ಪದ್ಯ ೧೮: ಧರ್ಮಜನು ವಿರಾಟ ರಾಜನಿಗೆ ಏನು ಬೇಡಿದನು?

ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತ ಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ (ವಿರಾಟ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ವಿರಾಟನು ಧರ್ಮಜನನ್ನು ನೋಡಿ, ಅತ್ಯುತ್ತಮವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಮಹಾತ್ಮರನ್ನು ಕಂಡು ನಾವು ಬದುಕಿದುದು ಸಾರ್ಥಕವಯಿತು. ಎಲ್ಲಿಂದ ಬಂದಿರಿ? ಇತ್ತ ಬನ್ನಿ, ನೀವು ಬೇಡಿದುದನ್ನು ನಾವು ಕೊಡುತ್ತೇವೆ ಎಂದು ಉಪಚರಿಸಿದನು. ಧರ್ಮಜನು ನಾವು ಇದ್ದ ರಾಜನ ಓಲಗವು ಇಲ್ಲದಂತಾಯಿತು. ಆದುದರಿಂದ ರಾಜಾಶ್ರಯವನ್ನು ಬೇಡುತ್ತಿದ್ದೇವೆ, ಸುತ್ತ ಬಳಸಿ ಮಾತಾಡುವವರು ನಾವಲ್ಲ ಎಂದು ಧರ್ಮಜನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡು; ಹಿರಿಯ: ದೊಡ್ಡವ; ಎತ್ತಣ: ಎಲ್ಲಿಂದ; ಐತಂದು: ಬಂದು ಸೇರು; ಅತ್ಯುತ್ತಮ: ಶ್ರೇಷ್ಠ; ವೇಷ: ರೂಪ; ಮಹಾತ್ಮ: ಶ್ರೇಷ್ಠ; ಕಂಡು: ನೋಡು; ಬದುಕು: ಜೀವಿಸು; ಬೇಡು: ಕೇಳು; ಸುತ್ತ: ಎಲ್ಲಾ ಕಡೆ; ಬಳಸು: ಆವರಿಸುವಿಕೆ; ರಾಜಸೇವೆ: ರಾಜ ಕಾರ್ಯ; ನಿಮಿತ್ತ: ಕಾರಣ; ಬಂದು: ಆಗಮಿಸು; ಮುನ್ನ: ಮುಂಚೆ; ಓಲಗ: ದರ್ಬಾರು; ಇತ್ತು: ನೀಡು;

ಪದವಿಂಗಡಣೆ:
ಇತ್ತ +ಬಿಜಯಂಗೈಯಿ+ ಹಿರಿಯರಿದ್
ಎತ್ತಣಿಂದ್+ಐತಂದಿರೈ+ ಅ
ತ್ಯುತ್ತಮದ +ವೇಷದ +ಮಹಾತ್ಮರ+ ಕಂಡು +ಬದುಕಿದೆವು
ಇತ್ತಪೆವು+ ಬೇಡಿದುದ+ ನಾವೆನೆ
ಸುತ್ತ +ಬಳಸೆವು+ ರಾಜಸೇವೆ +ನಿ
ಮಿತ್ತ +ಬಂದೆವು+ ಮುನ್ನಿನ್+ಓಲಗವ್+ಅಂತರಿಸಿತಾಗಿ

ಅಚ್ಚರಿ:
(೧) ಇಲ್ಲದಂತಾಗು ಎಂದು ಹೇಳಲು – ಅಂತರಿಸಿತಾಗು ಪದದ ಬಳಕೆ

ಪದ್ಯ ೧೭: ಧರ್ಮಜನನ್ನು ಯಾರು ಕರೆಸಿಕೊಂಡರು?

ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನಪುರಿಗೆ ಯತಿವೇ
ಷದಲಿ ಬಂದನು ಹೊನ್ನಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ (ವಿರಾಟ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನನ್ನು ಸಂತೈಸಿ ಧರ್ಮರಾಯನು ಯತಿವೇಷದಿಂದ ಮತ್ಸ್ಯನಗರಕ್ಕೆ ಬಂದನು. ಅವನು ಬಂಗಾರದ ಪಗಡೆಯ ಚೀಲವನ್ನು ಕಂಕುಳಿನಲ್ಲಿ ಅವಚಿಕೊಂಡಿದ್ದನು. ಅವನ ತೇಜಸ್ಸನ್ನು ನೋಡಿ ಎದುರಿನಲ್ಲಿ ಕಂಡವರು ನಮಸ್ಕರಿಸಿದರು. ವಿರಾಟನು ಅವನನ್ನು ಕರೆಸಿಕೊಂಡು ಕೇಳಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ನಿರ್ಮದ: ಅಹಂಕಾರವಿಲ್ಲದ; ಪುರಿ: ಊರು; ಯತಿ: ಋಷಿ; ವೇಷ: ರೂಪ; ಬಂದು: ಆಗಮಿಸು; ಹೊನ್ನು: ಚಿನ್ನ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಚೀಲ: ಸಂಚಿ; ಕಕ್ಷ: ಕಂಕಳು; ಇದಿರು: ಎದುರು; ಆನತ: ನಮಸ್ಕರಿಸಿದವನು; ಕಂಡು: ನೋದು; ಉದಿತ: ಹುಟ್ಟುವ; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಸೊಂಪು: ಸೊಗಸು, ಚೆಲುವು; ಒದಗು: ಲಭ್ಯ, ದೊರೆತುದು; ಕಾಣಿಸು: ಗೋಚರಿಸು; ಬೆಸ: ಕೆಲಸ, ಕಾರ್ಯ, ಅಪ್ಪಣೆ;

ಪದವಿಂಗಡಣೆ:
ಹದುಳವಿಟ್ಟನು+ ಭೀಮನನು +ನಿ
ರ್ಮದನು +ಮತ್ಸ್ಯನ+ಪುರಿಗೆ +ಯತಿ+ವೇ
ಷದಲಿ +ಬಂದನು +ಹೊನ್ನ+ಸಾರಿಯ +ಚೀಲ +ಕಕ್ಷದಲಿ
ಇದಿರೊಳ್+ಆನತರ್+ಆಯ್ತು +ಕಂಡವರ್
ಉದಿತ +ತೇಜಃ+ಪುಂಜದಲಿ +ಸೊಂ
ಪೊದವಿ +ಬರಲು +ವಿರಾಟ +ಕಾಣಿಸಿಕೊಂಡು +ಬೆಸಗೊಂಡ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ನಿರ್ಮದನು, ಉದಿತ ತೇಜಃಪುಂಜ

ಪದ್ಯ ೧೬: ಧರ್ಮಜನು ಭೀಮನನ್ನು ಹೇಗೆ ಸಂತೈಸಿದನು?

ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು
ಅವನಿಯಲಿ ಹನ್ನೆರಡು ವರುಷವು
ನವೆದುದದು ನಿಷ್ಫಲವಲಾ ಕೌ
ರವರಿಗತಿಲಾಗಹುದು ನೀನೇ ಬಲ್ಲೆ ಹೋಗೆಂದ (ವಿರಾಟ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅಜ್ಞಾತವಾಸದ ಅವಧಿ ಒಂದು ವರ್ಷ. ಈ ಕಾಲದಲ್ಲಿ ನಾವು ಸಮಾಧಾನದಿಂದಿರಬೇಕು, ನೀನು ಸಿಟ್ಟಾಗಿ ಪರಿಸ್ಥಿತಿಯಿಂದ ಪ್ರಚೋದಿತನಾದಾಗ ಸೈರಿಸಲಾಗದಿದ್ದರೆ, ಹನ್ನೆರಡು ವರುಷ ಕಾಡಿನಲ್ಲಿ ನಾವು ಪಟ್ಟ ಸಂಕಟವೆಲ್ಲವೂ ಪ್ರಯೋಜನವಿಲ್ಲದಂತಾಗುತ್ತದೆ. ನೀನೇ ಯೋಚಿಸಿ ನೋಡು ಎಂದು ಧರ್ಮಜನು ಭೀಮನಿಗೆ ಹೇಳಿದನು.

ಅರ್ಥ:
ಅವಧಿ: ಕಾಲ, ಸಮಯ; ವರುಷ: ಸಂವತ್ಸರ; ಎವಗೆ: ನಮಗೆ; ಸರಣೆ: ತಾಳ್ಮೆ; ಮುನಿ: ಕೋಪ; ಅವಗಡಿಸು: ಕಡೆಗಣಿಸು, ವಿರೋಧಿಸು; ಬಳಿಕ: ನಂತರ; ಸೈರಿಸು: ಸಹನೆ; ಅರಿ: ತಿಳಿ; ಮನ: ಮನಸ್ಸು; ಮುಳಿ: ಕೋಪ; ಅವನಿ: ಭೂಮಿ; ನವೆ: ಕ್ಷೀಣಿಸು, ಸೊರಗು; ನಿಷ್ಫಲ: ಪ್ರಯೋಜನವಿಲ್ಲದ; ಲಾಗ: ನೆಗೆಯುವಿಕೆ, ತ್ವರೆ; ಬಲ್ಲೆ: ತಿಳಿದಿರುವೆ; ಹೋಗು: ತೆರಳು;

ಪದವಿಂಗಡಣೆ:
ಅವಧಿ+ಒಂದೇ +ವರುಷವ್+ಇದರೊಳಗ್
ಎವಗೆ+ ಸೈರಣೆಯುಂಟು +ನೀ +ಮುನಿದ್
ಅವಗಡಿಸಿದೊಡೆ +ಬಳಿಕ+ ಸೈರಿಸಲ್+ಅರಿಯೆ +ಮನ +ಮುಳಿದು
ಅವನಿಯಲಿ +ಹನ್ನೆರಡು +ವರುಷವು
ನವೆದುದ್+ಅದು +ನಿಷ್ಫಲವಲಾ +ಕೌ
ರವರಿಗ್+ಅತಿ+ಲಾಗಹುದು +ನೀನೇ +ಬಲ್ಲೆ +ಹೋಗೆಂದ

ಅಚ್ಚರಿ:
(೧) ಸೈರಣೆ, ಸೈರಿಸು – ಸಮನಾರ್ಥಕ ಪದ

ಪದ್ಯ ೧೫: ಭೀಮನು ಯಾರ ಮೇಲೆ ದಾಳಿಮಾಡುವೆನೆಂದು ಹೇಳಿದನು?

ಸುರನಿಕರ ಕಾದಿರಲಿ ಮೇಣೀ
ಧರಣಿಕೊಡೆನೆಂದೆನಲಿ ಹಸ್ತಿನ
ಪುರಿಗೆ ದಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ (ವಿರಾಟ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ಆಯುಧಗಳನ್ನು ದೇವತೆಗಳೇ ಕಾದಿರಲಿ. ಈ ಭೂಮಿಯೇ ಕೊಡುವುದಿಲ್ಲ ಎನ್ನಲಿ, ದೇವತೆಗಳ ಮುಖಕ್ಕೆ ತಿವಿದು ಈ ಅಸ್ತ್ರಗಳನ್ನು ತೆಗೆದುಕೊಂಡು ಹೋಗಿ ಹಸ್ತಿನಾವತಿಯ ಮೇಲೆ ದಾಳಿಯಿಡುತ್ತೇನೆ ಎಂದು ಭೀಮನು ಅಬ್ಬರಿಸಲು, ಧರ್ಮರಾಯನು ಭೀಮನನ್ನು ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡು ಮೈದಡವಿದನು.

ಅರ್ಥ:
ಸುರ: ದೇವತೆ; ನಿಕರ: ಗುಂಪು; ಕಾದು: ರಕ್ಷಣೆ, ಕಾಯುವುದು; ಮೇಣ್: ಅಥವ; ಧರಣಿ: ಭೂಮಿ; ದಾಳಿ: ಆಕ್ರಮಣ; ಅಮರ: ದೇವತೆ; ಮೋರೆ: ಮುಖ; ತಿವಿ: ಚುಚ್ಚು; ಉರು: ಶ್ರೇಷ್ಠ; ಅಸ್ತ್ರ: ಆಯುಧ; ಒಯ್ವೆ: ತೆಗೆದುಕೊಂಡು; ಅಬ್ಬರಿಸು: ಗರ್ಜಿಸು; ಮಾರುತಿ: ವಾಯುಪುತ್ರ; ನುಡಿ: ಮಾತಾಡು; ತಮ್ಮ: ಸಹೋದರ; ಬರಸೆಳೆ: ಹತ್ತಿರಕ್ಕೆ ಕರೆದುಕೊಂಡು; ಅಪ್ಪು: ಆಲಿಂಗನ; ಮೈದಡವಿ: ಮೈಯನ್ನು ನೇವರಿಸು; ಭೂಪಾಲ: ರಾಜ;

ಪದವಿಂಗಡಣೆ:
ಸುರ+ನಿಕರ+ ಕಾದಿರಲಿ+ ಮೇಣ್+ಈ
ಧರಣಿ+ಕೊಡೆನೆಂದ್+ಎನಲಿ +ಹಸ್ತಿನ
ಪುರಿಗೆ+ ದಾಳಿಯನ್+ಇಡುವೆನ್+ಅಮರರ +ಮೋರೆಗಳ+ ತಿವಿದು
ಉರುತರಾಸ್ತ್ರವನ್+ಒಯ್ವೆನೆಂದ್
ಅಬ್ಬರಿಸಿ +ಮಾರುತಿ +ನುಡಿಯೆ +ತಮ್ಮನ
ಬರಸೆಳೆದು +ಬಿಗಿಯಪ್ಪಿ+ ಮೈದಡವಿದನು+ ಭೂಪಾಲ

ಅಚ್ಚರಿ:
(೧) ಸುರ, ಅಮರ – ಸಮಾನಾರ್ಥಕ ಪದ
(೨) ತಮ್ಮನ ಮೇಲಿನ ಪ್ರೀತಿ – ತಮ್ಮನಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ

ಪದ್ಯ ೧೪: ಭೀಮನೇಕೆ ಕೋಪಗೊಂಡ?

ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡು
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ (ವಿರಾಟ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ನಾನೋ, ಅರ್ಜುನನೋ ಕೇಳಿದರೆ ಈ ಆಯುಧಗಳನ್ನು ನೀಡಿ, ಈ ದುಡುಕು ಬುದ್ಧಿಯ ಭೀಮನಿಗೆ ಕೊಡಬೇಡಿ ಎಂದು ಧರ್ಮಜನು ಬೇಡಿಕೊಳ್ಳಲು ಭೀಮನು ಹಲ್ಲುಕಡಿದು ತುಟಿಕಚ್ಚಿ, ಹೌದು ನೀವು ಕುಂತಿಯ ಮಕ್ಕಳು ನಾನಾದರೋ ದುರ್ಯೋಧನನ ಕಡೆಯವನು ನಿಜ, ನೀವು ಹೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಗರ್ಜಿಸಿದ.

ಅರ್ಥ:
ಬೇಡು: ಕೇಳು; ಅಜ್ಞಾತ: ತಿಳಿಯದ; ವಿಗಡ: ಪರಾಕ್ರಮಿ; ಕೊಡು: ನೀಡು; ಖತಿ: ಕೋಪ; ಮಕ್ಕಳು: ಸುತರು; ತಪ್ಪು: ಸರಿಯಲ್ಲದ; ಅನಿಲಸುತ: ವಾಯುಪುತ್ರ; ಗರ್ಜಿಸು: ಜೋರಾಗಿ ಕೂಗು; ಔಡು: ಹಲ್ಲಿನಿಂದ ಕಚ್ಚು;

ಪದವಿಂಗಡಣೆ:
ಈವುದಾ +ಬೇಡಿದರೆ+ ಪಾರ್ಥಂಗ್
ಈವುದ್+ಈ+ಅಜ್ಞಾತ +ವಾಸದೊಳ್
ಈ+ ವಿಗಡ+ ಭೀಮಂಗೆ +ಕೊಡದಿರಿ+ಎನಲು +ಖತಿಗೊಂಡು
ನೀವು +ಕುಂತಿಯ +ಮಕ್ಕಳಾದಿರಿ
ನಾವು +ದುರ್ಯೋಧನನವರು+ ತ
ಪ್ಪಾವುದ್+ಇದಕೆಂದ್+ಅನಿಲಸುತನ್+ಔಡೊತ್ತಿ ಗರ್ಜಿಸಿದ

ಅಚ್ಚರಿ:
(೧) ಭೀಮನ ಕೋಪದ ವರ್ಣನೆ – ಅನಿಲಸುತನೌಡೊತ್ತಿ ಗರ್ಜಿಸಿದ

ಪದ್ಯ ೧೩: ಧರ್ಮಜನು ದೇವತೆಗಳಲ್ಲಿ ಏನು ಪ್ರಾರ್ಥಿಸಿದನು?

ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ
ವಿಗಡನೀ ಕಲಿ ಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದೆನೆಂದು ಸುರರಿಗೆ ನುಡಿದನವನೀಶ (ವಿರಾಟ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಇದನ್ನು ಮುಟ್ಟಬೇಡಿರೆಂದು ಅಲ್ಲಿದ್ದ ದನಕಾಯುವವರನ್ನು ಬೆದರಿಸಿದನು. ಬಳಿಕ ಧರ್ಮರಾಯನು ತನ್ನೆರಡು ಕಣ್ಣುಗಳನ್ನು ಮುಚ್ಚಿ ಇಂದ್ರ, ಯಮ, ವರುಣನೇ ಮೊದಲಾದ ಅಷ್ಟದಿಕ್ಪಾಲಕರಿಗೆ ನಮಸ್ಕರಿಸಿ, ಈ ಭೀಮನು ಬಹು ಪರಾಕ್ರಮಿ, ಇವನು ಕೇಳಿದರೆ ಈ ಆಯುಧಗಳನ್ನು ಇವನಿಗೆ ನೀಡಬೇಡಿ, ನಿಮಗೆ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಪ್ರಾರ್ಥಿಸಿದನು.

ಅರ್ಥ:
ತೆಗೆ: ಈಚೆಗೆ ತರು, ಹೊರತರು; ತುರು: ಆಕಳು; ಕಾಹಿ: ರಕ್ಷಿಸು; ತುರುಗಾಹಿ: ದನಕಾಯುವವ; ಅಂಜಿಸು: ಹೆದರಿಸು; ದೃಗು: ಕಣ್ಣು; ಯುಗ: ಎರಡು; ಮುಚ್ಚು: ಹೊದಿಸು; ಸುರೇಂದ್ರ: ಇಂದ್ರ; ಆದಿ: ಮುಂತಾದ; ಎರಗು: ನಮಸ್ಕರಿಸು; ವಿಗಡ: ಶೌರ್ಯ, ಪರಾಕ್ರಮ; ಕಲಿ: ಶೂರ; ಕೈದು: ಆಯುಧ; ಈಯು: ನೀಡು; ಕೈಮುಗಿ: ನಮಸ್ಕರಿಸು; ಬೇಡು: ಕೇಳು; ಸುರ: ದೇವತೆ; ನುಡಿ: ಮಾತಾಡು; ಅವನೀಶ: ರಾಜ;

ಪದವಿಂಗಡಣೆ:
ತೆಗೆಯದಿರಿ +ನೀವೆಂದು +ತುರುಗಾ
ಹಿಗಳನ್+ಅಂಜಿಸಿ +ಧರ್ಮಸುತ +ದೃಗು
ಯುಗವ+ ಮುಚ್ಚಿ +ಸುರೇಂದ್ರ +ಯಮ +ವರುಣಾದಿಗಳಿಗ್+ಎರಗಿ
ವಿಗಡನೀ+ ಕಲಿ+ ಭೀಮನ್+ಈ+ ಕೈ
ದುಗಳನ್+ಈತಂಗ್+ಈಯದಿರಿ +ಕೈ
ಮುಗಿದು +ಬೇಡಿದೆನೆಂದು +ಸುರರಿಗೆ+ ನುಡಿದನ್+ಅವನೀಶ

ಅಚ್ಚರಿ:
(೧) ಕಣ್ಣು ಮುಚ್ಚಿ ಎಂದು ಹೇಳಲು – ದೃಗುಯುಗವ ಮುಚ್ಚಿ