು: ಪಾದ; ವರ: ಶ್ರೇಷ್ಠ; ವಸ್ತ್ರ: ಬಟ್ಟೆ; ಆದಿ: ಮುಂತಾದ; ವೀಳೆಯ: ತಾಂಬೂಲ; ಬೀಳ್ಕೊಂಡು: ತೆರಳು;

ಪದವಿಂಗಡಣೆ:
ತರಿಸಿದನು +ಹೊಂದೊಡವೆ +ರತ್ನಾ
ಭರಣವೊಪ್ಪುವ+ ತೋಳ +ಭಾಪುರಿ
ವರ+ಮಣಿಗಳಿಂದೆಸೆವ +ಬಿರುದಿನ +ಕಡೆಯ +ಸರಪಳಿಯ
ಕೊರಳ +ಹಾರವ +ವಜ್ರ+ಮಾಣಿಕ
ತುರುಗಿ+ ತೂಳುವ +ಕಾಲಪೆಂಡೆಯ
ವರ+ಸುವಸ್ತ್ರಾದಿಗಳ+ ವೀಳೆಯವಿತ್ತು +ಬೀಳ್ಕೊಂಡ

ಅಚ್ಚರಿ:
(೧) ಆಭರಣಗಳ ವಿವರಣೆ – ಹೊಂದಡವೆ, ರತ್ನಾಭರಣ, ತೋಳ ಭಾಪುರಿ, ಕಾಲಪೆಂಡೆ, ಕೊರಳ ಹಾರ; ಮಾಣಿಕ ತುರುಗಿ;

ಪದ್ಯ ೧೦: ಕೌರವನು ಏನೆಂದು ಆಜ್ಞೆ ಮಾಡಿದನು?

ಸುದ್ದಿಯಿಲ್ಲದೆ ಹೋದ ಪಾಂಡವ
ರಿದ್ದರಾದೊಡೆ ಬೀದಿಗಲಹದ
ಯುದ್ಧಕೆಳಸದೆ ತಿರುಗಿಸುವುದೊಬ್ಬನನು ಕರಿಪುರಿಗೆ
ಉದ್ದುರುಟುತನ ಬೇಡ ಮಲ್ಲರೆ
ಗೆದ್ದು ಬರಲೀ ರಾಜಕಾರ್ಯವ
ಬುದ್ಧಿ ಮಾರ್ಗವಿದೀಗ ಪಯಣವ ಮಾಡಿ ನೀವೆಂದ (ವಿರಾಟ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ತಲೆಮರೆಸಿಕೊಂಡಿರುವ ಪಾಂಡವರು ಮತ್ಸ್ಯನಗರಲ್ಲಿದ್ದರೆ ಭೀಮನು ಸಹಿಸದೆ ನಿಮ್ಮ ಮೇಲೆ ಬೀಳಬಹುದು, ಆಗ ನೀವು ಬೀದಿ ಜಗಳಕ್ಕಿಳಿಯಬೇಡಿರಿ, ಒಬ್ಬ ಜಟ್ಟಿಯನ್ನು ಇಲ್ಲಿಗೆ ಕಳಿಸಿ ಸುದ್ದಿಯನ್ನು ತಿಳಿಸಿರಿ. ಈ ರಾಜಕಾರ್ಯವನ್ನು ಗೆಲ್ಲಲು ಒರಟುತನವನ್ನು ಅವಲಂಬಿಸದೆ, ಬುದ್ಧಿಯನ್ನು ಉಪಯೋಗಿಸಿರಿ, ನೀವು ಪ್ರಯಾಣಕ್ಕೆ ತೆರಳಿ ಎಂದು ಕೌರವನು ಆಜ್ಞೆ ಮಾಡಿದನು.

ಅರ್ಥ:
ಸುದ್ದಿ: ವಿಚಾರ; ಹೋದ: ತೆರಳಿದ; ಬೀದಿ: ಮಾರ್ಗ, ದಾರಿ; ಕಲಹ: ಜಗಳ; ಎಳಸು: ಬಯಸು; ಯುದ್ಧ: ಕಾಳಗ; ತಿರುಗು: ಮರಳು; ಕರಿಪುರಿ: ಹಸ್ತಿನಾಪುರ; ಉದ್ದುರುಟ: ಒರಟುತನ; ಬೇಡ: ತ್ಯಜಿಸು; ಮಲ್ಲ: ಜಟ್ಟಿ; ಗೆದ್ದು: ಜಯ; ರಾಜಕಾರ್ಯ: ರಾಜಕಾರಣ; ಬುದ್ಧಿ: ತಿಳಿವು, ಅರಿವು; ಮಾರ್ಗ: ದಾರಿ; ಪಯಣ: ಪ್ರಯಾಣ, ಪ್ರಸ್ಥಾನ;

ಪದವಿಂಗಡಣೆ:
ಸುದ್ದಿಯಿಲ್ಲದೆ +ಹೋದ +ಪಾಂಡವರ್
ಇದ್ದರಾದೊಡೆ +ಬೀದಿ+ಕಲಹದ
ಯುದ್ಧಕ್+ಎಳಸದೆ +ತಿರುಗಿಸುವುದ್+ಒಬ್ಬನನು +ಕರಿಪುರಿಗೆ
ಉದ್ದುರುಟುತನ +ಬೇಡ +ಮಲ್ಲರೆ
ಗೆದ್ದು +ಬರಲೀ+ ರಾಜಕಾರ್ಯವ
ಬುದ್ಧಿ +ಮಾರ್ಗವ್+ಇದೀಗ+ ಪಯಣವ +ಮಾಡಿ +ನೀವೆಂದ

ಅಚ್ಚರಿ:
(೧) ಹಸ್ತಿನಾಪುರಿಯನ್ನು ಕರಿಪುರಿ ಎಂದು ಕರೆದಿರುವುದು

ಪದ್ಯ ೯: ಕೌರವನು ಮಲ್ಲರಿಗೆ ಏನು ಹೇಳಿದನು?

ಈ ಪರಿಯ ತಂತಮ್ಮ ಶೌರ್ಯ ಪ್ರ
ತಾಪವನು ವಿಸ್ತರಿಸೆ ಕೌರವ
ಭೂಪನೆಂದನು ನೀವು ದಕ್ಷಿಣ ಮತ್ಸ್ಯಪುರವರಕೆ
ಪೋಪುದಲ್ಲಿಯೆ ಮಲ್ಲವಿದ್ಯೆಯ
ತೋಪ ಮೆರೆವುದು ಭೀಮನಿದ್ದರೆ
ಆಪುರದಲೊತ್ತೊತ್ತಿ ಹೊಗಳಿಸಿ ನಿಮ್ಮ ಬಿರುದುಗಳ (ವಿರಾಟ ಪರ್ವ, ೪ ಸಂಧಿ, ೯ ಪದ್ಯ)

ತಾತ್ಪರ್ಯ:
ಮಲ್ಲರು ಬೊಬ್ಬೊಬ್ಬರೂ ತಮ್ಮ ಪ್ರತಾಪವನ್ನು ಹೇಳುತ್ತಿರಲು ಕೌರವನು, ನೀವು ದಕ್ಷಿಣ ದಿಕ್ಕಿನಲ್ಲಿರುವ ಮತ್ಸ್ಯನಗರಕ್ಕೆ ಹೋಗಿ ನಿಮ್ಮ ಮಲ್ಲವಿದ್ಯೆಯ ಹಿರಿಮೆಯನ್ನು ಹೇಳಿ, ಆ ಊರಿನಲ್ಲಿ ನಿಮ್ಮ ಬಿರುದುಗಳನ್ನು ಒತ್ತೊತ್ತಿ ಹೇಳಿರಿ, ಅಲ್ಲಿ ಭೀಮನೇನಾದರೂ ಇದ್ದರೆ ಅವನು ಇದನ್ನು ಸಹಿಸುವುದಿಲ್ಲ ಎಂದು ಹೇಳಿದನು.

ಅರ್ಥ:
ಪರಿ: ರೀತಿ; ಶೌರ್ಯ: ಸಾಹಸ, ಪರಾಕ್ರಮ; ಪ್ರತಾಪ: ಪರಾಕ್ರಮ; ವಿಸ್ತರ: ಹಬ್ಬುಗೆ, ವಿಸ್ತಾರ; ಭೂಪ: ರಾಜ; ಪುರ: ಊರು; ಪೋಪು: ಹೋಗು; ಮಲ್ಲ: ಜಟ್ಟಿ; ತೋಪು: ಸಮೂಹ, ಪ್ರದರ್ಶನ; ಮೆರೆ: ಹೊಳೆ, ಪ್ರಕಾಶಿಸು; ಪುರ: ಊರು; ಒತ್ತು: ಹತ್ತಿರ, ಮುತ್ತು; ಹೊಗಳು: ಸ್ತುತಿ, ಕೊಂಡಾಟ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು;

ಪದವಿಂಗಡಣೆ:
ಈ +ಪರಿಯ +ತಂತಮ್ಮ +ಶೌರ್ಯ +ಪ್ರ
ತಾಪವನು +ವಿಸ್ತರಿಸೆ +ಕೌರವ
ಭೂಪನೆಂದನು +ನೀವು +ದಕ್ಷಿಣ +ಮತ್ಸ್ಯ+ಪುರವರಕೆ
ಪೋಪುದ್+ಅಲ್ಲಿಯೆ+ ಮಲ್ಲವಿದ್ಯೆಯ
ತೋಪ +ಮೆರೆವುದು+ ಭೀಮನಿದ್ದರೆ
ಆ+ಪುರದಲ್+ಒತ್ತೊತ್ತಿ +ಹೊಗಳಿಸಿ+ ನಿಮ್ಮ +ಬಿರುದುಗಳ

ಅಚ್ಚರಿ:
(೧) ತಾಪ, ಭೂಪ, ತೋಪ – ಪ್ರಾಸ ಪದಗಳು
(೨) ಭೀಮನನ್ನು ಕೆಣಕುವ ಪರಿ – ಭೀಮನಿದ್ದರೆ ಆ ಪುರದಲೊತ್ತೊತ್ತಿ ಹೊಗಳಿಸಿ ನಿಮ್ಮ ಬಿರುದುಗಳ