ಪದ್ಯ ೯೬: ಕೀಚಕನ ತಮ್ಮಂದಿರು ಹೇಗೆ ದುಃಖಿಸಿದರು?

ಆರು ಗತಿಯೆಮಗಕಟ ಕೀಚಕ
ವೀರ ದೇಸಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರ ಕರ್ಮರು ನಿನ್ನ ಕೊಂದವ
ರಾರು ಹಾಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ (ವಿರಾಟ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ಕೀಚಕನ ತಮ್ಮಂದಿರು ಅವನ ದೇಹವನ್ನು ನೋಡಿ ದುಃಖತಪ್ತರಾಗಿ, ಅಯ್ಯೋ ವೀರ ಕೀಚಕನೇ, ನಮಗೆ ಇನ್ನಾರು ಗತಿ, ನಾವು ಅನಾಥರಾದೆವೆಂದು ದುಃಖಿಸಿ ಅವನ ದೇಹವನ್ನು ತಬ್ಬಿಕೊಂಡರು. ನಿನ್ನ ಕೊಂದ ಕ್ರೂರಿಗಳಾರು ಎನ್ನುತ್ತಾ ಹಾಹಾಕಾರ ಮಾಡುತ್ತಿರುವುದನ್ನು ದ್ರೌಪದಿಯು ನೋಡಿ ಮುಗುಳುನಗೆಯನ್ನು ಬೀರಿದಳು.

ಅರ್ಥ:
ಗತಿ: ಮಾರ್ಗ, ಸ್ಥಿತಿ; ಅಕಟ: ಅಯ್ಯೋ; ವೀರ: ಶೂರ; ದೇಸಿಗ:ದೇಶದ ನಿವಾಸಿ, ಅನಾಥ; ಸೇರು: ಜೊತೆ; ಹಲುಬು: ದುಃಖಪಡು; ತಕ್ಕೈಸು: ತಬ್ಬಿಕೊ; ಕ್ರೂರ: ದುಷ್ಟ; ಕರ್ಮ: ಕೆಲಸ; ಕೊಲ್ಲು: ಸಾಯಿಸು; ವಾರಿಜಾನನೆ: ಕಮಲದಂತ ಮುಖವುಳ್ಳವಳು (ದ್ರೌಪದಿ); ಮುಗುಳುನಗೆ: ಹಸನ್ಮುಖಿ; ನೋಡು: ವೀಕ್ಷಿಸು; ಖಳ: ದುಷ್ಟ;

ಪದವಿಂಗಡಣೆ:
ಆರು +ಗತಿ+ಎಮಗ್+ಅಕಟ +ಕೀಚಕ
ವೀರ +ದೇಸಿಗರಾದೆವಾವ್
ಇನ್ನಾರ +ಸೇರುವೆವೆನುತ +ಹಲುಬಿದರ್+ಅವನ +ತಕ್ಕೈಸಿ
ಕ್ರೂರ +ಕರ್ಮರು +ನಿನ್ನ +ಕೊಂದವ
ರಾರು +ಹಾಹಾ+ಎನುತ +ಹಲುಬಲು
ವಾರಿಜಾನನೆ +ಮುಗುಳುನಗೆಯಲಿ +ನೋಡಿದಳು +ಖಳರ

ಅಚ್ಚರಿ:
(೧) ದುಃಖವನ್ನು ಹೇಳುವ ಪರಿ – ಆರು ಗತಿಯೆಮಗಕಟ, ದೇಸಿಗರಾದೆವಾವ್

ನಿಮ್ಮ ಟಿಪ್ಪಣಿ ಬರೆಯಿರಿ