ಪದ್ಯ ೬೭: ಭೀಮನು ದ್ರೌಪದಿಗೆ ಹೇಗೆ ಅಭಯವನ್ನು ನೀಡಿದನು?

ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ
ಅರಸಿ ಬಿಡುಬಿಡು ಖಾತಿಯನು ವಿ
ಸ್ತರಿಸಲೇಕಿನ್ನಣ್ಣನಾಜ್ಞೆಯ
ಗೆರೆಯದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ (ವಿರಾಟ ಪರ್ವ, ೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆಲಂಗಿಸಿ, ಭೀಮನು ಆಕೆಯ ಮುಂಗುರುಳನ್ನು ಮೃದುವಾಗಿ ಸವರಿದನು, ಗಲ್ಲವನ್ನೊರೆಸಿ, ತಲೆಯ ಮೇಲೆ ಕೈಯಾಡಿಸಿ ಸಮಾಧಾನ ಪಡಿಸಿದನು, ಮಂಚದ ಬಳಿಯಿದ್ದ ಪಾತ್ರೆಯಿಂದ ನೀರನ್ನು ತೆಗೆದು ಅವಳು ಮುಖಕಮಲವನ್ನು ತೊಳೆದು, ರಾಣಿ, ಇನ್ನ ಸಿಟ್ಟನ್ನು ಬಿಡು, ಹೆಚ್ಚಿಗೆ ಹೇಳಲಾರೆ, ನಮ್ಮಣ್ಣನ ಆಜ್ಞೆಯ ಗೆರೆಯನ್ನು ನಾನು ದಾಟಿದೆ ದಾಟಿದೆ, ನೀನಿನ್ನು ತೆರಳು ಎಂದು ಅಭಯವನ್ನು ನೀಡಿದನು.

ಅರ್ಥ:
ಕುರುಳು: ಗುಂಗುರು ಕೂದಲು; ನೇವರಿಸು: ಮೃದುವಾಗಿ ಸವರು; ಗಲ್ಲ: ಕೆನ್ನೆ; ಒರಸು: ಸಾರಿಸು; ಮುಂಡಾಡು: ಮುದ್ದಾಡು, ಪ್ರೀತಿಸು; ಮಂಚ: ಪಲ್ಲಂಗ; ಹೊರೆ: ಹತ್ತಿರ, ಸಮೀಪ; ಗಿಂಡಿ: ಕಿರಿದಾದ ಬಾಯುಳ್ಳ ಪಾತ್ರೆ; ನೀರು: ಜಲ; ತೊಳೆ: ಶುದ್ಧಗೊಳಿಸು; ಮುಖಾಂಬುಜ: ಮುಖಕಮಲ; ಮುಖ: ಆನನ; ಅಂಬುಜ: ಕಮಲ; ಅರಸಿ: ರಾಣಿ; ಬಿಡು: ತೊರೆ; ಖಾತಿ: ಕೋಪ; ವಿಸ್ತರಿಸು: ಹರಡು; ಅಣ್ಣ: ಹಿರಿಯ ಸಹೋದರ; ಆಜ್ಞೆ: ಅಪ್ಪಣೆ; ಗೆರೆ: ರೇಖೆ; ದಾಟು: ಮೀರು; ಹೋಗು: ತೆರಳು;

ಪದವಿಂಗಡಣೆ:
ಕುರುಳ +ನೇವರಿಸಿದನು +ಗಲ್ಲವನ್
ಒರಸಿ+ ಮುಂಡಾಡಿದನು+ ಮಂಚದ
ಹೊರೆಯ +ಗಿಂಡಿಯ +ನೀರಿನಲಿ+ ತೊಳೆದನು+ ಮುಖಾಂಬುಜವ
ಅರಸಿ+ ಬಿಡು+ಬಿಡು+ ಖಾತಿಯನು+ ವಿ
ಸ್ತರಿಸಲೇಕ್+ಇನ್ನ+ಅಣ್ಣನ+ಆಜ್ಞೆಯ
ಗೆರೆಯ+ದಾಂಟಿದೆ+ ದಾಂಟಿದೆನು+ ಹೋಗೆಂದನಾ +ಭೀಮ

ಅಚ್ಚರಿ:
(೧) ಭೀಮನ ಪ್ರೀತಿಯ ಅಭಿವ್ಯಕ್ತಿ – ಕುರುಳ ನೇವರಿಸಿದನು ಗಲ್ಲವನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ

ಪದ್ಯ ೬೬: ಭೀಮನು ದ್ರೌಪದಿಯ ಮಾತನ್ನು ಕೇಳಿ ಏನು ಮಾಡಿದನು?

ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಿಂಡಿದನು ಹಗೆಗಳನು ಮನದೊಳಗೆ
ತನು ಪುಳಕವುಬ್ಬರಿಸೆ ದಿಮ್ಮನೆ
ವನಿತೆಯನು ತೆಗೆದಪ್ಪಿ ವರಲೋ
ಚನ ಪಯೋಧಾರೆಗಳ ತೊಡೆದನು ಭೀಮ ಸೆರಗಿನಲಿ (ವಿರಾಟ ಪರ್ವ, ೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾಂಡವರನ್ನು ಹಂಗಿಸಿ ಕೊನೆಯದಾಗಿ ಸಾಯುವೆನೆಂದು ಹೇಳಿ ನಮಸ್ಕರಿಸಲು, ಭೀಮನ ಅಂತಃಕರಣ ಕಲುಕಿ ಅವನ ಕಣ್ಣು ದುಃಖಭರಿತವಾಗಿ ನೀರಿನಿಂದ ತುಂಬಿತು, ಅವನ ಮನಸ್ಸು ಕರಗಿತು, ಶತ್ರುಗಳ ಮೇಲೆ ಕೋಪವು ಹೆಚ್ಚಿತು, ಅವರೆಲ್ಲರನ್ನೂ ಮನಸ್ಸಿನಲ್ಲೇ ಹಿಂಡಿ ಹಾಕಿದನು. ಅದರಿಂದ ರೋಮಾಂಚನಗೊಂಡು ದ್ರೌಪದಿಯನ್ನು ಬರಸೆಳೆದು ಬಿಗಿದಪ್ಪಿಕೊಂಡು ಅವಳ ಕಣ್ಣೀರನ್ನು ಉತ್ತರೀಯದ ಸೆರಗಿನಿಂದ ಒರೆಸಿದನು.

ಅರ್ಥ:
ಎನಲು: ಹೀಗೆ ಹೇಳಿ; ಕಂಬನಿ: ಕಣ್ಣೀರು; ತುಂಬು: ಭರ್ತಿಯಾಗು; ಕಡು: ಬಹಳ; ನೆನೆ: ಒದ್ದೆಯಾಗು; ಅಂತಃಕರಣ: ಮನಸ್ಸು; ರೋಷ: ಕೋಪ; ಘನತೆ: ಶ್ರೇಷ್ಠತೆ; ಹೆಚ್ಚು: ಅಧಿಕವಾಗು; ಹಿಂಡು: ತಿರುಚು; ಹಗೆ: ವೈರಿ; ಮನ: ಮನಸ್ಸು; ತನು: ದೇಹ; ಪುಳಕ: ರೋಮಾಂಚನ; ಉಬ್ಬರಿಸು: ಹೆಚ್ಚಾಗು; ದಿಮ್ಮನೆ: ಒಮ್ಮೆಲೆ; ವನಿತೆ: ಹೆಣ್ಣು; ಅಪ್ಪು: ತಬ್ಬಿಕೋ; ವರ: ಶ್ರೇಷ್ಠ; ಲೋಚನ: ಕಣ್ಣು; ಪಯೋಧಾರೆ: ನೀರಿನ ಪ್ರವಾಹ; ತೊಡೆ:ಸವರು; ಸೆರಗು: ಉತ್ತರೀಯ;

ಪದವಿಂಗಡಣೆ:
ಎನಲು +ಕಂಬನಿ+ತುಂಬಿದನು +ಕಡು
ನೆನೆದುದ್+ಅಂತಃಕರಣ +ರೋಷದ
ಘನತೆ +ಹೆಚ್ಚಿತು +ಹಿಂಡಿದನು +ಹಗೆಗಳನು +ಮನದೊಳಗೆ
ತನು+ ಪುಳಕವ್+ಉಬ್ಬರಿಸೆ+ ದಿಮ್ಮನೆ
ವನಿತೆಯನು +ತೆಗೆದಪ್ಪಿ+ ವರ+ಲೋ
ಚನ +ಪಯೋಧಾರೆಗಳ+ ತೊಡೆದನು +ಭೀಮ +ಸೆರಗಿನಲಿ

ಅಚ್ಚರಿ:
(೧) ಕಂಬನಿ, ಲೋಚನ ಪಯೋಧಾರೆ – ಸಮನಾರ್ಥಕ ಪದ
(೨) ಭೀಮನ ಕ್ರೋಧ – ರೋಷದ ಘನತೆ ಹೆಚ್ಚಿತು ಹಿಂಡಿದನು ಹಗೆಗಳನು ಮನದೊಳಗೆ
(೩) ಭೀಮನ ಪ್ರೇಮ – ದಿಮ್ಮನೆ ವನಿತೆಯನು ತೆಗೆದಪ್ಪಿ ವರಲೋಚನ ಪಯೋಧಾರೆಗಳ ತೊಡೆದನು ಭೀಮ ಸೆರಗಿನಲಿ

ಪದ್ಯ ೬೫: ದ್ರೌಪದಿಯು ಕೊನೆಯದಾಗಿ ಏನು ಹೇಳಿದಳು?

ಭೀಮ ಕೊಟ್ಟೆ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕೆ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ (ವಿರಾಟ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭೀಮಸೇನ, ನಿಮ್ಮಣ್ಣನ ಆಜ್ಞೆ ಆಭಾಧಿತವಾಗಿ ನಡೆಯಲು, ಧರ್ಮದ ಮಹಿಮೆಯನ್ನು ಧರ್ಮ ಸೂಕ್ಷ್ಮವನ್ನು ಚೆನ್ನಾಗಿ ಪರಿಶೀಲಿಸಿ, ಸಾಯಲು ನನಗೆ ಅಪ್ಪಣೆ ಕೊಟ್ಟಿರುವೆ, ಆದರೊಂದು ಪ್ರಾರ್ಥನೆ, ಹೆಣ್ಣಿನೊಂದಿನ ವಿನೋದ ಕ್ರೀಡೆಯಲ್ಲಿ ನನ್ನನ್ನು ನೆನೆಸಿಕೋ, ಕೋಪದ ಅಂಧಕಾರದಿಂದ ಮಿತಿಮೀರಿ ನಾನಾಡಿದ ಮಾತನ್ನು ಕ್ಷಮಿಸು, ಎನ್ನುತ್ತಾ ದ್ರೌಪದಿಯು ಭೀಮನ ಪಾದಗಳ ಮೇಲೆ ಬಿದ್ದಳು.

ಅರ್ಥ:
ಕೊಟ್ಟೆ: ನೀಡು; ಸಾವು: ಮರಣ; ನೇಮ: ನಿಯಮ; ಆಜ್ಞೆ: ಅನುಮತಿ, ಕಟ್ಟಳೆ; ವಿರಾಮ: ಬಿಡುವು, ವಿಶ್ರಾಂತಿ; ಬದುಕು: ಜೀವಿಸು; ಧರ್ಮ: ನಿಯಮ, ಧಾರಣ ಮಾಡಿದುದು; ಮೈಸಿರಿ: ದೇಹ ಸೌಂದರ್ಯ; ಅರಿ: ತಿಳಿ; ಕಾಮಿನಿ: ಹೆಣ್ಣು; ಕೇಳಿ: ವಿನೋದ, ಕ್ರೀಡೆ; ನೆನೆ: ಜ್ಞಾಪಿಸು; ತಾಮಸ: ಕತ್ತಲೆ, ಅಂಧಕಾರ; ಮೀರು: ಉಲ್ಲಂಘಿಸು; ನುಡಿ: ಮಾತು; ಉದ್ದಾಮ: ಶ್ರೇಷ್ಠವಾದ; ಸೈರಿಸು: ತಾಳು, ಸಹಿಸು; ಎರಗು: ನಮಸ್ಕರಿಸು; ಚರಣ: ಪಾದ;

ಪದವಿಂಗಡಣೆ:
ಭೀಮ +ಕೊಟ್ಟೆ +ತನಗೆ +ಸಾವಿನ
ನೇಮವನು +ನಿಮ್ಮಣ್ಣನಾಜ್ಞೆ +ವಿ
ರಾಮವಾಗದೆ+ ಬದುಕೆ+ ಧರ್ಮದ +ಮೈಸಿರಿಯನರಿದು
ಕಾಮಿನಿಯ +ಕೇಳಿಯಲಿ +ನೆನೆವುದು
ತಾಮಸದಿ+ ತಾ +ಮೀರಿ +ನುಡಿದ್
ಉದ್ದಾಮತೆಯ +ಸೈರಿಸುವುದೆಂದ್+ಎರಗಿದಳು +ಚರಣದಲಿ

ಅಚ್ಚರಿ:
(೧) ದ್ರೌಪದಿಯ ನೋವಿನ ನುಡಿ – ಕಾಮಿನಿಯ ಕೇಳಿಯಲಿ ನೆನೆವುದು ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದು

ಪದ್ಯ ೬೪: ದ್ರೌಪದಿ ಪಾಂಡವರಿಗೇಕೆ ಅಂಜದಿರಲು ನಿರ್ಧರಿಸಿದಳು?

ಆವ ಭಾಗ್ಯಾಧಿಕನೊ ಕೌರವ
ದೇವನರಸುಗಳೊಡೆಯತನದಲಿ
ನೀವು ಕೃಷ್ಣನ ಕೂರ್ಮೆಯಲಿ ಧರ್ಮಹಿರಿದಲಿ ಸಿಲುಕಿ
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರೆವಿರಿ
ಸಾವವಳು ನಿಮಗಂಜಲೇಕಿನ್ನೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಸಮಸ್ತ ಭರತ ಖಂಡದ ರಾಜರಿಗೆ ಚಕ್ರವರ್ತಿಯಾಗಿರುವ ಕೌರವನು ಎಂತಹ ಮಹಾಪುಣ್ಯಶಾಲಿ! ನೀವಾದರೋ ಕೃಷ್ಣನ ಪ್ರೀತಿಗೆ ಪಾತ್ರರಾಗಿ ಧರ್ಮದಲ್ಲಿ ಸಿಕ್ಕಿ ಬಿದ್ದಿದ್ದೀರಿ, ಆದುದರಿಂದ ನೀವು ಪರರ ಸೇವೆಯಲ್ಲಿ ಒಂದೇ ಸಮನೆ ಬೆಂದು ದೇಹದಲ್ಲಿ ಇನ್ನೂ ಇದ್ದೀರಿ, ಹೇಗಿದ್ದರೂ ಸಾಯುವ ನಾನು ನಿಅಮ್ಗೆ ಇನ್ನೇಕೆ ಅಂಜಬೇಕು ಎಂದು ದ್ರೌಪದಿಯು ಉದ್ಗರಿಸಿದಳು.

ಅರ್ಥ:
ಭಾಗ್ಯ: ಅದೃಷ್ಟ, ಸುದೈವ; ಅಧಿಕ: ಹೆಚ್ಚು; ಕೌರವದೇವ: ದುರ್ಯೋಧನ; ಅರಸು: ರಾಜ; ಒಡೆಯ: ನಾಯಕ; ಕೂರ್ಮೆ: ಪ್ರೀತಿ, ನಲ್ಮೆ; ಧರ್ಮ: ನಿಯಮ; ಸಿಲುಕು: ಬಂಧನ; ತಟತಟ: ಒಂದೇ ಸಮನೆ; ಲೋಗರ: ಜನರ; ಸೇವೆ: ಉಪಚಾರ; ಬೆಂದು: ಸಂಕಟಕ್ಕೊಳಗಾಗು; ಒಡಲು: ದೇಹ; ಹೊರೆ: ಭಾರ; ಸಾವು: ಮರಣ; ಅಂಜು: ಹೆದರು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಆವ +ಭಾಗ್ಯ+ಅಧಿಕನೊ+ ಕೌರವ
ದೇವನ್+ಅರಸುಗಳ್+ಒಡೆಯತನದಲಿ
ನೀವು +ಕೃಷ್ಣನ+ ಕೂರ್ಮೆಯಲಿ+ ಧರ್ಮದಲಿ +ಸಿಲುಕಿಹಿರಿ
ನೀವು +ತಟತಟವಾಗಿ+ ಲೋಗರ
ಸೇವೆಯಲಿ +ಬೆಂದ್+ಒಡಲ +ಹೊರೆವಿರಿ
ಸಾವವಳು +ನಿಮಗ್+ಅಂಜಲೇಕಿನ್ನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಪಾಂಡವರ ಸ್ಥಿತಿ – ನೀವು ಕೃಷ್ಣನ ಕೂರ್ಮೆಯಲಿ ಧರ್ಮಹಿರಿದಲಿ ಸಿಲುಕಿ

ಪದ್ಯ ೬೩: ಪಾಂಡವರಿಗಾವುದು ಬೇಡವೆಂದು ದ್ರೌಪದಿ ದುಃಖಿಸಿದಳು?

ಧರೆಯ ಭಂಡಾರವನು ರಥವನು
ಕರಿತುರಗರಥಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೂಮಿ, ಕೋಶ, ಚತುರಂಗ ಸೈನ್ಯ, ಇವೆಲ್ಲವೂ ದುರ್ಯೋಧನನು ನಿಮ್ಮಿಂದ ಕಿತ್ತುಕೊಂಡು ಹೊರಯಟ್ಟಿದನು, ಉಳಿದವಳು ನಾನು, ನನ್ನನ್ನು ಈಗ ಕೀಚಕನಿಗೆ ಕೊಟ್ಟಿರಿ, ಐವರೇ ಇರಲು ನಿಮಗೆ ಅನುಕೂಲವಾಯ್ತು, ರಾಜ್ಯವಾಗಲೀ, ಹೆಂಡತಿಯಾಗಲೀ ನಿಮಗೆ ಭೂಷಣವಲ್ಲ ಅಯ್ಯೋ ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಧರೆ: ಭೂಮಿ; ಭಂಡಾರ: ಬೊಕ್ಕಸ, ಖಜಾನೆ; ರಥ: ತೇರು; ಕರಿ: ಆನೆ; ತುರಗ: ಕುದುರೆ; ಪಾಯದಳ: ಸೈನಿಕರು; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ಸೆಳೆ: ವಶಪಡಿಸಿಕೊಳ್ಳು; ಹೊರವಡಿಸು: ದೂರವಿಟ್ಟನು; ದುರುಳ: ದುಷ್ಟ; ಕೊಟ್ಟು: ನೀಡು; ಪರಿಮಿತ: ಮಿತ, ಸ್ವಲ್ಪವಾದ; ಇರವು: ಜೀವಿಸು, ಇರು; ಲೇಸು: ಒಳಿತು; ಅಕಟ: ಅಯ್ಯೋ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಹಲುಬು: ದುಃಖಿಸು;

ಪದವಿಂಗಡಣೆ:
ಧರೆಯ +ಭಂಡಾರವನು +ರಥವನು
ಕರಿ+ತುರಗ+ರಥ+ಪಾಯದಳವನು
ಕುರುಕುಲಾಗ್ರಣಿ +ಸೆಳೆದುಕೊಂಡನು +ನಿಮ್ಮ +ಹೊರವಡಿಸಿ
ದುರುಳ +ಕೀಚಕಗ್+ಎನ್ನ +ಕೊಟ್ಟಿರಿ
ಪರಿಮಿತದಲ್+ಇರವಾಯ್ತು +ನಿಮ್ಮೈ
ವರಿಗೆ +ಲೇಸಾಯ್ತ್+ಅಕಟ+ಎಂದ್+ಅಬುಜಾಕ್ಷಿ +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ಪರಿಮಿತದಲಿರವಾಯ್ತು ನಿಮ್ಮೈವರಿಗೆ

ಪದ್ಯ ೬೨: ಪಾಂಡವರನ್ನು ದ್ರೌಪದಿ ಹೇಗೆ ಬಯ್ದಳು?

ಕಾಲಯಮ ಕೆರಳಿದರೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳೆ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಪ್ರಳಯಕಾಲದ ಯಮನೇ ಕೆರಳಿ ಎದುರು ಯುದ್ಧಕ್ಕೆ ಬಂದರೂ ಅವನನ್ನು ಸೋಲಿಸುವಷ್ಟು ಸಾಮರ್ಥ್ಯವಿರುವ ನೀವು, ನನ್ನೊಬ್ಬಳನ್ನು ಆಳಲಾರಿರಿ, ಪಾಪಿಗಳಿರಾ, ನೀವು ಅಪಕೀರ್ತಿಗೂ ಹೆದರುವವರಲ್ಲ, ನಿಮಗೆ ಇಂತಹ ಸದೃಢ ತೋಳುಗಳೇಕೆ, ಕ್ಷತ್ರಿಯರಾಗಿ ಏಕೆ ಹುಟ್ಟಿದಿರಿ, ನಿಮಗೆ ಕೂಳುಹಾಕುವುದೊಂದು ಕೇಡು ಎಂದು ದ್ರೌಪದಿಯು ಪಾಂಡವರನ್ನು ನಿಂದಿಸಿದಳು.

ಅರ್ಥ:
ಕಾಲ: ಸಮಯ; ಕಾಲಯಮ: ಪ್ರಳಯಕಾಲದ ಯಮ; ಯಮ: ಮೃತ್ಯುದೇವತೆ; ಕೆರಳು: ರೇಗು; ಮುರಿ: ಸೀಳು; ಎಚ್ಚು: ಸವರು, ಬಾಣಬಿಡು; ಆಳು: ಅಧಿಕಾರ ನಡೆಸು; ಪಾಪಿ: ದುಷ್ಟ; ಅಪಕೀರ್ತಿ: ಅಪಯಶಸ್ಸು; ಅಳುಕು: ಹೆಅರು; ತೋಳು: ಬಾಹು; ಹೊರೆ: ಭಾರ; ಭೂಮೀಪಾಲ: ರಾಜ; ವಂಶ: ಕುಲ; ಉದಿಸು: ಹುಟ್ಟು; ಕೂಳು: ಊಟ; ಒಡಲು: ದೇಹ; ಹೊರು: ಹೇರು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕಾಲಯಮ+ ಕೆರಳಿದರೆ +ಮುರಿವ್
ಎಚ್ಚಾಳುತನದವರ್+ಎನ್ನನೊಬ್ಬಳೆನ್
ಆಳಲಾರಿರಿ+ ಪಾಪಿಗಳಿರ್+ಅಪಕೀರ್ತಿರ್+ಅಳುಕಿರಲ
ತೋಳ +ಹೊರೆ +ನಿಮಗೇಕೆ +ಭೂಮೀ
ಪಾಲ+ವಂಶದೊಳ್+ಉದಿಸಲೇತಕೆ
ಕೂಳುಗೇಡಿಂಗ್+ಒಡಲ+ ಹೊರುವಿರಿ+ಎಂದಳ್+ಇಂದುಮುಖಿ

ಅಚ್ಚರಿ:
(೧) ಬಯ್ಯುವ ಪರಿ – ಪಾಪಿಗಳಿರಪಕೀರ್ತಿಗಳುಕಿರಲ, ಭೂಮೀಪಾಲವಂಶದೊಳುದಿಸಲೇತಕೆ ಕೂಳುಗೇಡಿಂಗೊಡಲ ಹೊರುವಿರಿ

ಪದ್ಯ ೬೧: ದ್ರೌಪದಿಯು ಪಾಂಡವರನ್ನು ಯಾರಿಗೆ ಹೋಲಿಸಿದಳು?

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂರು
ರ್ಚಿಗಳದಾರುಂಟೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ವೈರಿಗಳು ಸುಖವಾಗಿರಲೆಂದು ಬಯಸಿ, ಶಾಂತರಾಗಿ ಬದುಕುವ ಮುಗ್ಧರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ, ಎಲ್ಲರೂ ಮೋಸವನ್ನು ದ್ವೇಷಿಸಿದರೆ, ನೀವು ಭಂಗವನ್ನು ಹೆಗಲುಕೊಟ್ಟು ಹೊರುತ್ತೀರಿ, ವೀರರೆಂಬ ಬಿರುದನ್ನು ದೂರಕ್ಕೆಸೆದು ಹೋರಿಗಳಂತೆ ಹೊಡಿಸಿಕೊಂಡು ಮೂಗುದಾರವನ್ನು ಹಾಕಿಕೊಂಡಿರುವವರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ ಎಂದು ದ್ರೌಪದಿಯು ಅತೀವ ದುಃಖದಿಂದ ಹೇಳಿದಳು.

ಅರ್ಥ:
ಹಗೆ: ವೈರತ್ವ; ತಂಪು: ತೃಪ್ತಿ, ಸಂತುಷ್ಟಿ; ಬದುಕು: ಜೀವಿಸು; ಮುಗುದ: ಕಪಟವರಿಯದ; ಭಂಗ: ಮೋಸ, ವಂಚನೆ; ಹೆಗಲು: ಭುಜ; ವಿರೋಧಿ: ವೈರಿ; ಲೋಕ: ಜಗತ್ತು; ವಿಗಡ: ಶೌರ್ಯ, ಪರಾಕ್ರಮ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿಸುಟು: ಹೊರಹಾಕು; ಬಡಿ: ಹೊಡೆ, ತಾಡಿಸು; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವ; ಮೂಗು: ನಾಸಿಕ; ಮೂಗುರ್ಚು: ಮೂಗುದಾರ ಹಾಕಿಸಿಕೊಂಡಿರುವವರು; ಹಿರಿದು: ಹೆಚ್ಚಾಗಿ; ಹಲುಬು: ದುಃಖಪಡು;

ಪದವಿಂಗಡಣೆ:
ಹಗೆಗಳಿಗೆ +ತಂಪಾಗಿ +ಬದುಕುವ
ಮುಗುದರ್+ಇನ್ನಾರುಂಟು +ಭಂಗಕೆ
ಹೆಗಲಕೊಟ್ಟಾನುವ+ ವಿರೋಧಿಗಳುಂಟೆ+ ಲೋಕದಲಿ
ವಿಗಡ+ ಬಿರುದನು +ಬಿಸುಟು +ಬಡಿಹೋ
ರಿಗಳು +ಪಾಂಡವರಂತೆ +ಮೂರು
ರ್ಚಿಗಳದ್+ಆರುಂಟೆಂದು +ದ್ರೌಪದಿ+ ಹಿರಿದು +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಗಡ ಬಿರುದನು ಬಿಸುಟು ಬಡಿಹೋರಿಗಳು ಪಾಂಡವರಂತೆ