ಪದ್ಯ ೯೦: ಭೀಮನು ಕೀಚಕನನ್ನು ಹೇಗೆ ಬಡಿದನು?

ಎರಗಿದೊಡೆ ಕೀಚಕನ ಗಾಯಕೆ
ತರಹರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದೊಳೌಡನೊಡೆಯುಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ (ವಿರಾಟ ಪರ್ವ, ೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೀಚಕನ ಒಂದಾನೊಂದು ಪೆಟ್ಟನ್ನು ಭೀಮನು ಸಹಿಸಿಕೊಂಡು ಮಂಡಿ ಹಾಕಿ ಕುಳಿತು, ಅವನ ಪೆಟ್ಟುಗಳನ್ನು ತಪ್ಪಿಸಿಕೊಂಡು, ಮೇಲೆದ್ದು ರೋಷದಿಂದ ತುಟಿಯನ್ನು ಕಚ್ಚಿ ಬರಸಿಡಿಲು ಪರ್ವತದ ಶಿಖರವನ್ನು ಅಪ್ಪಳಿಸುವಂತೆ, ಮುಷ್ಟಿಕಟ್ಟಿ ಬಾಹು ಸತ್ವದಿಂದ ಕಿಚಕನ ನೆತ್ತಿಯನ್ನು ಬಡಿದನು.

ಅರ್ಥ:
ಎರಗು: ಬಾಗು; ಗಾಯ: ಪೆಟ್ಟು; ತರಹರಿಸು: ತಡಮಾಡು; ಕಲಿ: ಶೂರ; ಮಂಡಿಸು: ಬಾಗಿಸು; ಮರೆ: ತಪ್ಪಿಸು; ಮುರಿ: ಸೀಳು; ಎದ್ದು: ಮೇಲೇಳು; ರೋಷ: ಕೋಪಲ್ ಔಡು: ಕೆಳತುಟಿ, ಹಲ್ಲಿನಿಂದ ಕಚ್ಚು; ಉಗಿ: ಇರಿತ, ತಿವಿತ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಪರ್ವತ: ಬೆಟ್ಟ; ಶಿಖರ: ತುದಿ; ಖಳ: ದುಷ್ಟ; ನೆತ್ತಿ: ತಲೆ; ರಣಧೀರ: ಪರಾಕ್ರಮಿ; ಉನ್ನತ: ಹಿರಿಯ, ಉತ್ತಮ; ಬಾಹು: ತೋಳು, ಭುಜ; ಸತ್ವ: ಶಕ್ತಿ, ಬಲ;

ಪದವಿಂಗಡಣೆ:
ಎರಗಿದೊಡೆ +ಕೀಚಕನ +ಗಾಯಕೆ
ತರಹರಿಸಿ+ ಕಲಿಭೀಮ +ಮಂಡಿಸಿ
ಮರೆವಡೆದು +ಮುರಿದೆದ್ದು +ರೋಷದೊಳ್+ಔಡನ್+ಒಡೆ+ಉಗಿದು
ಬರಸಿಡಿಲು +ಪರ್ವತದ +ಶಿಖರವನ್
ಎರಗುವಂತಿರೆ +ಖಳನ +ನೆತ್ತಿಯನ್
ಎರಗಿದನು+ ರಣಧೀರನ್+ಉನ್ನತ +ಬಾಹು+ಸತ್ವದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬರಸಿಡಿಲು ಪರ್ವತದ ಶಿಖರವನೆರಗುವಂತಿರೆ
(೨) ಕಲಿ, ರಣಧೀರ – ಸಮನಾರ್ಥಕ ಪದ

ಪದ್ಯ ೮೯: ದ್ರೌಪದಿಯು ಹೋರಾಟವನ್ನು ಹೇಗೆ ಆನಂದಿಸಿದಳು?

ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯೊಡೆ
ಬವರಿಯಲಿ ಟೊಣೆದೌಕಿದೊಡೆ ಮಡಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ (ವಿರಾಟ ಪರ್ವ, ೩ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕೀಚಕನು ಭೀಮನನ್ನು ತಿವಿಯಲು, ಭೀಮನು ಕೀಚಕನ ಮೇಲೆ ಕವಿದು ಬಿದ್ದನು. ಒತ್ತಿ ಹೊಡೆದರೆ, ಸುತ್ತಿ ಇರಿದರು, ಇರಿತವನ್ನು ಲೆಕ್ಕಿಸದೆ ಬಾಗಿ ಪ್ರಹಾರಮಾಡಿದರು. ಎರಡು ಮಂದರ ಪರ್ವತಗಳು ಹೋರಾಡುವಂತೆ ಭೀಮ ಕೀಚಕರು ಸೆಣಸುತ್ತಿರಲು ದ್ರೌಪದಿಯು ಹೊಯ್ಲುಗಳ ಹೋರಾಟವನ್ನು ನೋಡಿ ನಗುತ್ತಿದ್ದಳು.

ಅರ್ಥ:
ತಿವಿ: ಚುಚ್ಚು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮಾರುತಿ: ಭೀಮ; ಕವಿ: ಆವರಿಸು; ಹೆಣಗು: ಹೋರಾಡು, ಕಾಳಗ ಮಾಡು; ಅಡಸು: ಬಿಗಿಯಾಗಿ ಒತ್ತು; ಹೊಯ್ದು: ಹೊಡೆದು; ಬವರಿ: ತಿರುಗುವುದು; ಟೊಣೆ: ಇರಿ, ತಿವಿ; ಔಕು: ಒತ್ತು; ಮಡ: ಪಾದದ ಹಿಂಭಾಗ, ಹಿಮ್ಮಡಿ; ಹೊಕ್ಕು: ಸೇರು; ಸವಡಿ: ಜೊತೆ, ಜೋಡಿ; ಪವನಸುತ: ವಾಯುಪುತ್ರ (ಭೀಮ); ಒಪ್ಪು: ಒಪ್ಪಿಗೆ, ಸಮ್ಮತಿ; ಯುವತಿ: ಹೆಣ್ಣು; ನಗು: ಹಸನ್ಮುಖಿ; ಆಲಿಸು: ಕೇಳು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ;

ಪದವಿಂಗಡಣೆ:
ತಿವಿದನ್+ಅವನ್+ಉರವಣಿಸಿ+ ಮಾರುತಿ
ಕವಿದು +ಹೆಣಗಿದನ್+ಅಡಸಿ +ಹೊಯ್ದೊಡೆ
ಬವರಿಯಲಿ +ಟೊಣೆದ್+ಔಕಿದೊಡೆ +ಮಡ+ಮುರಿಯದ್+ಒಳಹೊಕ್ಕು
ಸವಡಿ +ಮಂದರದಂತೆ +ಕೀಚಕ
ಪವನಸುತರ್+ಒಪ್ಪಿದರು +ಭೀಮನ
ಯುವತಿ+ ನಗುತ್+ಆಲಿಸುತಲಿದ್ದಳು +ಹೊಯ್ಲ +ಹೋರಟೆಯ

ಅಚ್ಚರಿ:
(೧) ಮಾರುತಿ, ಪವನಸುತ – ಭೀಮನಿಗೆ ಬಳಸಿದ ಹೆಸರು;
(೨) ಉಪಮಾನದ ಪ್ರಯೋಗ – ಸವಡಿ ಮಂದರದಂತೆ ಕೀಚಕ ಪವನಸುತರೊಪ್ಪಿದರು

ಪದ್ಯ ೮೮: ಭೀಮನ ಕೀಚಕನ ಕಾದಾಟ ಹೇಗೆ ಪ್ರಾರಂಭವಾಯಿತು?

ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು (ವಿರಾಟ ಪರ್ವ, ೩ ಸಂಧಿ, ೮೮ ಪದ್ಯ)

ತಾತ್ಪರ್ಯ:
ಕಾಮದಿಂದ ದೀನನಾಗಿದ್ದ ಕೀಚಕನು ಎಲೇ ಚಪಲೆ ಇದೇನು, ಹೋಗು ಎಂದು ಮುಂಗೈಯಲ್ಲಿ ಭೀಮನನ್ನು ಸರಿಸಿದನು. ಭೀಮನು ಕಿಚಕನ ಹಿಂದೆ ನುಗ್ಗಿ ಅವನ ತುರುಬನ್ನು ಹಿಡಿದನು, ಆ ಹಿಡಿತದಿಂದ ಕಳವಳಿಸಿದ ಕೀಚಕನಿಗೆ ಪರಿಸ್ಥಿತಿಯ ಅರಿವಾಯಿತು, ಇದು ಹೆಂಗಸಲ್ಲ, ಯಾರೋ ಮೋಸಗಾರನಾದ ದ್ರೋಹಿ, ಎಂದು ತಿಳಿದು ಕೀಚಕನು ಇವನ ಕರುಳನ್ನು ಬಿಗಿ ಎಂದು ಒಳಹೊಕ್ಕು ಕಾದಿದನು.

ಅರ್ಥ:
ಚಪಳೆ: ಚಂಚಲೆ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಹಾಯ್ದು: ಮೇಲೆ ಬೀಳು; ಕೃಪಣ: ದುಷ್ಟ; ಮತಿ: ಬುದ್ಧಿ; ಮುಂಗೈ: ಮುಂದಿನ ಹಸ್ತ; ಅನಿಲಜ: ವಾಯು ಪುತ್ರ; ಅಪರ: ಬೇರೆಯ; ಭಾಗ: ಅಂಶ, ಪಾಲು; ಹಿಡಿ: ಬಂಧಿಸು; ತುರುಬು: ಕೂದಲಿನ ಗಂಟು, ಮುಡಿ; ವಿಪುಳ: ಹೆಚ್ಚು, ಜಾಸ್ತಿ; ಬಲ: ಶಕ್ತಿ; ವಿಪುಳಬಲ: ಪರಾಕ್ರಮಿ; ಕಳವಳ: ತಳಮಳ, ಗೊಂದಲ; ಕುಪಿತ: ಕೋಪ; ಹೆಂಗುಸು: ಹೆಣ್ಣು; ಅಪಸದ: ನೀಚ; ತೆಗೆ: ಈಚೆಗೆ ತರು, ಹೊರತರು; ಕರುಳು: ಪಚನಾಂಗದ ಭಾಗ; ಹೊಕ್ಕು: ಸೇರು; ಹೆಣಗು: ಹೋರಾಡು, ಕಾಳಗ ಮಾಡು;

ಪದವಿಂಗಡಣೆ:
ಚಪಳೆ +ಫಡ +ಹೋಗೆನುತ +ಹಾಯ್ದನು
ಕೃಪಣಮತಿ +ಮುಂಗೈಯಲ್+ಅನಿಲಜನ್
ಅಪರಭಾಗಕೆ+ ಹಾಯ್ದು +ಹಿಡಿದನು +ಕೀಚಕನ +ತುರುಬ
ವಿಪುಳಬಲ +ಕಳವಳಿಸಿದನು +ಕಡು
ಕುಪಿತನಾದನು +ಹೆಂಗುಸಲ್+ಇವನ್
ಅಪಸದನು +ತೆಗೆ +ಕರುಳನ್+ಎನುತ್+ಒಳಹೊಕ್ಕು +ಹೆಣಗಿದನು

ಅಚ್ಚರಿ:
(೧) ಕೀಚಕನು ಬಯ್ದ ಪರಿ – ಚಪಳೆ ಫಡ ಹೋಗೆನುತ ಹಾಯ್ದನು ಕೃಪಣಮತಿ

ಪದ್ಯ ೮೭: ಭೀಮನು ಕೀಚಕನಿಗೆ ಹೇಗೆ ಉತ್ತರಿಸಿದನು?

ಎಲೆಗೆ ಕಲು ಮೈಯಾದೆ ಕಡು ಕೋ
ಮಲತೆಯೆತ್ತಲು ಕರ್ಕಶಾಂಗದ
ಬಲುಹಿದೆತ್ತಲು ಮಾಯವೇಷ ಧರಿಸಿದೆಯಾ ಮೇಣು
ತಿಳುಹೆನಲು ಕೇಳೆಲವೊ ಪರಸತಿ
ಗಳುಪಿದಾತಂಗಮೃತ ವಿಷ ಕೋ
ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ (ವಿರಾಟ ಪರ್ವ, ೩ ಸಂಧಿ, ೮೭ ಪದ್ಯ)

ತಾತ್ಪರ್ಯ:
ಎಲೆ ಸೈರಂಧ್ರಿ, ನಿನ್ನ ಮೈ ಕಲ್ಲಾಗಿದೆ, ಅತಿಶಯ ಕೋಮಲತೆಯಲ್ಲಿ ಕರ್ಕಶಾಂಗದ ಗಡುಸು ಇದೇನು, ನೀನೇನಾದರೂ ಮಾಯಾವೇಷವನ್ನು ಧರಿಸಿದೆಯೋ ಹೇಗೆ ನಿಜ ಹೇಳು ಎಂದು ಕೀಚಕನು ಕೇಳಲು, ಭೀಮನು, ಎಲವೋ ಪರಸತಿಯನ್ನು ಮೋಹಿಸಿದವನಿಗೆ ಅಮೃತವು ವಿಷವಾಗುತ್ತದೆ, ಮೃದುತ್ವ ಕರ್ಕಶವಾಗುತ್ತದೆ ಎಂದು ಕೀಚಕನ ಮುಂದಲೆಯನ್ನು ಹಿಡಿದನು.

ಅರ್ಥ:
ಕಲು: ಕಲ್ಲು, ಗಟ್ಟಿ; ಮೈ: ತನು; ಕಡು: ತುಂಬ; ಕೋಮಲ: ಮೃದು; ಕರ್ಕಶ: ಒರಟು, ಕರ್ಕಶ; ಅಂಗ: ದೇಹ; ಬಲುಹು: ದೃಢತೆ; ಮಾಯ: ಇಂದ್ರಜಾಲ; ವೇಷ: ಉಡುಗೆ ತೊಡುಗೆ; ಧರಿಸು: ಹಿಡಿ, ತೆಗೆದುಕೊಳ್ಳು; ಮೇಣು: ಮತ್ತು, ಅಥವ; ತಿಳುಹು: ಹೇಳು; ಕೇಳು: ಆಲಿಸು; ಪರಸತಿ: ಅನ್ಯರ ಹೆಂಡತಿ; ಅಳುಪು: ಬಯಸು; ಅಮೃತ: ಸುಧೆ; ವಿಷ: ಗರಳ; ತುಡುಕು: ಹೋರಾಡು, ಸೆಣಸು; ಮುಂದಲೆ: ತಲೆಯ ಮುಂಭಾಗ;

ಪದವಿಂಗಡಣೆ:
ಎಲೆಗೆ +ಕಲು +ಮೈಯಾದೆ +ಕಡು +ಕೋ
ಮಲತೆ+ಎತ್ತಲು +ಕರ್ಕಶಾಂಗದ
ಬಲುಹಿದ್+ಎತ್ತಲು +ಮಾಯವೇಷ+ ಧರಿಸಿದೆಯಾ +ಮೇಣು
ತಿಳುಹೆನಲು+ ಕೇಳ್+ಎಲವೊ +ಪರಸತಿಗ್
ಅಳುಪಿದ್+ಆತಂಗ್+ಅಮೃತ +ವಿಷ+ ಕೋ
ಮಲತೆ +ಕರ್ಕಶವಹುದ್+ಎನುತ +ತುಡುಕಿದನು +ಮುಂದಲೆಯ

ಅಚ್ಚರಿ:
(೧) ಭೀಮನ ನುಡಿ – ಪರಸತಿಗಳುಪಿದಾತಂಗಮೃತ ವಿಷ ಕೋಮಲತೆ ಕರ್ಕಶವಹುದು

ಪದ್ಯ ೮೬: ಕೀಚಕನು ಏಕೆ ಗಾಬರಿಗೊಂಡನು?

ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ (ವಿರಾಟ ಪರ್ವ, ೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ನನಗೆ ಸೋಲದ ಗಂಡಸರೇ ಇಲ್ಲ. ನನಗೆ ನೀನು ಸರಿಸಾಟಿ, ನಿನಗೆ ಮನಸಾರೆ ಒಲಿದಿದ್ದೇನೆ, ನನ್ನ ಹೆಣ್ಣುತನವನ್ನು ನೀನು ನೋಡು ಎಂದು ಭೀಮನು ಹೇಳಲು, ಕೀಚಕನು ಸಂತೋಷದಿಂದ ಉಬ್ಬಿ ಭೀಮನ ಮೈದಡವಿದನು. ಗುಂಡಾಕಾರದ ಸ್ತನಗಳನ್ನು ಕಾಣದೆ ಹೆದರಿ ಹೀಗೆಂದನು.

ಅರ್ಥ:
ಪುರುಷ: ಗಂಡು; ಸೋಲು: ಪರಾಭವ; ಪಾಸಟಿ: ಸಮಾನ, ಹೋಲಿಕೆ; ಮನ: ಮನಸ್ಸು; ಒಲಿದು: ಬಯಸು, ಸಮ್ಮತಿಸು; ಹೆಣ್ಣು: ಸ್ತ್ರೀ; ಅನುವು: ಸೊಗಸು; ಹರುಷ: ಸಂತಸ; ಉಬ್ಬು: ಹೆಚ್ಚಾಗು; ಅನಿಲಜ: ವಾಯುಪುತ್ರ; ಮೈದಡವು: ದೇಹವನ್ನು ಅಲುಗಾಡಿಸು; ವೃತ್ತ: ಗುಂಡಾಕಾರ; ಸ್ತನ: ಮೊಲೆ; ಕಾಣು: ತೋರು; ಹೆದರು: ಅಂಜಿ; ಬಳಿಕ: ನಂತರ; ನಗುತ: ಸಂತಸ;

ಪದವಿಂಗಡಣೆ:
ಎನಗೆ +ಪುರುಷರು +ಸೋಲದ್+ಅವರಿಲ್
ಎನಗೆ +ಪಾಸಟಿ +ನೀನು +ನಿನಗಾ
ಮನವೊಲಿದೆ +ನೀ +ನೋಡು +ತನ್ನಯ +ಹೆಣ್ಣುತನದ್+ಅನುವ
ಎನಲು+ ಹರುಷದಲ್+ಉಬ್ಬಿ +ಕೀಚಕನ್
ಅನಿಲಜನ+ ಮೈದಡವಿ+ ವೃತ್ತ
ಸ್ತನವ +ಕಾಣದೆ +ಹೆದರಿ +ಬಳಿಕಿಂತೆಂದನ್+ಅವ+ ನಗುತ

ಅಚ್ಚರಿ:
(೧) ಕೀಚಕನು ಅಂಜಲು ಕಾರಣ – ವೃತ್ತ ಸ್ತನವ ಕಾಣದೆ ಹೆದರಿ