ಪದ್ಯ ೫೦: ಕೀಚಕನೇಕೆ ಸಂತಸಪಟ್ಟನು?

ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ (ವಿರಾಟ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ತನ್ನ ಮೇಲೆ ಕುಡಿನೋಟವನ್ನು ಬೀರಿದರೆ ಅದು ತನ್ನ ಪುಣ್ಯವೆಂದು ಭಾವಿಸಿ ಮನಸ್ಸಿನಲ್ಲೇ ವಿಜಯಧ್ವಜವನ್ನು ಹಾರಿಸಿದನು. ಮನಸ್ಸಿನಲ್ಲಿ ಸೈರಂಧ್ರಿಯ ಮೇಲಿನ ಹುಚ್ಚು ಹೇಚ್ಚಾಗುತ್ತಿರಲು ಮನೆಯನ್ನು ಸೇರಿಕೊಂಡನು, ಇತ್ತ ಸೂರ್ಯನು ಪಶ್ಚಿಮದ ಬೆಟ್ಟಗಳಲ್ಲಿ ಮುಳುಗಿದನು.

ಅರ್ಥ:
ಮನ: ಮನಸ್ಸು; ಗುಡಿಗಟ್ಟು: ಸಂತೋಷಗೊಳ್ಳು; ಮಾನಿನಿ: ಹೆಣ್ಣು; ಕರುಣೆ: ದಯೆ; ಅಪಾಂಗ:ಕಡೆಗಣ್ಣು; ರಸಭಾಜನ: ಸುಖಕ್ಕೆ ಭಾಗಿಯಾಗುವುದು; ಪುಣ್ಯ: ಸದಾಚಾರ; ಬೀಳ್ಕೊಳು: ತೆರಳು; ಅಗ್ರಜೆ: ಅಕ್ಕ; ಒದಗು: ಲಭ್ಯ, ದೊರೆತುದು; ಮರುಳು: ಹುಚ್ಚು; ಉಬ್ಬು: ಹೆಚ್ಚು; ಹೊಕ್ಕು: ಸೇರು; ಮನೆ: ಆಲಯ; ದಿನಕರ: ಸೂರ್ಯ; ಅಸ್ತ: ಮುಳುಗು; ಅದ್ರಿ: ಬೆಟ್ಟ; ಬೀಡು: ಆವಾಸ, ನೆಲೆ;

ಪದವಿಂಗಡಣೆ:
ಮನದೊಳಗೆ+ ಗುಡಿಗಟ್ಟಿದನು +ಮಾ
ನಿನಿಯ +ಕರುಣಾಪಾಂಗ +ರಸಭಾ
ಜನವು +ಪುಣ್ಯವಲಾ+ಎನುತ +ಬೀಳ್ಕೊಂಡಬ್+ಅಗ್ರಜೆಯ
ಮನದೊಳ್+ಒದವಿದ+ ಮರುಳುತನದ್
ಉಬ್ಬಿನಲಿ +ಹೊಕ್ಕನು +ಮನೆಯನ್+ಇತ್ತಲು
ದಿನಕರಂಗಾಯಿತ್ತು+ ಬೀಡ್+ಅಸ್ತಾಚಲ+ಅದ್ರಿಯಲಿ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ
(೨) ಹುಚ್ಚು ಹೆಚ್ಚಾಯಿತು ಎಂದು ಹೇಳಲು – ಮನದೊಳೊದವಿದ ಮರುಳುತನದುಬ್ಬಿನಲಿ ಹೊಕ್ಕನು ಮನೆಯನ್

ಪದ್ಯ ೪೯: ಸುದೇಷ್ಣೆಯು ತಮ್ಮನಿಗೆ ಏನೆಂದಳು?

ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ (ವಿರಾಟ ಪರ್ವ, ೨ ಸಂಧಿ, ೪೯ ಪದ್ಯ)

ತಾತ್ಪರ್ಯ:
ತಮ್ಮನ ಮಾತುಗಳನ್ನು ಕೇಳಿ ಸುದೇಷ್ಣೆಯ ಮನಸ್ಸಿನಲ್ಲಿ ನೀರು ತುಂಬಿದವು. ತಮ್ಮನ ಮೇಲಿನ ಮೋಹ ಚಿಗುರೊಡೆಯಿತು. ಕೀಚಕನನ್ನು ಯಮನ ಪರಿವಾರದಲ್ಲಿ ಸೇರಿಸಲು ಕೈಚಾಚಿದಳು. ಎಲೈ ಕೀಚಕ ಏಳು, ಮನೆಗೆ ಹೋಗು, ಸೈರಂಧ್ರಿಯನ್ನು ನಾಳೆ ನಿನ್ನ ಬಳಿಗೆ ಕಳಿಸುತ್ತೇನೆ, ಆದರೆ ಪರಸ್ತ್ರೀ ವ್ಯಾಮೋಹ ಒಳಿತಲ್ಲ ಎಂದು ಹೇಳಿ ತಮ್ಮನನ್ನು ಬೀಳ್ಕೊಟ್ಟಳು.

ಅರ್ಥ:
ಆಲಿ: ಕಣ್ಣು; ನೀರು: ಜಲ; ತಮ್ಮ: ಸಹೋದರ; ತಳಿತ: ಚಿಗುರು; ಮೋಹ: ಆಸೆ; ಕಾಲ: ಯಮ; ಪಾಳಯ: ಬಿಡಾರ; ಕೈಗೊಟ್ಟು: ಹಸ್ತವನ್ನು ಚಾಚು; ಅಂಗನೆ: ಹೆಣ್ಣು; ನೆಗಹು: ಮೇಲೆತ್ತು; ಖಳ: ದುಷ್ಟ; ಏಳು: ಮೇಲೆ ಬಾ; ಭವನ: ಆಲಯ; ಹೋಗು: ತೆರಳು; ತರುಣಿ: ಹೆಣ್ಣು, ಚೆಲುವೆ; ಕಳುಹು: ತೆರಳು, ಬರುವಂತೆ ಮಾಡು; ಪರಸತಿ: ಅನ್ಯ ಹೆಣ್ಣು; ಮೇಳ:ಸೇರುವಿಕೆ; ಲೇಸು: ಒಳಿತು; ಬೀಳ್ಕೊಡು: ತೆರಳು; ಅನುಜ: ತಮ್ಮ;

ಪದವಿಂಗಡಣೆ:
ಆಲಿ +ನೀರ್+ಏರಿದವು +ತಮ್ಮನ
ಮೇಲೆ +ತಳಿತುದು +ಮೋಹ +ಕಾಲನ
ಪಾಳಯಕೆ +ಕೈಗೊಟ್ಟಳ್+ಅಂಗನೆ +ನೆಗಹಿದಳು +ಖಳನ
ಏಳು +ಭವನಕೆ+ ಹೋಗು +ತರುಣಿಯ
ನಾಳೆ +ನಾ +ಕಳುಹುವೆನು +ಪರಸತಿ
ಮೇಳ +ಲೇಸಲ್ಲೆನುತ+ ಬೀಳ್ಕೊಟ್ಟಳು +ನಿಜಾನುಜನ

ಅಚ್ಚರಿ:
(೧) ಕಣ್ಣೀರಿಡು/ದುಃಖಿಸು ಎಂದು ಹೇಳಲು – ಆಲಿ ನೀರೇರಿದವು
(೨) ಸಾಯಿಸಲು ಎಂದು ಹೇಳಲು – ಕಾಲನಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
(೩) ಬುದ್ಧಿವಾದದ ಮಾತು – ಪರಸತಿ ಮೇಳ ಲೇಸಲ್ಲೆನುತ

ಪದ್ಯ ೪೮: ಕೀಚಕನು ಸೈರಂಧ್ರಿಯನು ಹೇಗೆ ಬೇಡಿದನು?

ಸೊಗಸದಿತರರ ಮಾತು ಕಣ್ಣುಗ
ಳೊಗಡಿಸವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕಂದೆರಗಿದನು ಪದಕೆ (ವಿರಾಟ ಪರ್ವ, ೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇನ್ನೊಬ್ಬರನ್ನು ಕುರಿತು ಮಾತುಗಳು ನನ್ನ ಕಿವಿಗೆ ಸೊಗಸುವುದಿಲ್ಲ. ಕಣ್ಣುಗಳು ಬೇರೆಯವರ ರೂಪವನ್ನು ಮೆಚ್ಚುಫುಚಿಲ್ಲ, ಇವಳನ್ನು ಬಿಟ್ಟು ಉಳಿದವರ ಹೆಸರುಗಳು ನನ್ನ ಕಿವಿಗೆ ಶತ್ರುಗಳಾಗಿವೆ, ಶಾಖ ಕೊಟ್ಟ ಎಳೆಯ ಸಸಿಯಂತೆ ನಾನು ಬಾಡಿ ಹೋಗಿದ್ದೇನೆ, ನಾನು ಬಯಸಿದುದು ನನಗೆ ಸಿಗುವಂತೆ ಮಾಡು, ಕರುಳು ಕತ್ತರಿಸಿದ ಜಿಂಕೆಯ ಮರಿಯನ್ನು ಉಳಿಸು ಎಂದು ಕೀಚಕನು ಸುದೇಷ್ಣೆಯ ಕಾಲಿಗೆ ಬಿದ್ದು ಬೇಡಿದನು.

ಅರ್ಥ:
ಸೊಗಸು: ಅಂದ, ಚೆಲುವು; ಇತರ: ಮಿಕ್ಕ; ಮಾತು: ನುಡಿ; ಕಣ್ಣು: ನಯನ; ಒಗಡಿಸು:ಧಿಕ್ಕರಿಸು, ಹೇಸು; ಮಿಕ್ಕ: ಉಳಿದ; ರೂಹು: ರೂಪ; ಹಗೆ: ವೈರ; ಉಳಿದ: ಮಿಕ್ಕ; ನಾಮ: ಹೆಸರು; ನಾಲಿಗೆ: ಜಿಹ್ವೆ; ಸೆಗಳಿಕೆ: ಕಾವು, ಬಿಸಿ; ಸಸಿ: ಚಿಕ್ಕ ಗಿಡ; ಬಗೆ: ರೀತಿ; ಸಲಿಸು: ದೊರಕಿಸಿ ಕೊಡು, ಪೂರೈಸು; ಹರಿದ: ಚದುರಿದ; ಕರುಳು: ಪಚನಾಂಗ; ಮೃಗ: ಜಿಂಕೆ; ಮರಿ: ಚಿಕ್ಕ ಪ್ರಾಣಿ; ಸಲಹು: ಕಾಪಾಡು; ಪದ: ಪಾದ; ಎರಗು: ಬೀಳು;

ಪದವಿಂಗಡಣೆ:
ಸೊಗಸದ್+ಇತರರ+ ಮಾತು +ಕಣ್ಣುಗಳ್
ಒಗಡಿಸವು +ಮಿಕ್ಕವರ+ ರೂಹನು
ಹಗೆಗಳ್+ಆಗಿಹವ್+ಉಳಿದವರ +ನಾಮಗಳು +ನಾಲಿಗೆಗೆ
ಸೆಗಳಿಕೆಯ +ಸಸಿಯಾದೆನ್+ಎನ್ನಯ
ಬಗೆಯ+ ಸಲಿಸೌ+ ಹರಿದ+ ಕರುಳಿನ
ಮೃಗದ +ಮರಿಯನು +ಸಲಹಬೇಕಂದ್+ಎರಗಿದನು +ಪದಕೆ

ಅಚ್ಚರಿ:
(೧) ಉಪಮಾನದ ಬಳಕೆ – ಸೆಗಳಿಕೆಯ ಸಸಿಯಾದೆನೆನ್ನಯಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕಂದೆರಗಿದನು ಪದಕೆ

ಪದ್ಯ ೪೭: ಕೀಚಕನು ಸುದೇಷ್ಣುವಿಗೆ ಏನು ಹೇಳಿದ?

ಅಕ್ಕ ಮರಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕಡಿಂಬಕೇ ಮದುವೆಯುಂಟೇ ಮನವ ಬೇರಿರಿಸಿ
ಮಕ್ಕಳಾಟಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ (ವಿರಾಟ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅಕ್ಕಾ ನಿನಗೆಲ್ಲೋ ಹುಚ್ಚು, ನನ್ನ ಮನಸ್ಸು ಅವಲಲ್ಲಿ ಸಿಕ್ಕು ಬೇರು ಬಿಟ್ಟಿದೆ, ಮನಸ್ಸನ್ನು ಬೇರಿಟ್ಟು ಈ ಘಟ್ಟಕ್ಕೆ ಮದುವೆಯನ್ನು ಮಾದಿದರೆ ಏನು ಪ್ರಯೋಜನ? ಇದು ಹುಡುಗಾಟ ಎಂದರೆ ಹಾಗೆ ಆಗಲಿ, ಯೋಗ್ಯರಾದವರು ಇದು ಸರಿಯಲ್ಲ ಎನ್ನಲಿ, ನನ್ನನ್ನು ಉಳಿಸಿಕೊಳ್ಳಬೇಕು ಎಂದು ನಿನಗೆ ಮನಸ್ಸಿದ್ದರೆ ಸೈರಂಧ್ರಿಯನ್ನು ನನಗೆ ಸೇರಿಸು ಎಂದನು.

ಅರ್ಥ:
ಅಕ್ಕ: ಸಹೋದರಿ; ಮರುಳು: ಹುಚ್ಚು; ಚಿತ್ತ: ಮನಸ್ಸು; ಸಿಕ್ಕು: ಬಂಧಿಸು; ಬರಿ: ಬರಡಾಗು; ಮಿಕ್ಕ: ಉಳಿದ; ಮದುವೆ: ವಿವಾಹ; ಮನ: ಮನಸ್ಸು; ಬೇರೆ: ಅನ್ಯ; ಸಲಹು: ಪೋಷಿಸು; ಸೇರು: ಜೊತೆಗೂಡು;
ಡಿಂಬಕ: ಬಾಲಕ, ಚಿಕ್ಕವ;

ಪದವಿಂಗಡಣೆ:
ಅಕ್ಕ +ಮರಳೌ +ಚಿತ್ತವ್+ಅವಳಲಿ
ಸಿಕ್ಕಿ +ಬೇರ್ವರಿಯಿತ್ತು+ ಬರಿದೇ
ಮಿಕ್ಕಡಿಂಬಕೇ +ಮದುವೆಯುಂಟೇ +ಮನವ+ ಬೇರಿರಿಸಿ
ಮಕ್ಕಳಾಟಕೆಯಾದಡ್+ಆಗಲಿ
ತಕ್ಕರಲ್ಲೆಂದ್+ಎನಲಿ +ಸಲಹುವಡ್
ಅಕ್ಕ +ಸೈರಂಧ್ರಿಯನು+ ಸೇರಿಸಬೇಕು+ ತನಗೆಂದ

ಅಚ್ಚರಿ:
(೧) ಬೇಡುವ ಪರಿ – ಅಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ

ಪದ್ಯ ೪೬: ಸುದೇಷ್ಣೆಯು ಯಾವ ಸಲಹೆಯನ್ನು ನೀಡಿದಳು?

ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು (ವಿರಾಟ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಎಲೈ ಕೀಚಕ, ಸೈರಂಧ್ರಿಯ ಗಂಡಂದಿರು ದೇವತಾಗಣದವರು. ದೇವತೆಗಳೆಲ್ಲಿ ನಾವೆಲ್ಲಿ, ದೇವತೆಗಳ ಸೈನ್ಯವು ಸಿಟ್ಟಾಗಿ ಬಂದರೆ ನಮ್ಮನ್ನು ಕಾಪಾಡುವವರಾರು? ಅವಳ ತಂಟೆಯೇ ಬೇಡ. ಈ ಸ್ತ್ರೀ ವೃಂದದಲ್ಲಿ ನೀನು ಯಾರನ್ನು ಬಯಸುವೆಯೋ ಅವಳೊಡನೆ ನಿನ್ನ ಮದುವೆಯನ್ನು ನೆರವೇರಿಸುತ್ತೇನೆ ಎಂದು ಸುದೇಷ್ಣೆಯು ಹೇಳಿದಳು.

ಅರ್ಥ:
ಗಂಡ: ಒಡೆಯ, ಭರ್ತ, ಪತಿ; ಸುರ: ದೇವತೆ; ಅಂತರ: ವ್ಯತ್ಯಾಸ; ಮುಳಿ: ಕೋಪ; ದಿವ್ಜ: ದೇವತೆ; ಅಳಕು: ಹೆದರು; ಇದಿರು: ಎದುರು; ಕಾವರು: ರಕ್ಷಿಸು; ತೊಡಕು: ತೊಂದರೆ, ಗೊಂದಲ; ಸತಿ: ಹೆಂಗಸು; ನಿವಹ: ಗುಂಪು; ಬಯಸು: ಇಚ್ಛಿಸು; ಮದುವೆ: ವಿವಾಹ; ಒಲಿ: ಪ್ರೀತಿ; ಮಾಡು: ನಿರ್ವಹಿಸು;

ಪದವಿಂಗಡಣೆ:
ಅವಳ +ಗಂಡರು +ಸುರರು +ಸುರರಿಗೆ
ನವಗ್+ಅದಾವ್+ಅಂತರವು +ಮುಳಿದೊಡೆ
ದಿವಿಜದ್+ಅಳಕ್+ಇದಿರಾರು +ನಮ್ಮನದಾರು+ ಕಾವವರು
ಅವಳ+ ತೊಡಕೇ+ ಬೇಡ +ಸತಿಯರ
ನಿವಹದಲಿ +ನೀನಾರ +ಬಯಸಿದಡ್
ಅವಳ +ನಾ +ಮುಂದಿಟ್ಟು +ಮದುವೆಯನ್+ಒಲಿದು+ ಮಾಡುವೆನು

ಅಚ್ಚರಿ:
(೧) ದೇವತೆಗಳ ಮೇಲಿನ ಭಯ – ಮುಳಿದೊಡೆ ದಿವಿಜದಳಕಿದಿರಾರು ನಮ್ಮನದಾರು ಕಾವವರು
(೨) ಸುರ, ದಿವಿಜ – ಸಮನಾರ್ಥಕ ಪದ