ಪದ್ಯ ೭: ಉಳಿದ ಪಾಂಡವರು ಯಾವ ವೇಷವನ್ನು ಧರಿಸಿದರು?

ವಲಲನೆಂಬಭಿದಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು (ವಿರಾಟ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ವಲಲನೆಂಬ ಹೆಸರಿನಿಂದ ಅರಮನೆಯ ಬಾಣಸಿಗನಾಗಿರುತ್ತೇನೆ ಎಂದು ಭೀಮನು ಹೇಳಿದನು, ನಾನು ನಾಟ್ಯಾಚಾರ್ಯನಾಗಿರುತ್ತೇನೆ ಎಂದು ಅರ್ಜುನನು ಹೇಳಿದರೆ, ನಾವು ಹಯಶಾಲೆ ಗೋಶಾಲೆಗಳಲ್ಲಿರುವೆವೆಂದು ನಕುಲ ಸಹದೇವರು ಹೇಳಿದರು. ಸೈರಮ್ಧ್ರಿಯಾಗಿರುವೆನೆಂದು ದ್ರೌಪದಿಯು ಹೇಳಿದಳು.

ಅರ್ಥ:
ಅಭಿಧಾನ: ಹೆಸರು; ನೃಪ: ರಾಜ; ನಿಳಯ: ನಿವಾಸ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಉಲಿ: ಧ್ವನಿ; ಮಾರುತಿ: ವಾಯು ಸುತ (ಭೀಮ); ನುಡಿ: ಮಾತಾಡು; ನಾಟ್ಯ: ನೃತ್ಯ; ವೇಷ: ತೋರಿಕೆಯ ರೂಪ, ಸೋಗು; ಹಯ: ಕುದುರೆ; ಗೋ: ಆಕಳು; ನಿವಾಸ: ಸ್ಥಾನ; ಸ್ಥಳ: ಜಾಗ; ವಿಳಾಸ: ಬೆಡಗು; ಯಮಳ: ಅಶ್ವಿನಿ ದೇವತೆಗಳು; ಲಲನೆ: ಹೆಣ್ಣು; ಬಿನ್ನಹ: ಮನವಿ; ವರ: ಶ್ರೇಷ್ಠ;

ಪದವಿಂಗಡಣೆ:
ವಲಲನೆಂಬ್+ಅಭಿದಾನದಲಿ +ನೃಪ
ನಿಳಯವನು +ಸಾರುವೆನು +ತಾನೆಂದ್
ಉಲಿಯೆ +ಮಾರುತಿ +ನುಡಿದ +ವರ+ನಾಟ್ಯವಿದ +ವೇಷವನು
ಫಲುಗುಣನು +ಹಯ +ಗೋ +ನಿವಾಸ
ಸ್ಥಳ +ವಿಳಾಸಿತರೆನಲು +ಯಮಳರು
ಲಲನೆ +ಬಿನ್ನಹ +ಮಾಡಿದಳು +ಸೈರಂಧ್ರಿ +ವೇಷವನು

ಅಚ್ಚರಿ:
(೧) ಮಾರುತಿ, ಫಲುಗುಣ, ಯಮಳರು, ಲಲನೆ – ಪಾಂಡವರನ್ನು ಕರೆದ ಪರಿ

ಪದ್ಯ ೬: ಯುಧಿಷ್ಠಿರನು ಯಾವ ವೇಷ ಧರಿಸಿದನು?

ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ (ವಿರಾಟ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಅಣ್ಣಾ ನಿಮ್ಮ ಮತವೇ ನಮ್ಮ ಮತವೂ ಸಹ, ನೀವು ಯಾವ ವೇಷವನ್ನು ಧರಿಸುವಿರಿ ಹೇಳಿರಿ ಎನ್ನಲು, ಧರ್ಮಜನು ನಾನು ಸಂನ್ಯಾಸಿ ವೇಷದ ಬ್ರಾಹ್ಮಣನಾಗಿರುತ್ತೇನೆ, ಕಂಕನೆಂಬ ಹೆಸರನ್ನಿಟ್ಟುಕೊಳ್ಳುತ್ತೇನೆ ಎಂದನು.

ಅರ್ಥ:
ದೇವ: ಒಡೆಯ; ಮತ: ವಿಚಾರ; ವೇಷ: ರೂಪ; ವಿವರ: ವಿಸ್ತಾರ; ಬೆಸಸು: ಹೇಳು, ಆಜ್ಞಾಪಿಸು; ಬಿನ್ನಹ: ಕೇಳು; ಭೂಸುರ: ಬ್ರಾಹ್ಮಣ; ಸಂಭಾವಿತ: ಸಭ್ಯ; ಸನ್ಯಾಸ: ಋಷಿ; ಅವಲಂಬನ: ಆಸರೆ; ಅಭಿಧಾನ: ಹೆಸರು;

ಪದವಿಂಗಡಣೆ:
ದೇವ +ನಿಮ್ಮಯ +ಮತವೆ +ಮತವೆಮಗ್
ಆವ +ವೇಷದ +ವಿವರ +ನಿಮಗದ
ನೀವು +ಬೆಸಸುವುದ್+ಎಂದು+ ಭೀಮಾರ್ಜುನರು +ಬಿನ್ನವಿಸೆ
ನಾವು +ಭೂಸುರ+ವೇಷದಲಿ +ಸಂ
ಭಾವಿತರು +ಮತ್ತಲ್ಲಿ +ಸನ್ಯಾ
ಸಾವಲಂಬನ +ಕಂಕನೆಂಬ್+ಅಭಿಧಾನ +ತನಗೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ

ಪದ್ಯ ೫: ಧರ್ಮಜನು ತನ್ನ ತಮ್ಮಂದಿರ ಬಗ್ಗೆ ಏನು ಯೋಚಿಸಿದ?

ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು (ವಿರಾಟ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮಜನು ಮತ್ಸ್ಯನಗರದಲ್ಲಿ ವಿರಾಟನ ಆಶ್ರಯದಲ್ಲಿ ಒಂದು ವರ್ಷ ದೈನ್ಯದಿಂದಿರುವುದನ್ನು ನಿಶ್ಚಯಿಸಿ ತಮ್ಮಂದಿರಿಗೆ ನಾವು ಗುಪ್ತವಾಗಿರುವುದಾದರೂ ಹೇಗೆ? ನಿಮ್ಮಂತಹ ವೀರರು ಇನ್ನೊಬ್ಬರ ಆಶ್ರಯದಲ್ಲಿರುವ ಅಪದೆಸೆಯನ್ನು ಹೇಗೆ ಸೈರಿಸೀರಿ? ಕರುಣೆಯಿಲ್ಲದೆ ಹೀಗಿರಬೇಕೆಂದು ನಾನು ನಿಮಗೆ ಹೇಗೆ ತಾನೆ ಅಪ್ಪಣೆನೀಡಲಿ ಎಂದನು.

ಅರ್ಥ:
ನೃಪತಿ: ರಾಜ; ನಿಶ್ಚೈಸು: ನಿರ್ಧರಿಸು; ಅಧಿಪ: ರಾಜ; ನಗರ: ಊರು; ಸೈರಿಸು: ತಾಳು, ಸಹಿಸು; ಕೃಪಣ: ದೀನ, ದೈನ್ಯದಿಂದ ಕೂಡಿದುದು; ನೂಕು: ತಳ್ಳು; ನುಡಿ: ಮಾತು; ವತ್ಸರ: ವರ್ಷ; ಗುಪಿತ: ಗುಪ್ತ; ಆಶ್ರಯ: ಆಸರೆ, ಅವಲಂಬನ; ಅಪದೆಸೆ: ದುರ್ವಿಧಿ, ದುರದೃಷ್ಟ; ನಿಷ್ಕೃಪೆ: ಕರುಣೆ ಇಲ್ಲದ; ನಂದನ: ಮಗ;

ಪದವಿಂಗಡಣೆ:
ನೃಪತಿ +ನಿಶ್ಚೈಸಿದನು+ ಮತ್ಸ್ಯಾ
ಧಿಪನ +ನಗರಿಯೊಳಲ್ಲಿ+ ಸೈರಿಸಿ
ಕೃಪಣ+ತನದಲಿ +ನೂಕಬೇಹುದು +ನುಡಿದ +ವತ್ಸರವ
ಗುಪಿತವೆಂತ್+ಅಳವಡುವುದ್+ಆಶ್ರಯದ್
ಅಪದೆಸೆಯನ್+ಎಂತಾನುವಿರಿ+ ನಿ
ಷ್ಕೃಪೆಯೊಳ್+ಎಂತಾನೆಂಬೆನ್+ಎಂದನು +ಧರ್ಮ+ನಂದನನು

ಅಚ್ಚರಿ:
(೧) ಒಂದು ವರ್ಷವನ್ನು ಕಳೆಯುವ ಪರಿ – ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ

ಪದ್ಯ ೪: ಅರ್ಜುನನ ಯೋಚನಾ ಲಹರಿ ಹೇಗಿತ್ತು?

ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲವಿರಾಟಂಗವನ ದೆಸೆಯಿಂ ಭಯವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ (ವಿರಾಟ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕೀಚಕನು ಕೌರವರ ರಾಜ್ಯದಲ್ಲಿ ನುಗ್ಗಿ ಗೋಗ್ರಹಣ ಮಾದಿ ಅವರಿಗೆ ಶತ್ರುವಾಗಿರುವ ಬಲಶಾಲಿ, ಅವನ ದೆಸೆಯಿಂದ ವಿರಾಟನಿಗೆ ಬಲ ಬಂದಿದೆ. ಕರ್ನ, ತ್ರಿಗರ್ತರು ಮೊದಲಾದ ಕೌರವರ ಮಾಂಡಲಿಕರನ್ನು ಲೆಕ್ಕಿಸದೆ ವಿರಾಟನು ಪಶ್ಚಿಮದಲ್ಲಿ ಆಳುತ್ತಾನೆ, ಆದ್ದರಿಂದ ನಾವು ಮತ್ಸ್ಯನಗರಿಯಲ್ಲಿ ಅಜ್ಞಾತವಾಸವನ್ನು ಕಳೆಯಬಹುದೆಂದು ಅರ್ಜುನನು ಹೇಳಿದನು.

ಅರ್ಥ:
ವಳಿ: ತಿರುಗಿದುದು; ಹೊಕ್ಕು: ನುಗ್ಗು; ಹಗೆ: ವೈರಿ; ಬಲ: ಸೈನ್ಯ; ದೆಸೆ: ರೀತಿ, ಕಾರಣ, ನಿಮಿತ್ತ; ಭಯ: ಅಂಜಿಕೆ; ವಿಹೀನ: ಇಲ್ಲದಿರುವ; ಮುಳಿ: ಸಿಟ್ಟು, ಕೋಪ; ರವಿಸುತ: ಸೂರ್ಯನ ಮಗ (ಕರ್ಣ); ಕಲಿ: ಶೂರ; ಆದಿ: ಮುಂತಾದ; ಮಂಡಳಿಕ: ಸಾಮಂತ ರಾಜ; ಕೈಕೊಳ್ಳು: ಸ್ವೀಕರಿಸು; ಆಳು: ಅಧಿಕಾರ ನಡೆಸು; ಪಶ್ಚಿಮ: ಪಡುವಣ;

ಪದವಿಂಗಡಣೆ:
ವಳಿತವನು +ಹೊಕ್ಕ್+ಇರಿದು +ಕೌರವ
ರೊಳಗೆ+ ಹಗೆಯಾಗಿಹನು +ಕೀಚಕ
ಬಲ+ವಿರಾಟಂಗ್+ಅವನ+ ದೆಸೆಯಿಂ +ಭಯ+ವಿಹೀನವದು
ಮುಳಿದು +ಹೇಳಿಕೆಯಾದ +ರವಿಸುತ
ಕಲಿ+ತ್ರಿಗರ್ತಾದಿಗಳ್+ಎನಿಪ +ಮಂ
ಡಳಿಕರನು +ಕೈಕೊಳ್ಳದ್+ಆಳುವರ್+ಅವರು+ ಪಶ್ಚಿಮವ

ಅಚ್ಚರಿ:
(೧) ವಿರಾಟನಿಗೆ ಧೈರ್ಯ ಬರಲು ಕಾರಣ – ಕೀಚಕ ಬಲ ವಿರಾಟಂಗವನ ದೆಸೆಯಿಂ ಭಯವಿಹೀನವದು

ಪದ್ಯ ೩: ಧರ್ಮಜನ ವಿಶ್ಲೇಷಣೆ ಹೇಗಿತ್ತು?

ಬಡಗಲವರದು ಮೂಡಣರಸುಗ
ಳೆಡೆಗೆಣೆಯರಾತಂಗೆ ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಮಗಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ (ವಿರಾಟ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ಯೋಚನಾ ಲಹರಿಯನ್ನು ವಿವರಿಸುತ್ತಾ, ಉತ್ತರ ದಿಕ್ಕಿನ ಭಾರತ ಅವರದು, ಪೂರ್ವ ದಿಕ್ಕಿನ ರಾಜರು ಕೌರವನ ಗೆಳೆಯರು, ದಕ್ಷಿಣದ ರಾಜರು ಕೌರವನ ದರ್ಪದ ಬಲವನ್ನು ಕಂಡು ಸುಮ್ಮನಾಗಿರುವವರು. ಈ ಮೂಲೆ ಆ ಮೂಲೆಗಳ ರಾಜರು ಚಾಡಿಕೋರರು, ಪಶ್ಚಿಮದವರು ಬಲಹೀನರು, ಹೀಗಿರುವಾಗ ನಾವೆಲ್ಲಿ ಅಡಗಿಕೊಳ್ಳಬಹುದು ಎನ್ನಲು, ಅರ್ಜುನನು ಅಣ್ಣನಿಗೆ ವಿನಯದಿಂದ ಹೀಗೆ ಹೇಳಿದನು.

ಅರ್ಥ:
ಬಡಗಲು: ಉತ್ತರ; ಮೂಡಣ: ಪೂರ್ವ; ಎಡೆಗೆಣೆ: ಹತ್ತಿರದವ, ಸ್ನೇಹಿತ; ತೆಂಕಣ: ದಕ್ಷಿಣ; ಕಡೆ: ಪಕ್ಕ; ಕಂಡು: ನೋಡು; ಬಲ: ಸೈನ್ಯ; ಕೊಂಡೆ: ಚಾಡಿಯ ಮಾತು; ಪಡುವಣ: ಪಶ್ಚಿಮ; ಕೃಶ: ಬಲವಿಲ್ಲದ; ಅಡಗು: ಬಚ್ಚಿಟ್ಟುಕೊಳ್ಳು; ತೆರ: ಪದ್ಧತಿ; ನುಡಿ: ಮಾತಾಡು; ಅವನಿಪತಿ: ರಾಜ; ವಿನಯ: ಸೌಜನ್ಯ;

ಪದವಿಂಗಡಣೆ:
ಬಡಗಲ್+ಅವರದು +ಮೂಡಣ್+ಅರಸುಗಳ್
ಎಡೆಗೆಣೆಯರ್+ಆತಂಗೆ +ತೆಂಕಣ
ಕಡೆಯವರು +ಕಂಡಿಹರು +ಕೆಲಬಲದವರು +ಕೊಂಡೆಯರು
ಪಡುವಣವವ್+ಅತಿ+ ಕೃಶರು +ನಮಗಿನ್
ಅಡಗಿರಲು +ತೆರನಾವುದ್+ಎಂದೆನೆ
ನುಡಿದನ್+ಅರ್ಜುನ ದೇವನ್+ಅವನೀಪತಿಗೆ+ ವಿನಯದಲಿ

ಅಚ್ಚರಿ:
(೧) ಬಡಗಲು, ಮೂಡಣ, ತೆಂಕಣ, ಪಡುವಣ – ದಿಕ್ಕುಗಳ ಹೆಸರುಗಳ ಬಳಕೆ
(೨) ಕ ಕಾರದ ಸಾಲು ಪದ – ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು