ಪದ್ಯ ೬೦: ದ್ರೌಪದಿಯ ಸ್ಥಿತಿ ಹೇಗಿತ್ತು?

ಜನನವೇ ಪಾಂಚಾಲರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯರೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ (ವಿರಾಟ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಬಾಳನ್ನು ಒಮ್ಮೆ ನೋಡಿಕೊಳ್ಳುತ್ತಾ, ನಾನು ಜನಿಸಿದುದು ಪಾಂಚಾಲ ರಾಜನ ಮಗಳಾಗಿ, ನನ್ನ ಗಂಡಂದಿರು ಮನುಜಗಿನುಜರಿರಲಿ, ದೇವತೆಗಳಿಗೂ ಮಿಗಿಲು, ಹೀಗಿದ್ದರೂ ನನ್ನ ಪಾಲಿಗೆ ಬಂದುದೇನು, ವಿರಾಟನ ರಾನಿಯರ ಮುಡಿಯನ್ನು ಕಟ್ಟುವುದು, ಸುಗಂಧದ್ರವ್ಯವನ್ನು ಲೇಪಿಸುವುದು, ಕಾಲನ್ನೊತ್ತುವುದು, ಇದರಿಂದ ನಾನು ಉತ್ಸಾಹಗೊಳ್ಳಬೇಕು ಎಂದು ಮರುಗಿದಳು.

ಅರ್ಥ:
ಜನನ: ಹುಟ್ಟು; ರಾಯ: ರಾಜ; ಮನೆ: ಆಲಯ; ಮನ: ಮನಸ್ಸು; ವಲ್ಲಭ: ಗಂಡ, ಪತಿ; ಮನುಜ: ಮನುಷ್ಯ; ಗಣ್ಯ: ಶ್ರೇಷ್ಠ; ಗೀರ್ವಾಣ: ದೇವತೆ, ಸುರ; ಮಿಗಿಲು: ಹೆಚ್ಚು; ಬಂದು: ಒದಗಿದು; ವನಿತೆ: ಹೆಣ್ಣು; ಮುಡಿ: ತಲೆ, ಶಿರ; ಕಟ್ಟು: ಬಂಧಿಸು; ತನು: ದೇಹ; ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ಕಾಲು: ಪಾದ; ಒತ್ತು: ಲಟ್ಟಿಸು; ಕೆಲಸ: ಕಾರ್ಯ; ಉತ್ಸಾಹ: ಆಸಕ್ತಿ;

ಪದವಿಂಗಡಣೆ:
ಜನನವೇ +ಪಾಂಚಾಲ+ರಾಯನ
ಮನೆ +ಮನೋ+ವಲ್ಲಭರ್+ಅದಾರ್+ಎನೆ
ಮನುಜಗಿನುಜರು+ ಗಣ್ಯರೇ+ ಗೀರ್ವಾಣರಿಂ +ಮಿಗಿಲು
ಎನಗೆ+ ಬಂದೆಡರ್+ಈ+ ವಿರಾಟನ
ವನಿತೆಯರುಗಳ +ಮುಡಿಯ +ಕಟ್ಟುವ
ತನುವ +ತಿಗುರುವ +ಕಾಲನೊತ್ತುವ +ಕೆಲಸದುತ್ಸಾಹ

ಅಚ್ಚರಿ:
(೧) ಆಡು ಪದದ ಬಳಕೆ – ಮನುಜಗಿನುಜ

ನಿಮ್ಮ ಟಿಪ್ಪಣಿ ಬರೆಯಿರಿ