ಪದ್ಯ ೫೭: ಬೆಳಗಾಯಿತೆಂದು ಕವಿ ಹೇಗೆ ವರ್ಣಿಸಿದ್ದಾರೆ?

ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
ಪರಿಮಳದ ಪಾವುಡದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀ ಪತಿಗೆ (ವಿರಾಟ ಪರ್ವ, ೨ ಸಂಧಿ, ೫೭ ಪದ್ಯ)

ತಾತ್ಪರ್ಯ:
ಕೀಚಕನಿಗೆ ರಾತ್ರಿಯ ಒಂದೊಂದು ನಿಮಿಷವು ಯುಗದಷ್ಟು ದೀರ್ಘವಾಗಿ ತೋರಿತು, ಆ ರಾತ್ರಿಯನ್ನು ಕಳೆದ ಬಳಿಕ ಪೂರ್ವಾಚಲದಲ್ಲಿ ಸೂರ್ಯನು ಹುಟ್ಟಿ ಲೋಕವನ್ನು ಬೆಳಗಿದನು. ತಮ್ಮ ಪರಿಮಳದ ಉಡುಗೊರೆಯನ್ನು ಕಳಿಸಿ ತಾವರೆ ಹೂಗಳು ದುಂಬಿಗಳನ್ನು ಆಹ್ವಾನಿಸುತ್ತಿವೆಯೆಂದು ತೋರಿತು. ಅಷ್ಟು ಹೊತ್ತು ತಮ್ಮ ಪತಿಗಾಗಿ ಕಾಯುತ್ತಾ ತಾವೆರ್ಗಳು ಬಿಟ್ಟ ನಿಟ್ಟುಸಿರು ಚಂದ್ರನಿಗೆ ತಟ್ಟಿ ಅವನು ಕಳಾಹೀನನಾದನು.

ಅರ್ಥ:
ಅರೆಗಳಿಗೆ: ಅರ್ಧನಿಮಿಷ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ನೂಕು: ತಳ್ಳು; ಇರುಳು: ರಾತ್ರಿ; ಉದಯ: ಹುಟ್ಟು; ಅಚಲ: ಬೆಟ್ಟ; ಶಿರ: ತಲೆ; ತರಣಿ: ಸೂರ್ಯ; ತಲೆದೋರು: ಕಾಣಿಸಿಕೋ; ತೊಡೆ: ಹೋಗಲಾಡಿಸು; ಭುವನ: ಪ್ರಪಂಚ; ಅಂಧ: ಕುರುಡು; ಪರಿಮಳ: ಸುಗಂಧ; ಪಾವುಡ: ಬಹುಮಾನ; ಅಳಿ: ದುಂಬಿ; ಕರೆಸು: ಬರೆಮಾಡು; ತಾವರೆ: ಕಮಲ; ಕಾತರ: ಕಳವಳ, ಉತ್ಸುಕತೆ; ಲತಾಂಗಿ: ಚೆಲುವೆ; ಸುಯ್ಲು: ನಿಟ್ಟುಸಿರು; ತಾಗು: ಮುಟ್ಟು; ಕುಮುದಿನಿ: ನೈದಿಲೆ; ಪತಿ; ಒಡೆಯ; ಕುಮುದಿನೀಪತಿ: ಚಂದ್ರ;

ಪದವಿಂಗಡಣೆ:
ಅರೆಗಳಿಗೆ +ಯುಗವಾಗಿ +ನೂಕಿದನ್
ಇರುಳನ್+ಉದಯಾಚಲದ +ಶಿರದಲಿ
ತರಣಿ+ ತಲೆದೋರಿದನು+ ತೊಡೆದನು+ ಭುವನದ್+ಅಂಧತೆಯ
ಪರಿಮಳದ+ ಪಾವುಡದಿನ್+ಅಳಿಗಳ
ಕರೆಸಿದವು+ ತಾವರೆಗಳ್+ಎನೆ+ ಕಾ
ತರ+ ಲತಾಂಗಿಯ +ಸುಯ್ಲು +ತಾಗಿತು +ಕುಮುದಿನೀ +ಪತಿಗೆ

ಅಚ್ಚರಿ:
(೧) ಬೆಳಗಾಯಿತು ಎಂದು ಹೇಳಲು – ಉದಯಾಚಲದ ಶಿರದಲಿ ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
(೨) ಬೆಳಕಾಯಿತು ಎಂದು ಹೇಳುವ ಪರಿ – ಪರಿಮಳದ ಪಾವುಡದಿನಳಿಗಳಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀ ಪತಿಗೆ
(೩) ಚಂದ್ರನನ್ನು ಕುಮುದಿನೀ ಪತಿ ಎಂದು ಕರೆದಿರುವುದು

ಪದ್ಯ ೫೬: ಕೀಚಕನ ಕಾಮಾಗ್ನಿಯ ತಾಪ ಹೇಗಿತ್ತು?

ಪರಿಮಳದೆ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿತಾಪದಲಿ
ವರ ಪತಿವ್ರತೆಗಳುಪಿದವನಾ
ಹರಣದಾಶೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮಣಿಯ ಮಂಚದಲಿ (ವಿರಾಟ ಪರ್ವ, ೨ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೀಚಕನ ಕಾಮತಾಪಕ್ಕೆ ಬೀಸಣಿಕೆಗೆ ಲೇಪಿಸಿದ ಗಂಧ ಕರ್ಪೂರಗಳು ಸೀದು ಕರುಕಲಾದವು, ಪತಿವ್ರತೆಯನ್ನು ಮೋಹಿಸಿದ್ದ ಅವನು ಪ್ರಾಣದ ಆಶೆಯನ್ನೂ ಬಿಟ್ಟು, ಚಂದ್ರಕಾಂತ ಮಣಿಮಂಚದ ಮೇಲೆ ಹೊರಳಾಡುತ್ತಿದ್ದನು.

ಅರ್ಥ:
ಪರಿಮಳ: ಸುಗಂಧ; ಸುಳಿ: ಆವರಿಸು; ಸುಳಿವಾಲೆ: ಬಾಳೆಯ ಅಗ್ರ; ಪೂಸು: ಬಳಿ, ಸವರು; ಗಂಧ: ಚಂದನ; ಕರ್ಪುರ: ಸುಗಂಧ ದ್ರವ್ಯ; ಸೀದು: ಕರಕಲಾಗು; ಕಾಮ: ಮೋಹ; ಅಗ್ನಿ: ಬೆಂಕಿ; ತಾಪ: ಬಿಸಿ; ಪತಿವ್ರತೆ: ಗರತಿ; ಅಳುಪು: ಬಯಸು; ಹರಣ: ಜೀವ, ಪ್ರಾಣ; ಆಶೆ: ಇಚ್ಛೆ; ಮರೆ: ನೆನಪಿನಿಂದ ದೂರ ಮಾಡು; ಪಾತಕ: ದುಷ್ಟ; ಹೊರಳು: ಉರುಳು, ತಿರುಗು; ಚಂದ್ರಕಾಂತ: ಬೆಳದಿಂಗಳಿನಲ್ಲಿ ದ್ರವಿಸುವುದೆಂದು ಭಾವಿಸಲಾದ ಒಂದು ಬಗೆಯ ಬಿಳಿಯ ಕಲ್ಲು, ಶಶಿಕಾಂತ ಶಿಲೆ; ಮಣಿ: ಬೆಲೆಬಾಳುವ ರತ್ನ, ಮುತ್ತು; ಮಂಚ: ಪಲ್ಲಂಗ;

ಪದವಿಂಗಡಣೆ:
ಪರಿಮಳದೆ +ಸುಳಿವಾಲವಟ್ಟದೊ
ಳಿರದೆ +ಪೂಸಿದ +ಗಂಧ +ಕರ್ಪುರವ್
ಅರರೆ+ ಸೀದವು +ಕೀಚಕನ+ ಕಾಮಾಗ್ನಿ+ತಾಪದಲಿ
ವರ +ಪತಿವ್ರತೆಗ್+ಅಳುಪಿದವನ್+ಆ
ಹರಣದಾಶೆಯ +ಮರೆದು +ಪಾತಕ
ಹೊರಳುತಿರ್ದನು +ಚಂದ್ರಕಾಂತದ+ ಮಣಿಯ +ಮಂಚದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪೂಸಿದ ಗಂಧ ಕರ್ಪುರವರರೆ ಸೀದವು ಕೀಚಕನ ಕಾಮಾಗ್ನಿತಾಪದಲಿ

ಪದ್ಯ ೫೫: ಮನ್ಮಥನು ಯಾರ ಕೊಲೆಗೆ ಅಣಿಯಾದನು?

ಹಾಸಿದೆಳೆದಳಿರೊಣಗಿದುದು ಹೊಗೆ
ಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು
ಆ ಶಶಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನಾ ಕೀಚಕನ ಕಗ್ಗೊಲೆಗೆ (ವಿರಾಟ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಹಾಸಿದ್ದ ಎಳೆಯ ಚಿಗುರು ಕೀಚಕನ ಮೈಯ ಬಿಸಿಗೆ ಒಣಗಿ ಹೋಯಿತು, ಅವನು ಉಸಿರು ಬಿಟ್ಟಾಗ ಹೊಗೆ ಹೊರಹೊಮ್ಮಿತು, ಸುಳಿ ಬಾಳೆಯೆಲೆಯಿಂದ ಬೀಸಿದರೆ ಅವನ ಮೈ ಝಳಕ್ಕೆ ಅದು ಬಾಡಿ ಹೋಯಿತು, ಚಂದ್ರ, ಕೋಗಿಲೆ, ದುಂಬಿ, ಕನ್ನೈದಿಲೆ, ಮಲ್ಲಿಗೆಗಳನ್ನು ಕೈಬೀಸಿ ಕರೆದು ಮನ್ಮಥನು ಕೀಚಕನ ಕಗ್ಗೊಲೆಗೆ ಅಣಿಯಾದನು.

ಅರ್ಥ:
ಹಾಸು: ಹರಡು; ಎಲೆ: ಪರ್ಣ; ಒಣಗು: ಬಾಡು; ಹೊಗೆ: ಧೂಮ; ಸೂಸು: ಹೊರಹೊಮ್ಮು; ಸುಯಿಲು: ನಿಟ್ಟುಸಿರು; ಮೆಲ್ಲನೆ: ನಿಧಾನ; ಬೀಸು: ಹರಹು; ಸುಳಿ: ಆವರಿಸು, ಮುತ್ತು; ಬಾಳೆ: ಕದಳಿ; ಝಳ: ಕಾಂತಿ; ಶಶಿ: ಚಂದ್ರ; ಕೋಗಿಲೆ: ಪಿಕ; ತುಂಬಿ: ದುಂಬಿ, ಜೇನು ನೋಣ; ಸರೋಜ: ಕಮಲ; ಕೈವೀಸು: ಕೈಬೀಸಿ ಕರೆ; ಕುಸುಮ: ಹೂವು; ಅಸ್ತ್ರ: ಶಸ್ತ್ರ, ಆಯುಧ; ಕಗ್ಗೊಲೆ: ಭೀಕರವಾದ ವಧೆ;

ಪದವಿಂಗಡಣೆ:
ಹಾಸಿದ್+ಎಳೆದಳಿರ್+ಒಣಗಿದುದು +ಹೊಗೆ
ಸೂಸಿದುದು +ಸುಯಿಲಿನಲಿ +ಮೆಲ್ಲನೆ
ಬೀಸುತಿರೆ+ ಸುಳಿ+ಬಾಳೆಯೆಲೆ +ಬಾಡಿದುದು +ಝಳಹೊಯ್ದು
ಆ +ಶಶಿಯ+ ಕೋಗಿಲೆಯ+ ತುಂಬಿಯನ್
ಆ+ ಸರೋಜವ+ ಮಲ್ಲಿಗೆಯ +ಕೈ
ವೀಸಿದನು +ಕುಸುಮಾಸ್ತ್ರನ್+ಆ+ ಕೀಚಕನ +ಕಗ್ಗೊಲೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾಸಿದೆಳೆದಳಿರೊಣಗಿದುದು ಹೊಗೆಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು

ಪದ್ಯ ೫೪: ಕಾಮನ ತಾಪವು ಕೀಚಕನನ್ನು ಹೇಗೆ ಆವರಿಸಿತ್ತು?

ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳುಕುಗಳಮಳಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಬೆರಸಿ ಕರಗಿದ ತವರವಾಯಿತು ಕೀಚಕನ ಮನಕೆ (ವಿರಾಟ ಪರ್ವ, ೨ ಸಂಧಿ, ೫೪ ಪದ್ಯ)

ತಾತ್ಪರ್ಯ:
ತಣ್ಣಗಿರಲೆಂದು ಹಾಕಿಕೊಂಡು ವೀಳೆಯದ ಕರ್ಪೂರದ ಹಳುಕುಗಳು ಉರಿಯನ್ನೇ ತಂದವು. ಸುಗಂಧಪೂರಿತವಾದ ಲೇಪನವನ್ನು ಮೈಗೆ ಹಚ್ಚಿದರೆ ಅದು ಸುಟ್ಟು ಕರುಕಲಾಯಿತು. ನೀರಿನ ಪೊಟ್ಟಣವನ್ನು ಕಟ್ಟಿ ಮೈ ಮೇಲೆ ಆಡಿಸಿದರೆ ಉರಿಯಾಯಿತು. ಬಲಿತ ಬೆಳುದಿಂಗಳು ಕರಗಿದ ತವರದಂತೆ ಮೈಸುಟ್ಟಿತು.

ಅರ್ಥ:
ಉರಿ: ತಾಪ; ಒಡಲು: ದೇಹ; ವೀಳೆ: ತಾಂಬೂಲ; ಕರ್ಪುರ: ಸುಗಂಧ ದ್ರವ್ಯ; ಹಳು: ತಗ್ಗಿದುದು; ಅಮಳ: ನಿರ್ಮಲ; ಗಂಧ: ಸುಗಂಧ; ಸರಸ: ಚೆಲ್ಲಾಟ, ವಿನೋದ; ಕರ್ದಮ: ಸುಗಂಧವನ್ನು ಬೆರೆಸಿದ ನೀರು; ಪೂಸು: ಬಳಿಯುವಿಕೆ, ಲೇಪನ; ಅಂಗ: ದೇಹ; ಹೊರಳು: ತಿರುವು, ಬಾಗು; ನೀರು: ಜಲ; ಪೊಟ್ಟಣ: ದೊನ್ನೆ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಬಲಿದ: ಹೆಚ್ಚಾದ; ಚಂದ್ರಿಕೆ: ಬೆಳದಿಂಗಳು; ಬೆರಸು: ಜೊತೆಗೂಡು; ಕರಗು: ಕಡಿಮೆಯಾಗು; ತವರ: ಒಂದು ಬಗೆಯ ಲೋಹ; ಮನ: ಮನಸ್ಸು;

ಪದವಿಂಗಡಣೆ:
ಉರಿದುದ್+ಒಡಲೊಳು +ವೀಳೆಯದ +ಕ
ರ್ಪುರದ +ಹಳುಕುಗಳ್+ಅಮಳ+ಗಂಧದ
ಸರಸ+ ಕರ್ದಮ +ಕರಿಕುವರಿದುದು+ ಪೂಸಿದಂಗದಲಿ
ಹೊರಳೆ +ನೀರಿನ +ಪೊಟ್ಟಣವು +ದ
ಳ್ಳುರಿಯೊಲಾದುದು +ಬಲಿದ +ಚಂದ್ರಿಕೆ
ಬೆರಸಿ+ ಕರಗಿದ+ ತವರವಾಯಿತು +ಕೀಚಕನ+ ಮನಕೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊರಳೆ ನೀರಿನ ಪೊಟ್ಟಣವು ದಳ್ಳುರಿಯೊಲಾದುದು, ಬಲಿದ ಚಂದ್ರಿಕೆ ಬೆರಸಿ ಕರಗಿದ ತವರವಾಯಿತು

ಪದ್ಯ ೫೩: ಕೀಚಕನು ಬ್ರಹ್ಮನನ್ನೇಕೆ ಬಯ್ದನು?

ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನ ವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲವಿಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ (ವಿರಾಟ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕೀಚಕನಿಗೆ ವಿರಹತಾಪವು ಹೆಚ್ಚಲು, ತನ್ನ ಅರಮನೆಗೆ ಬಂದು ತಣ್ಣನೆಯ ಹಾಸಿಗೆಯಲ್ಲಿ ಹಾ ಎಂದು ಕಳವಳಿಸುತ್ತಾ ಬಿದ್ದು ಬಿಟ್ಟನು. ತನ್ನನ್ನು ಕೊಲ್ಲಲೆಂದೇ ಚಂದ್ರೋದಯವಾಗಿದೆ. ಪಾಪಿಯಾದ ಆ ಬ್ರಹ್ಮನು ಚಂಚಲಾಕ್ಷಿಯಾದ ಸೈರಂಧ್ರಿಗೆ ಇಷ್ಟೊಂದು ಚೆಲುವಿಕೆಯನ್ನೇಕೆ ಕೊಟ್ಟಿರುವನೋ ಎಂದು ಚಿಂತಿಸಿದನು.

ಅರ್ಥ:
ಖಳ: ದುಷ್ಟ; ವಿರಹ: ಅಗಲಿಕೆ, ವಿಯೋಗ; ತಾಪ: ಬಿಸಿ, ಶಾಖ; ವೆಗ್ಗಳ: ಹಿರಿಮೆ; ಅರಮನೆ: ರಾಜರ ಆಲಯ; ಬಂದು: ಆಗಮ್ಸಿಉ; ಕಳವಳ: ಚಿಂತೆ; ಕೆಡೆ: ಮಲಗು; ತಳಿರ: ಚಿಗುರು, ತಂಪು; ಹಾಸು: ಹಾಸಿಗೆ; ನಳಿನ: ಕಮಲ; ವೈರಿ: ಶತ್ರು; ಸುಳಿವು: ಗುರುತು, ಕುರುಹು; ಕೊಲೆ: ಸಾವು; ಬಂದು: ಆಗಮಿಸು; ಪಾಪಿ: ದುಷ್ಟ; ಕಮಲಜ: ಬ್ರಹ್ಮ; ಚಲ: ಚಲಿಸುವ; ಲೋಚನ: ಕಣ್ಣು; ಇನಿತು: ಇಷ್ಟು; ಚೆಲುವಿಕೆ: ಅಂದ;

ಪದವಿಂಗಡಣೆ:
ಖಳನ +ವಿರಹದ +ತಾಪದುರಿ+ ವೆ
ಗ್ಗಳಿಸೆ +ತನ್ನರಮನೆಗೆ +ಬಂದನು
ಕಳವಳಿಗ +ಹಾಯೆನುತ+ ಕೆಡೆದನು +ತಳಿರ +ಹಾಸಿನಲಿ
ನಳಿನ +ವೈರಿಯ +ಸುಳಿವು +ತನ್ನಯ
ಕೊಲೆಗೆ+ ಬಂದುದು +ಪಾಪಿ +ಕಮಲಜ
ಚಲವಿಲೋಚನೆಗ್+ಏಕೆ +ಮಾಡಿದನ್+ಇನಿತು +ಚೆಲುವಿಕೆಯ

ಅಚ್ಚರಿ:
(೧) ಬ್ರಹ್ಮನನ್ನು ಬಯ್ಯುವ ಪರಿ – ಪಾಪಿ ಕಮಲಜಚಲವಿಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ

ಪದ್ಯ ೫೨: ರಾತ್ರಿಯ ಹೇಗೆ ಕಂಡಿತು?

ಬೆಚ್ಚಿದವು ಚಕ್ರಾಂಕಯುಗ ತಾ
ವ್ಕಚ್ಚಿದುವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತಮತಮಗೆ
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನೊಟ್ಟಿದನಕಟ ಸಕಲ ವಿಯೋಗಿ ಜನಮನಕೆ (ವಿರಾಟ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಚಕ್ರವಾಕಗಳು ಬೆಚ್ಚಿದವು, ಮರಿದುಂಬಿಗಳು ಕುಮುದಪುಷ್ಪಗಳಿಗೆರಗಿ ಮಕರಂದವನ್ನು ಹೀರಿದವು, ಅರಳಿದ್ದ ಕಮಲದ ಹೂಗಳು ಮುಚ್ಚಿಕೊಂಡವು, ಸಮುದ್ರವುಕ್ಕಿತು, ಜಾರೆಯರು ಬೆದರಿದರು, ವಿಯೋಗಿಗಳು ಮನಸ್ಸುಗಳನ್ನು ಚಂದ್ರನು ಕಿಚ್ಚಿನೊಟ್ಟಿ ಸುಟ್ಟನು.

ಅರ್ಥ:
ಬೆಚ್ಚು: ಭಯ, ಹೆದರಿಕೆ; ಚಕ್ರಾಂಕ: ಚಕ್ರವಾಕ; ಯುಗ: ಎರಡು; ಕಚ್ಚು: ಹಲ್ಲಿನಿಂದ ಹಿಡಿ, ಕಡಿ; ಮರಿದುಂಬಿ: ಚಿಕ್ಕ ಜೇನುನೊಣ; ಕುಮುದ: ಬಿಳಿಯ ನೈದಿಲೆ; ಮುಚ್ಚು: ಮರೆಮಾಡು, ಹೊದಿಸು; ಮುಸುಡು: ಮುಖ, ಮೊರೆ; ಅಂಜುಜ: ಕಮಲ; ರಾಜಿ: ಗುಮ್ಪು; ಹೆಚ್ಚು: ಅಧಿಕವಾಗು; ಸಾಗರ: ಸಮುದ್ರ; ತೆರೆ: ಅಲೆ; ಜಾರೆ: ಹಾದರಗಿತ್ತಿ, ವ್ಯಭಿಚಾರಿಣಿ; ಚಂದ್ರ: ಶಶಿ; ಕಿಚ್ಚು: ಬೆಂಕಿ, ಅಗ್ನಿ, ತಾಪ; ಅಕಟ: ಅಯ್ಯೋ; ಸಕಲ: ಎಲ್ಲಾ; ವಿಯೋಗಿ: ವಿರಹಿ; ಮನ: ಮನಸ್ಸು; ಜನ: ಮನುಷ್ಯ;

ಪದವಿಂಗಡಣೆ:
ಬೆಚ್ಚಿದವು +ಚಕ್ರಾಂಕ+ಯುಗ +ತಾವ್
ಕಚ್ಚಿದುವು+ ಮರಿದುಂಬಿ +ಕುಮುದವ
ಮುಚ್ಚಿದವು+ ಮುಸುಡುಗಳನ್+ಅಂಬುಜ+ರಾಜಿ +ತಮತಮಗೆ
ಹೆಚ್ಚಿದವು +ಸಾಗರದ +ತೆರೆಗಳು
ಬೆಚ್ಚಿದರು +ಜಾರೆಯರು +ಚಂದ್ರಮ
ಕಿಚ್ಚನ್+ಒಟ್ಟಿದನ್+ಅಕಟ +ಸಕಲ +ವಿಯೋಗಿ +ಜನಮನಕೆ

ಅಚ್ಚರಿ:
(೧) ರಾತ್ರಿಯಾದುದನ್ನು ಹೇಳುವ ಪರಿ – ಕಚ್ಚಿದುವು ಮರಿದುಂಬಿ ಕುಮುದವಮುಚ್ಚಿದವು ಮುಸುಡುಗಳನಂಬುಜರಾಜಿ ತಮತಮಗೆ

ಪದ್ಯ ೫೧: ಚಂದ್ರನ ಉದಯವನ್ನು ಹೇಗೆ ಕಾಣಬಹುದು?

ಸಲೆ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಚೆಲುವ ಕೈಗನ್ನಡಿಯೊ ಮದನನ ಬಿರುದಿನೊಡ್ಡಣವೊ
ತಳಿತ ವಿರಹಿಯ ಸುಡುವ ಕೆಂಡದ
ಹೊಳಹೊ ಬೆಸಗೊಳಲೇನು ರಜನೀ
ವಳಯದಲಿ ಶಶಿಯುದಯವಾದನು ಜಗವನುಜ್ವಳಿಸಿ (ವಿರಾಟ ಪರ್ವ, ೨ ಸಂಧಿ, ೫೧ ಪದ್ಯ)

ತಾತ್ಪರ್ಯ:
ಪೂರ್ವ ದಿಗ್ವನಿತೆಯು ಅಲಂಕರಿಸಿಕೊಂಡ ಚಂದನ ತಿಲಕವೋ, ರತಿದೇವಿಯ ಕೈಗನ್ನಡಿಯೋ, ಮನ್ಮಥನ ಬಿರುದಿನ ಪ್ರದರ್ಶನವೋ, ವಿರಹಿಯನ್ನು ಸುಡಲೆಂದು ಹುಟ್ಟಿದ ಕೆಂಡದ ಹೊಳಪೋ ಏನೆಂದು ಹೇಳಲಿ, ಚಂದ್ರನು ರಾತ್ರಿಯಲ್ಲಿ ಹುಟ್ಟಿ ಜಗತ್ತನ್ನು ಬೆಳಗಿದನು.

ಅರ್ಥ:
ಸಲೆ: ಪೂರ್ಣ, ಚೆನ್ನಾಗಿ; ಅಂಗನೆ: ಹೆಣ್ಣು; ಚಂದನ: ಗಂಧ; ತಿಲಕ: ಶ್ರೇಷ್ಠ; ಮನ್ಮಥ: ಕಾಮ; ರಾಣಿ: ಅರಸಿ; ಚೆಲುವು: ಸೌಂದರ್ಯ; ಕನ್ನಡಿ: ಮುಕುರ; ಮದನ: ಮನ್ಮಥ; ಬಿರುದು: ಗೌರವ ಸೂಚಕವಾಗಿ ಕೊಡುವ ಹೆಸರು; ಒಡ್ಡಣ: ಗುಂಪು; ತಳಿತ: ಚಿಗುರು; ವಿರಹಿ: ವಿಯೋಗಿ; ಸುಡು: ದಹಿಸು; ಕೆಂಡ: ಬೆಂಕಿ; ಹೊಳಹು: ಕಾಂತಿ, ಪ್ರಕಾಶ; ಬೆಸ: ಕೇಳು, ಅಪ್ಪಣೆ, ಆದೇಶ, ಕಾರ್ಯ; ರಜನಿ: ರಾತ್ರಿ; ವಳಯ: ಅಂಗಳ, ಆವರಣ; ಶಶಿ: ಚಂದ್ರ; ಉದಯ: ಹುಟ್ತು; ಜಗ: ಪ್ರಪಂಚ; ಉಜ್ವಳಿಸು: ಪ್ರಕಾಶಿಸು;

ಪದವಿಂಗಡಣೆ:
ಸಲೆ+ ದಿಕ್+ಅಂಗನೆಯಿಟ್ಟ+ ಚಂದನ
ತಿಲಕವೋ +ಮನುಮಥನ+ ರಾಣಿಯ
ಚೆಲುವ +ಕೈಗನ್ನಡಿಯೊ+ ಮದನನ +ಬಿರುದಿನೊಡ್ಡಣವೊ
ತಳಿತ +ವಿರಹಿಯ +ಸುಡುವ +ಕೆಂಡದ
ಹೊಳಹೊ +ಬೆಸಗೊಳಲ್+ಏನು+ ರಜನೀ
ವಳಯದಲಿ+ ಶಶಿ+ಉದಯವಾದನು +ಜಗವನ್+ಉಜ್ವಳಿಸಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಲೆ ದಿಗಂಗನೆಯಿಟ್ಟ ಚಂದನ ತಿಲಕವೋ ಮನುಮಥನ ರಾಣಿಯ
ಚೆಲುವ ಕೈಗನ್ನಡಿಯೊ ಮದನನ ಬಿರುದಿನೊಡ್ಡಣವೊ ತಳಿತ ವಿರಹಿಯ ಸುಡುವ ಕೆಂಡದ
ಹೊಳಹೊ