ಪದ್ಯ ೯೦: ಭೀಮನು ಕೀಚಕನನ್ನು ಹೇಗೆ ಬಡಿದನು?

ಎರಗಿದೊಡೆ ಕೀಚಕನ ಗಾಯಕೆ
ತರಹರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದೊಳೌಡನೊಡೆಯುಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ (ವಿರಾಟ ಪರ್ವ, ೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೀಚಕನ ಒಂದಾನೊಂದು ಪೆಟ್ಟನ್ನು ಭೀಮನು ಸಹಿಸಿಕೊಂಡು ಮಂಡಿ ಹಾಕಿ ಕುಳಿತು, ಅವನ ಪೆಟ್ಟುಗಳನ್ನು ತಪ್ಪಿಸಿಕೊಂಡು, ಮೇಲೆದ್ದು ರೋಷದಿಂದ ತುಟಿಯನ್ನು ಕಚ್ಚಿ ಬರಸಿಡಿಲು ಪರ್ವತದ ಶಿಖರವನ್ನು ಅಪ್ಪಳಿಸುವಂತೆ, ಮುಷ್ಟಿಕಟ್ಟಿ ಬಾಹು ಸತ್ವದಿಂದ ಕಿಚಕನ ನೆತ್ತಿಯನ್ನು ಬಡಿದನು.

ಅರ್ಥ:
ಎರಗು: ಬಾಗು; ಗಾಯ: ಪೆಟ್ಟು; ತರಹರಿಸು: ತಡಮಾಡು; ಕಲಿ: ಶೂರ; ಮಂಡಿಸು: ಬಾಗಿಸು; ಮರೆ: ತಪ್ಪಿಸು; ಮುರಿ: ಸೀಳು; ಎದ್ದು: ಮೇಲೇಳು; ರೋಷ: ಕೋಪಲ್ ಔಡು: ಕೆಳತುಟಿ, ಹಲ್ಲಿನಿಂದ ಕಚ್ಚು; ಉಗಿ: ಇರಿತ, ತಿವಿತ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಪರ್ವತ: ಬೆಟ್ಟ; ಶಿಖರ: ತುದಿ; ಖಳ: ದುಷ್ಟ; ನೆತ್ತಿ: ತಲೆ; ರಣಧೀರ: ಪರಾಕ್ರಮಿ; ಉನ್ನತ: ಹಿರಿಯ, ಉತ್ತಮ; ಬಾಹು: ತೋಳು, ಭುಜ; ಸತ್ವ: ಶಕ್ತಿ, ಬಲ;

ಪದವಿಂಗಡಣೆ:
ಎರಗಿದೊಡೆ +ಕೀಚಕನ +ಗಾಯಕೆ
ತರಹರಿಸಿ+ ಕಲಿಭೀಮ +ಮಂಡಿಸಿ
ಮರೆವಡೆದು +ಮುರಿದೆದ್ದು +ರೋಷದೊಳ್+ಔಡನ್+ಒಡೆ+ಉಗಿದು
ಬರಸಿಡಿಲು +ಪರ್ವತದ +ಶಿಖರವನ್
ಎರಗುವಂತಿರೆ +ಖಳನ +ನೆತ್ತಿಯನ್
ಎರಗಿದನು+ ರಣಧೀರನ್+ಉನ್ನತ +ಬಾಹು+ಸತ್ವದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬರಸಿಡಿಲು ಪರ್ವತದ ಶಿಖರವನೆರಗುವಂತಿರೆ
(೨) ಕಲಿ, ರಣಧೀರ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ